ತಮಿಳುನಾಡು ಚುನಾವಣೆ | ತಾರಕಕ್ಕೇರಿದ ‘ಜನ ನಾಯಗನ್ – ಪರಾಶಕ್ತಿ’ ಫಿಲ್ಮಿ ಫೈಟ್

Date:

ಡಿಎಂಕೆ-ಅಣ್ಣಾಡಿಎಂಕೆ ಪಕ್ಷಗಳ ನಡುವಿನ ಜಟಾಪಟಿಯ ಲಾಭ ಪಡೆದ ನಟ ವಿಜಯ್ ಅವರ ಟಿವಿಕೆ, ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. 'ಜನ ನಾಯಗನ್' ಮತ್ತು 'ಪರಾಶಕ್ತಿ' ಚಿತ್ರಗಳ ಫೈಟ್, ರಾಜಕಾರಣದೊಂದಿಗೆ ತಳುಕು ಹಾಕಿಕೊಂಡಿದೆ.

ಪಕ್ಕದ ತಮಿಳುನಾಡಿನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಕ್ಷಗಳ ತಾಲೀಮು ಜೋರಾಗಿದೆ. ಇಲ್ಲಿಯವರೆಗೆ ಡಿಎಂಕೆ ಹಾಗೂ ಎಐಡಿಎಂಕೆಗಳ ನಡುವಿನ ನೇರ ಪೈಪೋಟಿಯಾಗಿದ್ದ ತಮಿಳುನಾಡಿನ ರಾಜಕಾರಣಕ್ಕೆ ಈ ಬಾರಿ ನಟ ವಿಜಯ್ ಎಂಟ್ರಿ ಕೊಟ್ಟಿದ್ದಾರೆ. ಚುನಾವಣಾ ಕಣಕ್ಕೆ ಬಣ್ಣದ ರಂಗು ತುಂಬಿದ್ದಾರೆ, ಸಂಚಲನ ಸೃಷ್ಟಿಸಿದ್ದಾರೆ. ನೇರ ಹಣಾಹಣಿಯನ್ನು ತ್ರಿಕೋನ ಸ್ಪರ್ಧೆಯನ್ನಾಗಿ ಪರಿವರ್ತಿಸಿದ್ದಾರೆ.  

ಆಡಳಿತಾರೂಢ ಡಿಎಂಕೆ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ; ವಿರೋಧ ಪಕ್ಷದಲ್ಲಿರುವ ಎಐಡಿಎಂಕೆ, ಬಿಜೆಪಿಯೊಂದಿಗೆ ಕೈ ಜೋಡಿಸಿದೆ. ಡಿಎಂಕೆ ಮೈತ್ರಿಕೂಟದಲ್ಲಿ 14 ಪಕ್ಷಗಳಿವೆ. ಅವುಗಳನ್ನು ಚುನಾವಣೆಯವರೆಗೂ ಒಟ್ಟಾಗಿಟ್ಟುಕೊಳ್ಳುವುದು, ಸೀಟು ಹಂಚಿಕೆಯಲ್ಲಿ ಯಾರಿಗೂ ಹೆಚ್ಚು-ಕಡಿಮೆಯಾಗದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿ ಸ್ಟಾಲಿನ್‌ಗೆ ಸವಾಲಿನ ಸಂಗತಿಯಾಗಿದೆ. ಜೊತೆಗೆ ಡಿಎಂಕೆ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನಾಯಕರ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪಗಳಿವೆ. ಆಡಳಿತವಿರೋಧಿ ಅಲೆ ಬೀಸುತ್ತಿದೆ.

ಇದನ್ನು ಓದಿದ್ದೀರಾ?: ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ, ಇದರ ಲಾಭ ಪಡೆಯಲು ವಿರೋಧಪಕ್ಷವಾದ ಎಐಡಿಎಂಕೆಯಲ್ಲಿ ಸಮರ್ಥ ನಾಯಕನ ಕೊರತೆ ಎದ್ದುಕಾಣುತ್ತಿದೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನಡುವಿನ ಗುಂಪುಗಾರಿಕೆ, ಬಣ ಬಡಿದಾಟ ವಿರೋಧಿಗಳಿಗೆ ಅನುಕೂಲವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಆದರೆ, ಇಬ್ಬರು ನಾಯಕರು ಒಂದಾಗಿರಬೇಕೆಂದು ಬಿಜೆಪಿ ಬಯಸುತ್ತಿದೆ. ಏಕೆಂದರೆ, ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಲಾಢ್ಯ ಬಿಜೆಪಿ, ಎಐಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು. ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧಿಸಿ, ಮತ್ತೊಮ್ಮೆ ಮಣ್ಣುಮುಕ್ಕಿತ್ತು. ಈ ಎಲ್ಲ ಕಾರಣದಿಂದ, ಎರಡು ಗುಂಪುಗಳನ್ನು ಒಗ್ಗೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರಮಿಸುತ್ತಿದ್ದಾರೆ. ಈ ನಡುವೆ, ಪನ್ನೀರ್ ಸೆಲ್ವಂ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ನಾಯಕ ಟಿಟಿವಿ ದಿನಕರನ್‌- ಇಬ್ಬರೂ ನಟ ವಿಜಯ್ ಅವರ ಟಿವಿಕೆ ಸೇರುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಅಣ್ಣಾಡಿಎಂಕೆ ಮಾಜಿ ನಾಯಕ ಕೆ.ಎ. ಸಂಗೋಟಿಯನ್ ಈಗಾಗಲೇ ವಿಜಯ್‌ ಅವರ ಟಿವಿಕೆ ಸೇರಿದ್ದಾಗಿದೆ.

hq720 19
ವಿಜಯ್ ‘ಜನ ನಾಯಗನ್’

ಡಿಎಂಕೆ-ಅಣ್ಣಾಡಿಎಂಕೆ ಪಕ್ಷಗಳ ನಡುವಿನ ಜಟಾಪಟಿಯ ಲಾಭ ಪಡೆದ ನಟ ವಿಜಯ್ ಅವರ ಟಿವಿಕೆ, ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇಬ್ಬರನ್ನೂ ಹಿಂದಕ್ಕೆ ಹಾಕಿ ಮುನ್ನುಗ್ಗುವ ಮುನ್ಸೂಚನೆ ನೀಡುತ್ತಿದೆ. ಅದಕ್ಕೆ ಪೂರಕವಾಗಿ, ವಿಜಯ್ ಅವರ ನಟನೆಯ ಕೊನೆ ಚಿತ್ರ ‘ಜನ ನಾಯಗನ್’ ಇದೇ ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಟ ವಿಜಯ್, ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ರಾಜಕಾರಣಕ್ಕೆ ಅನುಕೂಲವಾಗುವ ರೀತಿಯಲ್ಲಿ, ಚಿತ್ರದಲ್ಲಿ ಹಿರಿಯ ವ್ಯಕ್ತಿಯೊಬ್ಬರನ್ನು ಮಾರ್ಗದರ್ಶಕ ಹಾಗೂ ರಕ್ಷಕನಾಗಿ ಚಿತ್ರಿಸಲಾಗಿದೆ. ಮಹಿಳಾ ಹಕ್ಕುಗಳ ಪರ ಹೋರಾಡುವ ಮತ್ತು ಸಮಾಜದಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನಕ್ಕಾಗಿ ಧ್ವನಿ ಎತ್ತುವ ನಾಯಕನಾಗಿ ತೋರಿಸಲಾಗಿದೆ. ಆ ಮೂಲಕ ರಾಜಕೀಯ ಸಂದೇಶವನ್ನು ನೀಡಲಾಗಿದೆ. ನಾಯಕ ದಳಪತಿ ವಿಜಯ್ ಪೂರ್ಣಕಾಲಿಕ ರಾಜಕೀಯ ಜೀವನಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಈ ಚಿತ್ರ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತಿದೆ.

ನಟ ವಿಜಯ್ ಅವರ ರಾಜಕೀಯ ಪ್ರವೇಶ, ಅದಕ್ಕೆ ಪೂರಕವಾಗಿ ಕೊನೆಯ ಚಿತ್ರ ‘ಜನನಾಯಗನ್’ ಬಿಡುಗಡೆಗೊಳಿಸಿ, ಆ ಮೂಲಕ ಜನರನ್ನು ಸೆಳೆಯಲು ಹವಣಿಸುತ್ತಿರುವುದು ಡಿಎಂಕೆಯಲ್ಲಿ ಕಸಿವಿಸಿ ಹುಟ್ಟಿಸಿದೆ. ಜೊತೆಗೆ ತಮಿಳುನಾಡಿನ ಜನರ ಸಿನೆಮಾ ಕ್ರೇಜನ್ನು, ಅಭಿಮಾನಿಗಳ ಅತಿರೇಕಗಳನ್ನು ಗಮನಿಸಿರುವ ಸ್ಟಾಲಿನ್, ತಮಿಳುನಾಡಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದನ್ನು ಬಲ್ಲರು. ತಮ್ಮ ತಂದೆ ಎಂ. ಕರುಣಾನಿಧಿಯವರು ಚಿತ್ರರಂಗದಿಂದ ರಾಜಕಾರಣಕ್ಕೆ ಬಂದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿರುವುದನ್ನು ಖುದ್ದಾಗಿ ಕಂಡವರು. ಹಾಗೆಯೇ 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳಿರ ಆರಾದ್ಯದೈವವಾಗಿದ್ದನ್ನು; 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿದ್ದನ್ನು ನೋಡಿದವರು.

ಆ ಕಾರಣದಿಂದಾಗಿಯೇ ಮುಖ್ಯಮಂತ್ರಿ ಸ್ಟಾಲಿನ್, ‘ಮಕ್ಕಳ ನೀಧಿ ಮಯ್ಯಂ’ ಪಕ್ಷ ಕಟ್ಟಿ ರಾಜಕಾರಣಕ್ಕಿಳಿದು ಸೋತ ನಟ ಕಮಲ್‌ ಹಾಸನ್‌ ಅವರನ್ನು ಸೆಳೆದು, ರಾಜ್ಯಸಭಾ ಸದಸ್ಯರನ್ನಾಗಿ ಮಾಡಿರುವುದು. ಆದರೆ ಅದೇ ತಂತ್ರವನ್ನು ನಟ ವಿಜಯ್ ವಿಷಯದಲ್ಲಿ ಮಾಡಲಾಗುವುದಿಲ್ಲವೆಂದು ಅರಿತಿದ್ದಾರೆ. ಅವರಿಗೆ ಅವರದೇ ಮಾರ್ಗದಲ್ಲಿ ಉತ್ತರ ಕೊಡಲು ಸಿದ್ಧವಾಗಿದ್ದಾರೆ. ವಿಜಯ್ ವೇಗಕ್ಕೆ ತಡೆಯೊಡ್ಡಲು, ಅವರ ಚಿತ್ರಕ್ಕೆ ಚಿತ್ರದ ಮೂಲಕವೇ ಸ್ಪರ್ಧೆಯೊಡ್ಡಲು ಮುಂದಾಗಿದ್ದಾರೆ. ಅದಕ್ಕಾಗಿ ಡಿಎಂಕೆ ಪಕ್ಷ ಹುಟ್ಟುಹಾಕಿದ ಎಂ.ಕರುಣಾನಿಧಿಯವರ ಮೊರೆ ಹೋಗಿದ್ದಾರೆ. 1952ರಲ್ಲಿ ತೆರೆಗೆ ಬಂದ ‘ಪರಾಶಕ್ತಿ’ ಚಿತ್ರವನ್ನು ಈ ಕಾಲಕ್ಕೆ ಬೇಕಾದಂತೆ- ತಮ್ಮ ರಾಜಕಾರಣಕ್ಕೆ ಅನುಕೂಲವಾಗುವಂತೆ ಬದಲಿಸಿ ಮತ್ತೆ ತೆರೆಗೆ ತರುತ್ತಿದ್ದಾರೆ. ಆ ಚಿತ್ರಕ್ಕೆ ‘ಪರಾಶಕ್ತಿ’ ಎಂದು ಹೆಸರಿಟ್ಟು, ಅದನ್ನು ಇದೇ ಪೊಂಗಲ್ ಹಬ್ಬದಂದು- ಜನವರಿ 10ರಂದು ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ.

1952ರಲ್ಲಿ ತೆರೆಕಂಡ ‘ಪರಾಶಕ್ತಿ’ ಚಿತ್ರಕ್ಕೆ ಎಂ. ಕರುಣಾನಿಧಿಯವರ ಚಿತ್ರಕಥೆ ಇತ್ತು. ನಟರಾಗಿ ಶಿವಾಜಿ ಗಣೇಶನ್ ಅವರಿಗೆ ಮೊದಲ ಚಿತ್ರವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಚಿತ್ರ ಬ್ರಾಹ್ಮಣಿಕೆ ಮತ್ತು ಹಿಂದೂ ಪದ್ಧತಿಗಳನ್ನು ಕಟುವಾಗಿ ವಿರೋಧಿಸುವ ವಸ್ತುವನ್ನು ಒಳಗೊಂಡಿತ್ತು. ದ್ರಾವಿಡ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಚಿತ್ರವಾಗಿತ್ತು. ಕ್ರಾಂತಿಕಾರಿ ಸಂಭಾಷಣೆಗಳ ಮೂಲಕ ಕರುಣಾನಿಧಿಯವರು ದ್ರಾವಿಡ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದ್ದರು. ಆಗಿನ ಸರ್ಕಾರ ಆ ಚಿತ್ರವನ್ನು ನಿಷೇಧಿಸಲು ಮುಂದಾಗಿತ್ತು. ವಿರೋಧದ ನಡುವೆಯೂ ಬಿಡುಗಡೆಯಾಗಿ, 175 ದಿನ ಓಡಿ ಜನಮೆಚ್ಚುಗೆ ಗಳಿಸಿತ್ತು. ಟ್ರೆಂಡ್ ಸೆಟ್ಟಿಂಗ್ ಚಿತ್ರ ಎಂದು ದಾಖಲಾಗಿತ್ತು.

jana nayagan parasakthi2
ಕಾರ್ತಿಕೇಯನ್ ‘ಪರಾಶಕ್ತಿ’

ಈಗ, ಆಡಳಿತಾರೂಢ ಡಿಎಂಕೆ, ‘ಪರಾಶಕ್ತಿ’ ಚಿತ್ರವನ್ನು ಮರು ನಿರ್ಮಿಸಿದೆ. 60ರ ದಶಕದಲ್ಲಿ ನಡೆಯುವ ಘಟನೆಗಳನ್ನು, ಪ್ರಸ್ತುತ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಗಳೊಂದಿಗೆ ತಳಕು ಹಾಕಲಾಗಿದೆ. ಕೇಂದ್ರದ ಹಿಂದಿ ಭಾಷಾ ಹೇರಿಕೆ ಮತ್ತು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಹೋರಾಡುವ ಕಥಾನಕವಿದೆ. ಪ್ರಾದೇಶಿಕತೆಗೆ ಒತ್ತು ನೀಡುವ, ಜನರಲ್ಲಿ ಜಾಗೃತಿ ಮೂಡಿಸುವ ತಿರುಳನ್ನು ತುಂಬಲಾಗಿದೆ. ಡಿಎಂಕೆ ಕೈಯಲ್ಲಿ ಅಧಿಕಾರವಿರುವುದರಿಂದ, ಯಥೇಚ್ಚವಾಗಿ ಹಣ ಖರ್ಚು ಮಾಡಿ, ಪ್ರಚಾರ ನೀಡಿ, ತಮಿಳುನಾಡಿನ ಜನರ ಮೇಲೆ ಮತ್ತೆ ದ್ರಾವಿಡ ಅಸ್ಮಿತೆಯನ್ನು ಪ್ರಯೋಗಕ್ಕೊಡ್ಡಿದೆ.

ವಿಪರ್ಯಾಸವೆಂದರೆ, ವಿಜಯ್ ಅವರ ‘ಜನನಾಯಗನ್’ ಮತ್ತು ಡಿಎಂಕೆಯ ‘ಪರಾಶಕ್ತಿ’ ಚಿತ್ರಗಳೆರಡೂ ಪೊಂಗಲ್ ಹಬ್ಬಕ್ಕೆ ಮುನ್ನ ಬಿಡುಗಡೆಯಾಗುತ್ತಿವೆ. ವಿಜಯ್, ತಮ್ಮ ಚಿತ್ರವನ್ನು ಜನವರಿ 9ರಂದು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಆದರೆ ಈತನಕ ಕೇಂದ್ರದ ಅಧೀನದಲ್ಲಿರುವ CBFC ಸಂಸ್ಥೆಯಿಂದ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ. ವಿಜಯ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದೂ ಆಗಿದೆ. ವಿಳಂಬದಿಂದ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ನಿರ್ಮಾಪಕರು ನ್ಯಾಯಾಲಯದ ಗಮನಕ್ಕೆ ತಂದಿದ್ದೂ ಆಗಿದೆ.

ಇದನ್ನು ಓದಿದ್ದೀರಾ?: ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು 

ಒಂದು ಅಂದಾಜಿನ ಪ್ರಕಾರ, ಚಿತ್ರಕ್ಕೆ ಸುಮಾರು 500 ಕೋಟಿ ಹೂಡಿಕೆ ಮಾಡಲಾಗಿದೆಯಂತೆ. ಅದನ್ನು ವಿಜಯ್ ಪರ ವಕೀಲರು ನ್ಯಾಯಾಲಯದ ಮುಂದಿಟ್ಟು, ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ, ಜಗತ್ತಿನಾದ್ಯಂತ ಸುಮಾರು 5,000 ಪರದೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇತರ ಭಾಷೆಗಳ ಪ್ರಮಾಣೀಕರಣಕ್ಕೆ ಮುನ್ನ ತಮಿಳು ಆವೃತ್ತಿಯ ಪ್ರಮಾಣೀಕರಣ ಅತ್ಯಗತ್ಯವಾಗಿದ್ದು, ನೀಡುವುದು ವಿಳಂಬವಾದರೆ ಬಿಡುಗಡೆ ದಿನಾಂಕ ಏರುಪೇರಾಗಿ ಭಾರೀ ನಷ್ಟ ಸಂಭವಿಸಲಿದೆ. ಹಾಗೆಯೇ ಅದು ವಿಜಯ್ ಅವರ ಪ್ರತಿಷ್ಠೆಗೂ ಧಕ್ಕೆ ತರಲಿದೆ ಎಂದು ಹೇಳಲಾಗುತ್ತಿದೆ.

ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್, ಇದು ಕೊನೆಯ ಚಿತ್ರವಾಗಿರುವುದರಿಂದ, ರಾಜಕೀಯ ಪ್ರವೇಶಕ್ಕೆ ಅನುಕೂಲ ಮಾಡಿಕೊಡುವ ಚಿತ್ರವಾಗಿರುವುದರಿಂದ ಚಿತ್ರ ಬಿಡುಗಡೆ ಅತಿ ಮಹತ್ವದ ಸಂಗತಿಯಾಗಿದೆ. ಹಾಗೆಯೇ ಆ ಚಿತ್ರ ಸಾವಿರಾರು ಕೋಟಿಗಳ ವಹಿವಾಟು ನಡೆಸಲಿದ್ದು, ಆ ಹಣ ತಮಿಳುನಾಡು ಚುನಾವಣೆಗೆ ಬಳಕೆಯಾಗಲಿದೆ ಎಂಬ ಅನುಮಾನ, ಚಿತ್ರ ಬಿಡುಗಡೆಗೆ ತಡೆಯೊಡ್ಡಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಲ್ಲಿ ಕೇಂದ್ರದ ಬಿಜೆಪಿ ಹಾಗೂ ಆಡಳಿತಾರೂಢ ಡಿಎಂಕೆ ಕೈವಾಡವಿರಬಹುದೆಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಚಿತ್ರ ಬಿಡುಗಡೆ ಕಗ್ಗಂಟಾಗಿರುವುದು ಮತ್ತು ಬಿಡುಗಡೆಯಾಗದಂತೆ ಹಿನ್ನೆಲೆಯಲ್ಲಿ ನಿಂತು ಕಿರುಕುಳ ನೀಡುತ್ತಿರುವುದರಿಂದ ಕುಪಿತಗೊಂಡ ವಿಜಯ್ ಅಭಿಮಾನಿಗಳು, ನಟ ಕಾರ್ತಿಕೇಯನ್ ನಟಿಸಿರುವ ‘ಪರಾಶಕ್ತಿ’ ಚಿತ್ರದ ಪ್ರೀ ರಿಲೀಸ್‌ನಲ್ಲಿ ಪಾಲ್ಗೊಂಡು, ನಟ ವಿಜಯ್‌ಗೆ ಜೈಕಾರ ಹಾಕಿದ್ದಾರೆ. ದಾಂಧಲೆ ಎಬ್ಬಿಸಿದ್ದಾರೆ. ಮಧುರೈ ಥಿಯೇಟರ್‍‌ನಲ್ಲಿ ಹಾಕಿದ್ದ ‘ಪರಾಶಕ್ತಿ’ ಚಿತ್ರದ ಪೋಸ್ಟರ್, ಕಟೌಟ್‌ಗಳನ್ನು ಹರಿದಿದ್ದಾರೆ.

ಸ್ಟಾಲಿನ್ ವಿಜಯ್
ಸ್ಟಾಲಿನ್-ವಿಜಯ್

‘ಜನನಾಯಗನ್’ ಮತ್ತು ‘ಪರಾಶಕ್ತಿ’ ಚಿತ್ರಗಳ ಬಿಡುಗಡೆಯ ಹಿನ್ನೆಲೆಯಲ್ಲಿ ತಮಿಳುನಾಡು ಅಕ್ಷರಶಃ ಇಬ್ಭಾಗವಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾ ಬಳಸಿಕೊಂಡು ಪರ-ವಿರೋಧ ಟ್ರೋಲ್, ಮೀಮ್ಸ್‌ಗಳಲ್ಲಿ ನಿರತರಾಗಿದ್ದಾರೆ. ಇಬ್ಬರು ನಾಯಕರು ಪರದೆಯ ಮೇಲೆ ಫಿಲ್ಮಿ ಸ್ಟೈಲಿನಲ್ಲಿ ಫೈಟ್ ನಡೆಸಿದರೆ; ಹೊರಗೆ ಅಭಿಮಾನಿಗಳು ಆರಾದ್ಯದೈವಗಳನ್ನು ಹೊತ್ತು ಮೆರೆದಾಡುತ್ತಿದ್ದಾರೆ.

ಇದರ ನಡುವೆ, 19 ವರ್ಷ ತಮಿಳುನಾಡನ್ನು ಆಳಿದ ಕರುಣಾನಿಧಿಯವರನ್ನು ಈಗ ಎಳೆದು ತರುವ ಅಗತ್ಯ ಡಿಎಂಕೆಗೆ ಇತ್ತೇ; ಪ್ರಚಾರಕ್ಕೆ, ವಿಜಯ್‌ಗೆ ಸೆಡ್ಡು ಹೊಡೆಯಲಿಕ್ಕೆ ಸಿನೆಮಾ ನಿರ್ಮಿಸಿದರೇ ಎಂಬ ಪ್ರಶ್ನೆಗಳೂ ಏಳುತ್ತಿವೆ. ಹಾಗೆಯೇ ನುರಿತ ರಾಜಕೀಯ ಪಕ್ಷವಾದ ಡಿಎಂಕೆ, ವಿಜಯ್‌ರನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು, ಹೀಗೆ ಸಿನೆಮಾ ಮೂಲಕ ತುಳಿಯಲು ಯತ್ನಿಸುವುದಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ ಎಂಬ ಮಾತು ಕೂಡ ತಮಿಳುನಾಡಿನ ಮಾನವಂತರಿಂದ ಕೇಳಿಬರುತ್ತಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...