ತಮಿಳುನಾಡು ರಾಜ್ಯಪಾಲ ರವಿ ಅವರು ವಿಪಕ್ಷ ನಾಯಕರಂತೆ ವರ್ತಿಸುವುದು ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈ ಹಿಂದೆ 10 ಮಸೂದೆಗಳನ್ನು ತಡೆಹಿಡಿದಿದ್ದರು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಇಷ್ಟಾದರೂ ರಾಜ್ಯಪಾಲರ ನಡೆ ಬದಲಾಗಿಲ್ಲ.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರಿಗೆ ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ನಂತರವೂ ಮೊಂಡಾಟದ ವರ್ತನೆ ಮುಂದುವರೆದಿದೆ. ರವಿ ಸಾಂಪ್ರದಾಯಿಕವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸುವ ಭಾಷಣವನ್ನು ಓದಲು ನಿರಾಕರಿಸಿದ್ದಾರೆ ಹಾಗೂ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಈ ಮೂಲಕ ತಮಿಳುನಾಡು ವಿಧಾನಸಭೆಯಲ್ಲಿ ಮತ್ತೆ ‘ಹೈಡ್ರಾಮಾ’ ನಡೆದಿದೆ. ದೇಶವೇ ತಮಿಳುನಾಡಿನತ್ತ ನೋಡುವಂತಾಗಿದೆ.
ಅಷ್ಟಕ್ಕೂ ರವಿ ವರ್ತನೆ ಇದೇ ಮೊದಲೇನಲ್ಲ. 2023ರಿಂದಲೂ ಇದೇ ನಡೆದುಕೊಂಡು ಬಂದಿರುವುದು. ತಮಿಳುನಾಡು ರಾಜ್ಯಪಾಲರು ಭಾಷಣವನ್ನು ಓದಲು ನಿರಾಕರಿಸಿದ್ದು, ಇದು ಮೂರನೇ ಬಾರಿಗೆ ಮತ್ತು ವಿಧಾನಸಭೆಯಿಂದ ಹೊರನಡೆದಿರುವುದು ಇದು ಸತತ ನಾಲ್ಕನೇ ಬಾರಿಗೆ. ಈ ಹಿಂದೆ ಮಸೂದೆಗಳನ್ನು ತಡೆಹಿಡಿದಿದ್ದ ರವಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ‘ಕಾನೂನುಬಾಹಿರ’ ಮತ್ತು ‘ದೋಷಪೂರಿತ’ ಎಂದು ಕರೆದು ವಾಗ್ದಾಳಿ ನಡೆಸಿತ್ತು, ರವಿ ಅವರಿಗೆ ತಪರಾಕಿ ಹಾಕಿತ್ತು. ಆದರೂ ರಾಜ್ಯಪಾಲರ ಈ ವರ್ತನೆ ಮುಂದುವರೆದಿದೆ.
ಇದನ್ನು ಓದಿದ್ದೀರಾ? ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ
2023ರಲ್ಲಿ ಮೊದಲ ಬಾರಿಗೆ ವಿಧಾನಸಭೆಯಿಂದ ಸಭಾತ್ಯಾಗ
ಮೊದಲ ಬಾರಿಗೆ 2023ರ ಜನವರಿ 9ರಂದು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದ್ದು, ಈ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಕೆಲವು ಭಾಗಗಳನ್ನು ಓದದೆ ಕೈಬಿಟ್ಟಿದ್ದರು. ದ್ರಾವಿಡ ನಾಯಕರಾದ ಪೆರಿಯಾರ್, ಅಣ್ಣಾದೊರೈ, ಕಾಮರಾಜ್ ಮತ್ತು ಅಂಬೇಡ್ಕರ್ ಹೆಸರು, ‘ದ್ರಾವಿಡ ಮಾದರಿ’ ಎಂಬ ಉಲ್ಲೇಖಗಳನ್ನು ಓದಿರಲಿಲ್ಲ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ರಾಜ್ಯಪಾಲರು ತಮಗೆ ಇಷ್ಟಬಂದಂತೆ ಭಾಷಣದ ಭಾಗಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ತಕ್ಷಣವೇ ನಿರ್ಣಯವೊಂದನ್ನು ಮಂಡಿಸಿದ್ದರು. ಸರ್ಕಾರ ಸಿದ್ಧಪಡಿಸಿದ ಪೂರ್ಣ ಭಾಷಣವನ್ನೇ ಅಧಿಕೃತ ದಾಖಲೆಗೆ ಸೇರಿಸಬೇಕೆಂದು ಎಂದು ಒತ್ತಾಯಿಸಿದ್ದರು. ನಿರ್ಣಯ ಮಂಡಿಸುತ್ತಿದ್ದಂತೆಯೇ ಸಿಟ್ಟುಗೆದ್ದ ರಾಜ್ಯಪಾಲ ರವಿ ರಾಷ್ಟ್ರಗೀತೆಗೂ ಕಾಯದೆ ಸದನದಿಂದ ಹೊರನಡೆದಿದ್ದರು. ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲೇ ರಾಜ್ಯಪಾಲರೊಬ್ಬರು ಮೊದಲ ಬಾರಿಗೆ ಸಭಾತ್ಯಾಗ ಮಾಡಿದ ಘಟನೆ ಇದಾಗಿದ್ದರಿಂದ ತೀವ್ರ ಚರ್ಚೆಗೆ ಒಳಗಾಗಿತ್ತು.
2024ರಲ್ಲಿ ಒಂದೇ ಭಾಗ ಓದಿ ಸಭಾತ್ಯಾಗ!
2024ರ ಫೆಬ್ರವರಿ 12ರಂದು ನಡೆದ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಆರ್.ಎನ್. ರವಿ ಅವರು ತಮಿಳುನಾಡು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಸಂಪೂರ್ಣವಾಗಿ ಓದದೆ ಸಭಾತ್ಯಾಗ ಮಾಡಿದ್ದರು. ಕೇವಲ ಮೊದಲ ಪ್ಯಾರಾಗ್ರಾಫ್ ಮಾತ್ರ ಓದಿದ್ದರು. ಈ ಭಾಷಣದಲ್ಲಿ ತಪ್ಪು ಮಾಹಿತಿಯಿದೆ ಎಂದು ಆರೋಪಿಸಿದ್ದರು. ಹಾಗೆಯೇ ಅಧಿವೇಶನದ ಆರಂಭದಲ್ಲಿ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕೆಂಬ ತಮ್ಮ ವಿನಂತಿಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಹೇಳಿಕೊಂಡು ವಿಪಕ್ಷ ನಾಯಕರಂತೆ ವರ್ತಿಸಿ ಸಭಾತ್ಯಾಗ ಮಾಡಿದ್ದರು. ಈ ವೇಳೆ ರಾಜ್ಯಪಾಲರ ಈ ವರ್ತನೆಯ ಪುನರಾವರ್ತನೆಯು ತೀವ್ರ ಟೀಕೆಗೆ ಗುರಿಯಾಗಿತ್ತು.
ಇದನ್ನು ಓದಿದ್ದೀರಾ? ತಮಿಳುನಾಡು | ರಾಜ್ಯ ಸರ್ಕಾರದ ಭಾಷಣ ಓದದೆ ಸದನದಿಂದ ಸಭಾತ್ಯಾಗ ಮಾಡಿದ ರಾಜ್ಯಪಾಲ
2025ರಲ್ಲಿ ಭಾಷಣವೇ ಓದದೆ ಸಭಾತ್ಯಾಗ!
2025ರಲ್ಲಿಯೂ ಇದೇ ರೀತಿ ಆರ್.ಎನ್. ರವಿ ವರ್ತಿಸಿದ್ದರು. ಜನವರಿ 6ರಂದು ನಡೆದ ಮೊದಲ ಅಧಿವೇಶನದಲ್ಲಿ ಸಾಂಪ್ರದಾಯಿಕ ಭಾಷಣವನ್ನು ಓದದೆಯೇ ಸಭಾತ್ಯಾಗ ಮಾಡಿದ್ದರು. ತಮಿಳುನಾಡು ವಿಧಾನಸಭೆಯ ಸಂಪ್ರದಾಯದಂತೆ ಆರಂಭದಲ್ಲಿ ‘ತಮಿಳು ತಾಯಿ ವಾಳ್ತು’ (ರಾಜ್ಯ ಗೀತೆ) ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಆದರೆ ಅಧಿವೇಶನದ ಆರಂಭದಲ್ಲೇ ರಾಷ್ಟ್ರಗೀತೆಯನ್ನು ಹಾಡಬೇಕು ಎಂಬ ರಾಜ್ಯಪಾಲರ ವಿನಂತಿಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಅನೇಕ ತಪ್ಪುಗಳಿವೆ, ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿ ಓದಲು ನಿರಾಕರಿಸಿದ್ದರು. ರಾಷ್ಟ್ರಗೀತೆಗೆ ಗೌರವ ನೀಡದಿರುವುದು ಸಂವಿಧಾನ ವಿರೋಧಿ ಎಂದೂ ಹೇಳಿಕೆ ನೀಡಿದ್ದರು. ಆದರೆ ರಾಜ್ಯಪಾಲರ ಈ ಮೊಂಡಾಟದ ನಡೆಯನ್ನು ಸಿಎಂ ಸ್ಟ್ಯಾಲಿನ್ ‘ಮಕ್ಕಳಾಟಿಕೆ’ ಎಂದು ಟೀಕಿಸಿದ್ದರು. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದ್ದು ಎಂದು ಖಂಡಿಸಿದ್ದರು.
2026ರಲ್ಲಿಯೂ ಅದೇ ವರ್ತನೆ ಪುನರಾವರ್ತನೆ!
2026ರ ಜನವರಿ 20ರಂದು ನಡೆದ ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯಪಾಲ ರವಿ ಅವರು ಮತ್ತೆ ಸರ್ಕಾರದ ಭಾಷಣವನ್ನು ಓದದೆ ಸಭಾತ್ಯಾಗ ಮಾಡಿದ್ದಾರೆ. ಅಧಿವೇಶನದ ಆರಂಭದಲ್ಲಿ ತಮಿಳು ನಾಡಗೀತೆಯ ನಂತರ ರಾಷ್ಟ್ರಗೀತೆಯನ್ನು ಹಾಡಲು ಅವಕಾಶ ನೀಡದೆ ‘ಇದು ಸಂವಿಧಾನಕ್ಕೆ ಮಾಡಿದ ಅಪಮಾನ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಸುಳ್ಳು ಮಾಹಿತಿ ಮತ್ತು ಆಧಾರರಹಿತ ಹೇಳಿಕೆಗಳಿವೆ” ಎಂದು ಆರೋಪಿಸಿ ಭಾಷಣವನ್ನು ಓದಲು ನಿರಾಕರಿಸಿದ್ದರು. ಅಷ್ಟು ಮಾತ್ರವಲ್ಲದೆ ಭಾಷಣದ ವೇಳೆ ತಮ್ಮ ಮೈಕ್ರೋಫೋನ್ ಅನ್ನು ಪದೇ ಪದೇ ಆಫ್ ಮಾಡಲಾಗಿತ್ತು ಎಂದು ರಾಜ್ಯಪಾಲರ ಕಚೇರಿ ದೂರಿದೆ. ರಾಜ್ಯಪಾಲರು ಸತತ ನಾಲ್ಕನೇ ಬಾರಿಗೆ ಈ ರೀತಿ ನಡೆದುಕೊಂಡಿರುವುದನ್ನು ಸ್ಟ್ಯಾಲಿನ್, “ವಿಧಾನಸಭೆಗೆ ಮಾಡಿದ ಅಪಮಾನ” ಎಂದು ಟೀಕಿಸಿದ್ದಾರೆ. ಹಾಗೆಯೇ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರ ಭಾಷಣದ ಕಡ್ಡಾಯ ನಿಯಮವನ್ನು ತೆಗೆದುಹಾಕಲು ಸಂವಿಧಾನ ತಿದ್ದುಪಡಿ ತರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಹೀಗೆ ರಾಜ್ಯಪಾಲರು ವಿಪಕ್ಷ ನಾಯಕರಂತೆ ವರ್ತಿಸುವುದು ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈ ಹಿಂದೆ 10 ಮಸೂದೆಗಳನ್ನು ರವಿ ತಡೆಹಿಡಿದಿದ್ದರು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜ್ಯಪಾಲರ ಈ ಕ್ರಮ ‘ಕಾನೂನುಬಾಹಿರ’ ಎಂದು ಹೇಳಿತ್ತು. ಮಸೂದೆಗಳು ಮೂರು ವರ್ಷಗಳಿಂದ ಬಾಕಿ ಉಳಿದಿದ್ದನ್ನು ಪ್ರಶ್ನಿಸಿದ ನ್ಯಾಯಾಲಯ, “ಮೂರು ವರ್ಷಗಳ ಕಾಲ ರಾಜ್ಯಪಾಲರು ಏನು ಮಾಡುತ್ತಿದ್ದರು? ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ ನಂತರವೇ ಅವರು ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆಯೇ?” ಎಂದು ತೀವ್ರವಾಗಿ ಪ್ರಶ್ನಿಸಿತ್ತು. ಆ 10 ಮಸೂದೆಗಳನ್ನು “ಅಂಗೀಕೃತ” ಎಂದು ಪರಿಗಣಿಸಲು ಆದೇಶಿಸಿತ್ತು. ಇದು ರಾಜ್ಯಪಾಲರಿಗೆ ತೀವ್ರ ಮುಖಭಂಗ ಉಂಟು ಮಾಡಿತ್ತು.
ಇಷ್ಟಾದರೂ ರಾಜ್ಯಪಾಲರ ನಡೆ ಬದಲಾಗಿಲ್ಲ. ತಮಿಳುನಾಡು ಸರ್ಕಾರದ ವಿರುದ್ಧವಾಗಿ ಒಂದಲ್ಲ ಒಂದು ರೀತಿಯಲ್ಲಿ ಪ್ರಹಾರ ನಡೆಸುತ್ತಲೇ ಇದ್ದಾರೆ. ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಚುನಾಯಿತ ಸರ್ಕಾರದ ನಡುವಿನ ಸಂಘರ್ಷವು ಕೇವಲ ರಾಜಕೀಯವಲ್ಲದೆ, ಇದು ಸದ್ಯ ಗಂಭೀರ ಸಾಂವಿಧಾನಿಕ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಅಷ್ಟು ಮಾತ್ರವಲ್ಲದೆ ಈ ಬಿಕ್ಕಟ್ಟು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು, ರಾಜ್ಯದ ಜನರಿಂದ ಆಯ್ಕೆಯಾದ ಸರ್ಕಾರದ ನಡುವಿನ ಅಧಿಕಾರ ಹಂಚಿಕೆಯ ಬಗ್ಗೆ ಹೊಸ ಚರ್ಚೆಗಳನ್ನೂ ಹುಟ್ಟುಹಾಕಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




