ತಮಿಳುನಾಡಿನ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆಯಲ್ಲಿವೆ. ಆಡಳಿತರೂಢ ಡಿಎಂಕೆ ನೇತೃತ್ವದ ಮೈತ್ರಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಜಾಣ್ಮೆಯ ಹೆಜ್ಜೆಯನ್ನಿಡುತ್ತಾ ರಾಜಕೀಯ ಕಾರ್ಯತಂತ್ರ ಮಾಡುತ್ತಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಡಿಎಂಕೆ ಜೊತೆ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಒಪ್ಪಿಕೊಂಡಿದೆ. ಆ ಬಳಿಕ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ಕೊಟ್ಟಿದ್ದು, ʼನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದಾಗಿದೆʼ. ಹಾಗಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಸೀಟು ಹಂಚಿಕೆಗೆ ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
1. ಚುನಾವಣೆಗೆ 5 ಕ್ಷೇತ್ರಗಳನ್ನು ಮಾತ್ರ ಡಿಎಂಕೆ ಬಿಟ್ಟುಕೊಟ್ಟಿದೆ. ತೃಪ್ತಿ ಇದೆಯೆ?
ಸಿಪಿಐ ಕೆಲವು ದಶಕಗಳಿಂದ ರಾಜಕೀಯ ಮೈತ್ರಿಯನ್ನು ಹೊಂದಿದೆ. ದೇಶದಾದ್ಯಂತ ಬಲವಾದ ರಾಜಕೀಯ ಅಸ್ತಿತ್ವವನ್ನು ಹೊಂದಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣಕ್ಕೆ ಸ್ವಾಭಾವಿಕವಾಗಿ ನಾವು ಹೆಚ್ಚಿನ ಕ್ಷೇತ್ರಗಳನ್ನು ಬಯಸಿದ್ದೆವು. ನಮ್ಮ ಮೈತ್ರಿಯಲ್ಲಿ ಇನ್ನೂ ಅನೇಕ ಪಕ್ಷಗಳಿವೆ. ಆ ಎಲ್ಲಾ ಪಕ್ಷಗಳಿಗೂ ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕಿದೆ. ಡಿಎಂಕೆ ಮುಖ್ಯಸ್ಥ, ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್ ನಮ್ಮೊಂದಿಗೆ ಮಾತುಕತೆ ನಡೆಸಿ, ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಸಹಕರಿಸಿ ಎಂದು ಕೇಳಿಕೊಂಡರು. ತರುವಾಯ, ನಾವು ಕಾರ್ಯಕಾರಿ, ಆಡಳಿತಾತ್ಮಕ ಮತ್ತು ರಾಜ್ಯ ಸಮಿತಿ ಸಭೆಗಳನ್ನು ನಡೆಸಿದ್ದೇವೆ. ಈ ಚರ್ಚೆಗಳ ನಡೆದ ಸಂದರ್ಭದಲ್ಲಿ, ನಾವು ಅರ್ಥ ಮಾಡಿಕೊಂಡ ವಿಷಯವೇನೆಂದರೆ, ಸೀಟು ಹಂಚಿಕೆ ಮಾತುಕತೆ ವಿಳಂಬವಾದರೆ, ನಮ್ಮ ಮೈತ್ರಿಕೂಟ ಹೆಣಗಾಡುತ್ತಿದೆ ಎಂಬ ರಾಜಕೀಯ ವಿಶ್ಲೇಷಣೆ ಹರಡುತ್ತದೆ. ನಮ್ಮ ಮೈತ್ರಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳಲ್ಲಿ ಬರುವ ಊಹಾಪೋಹದ ವರದಿಗಳು ನಮ್ಮ ವಿರೋಧಿ ಪಕ್ಷಗಳಿಗೆ ಅಸ್ತ್ರವಾಗುವುದು ನಮಗೆ ಬೇಕಾಗಿಲ್ಲ. ಡಿಎಂಕೆ ಮೇಲೆ ಯಾವುದೇ ಒತ್ತಡ ಹೇರುವುದಕ್ಕೆ ನಾವು ಬಯಸಿಲ್ಲ. ಸಾಧ್ಯತೆಗಳನ್ನು ಅವಲೋಕಿಸಿ ನಮ್ಮ ಮೈತ್ರಿಯ ನೇತೃತ್ವ ವಹಿಸಿರುವ ಡಿಎಂಕೆ ನಮಗೆ 5 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ನಮಗೆ ಸಣ್ಣ ಅಸಮಾಧಾನವಿದ್ದರೂ, ನಮ್ಮ ಮೈತ್ರಿಯ ಉದ್ದೇಶಕ್ಕಾಗಿ ನಾವು ಒಪ್ಪಿಕೊಂಡಿದ್ದೇವೆ.
2. ನಿಮ್ಮ ಮೈತ್ರಿಯ ಉದ್ದೇಶ ಮತ್ತು ಗುರಿ ಏನು !?
ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಮತ್ತು ಉದ್ದೇಶವಾಗಿದೆ. ಯಾವುದೇ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು. ಅದನ್ನು ಮತದಾರರು ನಿರ್ಧರಿಸುತ್ತಾರೆ. ಧರ್ಮ ರಾಜಕಾರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಸಾಮಾಜಿಕ ಸೌಹಾರ್ದತೆ ಮತ್ತು ಜಾತ್ಯತೀತತೆಯ ಮೇಲೆ ದಾಳಿ ಮಾಡುವುದು ಬಿಜೆಪಿ ಉದ್ದೇಶ. ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ತಮಿಳುನಾಡು ಶಾಂತಿಯುತ ಮತ್ತು ಜಾತ್ಯತೀತ ರಾಜ್ಯ. ಬಿಜೆಪಿ ಇಲ್ಲಿ ಬೆಳೆಯುವುದನ್ನು ನಾವು ಬಯಸುವುದಿಲ್ಲ. ನಾವು ಸ್ವಲ್ಪ ನಷ್ಟವನ್ನು ಎದುರಿಸಿದರೂ, ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ನಿಲ್ಲಲು ನಾವು ಸಿದ್ಧರಿದ್ದೇವೆ. ಇದು ಕೇವಲ ಚುನಾವಣೆಗಳ ಬಗ್ಗೆ ಅಲ್ಲ. ಇದು ಪ್ರಜಾಪ್ರಭುತ್ವಕ್ಕಾಗಿ ನಡೆಸುತ್ತಿರುವ ಹೋರಾಟ. ನಾವು ಅದಕ್ಕೆ ಬದ್ಧರಾಗಿದ್ದೇವೆ.
3. ಯಾವುದು ಹೆಚ್ಚು ಮುಖ್ಯ, ಬಿಜೆಪಿಯನ್ನು ಸೋಲಿಸುವುದೋ ಅಥವಾ ನಿಮ್ಮ ಪಕ್ಷವನ್ನು ಬೆಳೆಸುವುದೋ?ಬಿಜೆಪಿಯನ್ನು ಸೋಲಿಸುವುದು ಈಗ ನಮ್ಮ ಮುಂದಿರುವ ಒಂದೇ ಒಂದು ಗುರಿ. ಅದು ನಮಗೆ ಬಹಳ ಮುಖ್ಯ. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅವಶ್ಯಕವಾಗಿದೆ. ಅದೇ ಸಮಯದಲ್ಲಿ, ನಾವು ನಮ್ಮ ಪಕ್ಷವನ್ನು ಸಹ ಬೆಳೆಸುತ್ತೇವೆ. ಇದರಲ್ಲಿ ಯಾವುದೇ ಎರಡನೇ ಮಾತಿಲ್ಲ.
4. ಕೆಲವು ಸಿಪಿಐ ಕಾರ್ಯಕರ್ತರು ಅತೃಪ್ತರಾಗಿರುವಂತಿದೆ. ಇದು ತಳಮಟ್ಟದ ಮೈತ್ರಿಯ ಮೇಲೆ ಪರಿಣಾಮ ಬೀರುವುದಿಲ್ಲವೆ?
ಇಲ್ಲ. ಉನ್ನತ ಮಟ್ಟದ ನಾಯಕತ್ವದಿಂದ ಹಿಡಿದು ತಳಮಟ್ಟದವರೆಗೆ, ನಮ್ಮ ಪಕ್ಷವು ಬಿಜೆಪಿ ಇಲ್ಲಿ ಬೆಳೆಯಬಾರದು ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ನಮ್ಮ ಉದ್ದೇಶ ಸ್ಪಷ್ಟವಾಗಿರುವಾಗ ಸೀಟು ಹಂಚಿಕೆಯಲ್ಲಿ ಕೇವಲ 5 ಕ್ಷೆತ್ರಗಳನ್ನು ಪಡೆದಿರುವುದು ನಮ್ಮ ಪಕ್ಷ ಮತ್ತು ಪಕ್ಷದ ಸಿದ್ಧಾಂತವನ್ನು ದುರ್ಬಲಗೊಳಿಸುವುದಿಲ್ಲ. ಸಿಪಿಐ ಎಂದಿಗೂ ಪಕ್ಷಕ್ಕಿಂತ ರಾಷ್ಟ್ರದ ಅಭಿವೃದ್ಧಿಗೆ ಒತ್ತನ್ನು ನೀಡುತ್ತದೆ. ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂಬುವುದಕ್ಕೆ ಯಾವುದೇ ನಿರಾಸೆ ಇಲ್ಲ.
ಇದನ್ನೂ ಓದಿ : ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
5. ನಿಮ್ಮ ಆದ್ಯತೆಯ ಕ್ಷೇತ್ರಗಳನ್ನು ಪಡೆಯಲು ನೀವು ಒತ್ತಾಯಿಸುತ್ತೀರಾ?
ಹೆಚ್ಚಾಗಿ ಈವರೆಗೆ ನಾವು ಕೇಳಿದ ಕ್ಷೇತ್ರಗಳನ್ನೇ ಬಿಟ್ಟುಕೊಡಲಾಗಿದೆ. ನಮಗೆ ನಮ್ಮ ಮೈತ್ರಿಯ ನಾಯಕತ್ವದ ಬಗ್ಗೆ ನಂಬಿಕೆ ಇದೆ. ಕೆಲವೊಂದು ಸಣ್ಣ ವ್ಯತ್ಯಾಸವಾಗಬಹುದು. ಅದು ಕ್ಷೇತ್ರಗಳ ಹಂಚಿಕೆಯ ಸಂದರ್ಭದಲ್ಲಿ ಸಾಮಾನ್ಯವಾಗಿದೆ. ಒಟ್ಟಾರೆಯಾಗಿ ನಮಗೆ ತುಂಬಾ ಭರವಸೆ ಇದೆ.
6. ಸಿಪಿಎಂ ಆರು ಕ್ಷೇತ್ರಗಳನ್ನು ಬಿಟ್ಟುಕೊಡದಿದ್ದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದೆ. ಇದು ನಿಮ್ಮ ಮೈತ್ರಿಯಲ್ಲಿನ ಗೊಂದಲವಲ್ಲವೆ?
ಎಡ ಪಕ್ಷಗಳೆರಡೂ ಹಿಂದೆಂದಿಗಿಂತಲೂ ಹತ್ತಿರವಾಗುತ್ತಿವೆ. ನಮಗೆ ಸೀಟು ಹಂಚಿಕೆಯ ಬಗ್ಗೆ ಸ್ಪಷ್ಟತೆ ಇದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ನಮ್ಮ ಮೈತ್ರಿಯಲ್ಲಿರುವ ಎಲ್ಲಾ ಪಕ್ಷಗಳಿಗೆ ಈ ಬಗ್ಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ನಮ್ಮ ರಾಜಕೀಯದ ನಡೆಗಳಲ್ಲಿ ಸಣ್ಣ ವ್ಯತ್ಯಾಸವಿರಬಹುದು. ಆದರೆ ನಾವೆಲ್ಲರೂ ಸಮಾನ ಮನಸ್ಕರಾಗಿದ್ದೇವೆ. ಇದನ್ನು ಗೊಂದಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹೆಚ್ಚಿನ ಕ್ಷೇತ್ರಗಳನ್ನು ಕೇಳುವುದರಲ್ಲಿ ತಪ್ಪಿಲ್ಲ.
7.ಎಡ ಪಕ್ಷಗಳು ಭವಿಷ್ಯದಲ್ಲಿ ಒಗ್ಗೂಡಿ ಮೈತ್ರಿಯಲ್ಲಿ ನಿರ್ಣಾಯಕ ಪಾತ್ರವಹಿಸಬಹುದೇ?
ಪ್ರಗತಿಪರ ಶಕ್ತಿಗಳು ಬಲವಾಗಿ ಒಗ್ಗೂಡಬೇಕು. ಜಗತ್ತಿನಲ್ಲಿ ಕಾರ್ಪೋರೇಟ್ ಶಕ್ತಿ ಆವರಿಸಿಕೊಳ್ಳುತ್ತಿದೆ. ಬಹುಕೋಟಿ ಹೂಡಿಕೆದಾರರಿಗೆ ಮೃದು ಧೋರಣೆ ತೋರಿ, ಕಾರ್ಮಿಕ ವರ್ಗದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ ಪೆರಿಯಾರ್, ಅಂಬೇಡ್ಕರ್, ಮಾರ್ಕ್ಸ್ ಮತ್ತು ಜವಾಹರಲಾಲ್ ನೆಹರು ಅವರನ್ನು ಅನುಸರಿಸುವ ಚಿಂತಕರು ಒಗ್ಗೂಡಬೇಕಿದೆ. ಆಗ ಮಾತ್ರ ನಾವು ರಾಜಕೀಯ ಮತ್ತು ಸಮಾಜದಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ಸಿದ್ಧಾಂತವನ್ನು ಸೋಲಿಸಬಹುದು. ನಾವು ಒಗ್ಗೂಡುವುದಕ್ಕೆ ಮುಕ್ತರಾಗಿದ್ದೇವೆ.
8.ಡಿಎಂಕೆ ಮೈತ್ರಿಕೂಟದಲ್ಲಿ ಹೊಸದಾಗಿ ಸೇರ್ಪಡೆಯಾಗುವವರಿಗೆ ಎಡ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದು ನ್ಯಾಯಯುತವೇ?
ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ತನ್ನ ಸಿದ್ಧಾಂತದ ಆಧಾರದಲ್ಲೇ ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತಿದೆ. ಬಿಜೆಪಿಯನ್ನು ಸೋಲಿಸುವುದಕ್ಕೆ ಎಲ್ಲಾ ಪ್ರಜಾಪ್ರಭುತ್ವದ ಶಕ್ತಿಗಳು ಒಂದಾಗಬೇಕು. ಸ್ಟ್ಯಾಲಿನ್ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಎದುರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನಾವು ಹೆಚ್ಚು ಕ್ಷೇತ್ರಗಳನ್ನು ಕೇಳಿದ್ದೆವು. ಮತ್ತು ನಮ್ಮ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅರ್ಹವಾಗಿದೆ. ಆದರೆ ರಾಜಕೀಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ರಾಜಕೀಯ ಸದುದ್ದೇಶಕ್ಕಾಗಿ ಐದು ಕ್ಷೇತ್ರಗಳಿಗೆ ನಾವು ಒಪ್ಪಿದ್ದೇವೆ. ಹೊಸದಾಗಿ ಸೇರ್ಪಡೆಯಾಗುವವರು ನಮ್ಮ ಸಿದ್ದಾಂತಕ್ಕೆ ಹೊಂದುವವರೇ ಆಗಿರುವುದರಿಂದ ನಾವು ಸದ್ಯಕ್ಕೆ ಆ ಪರಿಸ್ಥಿತಿ ಬಗ್ಗೆ ಆಕ್ಷೇಪಿಸಲ್ಲ.
9. 2021 ರಲ್ಲಿ ನೀವು ಸ್ಪರ್ಧಿಸಿದ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ನೀವು ಸೋತಿದ್ದೀರಿ. ಈ ಚುನಾವಣೆಯಲ್ಲಿ ಅದು ಬದಲಾಗುತ್ತದೆ ಎನ್ನುವ ನಿರೀಕ್ಷೆ ಇದೆಯೆ?
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಚುನಾವಣೆಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈಗಿನ ರಾಜಕೀಯ ಜಾತಿ, ಧರ್ಮ ಮತ್ತು ಪ್ರಾದೇಶಿಕ ಅಂಶಗಳಿಂದ ಪ್ರಭಾವಿತರಾಗಿರುತ್ತದೆ. ಆದ್ದರಿಂದ ಸಮಾನತೆಯ ಬಗ್ಗೆ ಮಾತನಾಡುವ ನಮ್ಮಂತಹ ಪಕ್ಷಗಳಿಗೆ ಇದು ಕಷ್ಟಕರವಾಗುತ್ತದೆ. ಕಳೆದ ಚುನಾವಣೆಯಲ್ಲಿನ ನಮ್ಮ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ. ಪಕ್ಷವನ್ನು ಚೇತರಿಸಿಕೊಳ್ಳುವ ಎಲ್ಲಾ ಕಾರ್ಯತಂತ್ರಗಳನ್ನು ಮಾಡಿದ್ದೇವೆ. ತಮಿಳುನಾಡಿನ ಮತದಾರರ ಮೇಲೆ ನಮಗೆ ನಂಬಿಕೆ ಇದೆ. ಯುವ ಸಮುದಾಯವೂ ಇಂದಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಆಧುನಿಕ ದೃಷ್ಟಿಕೋನದಿಂದ ಯೋಚಿಸುತ್ತಿದ್ದಾರೆ. ಭವಿಷ್ಯದಲ್ಲಿ ಯುವ ಸಮುದಾಯ ಪ್ರಗತಿಪರ ವಿಚಾರಗಳನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ.
10.ನೀವು ಯುವಕರ ಬಗ್ಗೆ ಮಾತನಾಡಿದ್ದೀರಿ. ಅನೇಕ ಯುವಕರು ಈಗ ಟಿವಿಕೆಯಂತಹ ಹೊಸ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಎಡಪಂಥೀಯರು ಯುವಕರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದೀರಾ?
ಅವರು(ಯುವಕರು) ನಟ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರ ಅಭಿಮಾನಿಗಳು ಮಾತ್ರವಲ್ಲ. ಅವರಿಗೂ ಸಾಮಾಜಿಕ ಕಳವಳಿ ಇದೆ. ಆದರೆ ಅವರು ನ್ಯಾಯ, ಹಕ್ಕುಗಳು ಮತ್ತು ಸಮಾನತೆಯ ಬಗ್ಗೆ ಕಲಿಯಲು ಬಯಸಿದರೆ, ಎಡಪಂಥೀಯರ ವಿಚಾರಗಳ ಕಡೆಗೆ ವಿಶ್ವಾಸ ಇಟ್ಟು ಬರುತ್ತಾರೆ. ಸಮಯ ಬಂದಾಗ, ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಆ ದಿಕ್ಕಿನಲ್ಲಿ ಚಲಿಸುತ್ತಾರೆ ಎಂದು ನಾವು ನಂಬುತ್ತೇವೆ.
11.ಕಮ್ಯುನಿಸ್ಟ್ ಪಕ್ಷಗಳು ತಮ್ಮ ಮತ ಪಾಲನ್ನು ಹೆಚ್ಚಿಸುತ್ತಿಲ್ಲ ಎಂದು ಹೆಚ್ಚಾಗಿ ಹೇಳಲಾಗುತ್ತದೆ. ನಿಮ್ಮ ಪ್ರತಿಕ್ರಿಯೆ ಏನು?
ಅದು ಸರಿಯಲ್ಲ. ನಾವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲ. ಆದ್ದರಿಂದ, ನಮ್ಮ ಪೂರ್ಣ ಶಕ್ತಿ ಗೋಚರಿಸುವುದಿಲ್ಲ. ಕೆಲವು ಕ್ಷೇತ್ರಗಳಲ್ಲಿ, ನಾವು ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಉದಾಹರಣೆಗೆ, ಥಾಲಿ, ತಿರುತುರೈಪೂಂಡಿ ಮತ್ತು ಇತರ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಸ್ವತಂತ್ರವಾಗಿ ಬಲವಾದ ಮತ ಪಾಲನ್ನು ಪಡೆದುಕೊಂಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ನಮ್ಮ ಪಕ್ಷದ ಮೇಲೆ ಮತದಾರರು ಇಟ್ಟಂತಹ ವಿಶ್ವಾಸ ನಿಮಗೆ ಗೊತ್ತಿದೆ. ನಮ್ಮ ಪಕ್ಷ ಎಲ್ಲಿಯೂ ಕುಂದಿಲ್ಲ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ





