ಅಮ್ಮಾ(ಜಯಲಲಿತ) ಈಗ ನಮ್ಮೊಂದಿಗಿಲ್ಲ. ಆದರೇ, ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಇನ್ನೂ 100 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆʼ ಎಂದು ತಮಿಳುನಾಡು ರಾಜಕಾರಣದಲ್ಲಿ ಗುಡುಗಿದ್ದ ಶಶಿಕಲಾ, ರಾಜಕೀಯಕ್ಕೆ ಈಗ ತಮ್ಮದೇ ಹೊಸ ಪಕ್ಷದೊಂದಿಗೆ ಮರು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ತೇವರ್ ಸಮುದಾಯದ ಲೆಕ್ಕಾಚಾರ ಚುನಾವಣೆಯಲ್ಲಿ ಶಶಿಕಲಾ ಅವರಿಗೆ ಬೆನ್ನೆಲುಬಾಗುತ್ತದೆಯೇ ಎನ್ನುವುದು ತೀವ್ರ ಕುತೂಹಲವಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಅತ್ಯಾಪ್ತೆ ಮತ್ತು ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ. ಕೆ ಶಶಿಕಲಾ ಕಳೆದ ಶುಕ್ರವಾರ(ಮಾ.13) ತಮ್ಮ ಹೊಸ ಪಕ್ಷಕ್ಕೆ ʼಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ ʼಎಂದು ಹೆಸರು ಘೋಷಣೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತ ಅವರ ನಿಧನದ ಬಳಿಕ ಯಾರು ಉತ್ತರಾಧಿಕಾರಿ ಎನ್ನುವ ಚರ್ಚೆ ಇರುವ ಸಂದರ್ಭದಲ್ಲಿ ಶಶಿಕಲಾ ಅವರ ಹೆಸರೆ ಮುನ್ನೆಲೆಯಲ್ಲಿತ್ತು. ಆದರೆ, ರಾಜಕೀಯ ಸ್ಥಿತ್ಯಂತರದ ಕಾರಣದಿಂದಾಗಿ ಆ ಅವಕಾಶ ಅವರ ಪಾಲಿಗೆ ಒದಗಿ ಬಂದಿಲ್ಲ. ತಮಿಳುನಾಡಿನ ರಾಜಕೀಯದಲ್ಲಿ ಎಐಎಡಿಎಂಕೆ ಹಲವು ಏರುಪೇರು ಕಂಡಿತ್ತು,
ಆಡಳಿತರೂಢ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕೆ ತಮ್ಮ 39 ವರ್ಷಗಳ ಸುದೀರ್ಘ ರಾಜಕೀಯ ಅನುಭವವನ್ನು ವ್ಯಯಿಸುವುದಾಗಿ ಹೇಳಿದ ಶಶಿಕಲಾ ತಮಿಳುನಾಡು ರಾಜಕಾರಣದಲ್ಲಿ ಈಗ ಸ್ಪಾಟ್‌ಲೈಟ್ ಆಗುತ್ತಿದ್ದಾರೆ. ಜಯಲಲಿತ ಇರುವಾಗ ಶಶಿಕಲಾ ಅವರಿಗಿದ್ದ ಪ್ರಭಾವಿ ರಾಜಕೀಯ ವರ್ಚಸ್ಸು ಈಗ ಇಲ್ಲ. ತಮಿಳಿಗರಲ್ಲಿ ಅವರ ಮೇಲಿದ್ದ ವಿಶ್ವಾಸವೂ ಕುಂದಿದೆ ಎನ್ನುವುದು ಅಷ್ಟೆ ಸತ್ಯ. ಅಮ್ಮ(ಜಯಲಲಿತ) ಇರುವಾಗಿನ ಚಿನ್ನಮ್ಮ(ಶಶಿಕಲಾ) ಈಗ ಅಲ್ಲ ಎನ್ನುವ ಅಭಿಪ್ರಾಯವೂ ರಾಜಕೀಯ ವಲಯದಲ್ಲಿದೆ. ಹಾಗಾಗಿ ತಮಿಳುನಾಡಿನಲ್ಲಿ ಮತ್ತೊಂದು ಪಕ್ಷ ಸೇರ್ಪಡೆಯಾಗಲಿದೆ ವಿನಃ ಬೇರೇನೂ ವ್ಯತ್ಯಾಸಗಳಾಗುವುದಿಲ್ಲ ಎನ್ನುವ ಲೆಕ್ಕಚಾರದಲ್ಲೇ ಎಲ್ಲಾ ಪಕ್ಷಗಳಿವೆ. ಶಶಿಕಲಾ ಕಲ್ಲರ್ ಅಥವಾ ತೇವರ್ ಸಮುದಾಯಕ್ಕೆ ಸೇರಿದರಾಗಿದ್ದಾರೆ. ಹಾಗಾಗಿ ತೇವರ್ ಸಮುದಾಯದ ಮತಗಳು ಸ್ವಲ್ಪ ಮಟ್ಟಿಗೆ ಶಶಿಕಲಾ ಕಡೆಗೆ ವಾಲಬಹುದು. ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಿ ಸಮುದಾಯವಾಗಿರುವ ತೇವರ್, ಶೇ.10ರಷ್ಟು ಜನಸಂಖ್ಯೆಯಿದೆ. ಹಾಗಾಗಿ ಯಾವ ಪಕ್ಷಗಳಿಗೂ ಶಶಿಕಲಾ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿ ಚುನಾವಣೆಯನ್ನು ಎದುರಿಸುವ ಹಾಗಿಲ್ಲ. ಸಮುದಾಯವಾರು ಮತಗಳ ಬಗ್ಗೆ ಗಮನ ಕೊಡಬೇಕಿರುವ ಅನಿವಾರ್ಯತೆಯಲ್ಲಿ ಆಡಳಿತರೂಢ ಹಾಗೂ ವಿಪಕ್ಷಗಳಿವೆ.
ತಮಿಳುನಾಡಿನ ಮತ್ತೊಂದು ಸುತ್ತಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಮರು ಪ್ರವೇಶಿಸುತ್ತಿರುವ ಶಶಿಕಲಾ, ತಮಿಳು ರಾಜಕೀಯದಲ್ಲಿ ದೊಡ್ಡ ಬದಲಾವಣೆ ಏನೂ ಮಾಡಲಾರರು ಎನ್ನುವ ಚರ್ಚೆಗಳಿದ್ದರೂ, ಅವರು ಡಿಎಂಕೆಗೆ ಸವಾಲು ಹಾಕಿರುವುದನ್ನು ತಳ್ಳಿ ಹಾಕುವಂತಿಲ್ಲ. ದ್ರಾವಿಡ ನೆಲದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ತಂತ್ರ ಕುತಂತ್ರ ಎಲ್ಲವನ್ನೂ ರಾಜಕೀಯ ಭಾಗವಾಗಿ ಮಾಡುತ್ತಿರುವ ಎಂ.ಕೆ. ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಪಕ್ಷಕ್ಕೂ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ದ್ರಾವಿಡ ರಾಜಕಾರಣದ ನೆಲದಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಏರುವುದಕ್ಕೆ ಹಪಾಹಪಿಯಲ್ಲಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಹಾಗೂ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಗಳ ಮತಗಳನ್ನು ಶಶಿಕಲಾ ಸೆಳೆಯಬಹುದು ಎನ್ನುವ ಅಭಿಪ್ರಾಯಗಳಿವೆ.
ಶಶಿಕಲಾ, ಜಯಲಲಿತ ಅವರಿಗೆ ಅತ್ಯಾಪ್ತೆಯಾಗಿದ್ದುಕೊಂಡು ಎಐಎಡಿಎಂಕೆ ಪಕ್ಷಕ್ಕೆ ನಿಷ್ಠರಾಗಿದ್ದರು. ಅನೇಕ ವಿವಾದಗಳನ್ನೂ ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಜಯಲಲಿತ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಕ್ಷ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳ ಹಿಂದೆ ಶಶಿಕಲಾ ಪಾತ್ರವೂ ಮುಖ್ಯವಾಗಿತ್ತು. ಎಐಎಡಿಎಂಕೆ ಪಕ್ಷದ ಭವಿಷ್ಯ ಎನ್ನುವಷ್ಟರ ಮಟ್ಟಿಗೆ ತಮಿಳುನಾಡು ರಾಜಕಾರಣದಲ್ಲಿ ಜನಜನಿತರಾಗುವಷ್ಟರ ಹಂತಕ್ಕೆ ಬೆಳೆದರು. ಜಯಲಲಿತ ನಿಧನರಾದ ಬಳಿಕ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ, “ಅಮ್ಮಾ(ಜಯಲಲಿತ) ಈಗ ನಮ್ಮೊಂದಿಗಿಲ್ಲ, ಆದರೇ, ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಇನ್ನೂ 100 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆʼ ಎಂದು ಹೇಳಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.

ಶಶಿಕಲಾ ರಾಜಕೀಯದ ಏರುಪೇರು
ಈ ನಡುವೆ ಶಶಿಕಲಾ ರಾಜಕಾರಣದಲ್ಲಿ ಅನೆಕ ಸವಾಲುಗಳು ಎದುರಾದವು. ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದರು. 1991-1996ರ ಅವಧಿಯಲ್ಲಿ ಜಯಲಲಿತ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 66.65 ಕೋಟಿ ರೂ.ಗಳಷ್ಟು ಅಕ್ರಮ ಆಸ್ತಿಗಳನ್ನು ಸಂಗ್ರಹಿಸಿದ ಪ್ರಕರಣ ಇದಾಗಿದೆ.
ಸೆಪ್ಟೆಂಬರ್ 2013 ರಲ್ಲಿ, ವಿಶೇಷ ನ್ಯಾಯಾಲಯವು ಜಯಲಲಿತ ಅವರಿಗೆ ನಾಲ್ಕು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿತು. ಅವರಿಗೆ 100 ಕೋಟಿ ರೂ. ದಂಡ ವಿಧಿಸಲಾಯಿತು ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯ ಕೇಳಿಬಂತು. ಮೂವರು ಸಹ ಆರೋಪಿಗಳಾದ ಶಶಿಕಲಾ, ವಿ.ಎನ್. ಸುಧಾಕರನ್ ಮತ್ತು ಇಳವರಸಿ ಅವರನ್ನು ಸಹ ದೋಷಿಗಳು ಎಂದು ಘೋಷಿಸಲಾಯಿತು ಮತ್ತು ತಲಾ 10 ಕೋಟಿ ರೂ. ದಂಡ ವಿಧಿಸಲಾಯಿತು.
ಜಯಲಲಿತ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಶಿಕ್ಷೆಯನ್ನು ಪ್ರಶ್ನಿಸಿದರು, ಅದು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಆದರೆ 2017ರಲ್ಲಿ, ಸುಪ್ರೀಂ ಕೋರ್ಟ್ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಡಿಸೆಂಬರ್ 5, 2016 ರಂದು ಜಯಲಲಿತಾ ಅವರ ಮರಣದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲಾಯಿತು.
ಜಯಲಲಿತಾ ಅವರ ಮರಣದ ನಂತರ, ಶಶಿಕಲಾ ಡಿಸೆಂಬರ್ 2016 ರಲ್ಲಿ ಎಐಎಡಿಎಂಕೆಯ ಅಧಿಕಾರ ವಹಿಸಿಕೊಂಡರು, ಆದರೆ ನಂತರ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಬಣದಿಂದ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.
2019ರ ನವೆಂಬರ್ ಅಂತ್ಯದಲ್ಲಿ ಅವರು ಮತ್ತೆ ಬೆಳಕಿಗೆ ಬಂದರು, ಆದಾಯ ತೆರಿಗೆ ಇಲಾಖೆಯು ಬೇನಾಮಿ ವಹಿವಾಟು (ನಿಷೇಧ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರಿಗೆ ಸೇರಿದ 1,600 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ. 2016ರ ನವೆಂಬರ್‌ನಲ್ಲಿ ನೋಟು ರದ್ದತಿಯ ನಂತರ ಚೆನ್ನೈ, ಪುದುಚೇರಿ ಮತ್ತು ಕೊಯಮತ್ತೂರಿನಲ್ಲಿರುವ ಒಂಬತ್ತು ಆಸ್ತಿಗಳನ್ನು ಖರೀದಿಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿತ್ತು.
ಇದನ್ನೂ ಓದಿ : ದೆಹಲಿ ಗಲಭೆ | ಕೋಮುದ್ವೇಷಿ ಕಪಿಲ್ ಮಿಶ್ರಾಗೆ ಮಂತ್ರಿಗಿರಿ; ಸೌಹಾರ್ದತೆ ಸಾರಿದ ಉಮರ್‌ಗೆ ಸೆರೆವಾಸ
ಒಟ್ಟಿನಲ್ಲಿ, ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಮುಂದಾಗುತ್ತಿರುವ ಶಶಿಕಲಾ ಅವರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ವಿರೋಧಿಸವ ಮನಸ್ಥಿತಿಯಲ್ಲಿದ್ದರೂ, ಎಂ ಜಿ ರಾಮಚಂದ್ರನ್ ಹಾಗೂ ಜಯಲಲಿತ ಅವರಿಗಾಗಿ ತುಟಿ ಬಿಚ್ಚದೆ ರಾಜಕೀಯ ತಂತ್ರಗಾರಿಕೆ ಹೆಣೆಯುವ ಪರಿಸ್ಥಿತಿಯಲ್ಲಿದ್ದಾರೆ. ಸುದೀರ್ಘ ರಾಜಕೀಯದ ಅಜ್ಞಾತವಾಸದ ಬಳಿಕ ತಮ್ಮದೇ ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಮರು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಆದರೆ, ತಮಿಳಿನ ಮತದಾರರು ಜಯಲಲಿತ ಅವರೊಂದಿಗಿದ್ದ ʼಚಿನ್ನಮ್ಮʼ ಎಂದೇ ಬೆಂಬಲಕ್ಕೆ ನಿಂತು ಶಶಿಕಲಾ ನೇತೃತ್ವದ ಪಕ್ಷಕ್ಕೆ ಮತ ಚಲಾಯಿಸುತ್ತಾರೆಯೇ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಚುನಾವಣಾ ಫಲಿತಾಂಶದಲ್ಲಿ ಬಹಳ ದೊಡ್ಡ ಬದಲಾವಣೆ ತರುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲವಾದರೂ, ಸ್ವಲ್ಪ ಮಟ್ಟಿಗೆ ಎಐಎಡಿಎಂಕೆ, ಡಿಎಂಕೆ, ಟಿವಿಕೆ ಪಕ್ಷಗಳಿಗೆ ಹೋಗುವ ಮತಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ ಎನ್ನುವುದಂತೂ ನಿಶ್ಚಿತ.





