ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ರಾಜಕೀಯ ಪಕ್ಷಗಳ ಚುನಾವಣಾ ತಯಾರಿಗಳು ನಡೆಯುತ್ತಿವೆ. ಸೀಟು ಹಂಚಿಕೆಗಾಗಿ ಮೈತ್ರಿಪಕ್ಷಗಳು ಹಗ್ಗಜಗ್ಗಾಟ ನಡೆಸುತ್ತಿವೆ. ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಮಂಗಳವಾರ ರಾತ್ರಿ, ಚಿದಂಬರಂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ ಸೆಲ್ವಪೆರುಂಥಗೈ ಅವರು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ 34 ವಿಧಾನಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ನಿರಂತರ ಜಗ್ಗಾಟದೊಂದಿಗೆ ಕಾಂಗ್ರೆಸ್‌ನ ಬೇಡಿಕೆಯಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಡಿಎಂಕೆ ಒಲುವು ತೋರುತ್ತಿದೆ. ಆದಾಗ್ಯೂ, ಎರಡು ರಾಜ್ಯಸಭಾ ಸ್ಥಾನಗಳೊಂದಿಗೆ 29 ವಿಧಾನಸಭಾ ಸ್ಥಾನಗಳನ್ನು ನೀಡುವ ಇರಾದೆಯೂ ಡಿಎಂಕೆ ಒಳಗಿದೆ. ಆದ್ದರಿಂದ, ಬುಧವಾರ ಎರಡನೇ ಸುತ್ತಿನ ಮಾತುಕತೆಗಳು ನಡೆಯಿದ್ದು, ಅಂತಿಮ ನಿರ್ಧಾರವನ್ನು ಮೈತ್ರಿಪಕ್ಷಗಳು ಘೋಷಿಸುವ ಸಾಧ್ಯತೆ ಇದೆ.
34 ವಿಧಾನಸಭಾ ಸ್ಥಾನಗಳ ಬದಲಾಗಿ 2 ರಾಜ್ಯಸಭಾ ಮತ್ತು 29 ವಿಧಾನಸಭಾ ಸ್ಥಾನಗಳನ್ನು ನೀಡುವ ಡಿಎಂಕೆ ಪ್ರಸ್ತಾಪದ ಕುರಿತು ಪಕ್ಷವು ಲೆಕ್ಕಾಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ಮತ್ತು 2028ರಲ್ಲಿ ನಡೆಯುವ ಚುನಾವಣೆಯನ್ನು ಮೊತ್ತೊಂದು ರಾಜ್ಯಸಭಾ ಸ್ಥಾನವನ್ನು ಡಿಎಂಕೆ ಬಿಟ್ಟುಕೊಡಬಹುದು” ಎಂದು ಹೇಳಲಾಗಿದೆ.
ಮಂಗಳವಾರದ ಭೇಟಿ ಕುರಿತು ಮಾತನಾಡಿರುವ ಸೆಲ್ವಪೆರುಂಥಗೈ, “ಇದು ಸೌಜನ್ಯದ ಕರೆ. ಮೈತ್ರಿ ದೃಢವಾಗಿದೆ ಮತ್ತು ಸೀಟು ಹಂಚಿಕೆ ಮಾತುಕತೆಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಡಿಎಂಕೆ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ” ಎಂದು ಹೇಳಿದ್ದಾರೆ.
ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ನೇತೃತ್ವದ ಮಾತುಕತೆಗಳು ಫಲಿತಾಂಶಗಳನ್ನು ನೀಡದ ನಂತರ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ ವೇಣುಗೋಪಾಲ್ ಅವರ ಸಭೆಯಲ್ಲಿ ಚಿದಂಬರಂ ಅವರನ್ನು ತಮಿಳುನಾಡಿಗೆ ನಿಯೋಜಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಟಾಲಿನ್ ಅವರನ್ನು ಭೇಟಿ ಮಾಡುವ ಮೊದಲು ಚಿದಂಬರಂ ದೆಹಲಿ ನಾಯಕತ್ವದೊಂದಿಗೆ ವರ್ಚುವಲ್ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.




