'ಕುಟುಂಬ ರಾಜಕಾರಣ' ಎಂಬುದನ್ನು ಆಗಾಗೇ ತಮ್ಮ ಭಾಷಣದಲ್ಲಿ ಎಳೆದು ತರುವವರು, ಈ ವಿಚಾರದಲ್ಲೇ ವಿರೋಧ ಪಕ್ಷಗಳನ್ನು ಟೀಕಿಸುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ಸದ್ಯ ರಚನೆಯಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಕಡೆ ಗಮನಹರಿಸಿದಂತಿಲ್ಲ.
‘ಕುಟುಂಬ ರಾಜಕಾರಣ’ ಎಂಬುದನ್ನು ಆಗಾಗೇ ತಮ್ಮ ಭಾಷಣದಲ್ಲಿ ಎಳೆದು ತರುವವರು, ಈ ವಿಚಾರದಲ್ಲೇ ವಿರೋಧ ಪಕ್ಷಗಳನ್ನು ಟೀಕಿಸುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಬಿಹಾರದಲ್ಲಿ ಎನ್‌ಡಿಎ ಗೆಲುವಿನ ಬಳಿಕ ಮಾಡಿದ ಭಾಷಣದಲ್ಲಿಯೂ ಪ್ರಧಾನಿ ಆರ್‌ಜೆಡಿಯ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಾಗೆಯೇ ಜನರು ಈ ರಾಜಕೀಯದಿಂದ ಬೇಸತ್ತು ಎನ್‌ಡಿಎ ಮೈತ್ರಿಕೂಟವನ್ನು ಗೆಲ್ಲಿಸಿದೆ ಎಂದು ಹೇಳಿಕೊಂಡರು. ಆದರೆ ಪ್ರಧಾನಿ ಮೋದಿ ಸದ್ಯ ರಚನೆಯಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಕಡೆ ಗಮನಹರಿಸಿದಂತಿಲ್ಲ. ರಾಜಕೀಯ ಹಿನ್ನೆಲೆ ಇರುವವರೇ ಹೆಚ್ಚಾಗಿ ಸಚಿವ ಸ್ಥಾನ ಪಡೆದಿರುವುದು ಹೇಗೆ ಎಂಬುದಕ್ಕೆ ಪ್ರಧಾನಿ ಮೋದಿ ಉತ್ತರಿಸುತ್ತಾರೆಯೇ?
ಬಿಹಾರದ ನಿತೀಶ್ ಕುಮಾರ್ ಸಂಪುಟದಲ್ಲಿರುವ 26 ಸಚಿವರುಗಳ ಪೈಕಿ ಹತ್ತು ಮಂದಿ ರಾಜಕೀಯ ಹಿನ್ನೆಲೆ ಇರುವವರು. ಇವರಲ್ಲಿ ಸಾಮ್ರಾಟ್ ಚೌಧರಿ, ಸಂತೋಷ್ ಸುಮಿತ್ ಮಾಂಝಿ ಮತ್ತು ದೀಪಕ್ ಪ್ರಕಾಶ್ ಸೇರಿದ್ದಾರೆ. ಈ ಹಿಂದೆ ಆರ್‌ಜೆಡಿ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದ್ದ ಬಿಜೆಪಿ ಇದೀಗ ಆರ್‌ಜೆಡಿಯ ತಿರುಗೇಟಿಗೆ ಗುರಿಯಾಗಿದೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ಪ್ರಾಮಾಣಿಕರಾಗಿರಬಹುದು, ಆದರೆ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ: ಪ್ರಶಾಂತ್ ಕಿಶೋರ್
“ಕುಟುಂಬ ರಾಜಕಾರಣದ ವಿರೋಧಿಗಳಾದ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಆಶೀರ್ವಾದದೊಂದಿಗೆ ರಾಜ್ಯಗಳ ಕುಟುಂಬಗಳ ರಾಜಕೀಯ ಕೊನೆಗೊಳಿಸುವುದಾಗಿ ಮತ್ತು ಹೊಸ ಬಿಹಾರವನ್ನು ನಿರ್ಮಿಸುವುದಾಗಿ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ” ಎಂದು ಈ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿರುವುದಾಗಿ ಆರ್‌ಜೆಡಿ ವ್ಯಂಗ್ಯವಾಡಿದೆ.
ಬಿಹಾರದಲ್ಲಿ ಕುಟುಂಬ ರಾಜಕಾರಣ
- ಮಾಜಿ ಮುಖ್ಯಮಂತ್ರಿ, ಗಯಾ ಕ್ಷೇತ್ರದ ಸಂಸದ ಮತ್ತು ಪ್ರಸ್ತುತ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪುತ್ರ, ಶಾಸಕಿ ಜ್ಯೋತಿ ಮಾಂಝಿ ಅವರ ಅಳಿಯ ಮತ್ತು ಶಾಸಕಿ ದೀಪಾ ಮಾಂಝಿ ಅವರ ಪತಿ ಸಂತೋಷ್ ಸುಮಿತ್ ಮಾಂಝಿ.
- ಮಾಜಿ ಸಚಿವೆ ಶಕುನಿ ಚೌಧರಿ ಮತ್ತು ಮಾಜಿ ಶಾಸಕಿ ದಿವಂಗತ ಪಾರ್ವತಿ ದೇವಿ ಅವರ ಪುತ್ರ ಸಾಮ್ರಾಟ್ ಚೌಧರಿ.
- ಮಾಜಿ ಕೇಂದ್ರ ಸಚಿವ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಮತ್ತು ಶಾಸಕಿ ಸ್ನೇಹಲತಾ ಅವರ ಪುತ್ರ ದೀಪಕ್ ಪ್ರಕಾಶ್.
- ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸಂಸದೆ ಪುತುಲ್ ಕುಮಾರಿ ಅವರ ಪುತ್ರಿ ಶ್ರೇಯಸಿ ಸಿಂಗ್.
- ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಜೈ ನಾರಾಯಣ್ ನಿಷಾದ್ ಅವರ ಸೊಸೆ ಮತ್ತು ಮಾಜಿ ಸಂಸದ ಅಜಯ್ ನಿಷಾದ್ ಅವರ ಪತ್ನಿ ರಮಾ ನಿಷಾದ್.
- ಮಾಜಿ ಶಾಸಕ ಜಗದೀಶ್ ಪ್ರಸಾದ್ ಚೌಧರಿ ಅವರ ಪುತ್ರ ವಿಜಯ್ ಚೌಧರಿ
- ಮಾಜಿ ಸಚಿವ ಮಹಾವೀರ್ ಚೌಧರಿ ಅವರ ಪುತ್ರ, ಸಮಷ್ಟಿಪುರ ಸಂಸದ ಶಾಂಭವಿ ಚೌಧರಿ ಅವರ ತಂದೆ ಅಶೋಕ್ ಚೌಧರಿ.
- ಮಾಜಿ ಶಾಸಕ ನವೀನ್ ಕಿಶೋರ್ ಸಿನ್ಹಾ ಅವರ ಪುತ್ರ ನಿತಿನ್ ನವೀನ್.
- ಮಾಜಿ ಸಚಿವೆ ಚಂದ್ರಿಕಾ ರಾಮ್ ಅವರ ಮಗ ಮತ್ತು ಮಾಜಿ ಶಾಸಕ ಅನಿಲ್ ಕುಮಾರ್ ಅವರ ಸಹೋದರ ಸುನಿಲ್ ಕುಮಾರ್.
- ಸಮತಾ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ದಿವಂಗತ ಭೂತಾನ್ ಸಿಂಗ್ ಅವರ ಪತ್ನಿ ಲೆಸಿ ಸಿಂಗ್ ಸದ್ಯ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟದಲ್ಲಿರುವ ಕುಟುಂಬ ರಾಜಕಾರಣದ ಕುಡಿಗಳು.
ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದವರು, ರಾಜ್ಯದ ಜೆಡಿಎಸ್ ಪಕ್ಷವನ್ನು ‘ಒಂದು ಕುಟುಂಬದ ಪಕ್ಷ’ ಎಂದು ಕರೆದಿದ್ದರು. ಬಳಿಕ ಅದೇ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಮೋದಿ ಭಾಷಣದಲ್ಲಿ ಮಾತ್ರ ಈ ‘ಪರಿವಾರವಾದ’ ಎಂಬ ಪದ ಸೇರಿರುತ್ತದೆ. ಆದರೆ ಅದು ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳಿಗೆ ಮಾತ್ರ ಅನ್ವಯವಾಗುತ್ತದೆ!
2023ರಲ್ಲಿ 77ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರ, ತುಷ್ಟೀಕರಣ, ಪರಿವಾರವಾದ ಎಂಬ ಮೂರು ಪಿಡುಗುಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಹೇಳಿದ್ದರು. ಹಾಗೆಯೇ ಕುಟುಂಬ ರಾಜಕಾರಣ ಇರುವ ಪಕ್ಷಗಳು ‘ಕುಟುಂಬದಿಂದ, ಕುಟುಂಬಕ್ಕಾಗಿ ಮತ್ತು ಕುಟುಂಬದಿಂದ ನಡೆಸಲ್ಪಡುವ ಪಕ್ಷ’ ಎಂದು ಬಣ್ಣಿಸಿದ್ದರು. ಕುಟುಂಬ ರಾಜಕಾರಣ ವಿಚಾರದಲ್ಲಿ ಮೋದಿ ಕಾಂಗ್ರೆಸ್ ಅನ್ನು, ರಾಹುಲ್ ಗಾಂಧಿ ಅವರನ್ನು ನಿರಂತರವಾಗಿ ಟೀಕಿಸುತ್ತಲೇ ಇದ್ದಾರೆ.
ಇದನ್ನು ಓದಿದ್ದೀರಾ? ಅಪರಾಧಗಳನ್ನು ನಿಯಂತ್ರಿಸಲಾಗದಿದ್ದರೆ, ನಿತೀಶ್ ಪುತ್ರ ನಿಶಾಂತ್‌ಗೆ ಜವಾಬ್ದಾರಿ ಹಸ್ತಾಂತರಿಸಲಿ: ಮಾಜಿ ಸಿಎಂ ರಾಬ್ರಿ ದೇವಿ
‘ಕಾಂಗ್ರೆಸ್‌ಗೆ ಕುಟುಂಬ ಮೊದಲು, ಕಾಂಗ್ರೆಸ್‌ಗೆ ಕುಟುಂಬ ರಾಜಕಾರಣವೇ ಮುಖ್ಯ. ಗಾಂಧಿ ಕುಟುಂಬವೇ ಕಾಂಗ್ರೆಸ್ ಅನ್ನು ನಿಯಂತ್ರಿಸುತ್ತಿದೆ’ ಎಂದು ರಾಜ್ಯಸಭೆಯಲ್ಲೇ ವಾಗ್ದಾಳಿ ನಡೆಸಿದ್ದಾರೆ. ಹಾಗಿದ್ದಾಗ ಈಗ ತಮ್ಮ ಬಿಹಾರ ಎನ್‌ಡಿಎ ಸಚಿವ ಸಂಪುಟದಲ್ಲಿರುವ ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸುತ್ತಾರೆಯೇ? ಬಹಿರಂಗವಾಗಿ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ತಮ್ಮ ಪಕ್ಷ ಬಿಜೆಪಿದೊಳಗಿನ, ಎನ್‌ಡಿಎ ಕೂಟದೊಳಗಿನ ಕುಟುಂಬ ರಾಜಕಾರಣದ ಬಗ್ಗೆ ಮೋದಿ ಮೌನ ತಳೆಯುವುದು ಎಷ್ಟು ಸರಿ?
ಅಷ್ಟಕ್ಕೂ ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರತಾಗಿದೆಯೇ? ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರರ ರಾಜಕಾರಣ ಬಿಜೆಪಿಯಲ್ಲಿ ಹಲವು ಬಣಗಳು ಹುಟ್ಟಲು ಕಾರಣವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ, ಅನುರಾಗ್ ಠಾಕೂರ್, ಪೀಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಎಚ್.ಡಿ. ಕುಮಾರಸ್ವಾಮಿ, ಕಿಂಜರಪು ರಾಮ್ ಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಕಿರಣ್ ರಿಜಿಜು- ಇವರುಗಳು ನರೇಂದ್ರ ಮೋದಿ ಸಂಪುಟದಲ್ಲಿರುವ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದ ಸಚಿವರುಗಳು. ಹೀಗಿದ್ದಾಗ ನರೇಂದ್ರ ಮೋದಿ ಅವರು ‘ಗಾಜಿನ ಮನೆಯಲ್ಲಿ ಕೂತು ಇತರರ ಮೇಲೆ ಕಲ್ಲೆಸದಂತೆ’ ಅಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




