ಡಿಎಂಕೆ- ವಿಜಯ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರೆ; ಬಿಜೆಪಿ- ಕಾನೂನು ಕುಣಿಕೆಯ ಇಕ್ಕಟ್ಟಿಗೆ ಸಿಲುಕಿಸಿ ಮೈತ್ರಿ ಎಂಬ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದೆ. ಈ ಷಡ್ಯಂತ್ರದಲ್ಲಿ ಸದ್ಯಕ್ಕೆ ಸ್ಟಾಲಿನ್ ಮತ್ತು ಮೋಶಾ- ಗೆದ್ದಿರಬಹುದು. ಆದರೆ, ಇವರ ಈ ಗೆಲುವೇ, ನಿಜವಾದ ಸೋಲು ಕೂಡ.
ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಚಿತ್ರನಟ ದಳಪತಿ ವಿಜಯ್‌ಗೆ ಸಿಬಿಐ ಶಾಕ್ ನೀಡಿದೆ. ಜನವರಿ 12ರಂದು ನವದೆಹಲಿಯ ಕೇಂದ್ರ ಕಚೇರಿಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಸಿಬಿಐ, ಎಸ್ಐಟಿಯಿಂದ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅಧ್ಯಕ್ಷ ದಳಪತಿ ವಿಜಯ್ ಹಾಗೂ ಪಕ್ಷದ ಹಲವು ಪದಾಧಿಕಾರಿಗಳನ್ನು ಸಿಬಿಐ ವಿಚಾರಣೆ ನಡೆಸಲಿದೆ. ನಂತರ ಚಾರ್ಜ್ ಶೀಟ್ ಸಲ್ಲಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮತ್ತೊಂದು ಕಡೆಯಿಂದ, ನಟ ವಿಜಯ್ ಅವರ ರಾಜಕೀಯ ಪಾದಾರ್ಪಣೆಗೆ ಅನುಕೂಲವಾಗುವ ಕಥಾವಸ್ತುವುಳ್ಳ ಕೊನೆಯ ಚಿತ್ರ ‘ಜನ ನಾಯಗನ್’ ಇದೇ ಜನವರಿ 10ರಂದು ಬಿಡುಗಡೆಯಾಗಬೇಕಿತ್ತು. ದಿನಾಂಕ ನಿಗದಿಯಾಗಿತ್ತು, ಪ್ರಪಂಚದಾದ್ಯಂತ ಸುಮಾರು 5000 ಪರದೆಗಳು ಬುಕ್ ಆಗಿದ್ದವು, ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಕೂಡ ಮಾರಾಟವಾಗಿದ್ದವು.
ಇದನ್ನು ಓದಿದ್ದೀರಾ?: ತಮಿಳುನಾಡು ಚುನಾವಣೆ | ತಾರಕಕ್ಕೇರಿದ ‘ಜನ ನಾಯಗನ್ – ಪರಾಶಕ್ತಿ’ ಫಿಲ್ಮಿ ಫೈಟ್
ಆದರೆ, ಚಿತ್ರದಲ್ಲಿ ಕ್ರೌರ್ಯ ಹೆಚ್ಚಾಗಿದೆ, ಮಹಿಳೆಯರು-ಮಕ್ಕಳು ನೋಡಬಾರದ ದೃಶ್ಯಗಳಿವೆ ಎಂಬ ಸಬೂಬು ಹೇಳಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC) ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಇದರಿಂದಾಗಿ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ರೀಫಂಡ್ ಮಾಡುವ ಮೂಲಕ ಭಾರೀ ನಷ್ಟ ಅನುಭವಿಸಿದೆ. ಜೊತೆಗೆ ದಳಪತಿ ವಿಜಯ್‌ಗೆ ಆದ ಮುಖಭಂಗಕ್ಕೆ ಬೆಲೆ ಕಟ್ಟದಾಗಿದೆ.
ಒಂದು ಕಡೆಯಿಂದ ಕೇಂದ್ರ ಗೃಹ ಖಾತೆಯ ಅಡಿಯಲ್ಲಿ ಬರುವ ಸಿಬಿಐನಿಂದ ಸಮನ್ಸ್, ವಿಚಾರಣೆ, ಚಾರ್ಜ್ ಶೀಟ್ ಸಲ್ಲಿಸುವ ಬೆದರಿಕೆ; ಮತ್ತೊಂದು ಕಡೆಯಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಬರುವ ಸಿಬಿಎಫ್‌ಸಿಯಿಂದ ವಿಜಯ್ ಚಿತ್ರ ‘ಜನ ನಾಯಗನ್’ಗೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ನಿರಾಕರಣೆ.
ಒಂದು ಕಾನೂನಿನ ಕುಣಿಕೆ ಮತ್ತೊಂದು ಮುಖಭಂಗ. ಸಿಬಿಬಿ ಮತ್ತು ಸೆನ್ಸಾರ್ ಬೋರ್ಡ್- ಎರಡೂ ಸಂಸ್ಥೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ. ಎರಡರಿಂದಲೂ ನಟ ವಿಜಯ್‌ರನ್ನು ಅಡಕತ್ತರಿಗೆ ಸಿಲುಕಿಸಿದೆ ಬಿಜೆಪಿ. ಇದನ್ನೇ ಮುಂದಿಟ್ಟು ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಪಕ್ಷದೊಂದಿಗೆ ರಾಜಕೀಯ ಹೊಂದಾಣಿಕೆ ಮತ್ತು ವಶೀಲಿಬಾಜಿಯ ದಾಳ ಉರುಳಿಸಿದೆ.

ವಿಜಯ್ ಒಪ್ಪಿದರೆ, ಇಲ್ಲಿಯವರೆಗೂ ಸಾಧ್ಯವಾಗದಿದ್ದ ದಕ್ಷಿಣದ ದ್ರಾವಿಡ ರಾಜ್ಯ ತಮಿಳುನಾಡಿನಲ್ಲಿ ಫ್ಯಾಸಿಸ್ಟ್ ಸರ್ಕಾರ ರಚಿಸಲು, ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ಒಪ್ಪದಿದ್ದರೆ, ಕೋರ್ಟು ಕೇಸು ಎಂದು ಸಿಲುಕಿಸಿ ಚುನಾವಣೆಗೆ ಸ್ಪರ್ಧಿಸದಂತೆ, ಚುನಾವಣೆಯಿಂದಲೇ ದೂರ ಉಳಿಯುವಂತೆ ನೋಡಿಕೊಳ್ಳಲಾಗುತ್ತದೆ. ಒಪ್ಪಿದರೆ, ಬಿಜೆಪಿಗೆ ಲಾಭ; ಒಪ್ಪದಿದ್ದರೆ, ಡಿಎಂಕೆಗೆ ಲಾಭ.
ಇದು ಕಳೆದ ಹನ್ನೊಂದು ವರ್ಷಗಳಿಂದ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷ, ಅಮಿತ್ ಶಾ ಮತ್ತು ಮೋದಿ ಎಂಬ ʼದೇಶಭಕ್ತʼ ನಾಯಕರ ನೇತೃತ್ವದಲ್ಲಿ ದೇಶದಾದ್ಯಂತ ಮಾಡಿಕೊಂಡು ಬರುತ್ತಿರುವ ಕೆಟ್ಟ ಕೊಳಕು ರಾಜಕಾರಣ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಚುನಾವಣಾ ಕಣದಲ್ಲಿ ನೇರವಾಗಿ ಎದುರಿಸಿ ಗೆಲ್ಲಲಾಗದ ಹೇಡಿಗಳು, ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಕುತಂತ್ರಕ್ಕೆ ಈಗ ದಳಪತಿ ವಿಜಯ್ ಬಲಿಯಾಗಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಬಲಿಯಂತೆ ಕಂಡರೂ, ವಿಜಯ್ ಸುಲಭಕ್ಕೆ ಸಿಗುವ ಬಕರಾ ಅಲ್ಲ. ತಮಿಳುನಾಡಿನ ಪರಂಪರೆಯನ್ನು, ರಾಜಕೀಯ ಚರಿತ್ರೆಯನ್ನು ಕಣ್ಣಾರೆ ಕಂಡಿರುವ ಚಿತ್ರನಟ ಜೋಸೆಫ್ ವಿಜಯ್, ಬಹುಬೇಡಿಕೆಯ ಸ್ಟಾರ್ ನಟನಾಗಿರುವಾಗಲೇ, ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕಾರಣಕ್ಕೆ ಧುಮುಕಿದ್ದಾರೆ. ಎಂಜಿಆರ್, ಜಯಲಲಿತಾ ಮತ್ತು ಕರುಣಾನಿಧಿಯ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. 1967ರಲ್ಲಿ ಡಿಎಂಕೆ ಮತ್ತು 1977ರಲ್ಲಿ ಎಐಎಡಿಎಂಕೆ ಭಾರೀ ಜಯಭೇರಿ ಪಡೆದ ರೀತಿಯಲ್ಲಿಯೇ, 2026ರಲ್ಲಿ ದಳಪತಿ ವಿಜಯ್ ಇತಿಹಾಸ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ.
ಈ ವಿದ್ಯಮಾನಗಳನ್ನು ವಿಶ್ಲೇಷಿಸಿದರೆ- ವಿಜಯ್ ತಮಿಳುನಾಡು ಬಯಸುವ ದ್ರಾವಿಡಪಡೆ ಕಟ್ಟಲು ಸಿದ್ಧರಾಗುತ್ತಿದ್ದಾರೆ. ಹಾಗೆಯೇ ಬಲಪಂಥೀಯರ ವಿರುದ್ಧವಿರುವ, ಹಿಂದಿ ಹೇರಿಕೆಯನ್ನು ವಿರೋಧಿಸುವ, ಪ್ರಾದೇಶಿಕ ಅಸ್ಮಿತೆಯ ಪರವಿರುವ, ತಳಸಮುದಾಯಗಳನ್ನು ತಬ್ಬಿಕೊಳ್ಳುವ ತವಕದಲ್ಲಿರುವ ಸೂಚನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಯುವಜನತೆಯ ಶಕ್ತಿ ಅರಿತಿರುವ ಅವರು, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದನ್ನು ಮುನ್ನೆಲೆಗೆ ತಂದು, ಡಿಎಂಕೆಯ ವಂಶ ಪಾರಂಪರ್ಯ ರಾಜಕಾರಣವನ್ನು ಖಂಡತುಂಡವಾಗಿ ಖಂಡಿಸುತ್ತಿದ್ದಾರೆ. ಅಪ್ಪ-ಮಗನ ಆಟವನ್ನು ಫ್ಯೂಡಲ್ ಲಾರ್ಡ್‌ಗಳ ಆಡಳಿತ ಎಂದು ಲೇವಡಿ ಮಾಡುತ್ತಿದ್ದಾರೆ. ಇನ್ನು ಕೇಂದ್ರದ ಮಲತಾಯಿ ಧೋರಣೆಯ ವಿರುದ್ಧ, ತ್ರಿಭಾಷಾ ಸೂತ್ರ ಮತ್ತು ಹಿಂದಿ ಹೇರಿಕೆಯ ವಿರುದ್ಧ; ಒಂದು ರಾಷ್ಟ್ರ, ಒಂದು ಚುನಾವಣೆಯ ವಿರುದ್ಧ ನೇರ ಸಮರಕ್ಕಿಳಿದಿದ್ದಾರೆ.
ಇದರ ನಡುವೆಯೇ, ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರ್‍ನಲ್ಲಿ ನಟ ವಿಜಯ್ ಪಾಲ್ಗೊಂಡಿದ್ದ ರಾಜಕೀಯ ಸಭೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ರಾಜಕೀಯವಾಗಿ ಕೊಂಚ ಹಿನ್ನಡೆಗೆ ಕಾರಣವಾಗಿದೆ. ಅದರಲ್ಲೂ 41 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ವಿಜಯ್ ವೇಗಕ್ಕೆ ತಡೆಯೊಡ್ಡಿದೆ. ಈ ಪ್ರಕರಣವೇ ವಿಜಯ್ ವಿರೋಧಿಗಳಿಗೆ, ಅವರ ಅನುಕೂಲಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ.
ಆದರೆ, ನಟ ವಿಜಯ್, ಕಾಲ್ತುಳಿತ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಯಸಿದರು. ಆಗ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಮತ್ತೊಂದು ತಂತ್ರಕ್ಕೆ ಕೈಹಾಕಿದರು. ಮಗ-ಚಿತ್ರನಟ ಉದಯನಿಧಿ ಸ್ಟಾಲಿನ್ ಮುಂದಿಟ್ಟು ಫಿಲ್ಮಿ ಸ್ಟೈಲಿನಲ್ಲಿ ವಿಜಯ್‌ರನ್ನು ಹಣಿಯಲು ಮುಂದಾದರು. ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ಗೆ ವಿರುದ್ಧವಾಗಿ ದ್ರಾವಿಡ ಅಸ್ಮಿತೆಯನ್ನು ಹೇಳುವ, 1952ರಲ್ಲಿ ಎಂ. ಕರುಣಾನಿಧಿಯವರ ಚಿತ್ರಕಥೆ ಮತ್ತು ಗಟ್ಟಿಯಾದ ಸಂಭಾಷಣೆಯಿರುವ ‘ಪರಾಸಕ್ತಿ’ ಚಿತ್ರವನ್ನು ಮರು ನಿರ್ಮಿಸಿದರು. ವಿಜಯ್ ಚಿತ್ರ ‘ಜನ ನಾಯಗನ್’ ಜನವರಿ 9ರಂದು ಬಿಡುಗಡೆ ಎಂದರೆ; ಉದಯನಿಧಿ ನಿರ್ಮಾಣದ ‘ಪರಾಸಕ್ತಿ’ ಕೂಡ ಜನವರಿ 9ರಂದೇ ಬಿಡುಗಡೆಗೆ ಸಿದ್ಧವಾಯಿತು. ಆದರೆ ಕೇಂದ್ರ ಸೆನ್ಸಾರ್ ಮಂಡಳಿ, ಚಿತ್ರದಲ್ಲಿ ಹಿಂದಿ ಭಾಷೆ ಬಗ್ಗೆ ದ್ವೇಷಕಾರುವ ಸಂಭಾಷಣೆಗಳಿವೆ ಎಂಬ ಕಾರಣಕ್ಕೆ ಪ್ರಮಾಣಪತ್ರ ಕೊಡದೆ ಸತಾಯಿಸಿತು. ಕೋರ್ಟ್ ಮೆಟ್ಟಿಲು ಹತ್ತಿದಾಗ, ನ್ಯಾಯಾಧೀಶರ ಆದೇಶದ ಮೇರೆಗೆ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಕೊಡಲು ಒಪ್ಪಿತು. ಹಾಗಾಗಿ ಚಿತ್ರ ಜ.10ರಂದು ತೆರೆಕಾಣಲಿದೆ. ತಮಿಳರಿಗೆ ಬಹಳ ದೊಡ್ಡ ಹಬ್ಬವಾದ ಪೊಂಗಲ್‌ನ ಆಚೀಚೆ ಹೊಸ ಚಿತ್ರಗಳ ಬಿಡುಗಡೆ, ಭಾರೀ ಲಾಭ ತಂದುಕೊಡುವುದಿದೆ. ಅದರಲ್ಲಿ ತಮಿಳು ಚಿತ್ರರಂಗದವರು ಯಶಸ್ವಿಯೂ ಆಗಿದ್ದಾರೆ. ಅದನ್ನೇ ಇಲ್ಲೂ ಪ್ರಯೋಗಕ್ಕೊಡ್ಡಲಾಗಿದೆ.

ಅಧಿಕಾರಾರೂಢ ಡಿಎಂಕೆಯ ತಂತ್ರ ಫಲಿಸಿ, ಅವರ ‘ಪರಾಸಕ್ತಿ’ ಚಿತ್ರ ಅಂದುಕೊಂಡ ದಿನವಲ್ಲದೆ, ಒಂದು ದಿನ ತಡವಾಗಿ ಬಿಡುಗಡೆಯಾಯಿತು. ಆದರೆ, ದಳಪತಿ ವಿಜಯ್ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೆ ಕಗ್ಗಂಟಾಯಿತು. ಸಮಸ್ಯೆ ಸೃಷ್ಟಿಸಿತು.
ಅಸಲಿಗೆ, ಒಬ್ಬ ಜನಪ್ರಿಯ ನಟನ ಹೊಸ ಚಿತ್ರ ಸೆಟ್ಟೇರುತ್ತಿದೆ ಎಂದರೆ, ಅದು ಚಿತ್ರೀಕರಣ ಆರಂಭವಾದ ದಿನದಿಂದ ಹಿಡಿದು ಬಿಡುಗಡೆಯತನಕ, ಎಲ್ಲವೂ ಮುಂಚಿತವಾಗಿಯೇ ಯೋಜಿಸಲಾಗುತ್ತದೆ. ಅದರಲ್ಲೂ, ಸದ್ಯ ತಮಿಳುನಾಡಿನಲ್ಲಿ ರಜನಿಕಾಂತ್ ಬಿಟ್ಟರೆ, ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಪ್ರಪಂಚದಾದ್ಯಂತ ಬಹುಬೇಡಿಕೆಯ ನಟ ಎನಿಸಿಕೊಂಡಿರುವ ದಳಪತಿ ವಿಜಯ್, ತಮ್ಮ ಕೊನೆಯ ಚಿತ್ರವನ್ನು ರಾಜಕಾರಣಕ್ಕೆ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ, ಕಥಾವಸ್ತುವನ್ನು ಹೆಣೆದಿದ್ದರು. ಚಿತ್ರನಿರ್ಮಾಣಕ್ಕಾಗಿ ನಿರ್ಮಾಪಕರು 500 ಕೋಟಿ ಸುರಿದಿದ್ದರು. ಬಿಡುಗಡೆಗೆ ಯಾವ ಅಡ್ಡಿಯಾಗದಿರಲಿ ಎಂದು ಚಿತ್ರ ಪ್ರಮಾಣೀಕರಣಕ್ಕೆ ಡಿಸೆಂಬರ್ 18, 2025ರಂದೇ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ಜನವರಿ 8, 2026ರವರೆಗೆ, ಒಂದಿಲ್ಲೊಂದು- ಗುಂಡಿನ ದಾಳಿ, ಸ್ಫೋಟ, ಚೂರಿ ಇರಿತ, ರಕ್ತಪಾತ ಅತಿಯಾಗಿದೆ ಎಂದು ತಕರಾರು ತೆಗೆದ ಸೆನ್ಸಾರ್ ಮಂಡಳಿ- ಪರಿಶೀಲನಾ ಸಮಿತಿ, ಮರುಪರಿಶೀಲನಾ ಸಮಿತಿ ಎಂದೆಲ್ಲ ಸತಾಯಿಸಿತು. ಹೇಳಿದ ಕಟ್‌ಗಳನ್ನೆಲ್ಲ ಮಾಡಿ ಕೊಟ್ಟರೂ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಸೂಕ್ತವಲ್ಲ ಎಂಬ ಕಾರಣ ಕೊಟ್ಟ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿತು. ಚಿತ್ರ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದೂ ಆಯಿತು. ಇಂದು, ಶುಕ್ರವಾರ ಮದ್ರಾಸ್ ಹೈಕೋರ್ಟ್, ‘ಇದು ಅಪಾಯಕಾರಿ ಪ್ರವೃತ್ತಿ’ ಎಂದು ಸೆನ್ಸಾರ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ವಿತರಿಸುವಂತೆ ಆದೇಶಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ”ಸಿನೆಮಾ.. ಸಿನೆಮಾ, ಪಾಲಿಟಿಕ್ಸ್.. ಪಾಲಿಟಿಕ್ಸ್. ನಿಮ್ಮ ರಾಜಕೀಯ ದ್ವೇಷಕ್ಕೆ ಇದನ್ಯಾಕೆ ಬಳಸಿಕೊಳ್ತೀರಿ ಅಥವಾ ಚಿತ್ರ ಹೊರಬರಲು ಕಾಯುತ್ತಿರುವ ನಿರ್ಮಾಪಕರಿಗೆ, ಅದರಲ್ಲಿ ಪಾಲ್ಗೊಂಡ ಕಲಾವಿದರ, ತಂತ್ರಜ್ಞರ ಕೈ ತಿರುಚಲು ಯಾಕೆ ಯತ್ನಿಸುತ್ತೀರಿ?” ಎಂದಿರುವುದು ಸೂಕ್ತವಾಗಿದೆ.
ಇದನ್ನು ಓದಿದ್ದೀರಾ?: ರಜನೀಕಾಂತ್ @ 75: ಸರಳ, ಸಾಮಾನ್ಯ, ಸಹಜಾಭಿನಯದ ಸಾಮ್ರಾಟ
ಕಾಕತಾಳೀಯವೋ ಏನೋ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ವಾರ್ತಾ ಮತ್ತು ಪ್ರಸಾರ ಖಾತೆಯ ಕೆಳಗೆ ಬರುತ್ತದೆ. ಇದರ ರಾಜ್ಯ ಸಚಿವ ತಮಿಳುನಾಡಿನ ಡಾ. ಎಲ್. ಮುರುಗನ್. ಕಟ್ಟಾ ಬಲಪಂಥೀಯ. ತಮಿಳುನಾಡಿನಲ್ಲಿ ಬಿಜೆಪಿ ಬೇರೂರಿಸಲು ಇನ್ನಿಲ್ಲದ ಶ್ರಮ ಸುರಿಯುತ್ತಿದ್ದಾರೆ. ಇವರನ್ನು ಬಿಜೆಪಿ, ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡಿ ಪುರಸ್ಕರಿಸಿದೆ. ಇವರ ಮೇಲೆ 21 ಕ್ರಿಮಿನಲ್ ಕೇಸ್‌ಗಳಿವೆ. ಇವರನ್ನು ಡಿಎಂಕೆ ಮತ್ತು ಬಿಜೆಪಿ- ಎರಡೂ ಪಕ್ಷಗಳ ನಾಯಕರು ಬಳಸಿಕೊಂಡಿದ್ದಾರೆಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಡಿಎಂಕೆ- ವಿಜಯ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರೆ; ಬಿಜೆಪಿ- ಕಾನೂನು ಕುಣಿಕೆಯ ಇಕ್ಕಟ್ಟಿಗೆ ಸಿಲುಕಿಸಿ ಮೈತ್ರಿ ಎಂಬ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದೆ. ಈ ಷಡ್ಯಂತ್ರದಲ್ಲಿ ಸದ್ಯಕ್ಕೆ ಸ್ಟಾಲಿನ್ ಮತ್ತು ಮೋಶಾ- ಗೆದ್ದಿರಬಹುದು. ಆದರೆ, ಇವರ ಈ ಗೆಲುವೇ, ನಿಜವಾದ ಸೋಲು ಕೂಡ. ಏಕೆಂದರೆ, ಇವರು ಜನರನ್ನೇ ಮರೆತಿದ್ದಾರೆ. ತಂತ್ರ-ಕುತಂತ್ರಗಳಲ್ಲಿ ಮುಳುಗಿದ್ದಾರೆ. ಇದನ್ನೆಲ್ಲ ತಮಿಳುನಾಡಿನ ಜನ ನೋಡುತ್ತಿದ್ದಾರೆ. ಉತ್ತರ ಕೊಡಲು ಕಾಯುತ್ತಿದ್ದಾರೆ.

ಲೇಖಕ, ಪತ್ರಕರ್ತ




