ತಮಿಳುನಾಡು ಚುನಾವಣೆ | ʼಟಿವಿಕೆ ಜೊತೆ ಮೈತ್ರಿಯ ಕನಸು ಕಂಡವರಿಗೆ ವಿಜಯ್‌ ತಪರಾಕಿ !?ʼ

Date:


ಸಾಮಾಜಿಕ ನ್ಯಾಯ(ಸೋಶಿಯಲ್‌ ಜಸ್ಟೀಸ್‌) ಮತ್ತು ಜಾತ್ಯತೀತತೆ ನಮ್ಮ ಪಕ್ಷದ ಸಿದ್ಧಾಂತ ಎಂದು ಹೇಳುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ದಳಪತಿ ವಿಜಯ್‌ ತಪರಾಕಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಬಹುಕೋನ ಚುನಾವಣಾ ಸ್ಪರ್ಧೆ ಆಗುವುದಂತೂ ಖಚಿತವಾಗಿದೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದ ಸಂಪ್ರದಾಯವನ್ನು ಬದಲಿಸಬಹುದೇ ಎನ್ನುವ ಪ್ರಶ್ನೆಯನ್ನೂ ಮೂಡಿಸಿದೆ.


ತಮಿಳುನಾಡು ವಿಧಾನಸಭಾ ಚನಾವಣೆಯಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಯಾವುದೇ ಕಾರಣಕ್ಕೂ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವನ್ನು ಸ್ವತಃ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್‌ ಅವರೆ ಸ್ಪಷ್ಟ ಪಡಿಸಿದ್ದಾರೆ.

ತಮಿಳುನಾಡು ರಾಜಕಾರಣದಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಮಾದ್ಯಮಗಳಲ್ಲೂ ಮೈತ್ರಿ ಬಗ್ಗೆ ವರದಿಗಳಾಗಿದ್ದವು. ಆದರೆ, ವಿಜಯ್‌ ಮೈತ್ರಿ ವಿಷಯಕ್ಕೆ ಅಂತಿಮ ಚುಕ್ಕಿ ಇಟ್ಟಿದ್ದಾರೆ.

ತಮಿಳುನಾಡಿನಲ್ಲಿ ʼಪರ್ಯಾಯ ರಾಜಕೀಯʼದ ಭರವಸೆ ನೀಡಿ ಸಿನೆಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ ವಿಜಯ್‌, ಭರವಸೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕರೂರು ಕಾಲ್ತುಳಿತ ಪ್ರಕರಣವನ್ನು ಹೊರತುಪಡಿಸಿ, ವಿಜಯ್‌ ಭವಿಷ್ಯ ಉಜ್ವಲವಾಗಿ ಕಾಣಿಸುತ್ತಿತ್ತು. ತಮಿಳಿಗರಲ್ಲೂ ವಿಶ್ವಾಸ ಮೂಡಿತ್ತು. ಆದರೆ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳೊಂದಿಗೆ ಮೈತ್ರಿಗೆ ಇಳಿಯುತ್ತಾರೆ ಎನ್ನುವ ಚರ್ಚೆಗಳು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾದ ಬೆನ್ನಲ್ಲೇ ವಿಜಯ್‌ ಅವರ ರಾಜಕೀಯ ನಡೆಯ ಬಗ್ಗೆ ತಮಿಳಿಗರು ನೀರಸ ಅಭಿಪ್ರಾಯ ವ್ಯಕ್ತಪಡಿಸಿದ್ದೂ ಉಂಟು. ಈಗ ಸ್ವತಃ ತಮ್ಮದು ʼಮಕ್ಕಳ್‌ ಚಾಯ್ಸ್‌ʼ ಎಂದು ಪರೋಕ್ಷವಾಗಿ ಹೇಳುವ ಮೂಲಕ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವುದು ನಿಶ್ಚಿತ ಎಂದು ದೃಢಪಡಿಸಿದ್ದಾರೆ.

ಬುಧವಾರ(ಮಾ.18)ದಂದು ಮಹಾಬಲಿಪುರಂ ನಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟವನ್ನು ಉದ್ದೇಶಿಸಿ ಮಾತನಾಡಿದ ವಿಜಯ್‌, ʼನಮ್ಮ ಪಕ್ಷ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಬಿಜೆಪಿ ನೇತೃತ್ವದ ಎನ್‌ಡಿಎ ಆಗಲಿ ಅಥವಾ ಎಐಎಡಿಎಂಕೆಯಾಗಲಿ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟದೊಂದಿಗೂ ಕೈ ಜೋಡಿಸುವುದಿಲ್ಲ ಎಂದಿದ್ದಾರೆ.

ಇನ್ನು, ವಿಜಯ್‌ ಅವರ ʼಜನನಾಯಗನ್‌ʼ ಸಿನೆಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಕಟ್ಟಿ ಹಾಕುವಂತಹ ಪ್ರಯತ್ನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿತ್ತು. ಆ ಮೂಲಕ ಮೈತ್ರಿ ಸಾಧಿಸಿಕೊಳ್ಳುವುದಕ್ಕೆ ಮತ್ತು ವಿಜಯ್‌ ರಾಜಕೀಯ ಭವಿಷ್ಯವನ್ನು ಕಿತ್ತುಕೊಳ್ಳುವುದಕ್ಕೆ ಬಿಜೆಪಿ ಕೀಳು ರಾಜಕಾರಣ ಮಾಡಿತ್ತು. ಆದರೆ, ವಿಜಯ್‌ ಕಾನೂನು ಹೋರಾಟಕ್ಕೆ ಇಳಿದರು. ಸಿನೆಮಾ ತೆರೆ ಕಾಣದಿದ್ದರೂ ತಮಿಳುನಾಡಿನಾದ್ಯಂತ ಸುತ್ತಾಡಿ ರಾಜಕೀಯ ಪ್ರಚಾರ ಮಾಡಿದರು. ಚುನಾವಣೆಯ ದಿನಾಂಕ ಘೋಷಣೆ ಆದ ಬಳಿಕವೂ ಬಿಜೆಪಿ ತನ್ನ ನೆಲೆ ವಿಸ್ತರಿಸಿಕೊಳ್ಳುವುದಕ್ಕೆ ಟಿವಿಕೆ ಜೊತೆ ಕೈ ಚಾಚಿತ್ತು. ಅಂಗಲಾಚಿ ಬೇಡಿದರೂ ವಿಜಯ್‌ ಒಪ್ಪಲಿಲ್ಲ. 80-90 ಕ್ಷೇತ್ರಗಳನ್ನು ಬಿಟ್ಟುಕೊಡುತ್ತೇವೆ, ಎರಡುವರೆ ವರ್ಷಗಳ ಕಾಲ ನಿಮ್ಮನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದರೂ ವಿಜಯ್‌ ಮಣಿಯಲಿಲ್ಲ. ಈಗ ತಮಿಳುನಾಡು ಬಹುಕೋನದ ಜಿದ್ದಾಜಿದ್ದಿನ ಸ್ಪರ್ಧೆಗೆ ಅಣಿಯಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ : ತಮಿಳುನಾಡು ಚುನಾವಣೆ | ಬಿಜೆಪಿ ‘ಕುತಂತ್ರ’ಕ್ಕೆ ಬಲಿಯಾಗ್ತಾರಾ ದಳಪತಿ ವಿಜಯ್‌!?

ಸಾಮಾಜಿಕ ನ್ಯಾಯ(ಸೋಶಿಯಲ್‌ ಜಸ್ಟೀಸ್‌) ಮತ್ತು ಜಾತ್ಯತೀತತೆ ನಮ್ಮ ಪಕ್ಷದ ಸಿದ್ಧಾಂತ ಎಂದು ಹೇಳುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ದಳಪತಿ ವಿಜಯ್‌ ತಪರಾಕಿ ಕೊಟ್ಟಿದ್ದಾರೆ.

ಇನ್ನು, ವಿಜಯ್‌ ಅವರ ಈ ನಿರ್ಧಾರದಿಂದ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳಿಗಿಂತ ಅಧಿಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ಯತ್ನಿಸುತ್ತಿರುವ ಡಿಎಂಕೆ ಪಕ್ಷಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ. ಟಿವಿಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೆ ಕ್ರೈಸ್ತ ಮತಗಳನ್ನು ತನ್ನೆಡೆಗೆ ಸುಲಭವಾಗಿ ಸೆಳೆಯಬಹುದು ಎಂಬ ನಿರೀಕ್ಷೆ ಮತ್ತು ವಿಶ್ವಾಸದಲ್ಲಿತ್ತು ಡಿಎಂಕೆ. ಆದರದು ಈಗ ನಿರಾಸೆಯಾಗಿದೆ. ಸ್ವತಃ ವಿಜಯ್‌ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಕ್ರೈಸ್ತ ಮತಗಳನ್ನು ತಮ್ಮತ್ತ ಸೆಳೆಯಬಹುದು ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಅಲ್ಲಗಳೆಯುವಂತಿಲ್ಲ. ಮತ್ತು ತಮಿಳುನಾಡಿನಾದ್ಯಂತ ಅವರಿಗೆ ಇರುವ ಸಿನೆಮಾ ಅಭಿಮಾನಿಗಳನ್ನು ತಮ್ಮ ಪಕ್ಷದ ಮತ ಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯವನ್ನು ಕೂಡ ತಳ್ಳಿ ಹಾಕುವಂತಿಲ್ಲ ಎನ್ನುವುದು ನಿಜಾಂಶ. ಹಾಗಾಗಿ ಅಧಿಕಾರ ಉಳಿಸಕೊಳ್ಳಬೇಕು ಎಂದು ಹರಸಾಹಸ ಪಡುತ್ತಿರುವ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್‌ ನೇತ್ರತ್ವದ ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ಹಾಗೂ ಹೇಗಾದರೂ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಬೇಕು ಎಂಬ ಕನಸು ಕಾಣುತ್ತಿರುವ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಹೊಸ ತಂತ್ರಗಾರಿಕೆಯನ್ನು ಹೂಡಲೇ ಬೇಕಿದೆ. ಈ ನಡುವೆ ಚಿನ್ನಮ್ಮ(ಶಶಿಕಲಾ)ರ ಹೊಸ ಪಕ್ಷ ಕೆಲವು ಕ್ಷೇತ್ರಗಳಲ್ಲಿ ಡಿಎಂಕೆ, ಎಐಎಡಿಎಂಕೆ ಪಕ್ಷಗಳಿಗೆ ಹೋಗುವ ಮತಗಳನ್ನು ತನ್ನತ್ತ ಆಕರ್ಷಿಸಬಹುದು ಎನ್ನುವ ಚರ್ಚೆಗಳಿವೆ.

ತಮಿಳುನಾಡಿನಲ್ಲಿ ಬಹುಕೋನ ಚುನಾವಣಾ ಸ್ಪರ್ಧೆ ಆಗುವುದಂತೂ ಖಚಿತವಾಗಿದೆ. ಇದು ತಮಿಳುನಾಡಿನ ರಾಜಕೀಯದ ಸಂಪ್ರದಾಯವನ್ನು ಬದಲಿಸಬಹುದೇ ಎನ್ನುವ ಪ್ರಶ್ನೆಯನ್ನೂ ಮೂಡಿಸಿದೆ. ಡಿಎಂಕೆ ನೇತೃತ್ವದ ಜಾತ್ಯಾತೀತ ಕೂಟ, ಸೀಮನ್‌ ಅವರ ಎನ್‌ಟಿಕೆ, ವಿಜಯ್‌ ಅವರ ಟಿವಿಕೆ ಪಕ್ಷಗಳು ಪ್ರಬಲ ಪ್ರದರ್ಶನ ನೀಡಬಹುದು ಎಂಬ ವಾತಾವರಣವಿದೆ. ತಮಿಳುನಾಡಿನ ದ್ರಾವಿಡ ರಾಜಕಾರಣ ಹೊಸ ಸ್ವರೂಪ ಪಡೆದುಕೊಳ್ಳವುದು ಬಹುತೇಕ ನಿಶ್ಚಿತ.  

ಒಟ್ಟಿನಲ್ಲಿ, ವಿಜಯ್‌ ರಾಜಕೀಯದ ಪ್ರಾಥಮಿಕ ಹೆಜ್ಜೆಯಲ್ಲೇ ಅಡೆತಡೆಗಳು ಎದುರಾದರೂ, ವಿಜಯ್‌ ನಂಬಿಕೊಂಡಿರುವುದು ಯುವ ಸಮುದಾಯವನ್ನು ಎನ್ನುವುದು ಸತ್ಯ. ವಿಜಯ್‌ ನಟನೆಯ ಸಿನೆಮಾ ಅಭಿಮಾನಿಗಳು ಜಾತಿ, ಪಕ್ಷ, ಧರ್ಮ, ವರ್ಗಗಳನ್ನು ಮೀರಿ ಇದ್ದಾರೆ. ಹಾಗಾಗಿ ವಿಜಯ್‌ ಅವರ ಟಿವಿಕೆ ಯಾವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಈ ಬಾರಿಯ ಚುನಾವಣೆಯಲ್ಲಿ ಯುವ ಸಮುದಾಯ ವಿಜಯ್‌ ಅವರ ʼಪರ್ಯಾಯ ರಾಜಕಾರಣʼದತ್ತ ಮುಖ ಮಾಡುವ ನಿರೀಕ್ಷೆ ಇದೆ. ಆದರೆ ತಮಿಳಿನ ಯುವ ಸಮುದಾಯದಲ್ಲಿ ವಿಜಯ್‌ ಮೇಲಿರುವ ವಿಶ್ವಾಸವನ್ನು ಹೇಗೆ ಟಿವಿಕೆ ಉಳಿಸಿಕೊಳ್ಳುತ್ತದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.
 

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...