ಅಂಬೇಡ್ಕರ್ ವಿರಚಿತ ಸಂವಿಧಾನ: ಕುವೆಂಪು ಅನುಸಂಧಾನ

Date:

ಭಾರತ ಸಂವಿಧಾನವು ಭವಿಷ್ಯದಲ್ಲಿ ಗಂಡಾಂತರಕ್ಕೆ ಒಳಗಾಗುವ ಬಗ್ಗೆ ತಿಳಿಸಿದ ಅಂಬೇಡ್ಕರ್ ಅವರಂತೆ ಕವಿ ಕುವೆಂಪು ಅವರು ಸೂಚಿಸಿರುವ ''ಮರೆ ಮೋಸದ ಬೂಟಾಟಿಕೆಗಿದೊ ಮರ್ದನ ದಮನಂ! ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ'' ಧ್ವನಿಯು ಭಾರತೀಯ ಪ್ರಜೆಗಳೆಲ್ಲರ ಎದೆಯ ದನಿಯಾಗಬೇಕಿದೆ.

ಜನಸಂಸ್ಕೃತಿಯ ಮಹಾಸಂತರಾದ ಪರಂಜ್ಯೋತಿ ಮಂಟೇಸ್ವಾಮಿ ಅವರನ್ನು ಕುರಿತು ಜಾನಪದರು ಹಾಡಿರುವ ಮಹಾಕಾವ್ಯದಲ್ಲಿ ಒಂದು ಸಾಲು ಹೀಗಿದೆ: ‘ತಿಪ್ಪೆ ಮೇಲೆ ಕಸ ಮಡಗಿದರೆ ಭಿನ್ನಭೇದವಿಲ್ಲದಂತೆ ಏಕವಾಗಿ ಉರಿವ ಪರಂಜ್ಯೋತಿ’. ಈ ಸಾಲನ್ನು ಕೇಳಿದಾಗಲೆಲ್ಲ ನಮ್ಮ ಭಾರತ ಸಂವಿಧಾನ ನೆನಪಾಗುತ್ತದೆ. ಸಂವಿಧಾನದ ಸಂಗತಿಗಳು ಚರ್ಚೆಗೆ ಬಂದಾಗಲೆಲ್ಲ ಪರಂಜ್ಯೋತಿಯ ಪದವು ಸ್ಮರಣೆಗೆ ಬರುತ್ತದೆ. ಈ ಪದವು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರೂಪುಗೊಂಡ “ಭಾರತ ಸಂವಿಧಾನ” ದರ್ಶನ-ಯಾನಕ್ಕೆ ಅರ್ಥಪೂರ್ಣವಾಗಿ ಅನ್ವಯವಾಗುವಂಥದು. ಸ್ವಾತಂತ್ರೋತ್ತರ ಸಂದರ್ಭದಲ್ಲಿ ಸಮಸ್ತ ಭಾರತೀಯರಿಗೂ ಯಾವುದೇ ಭಿನ್ನಭೇದಗಳಿಲ್ಲದೆ ಒಂದೇ ಸಮನಾದ ಹಕ್ಕು, ಬಾಧ್ಯತೆ, ಅವಕಾಶಗಳನ್ನು ನೀಡಿ ಸಹಭಾಗಿತ್ವ ಹಾಗೂ ಸಾಮರಸ್ಯದ ಬದುಕನ್ನಿತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಇದು ಒಂದು ಜಾತಿ, ಒಂದು ಧರ್ಮಕ್ಕೆ ಎಂದೂ ಸೀಮಿತವಾದುದಲ್ಲ. ಭಾರತದ ಬಹುಜನರ ಬದುಕು ಬೆಳಗುವಲ್ಲಿ ಏಕವಾಗಿ ಉರಿವ ಪರಂಜ್ಯೋತಿಯೇ ಆಗಿದೆ. ಹೀಗೆ, ಧರೆಗೆ ದೊಡ್ಡವರೆಂಬಂತೆ ಪ್ರಧಾನ ಶಿಲ್ಪಿಯಾಗಿ ಸರ್ವಜನಾಂಗದ ಸಮತೋದ್ಧಾರಕ ಪರಂಜ್ಯೋತಿಯಂತೆ ಬಹುಜನ ಭಾರತಕ್ಕೆ “ಸಂವಿಧಾನ”ವೆಂಬ ಮಹಾಬೆಳಕನ್ನಿತ್ತ ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು. ಭಾರತದ ಪಾರಂಪರಿಕ ತಿರಸ್ಕೃತ ನೆಲೆ ಹಾಗೂ ತಳಸಂಸ್ಕೃತಿಯಿಂದ ಬಂದ ಅಂಬೇಡ್ಕರ್ ಅವರು ಯಾವುದೇ ವಿಷಕೃತ ವಿಕಾರಗಳಿಲ್ಲದೆ ಸಂವಿಧಾನ ರಚನಾ ಸಭೆಯ ಸರ್ವಜನಸಂವಾದದ ಮೂಲಕ ವಿಶಾಲ ದೃಷ್ಟಿಯಲ್ಲಿ ಸಮಸ್ತ ಭಾರತದ ಭವಿಷ್ಯದ್ದರ್ಶನ ನೀಡಿದ್ದರಿಂದಲೇ ಭಾರತ ಸಂವಿಧಾನವು ಸರ್ವಜನಾಂಗದ ಬದುಕುಗಳನ್ನು ನಿತ್ಯವೂ ಬೆಳಗುವಂತಾಗಿರುವುದು. ಜಗತ್ತಿನಲ್ಲಿಯೇ ಶ್ರೇಷ್ಠವಾದ ಹಾಗೂ ಬೃಹತ್ತಾದ ಸಂವಿಧಾನವೆಂಬ ಪ್ರಸಿದ್ಧಿಗೆ ಪಾತ್ರವಾಗಿರುವುದು.

ಪಾರತಂತ್ರ‍್ಯದಿಂದ ಮುಕ್ತವಾದ ಭಾರತಕ್ಕೆ ಸ್ವತಂತ್ರವಾದ ಸಂವಿಧಾನವನ್ನು ರಚಿಸಿಕೊಳ್ಳಬೇಕೆಂಬ ಮಹದಾಶಯದಲ್ಲಿ ಅಂಬೇಡ್ಕರ್ ಮೊದಲಾದವರ ಪ್ರಬುದ್ಧ ಬಳಗವು ಕ್ರಿಯಾಶೀಲವಾಗಿದ್ದ ಕಾಲ. ಆಗ ಇಡೀ ಭಾರತದ ಜನತೆ ಸದೃಢ ಭಾರತಕ್ಕಾಗಿ ಸಮರ್ಥ ಸಂವಿಧಾನಕ್ಕಾಗಿ ಎದುರು ನೋಡುತ್ತಿತ್ತು. ಆದರೆ, ಅನೇಕ ವ್ಯಕ್ತಿ, ಸಂಘ-ಸಂಸ್ಥೆಗಳಿಂದ ಭಾರತ ಸಂವಿಧಾನ ರಚನಾ ಕಾರ್ಯವನ್ನು ಆಗುಮಾಡದಂತೆ ಅಡ್ಡಗಾಲು ಹಾಕಲು ಪ್ರಯತ್ನಗಳು ನಡೆದವು. ಆದಾಗ್ಯೂ ದೇಶಭವಿಷ್ಯದ ದೂರದೃಷ್ಟಿಯಲ್ಲಿ ಅಪಾರಶ್ರಮದಿಂದ ಹಾಗೂ ಸುದೀರ್ಘ ಚರ್ಚೆಗಳಿಂದ ಸಂವಿಧಾನವು ರೂಪುಗೊಂಡಿತು. ಅನೇಕರು ಸಂವಿಧಾನ ರಚನಾಕಾರ್ಯವನ್ನು ಮನದುಂಬಿ ಶ್ಲಾಘಿಸಿದರು. ಆಧುನಿಕ ಭಾರತವನ್ನು ಪ್ರಬುದ್ಧತೆಯಲ್ಲಿ ಪುನರ್ನಿರ್ಮಾಣ ಮಾಡುವ ಸಲುವಾಗಿ ಸರ್ವಜನಾಂಗದ ಅನುಭವ ಮಂಟಪದಲ್ಲಿ ಅರಳಿದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಅಂಬೇಡ್ಕರರು ಅಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣವು ಭವಿಷ್ಯ ಭಾರತಕ್ಕೆ ಬೇಕಾದ ಜಾಗೃತಜ್ಯೋತಿಯಾಗಿತ್ತು. ಈ ಸಂದರ್ಭದಲ್ಲಿ ಕೆಲವರು ಪೂರ್ವಗಹ್ರಪೀಡಿತ ಹಾಗೂ ಮತೀಯ ಯಾಜಮಾನ್ಯದ ವಿಷಮನಸಿನಿಂದ ದೂಷಿಸತೊಡಗಿದರು. ಹಲವರು ಮಹಾತ್ಮಾ ಗಾಂಧೀಜಿ ಅವರ ತತ್ವದರ್ಶನಗಳನ್ನು ಇಲ್ಲಿ ಅಳವಡಿಸಿಲ್ಲ ಎಂದು ಟೀಕಿಸಿದರು. ಮತ್ತೆ ಕೆಲವರು ಇದು ಪಾಶ್ಚಾತ್ಯ ಸಂಸ್ಕೃತಿಯ ಪೋಷಕವಾಗಿ ನಮ್ಮ ದೇಶದ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಗಳು ಮಾಯವಾಗಿವೆ ಎಂದರು. ಸಮಾನತೆಯನ್ನು ಸದಾ ದ್ವೇಷಿಸಿಕೊಂಡೇ ಬಂದಿದ್ದ ವಿಷಮತಿಗಳು ಈ ಸಂವಿಧಾನವನ್ನು ತಿರಸ್ಕರಿದವು. ಇದೆಲ್ಲದರ ನಡುವೆ ಸಮತೆ ಹಾಗೂ ಸದೃಢತೆಯ ಸದಾಶಯದಲ್ಲಿ ಭಾರತ ಸಂವಿಧಾನವನ್ನು 1950ರ ಜನವರಿ 26ರಂದು ಜಾರಿಗೊಂಡಿತು. ಭಾರತದ ಚರಿತ್ರೆಯಲ್ಲಿ ಮಹತ್ತರ ಘಟ್ಟವಾದ ಈ ಸಂಗತಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಸ್ವಾಗತಿಸುತ್ತಾ ”ಭಾರತ ಗಣರಾಜ್ಯೋತ್ಸವ”ವು ಅವಿಸ್ಮರಣೀಯವಾಯಿತು.

ಇದನ್ನು ಓದಿದ್ದೀರಾ?: ಕಂಡ ಕಂಡ ದೇಶಗಳ ಸಂಪನ್ಮೂಲಗಳನ್ನು ಕಬಳಿಸುವ ಟ್ರಂಪ್ ಅಮೆರಿಕದ ಅಸಲಿ ರೋಗವೇನು ಬಲ್ಲಿರಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಥ ಚಾರಿತ್ರಿಕ ಹೊತ್ತನ್ನು ಭಾರತದ ಕವಿಕೋಗಿಲೆಗಳು ತಮ್ಮ ಹೃದಯಸ್ಥ ಮಾಡಿಕೊಳ್ಳುತ್ತಾ ಕೊರಳೆತ್ತಿ ಪಾಡಿದ ಬಗೆಯು ಆಪ್ಯಾಯಮಾನವಾದುದು. ಭಾರತ ಸಂವಿಧಾನ ರಚನೆಯ ದುಡಿಮೆ ಹಾಗೂ ದಾರ್ಶನಿಕತೆಯನ್ನು ಕನ್ನಡ ನೆಲದ ಹೃದಯದಿಂದ ಅರಿತ ಸಮರ್ಥ ಸೃಜನಶೀಲಾಭಿವ್ಯಕ್ತಿಗೆ ಕುವೆಂಪು ಅವರು ಸಾಕ್ಷಿಯಾಗಿದ್ದಾರೆ. ಸಂವಿಧಾನವು ಜಾರಿಯಾದ ದಿನದಂದು ಕುವೆಂಪು ಅವರು ರಚಿಸಿದ ಮಹತ್ವದ ಕವಿತೆ ”’ಶ್ರೀಸಾಮಾನ್ಯ’ರ ದೀಕ್ಷಾ ಗೀತೆ”1. ಕವಿತೆಯನ್ನು ಬರೆದ ನಂತರ ಕೊನೆಯಲ್ಲಿ ನೀಡಿರುವ ಅಡಿಟಿಪ್ಪಣಿಯಲ್ಲಿ ಈ ಐತಿಹಾಸಿಕ ಸಂದರ್ಭವನ್ನು ಕವಿ ಉಲ್ಲೇಖಿಸಿದ್ದಾರೆ. “1950ನೆಯ ಜನವರಿ 26ನೆಯ ಗುರುವಾರ ಭಾರತವು ಸರ್ವಪ್ರಜಾಧಿಪತ್ಯ (ರಿಪಬ್ಲಿಕ್)ವನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಕವಿತೆ ಇದು”2 ಎಂದು ಕುವೆಂಪು ತಿಳಿಸಿದ್ದಾರೆ. ಆದ್ದರಿಂದ ಕುವೆಂಪು ಅವರ ಈ ಕವಿತೆಯು ಭಾರತ ಸಂವಿಧಾನಕ್ಕೆ ಪ್ರತಿಕ್ರಿಯಾತ್ಮಕವಾಗಿ ಮೂಡಿ ಬಂದಿರುವ ಕನ್ನಡದ ಒಂದು ಮಹತ್ವದ ಕವಿತೆಯಾಗಿದೆ. ಆಧುನಿಕ ಭಾರತದ ಚರಿತ್ರೆಯಲ್ಲಿ ಭಾರತ ಸಂವಿಧಾನದ ಮೂಲಕ ಉಂಟಾದ ಸಮಗ್ರ ಸಾಂಸ್ಕೃತಿಕ ಬದಲಾವಣೆಯನ್ನು ಚಾರಿತ್ರಿಕವಾಗಿ ದಾಖಲಿಸುವಲ್ಲಿ ಮಹತ್ವದ ಕವಿತೆಯಾಗಿದೆ ಎಂಬ ಹೆಗ್ಗಳಿಕೆಯು ಈ ಕವಿತೆಗಿದೆ. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನಾ ತಂಡವು ಸೃಜಿಸಿದ “ಭಾರತ ಸಂವಿಧಾನ”ದ ಹೃದಯ ಸಂವೇದನೆಯನ್ನು ಅರ್ಥೈಸಿಕೊಂಡ ಕನ್ನಡದ ಮೇರು ಕವಿ ಚೇತನದ ಹೃದಯ ಮಿಡಿತಕ್ಕೆ ಸಾಕ್ಷಿಭೂತವಾಗಿರುವ ಕವಿತೆ ಇದು. ಭಾರತದ ಚರಿತ್ರೆ, ವರ್ತಮಾನ ಹಾಗೂ ಭವಿಷ್ಯತ್ತನ್ನು ಏಕೀಭವಿಸಿ ರೂಪಿಸಲಾಗಿರುವ ‘ದಾರ್ಶನಿಕ ದಸ್ತಾವೇಜು’ ಅಥವಾ ‘ಭವಿಷ್ಯ ಭಾರತದ ಮಾರ್ಗದರ್ಶಕ ಕಾನೂನು ಗ್ರಂಥ’ವೆಂಬಂತಿರುವ ಭಾರತ ಸಂವಿಧಾನಕ್ಕೆ ಕಾವ್ಯಾತ್ಮಕ ಹಾಗೂ ದಾರ್ಶನಿಕ ಸಹಸ್ಪಂದನೆ ಎಂಬಂತೆ ಕುವೆಂಪು ಅವರು ಈ ಕವಿತೆಯನ್ನು ಕಟ್ಟಿಕೊಟ್ಟಿದ್ದಾರೆ.

bra

ಭಾರತ ಸಂವಿಧಾನ ಕುರಿತಾದ ಅಂದಿನ ಪ್ರಶಂಸೆ, ಟೀಕೆ, ದ್ವೇಷ  ಮೊದಲಾದ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಂತೆ ಮತ್ತು ಸಂವಿಧಾನ ಸಭೆಯಲ್ಲಿ ಮೊಳಗಿದ ಅಂಬೇಡ್ಕರ್ ಅವರ ಭವಿಷ್ಯವಾಣಿಯನ್ನೂ ತಮ್ಮೊಳಗೆ ಅಂತಸ್ಥ ಮಾಡಿಕೊಂಡಂತೆ ಕಾಣುವ ಕುವೆಂಪು ಅವರು ಅವೆಲ್ಲಕ್ಕೂ ನೀಡಬಹುದಾದ ಸೂಕ್ತವಾದ ಸಹಸ್ಪಂದನೆಯಾಗಿ ಈ ಕವಿತೆ ಮೂಡಿಬಂದಿದೆ.

‘ಶ್ರೀಸಾಮಾನ್ಯ’ವೆ ಭಗವನ್ ಮಾನ್ಯಂ;
‘ಶ್ರೀಸಾಮಾನ್ಯ’ನೆ ಭಗವದ್ ಧನ್ಯಂ!
ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ದಿಟ ಭಗವತ್ ಪ್ರೀತಿ!
ಸಾಮಾನ್ಯರೋ ನಾವು:
ಓ ಬನ್ನಿಂ, ಓ ಬನ್ನಿಂ
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ ನೀವೂ!
ಸರ್ವರಿಗಾಗಿಯೆ ಸರ್ವವ ತನ್ನಿಂ;
“ಸರ್ವರಿನೆನಗೆ! ಸರ್ವರಿಗೆನ್ನಿಂ!
ಸರ್ವರಿಗಾಗಿಯೆ ಸರ್ವಂ!” ಎನ್ನಿಂ.
ಸಾಮಾನ್ಯದ ಪೂಜೆಗೆ ಶ್ರೀ ದೀಕ್ಷೆಯ ಕೊಳ್ಳಿಂ!

ಸಂವಿಧಾನ ರಚನಾ ಸಂದರ್ಭದ ಚರ್ಚೆಯಲ್ಲಿ “ಶ್ರೀಸಾಮಾನ್ಯರೇ ನನ್ನ ದೇವರು” ಎಂದಿದ್ದರು ಅಂಬೇಡ್ಕರ್. ಈ ಆಶಯಕ್ಕೆ ಪೂರಕವಾಗಿ ಭಾರತ ಸಂವಿಧಾನವನ್ನು ‘ಸಾಮಾನ್ಯ ಮನುಷ್ಯನ ಸಂವಿಧಾನ’ ಎಂದು ಶ್ಲಾಘಿಸಿದ ಸಂವಿಧಾನ ರಚನಾ ಸಭೆಯ ಸದಸ್ಯರಲ್ಲೊಬ್ಬರಾದ ಎಸ್.ನಾಗಪ್ಪ ಅವರು, ”ಭೂಸ್ವಾಮ್ಯವುಳ್ಳ ಶ್ರೀಮಂತ ವರ್ಗ ಅಥವಾ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳ ಹಕ್ಕುಗಳಿಗಿಂತ ಸಂವಿಧಾನವು ಸಾಮಾನ್ಯ ವ್ಯಕ್ತಿಯ ಹಕ್ಕುಗಳ ಭರವಸೆ ಕೊಡುತ್ತದೆ. ಇದು ಈ ದೇಶದ ಸಾಮಾನ್ಯ ಜನರ ಸುಧಾರಣೆಯ ದಿಸೆಯಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ. ಇದಕ್ಕೆ ಕಾರಣ ಡಾ.ಅಂಬೇಡ್ಕರರು ಸಾಮಾನ್ಯ ಜನರೊಳಗಿಂದ ಮೇಲೆದ್ದು ಬಂದವರಾಗಿದ್ದಾರೆ. ಅವರು ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಮರೆತಿಲ್ಲ…”3 ಎಂದು ತಿಳಿಸಿದ್ದರು. ಸಂವಿಧಾನ ನಿರ್ಮಾರ್ತೃಗಳ ಮಹದಾಶಯವನ್ನು ಹೃದಯಗಿವಿಯಿಂದ ಆಲಿಸಿ, ಆಲಂಗಿಸಿಕೊಂಡ ಮಹಾಕವಿಯ ಉಲಿಯಂತೆ ಈ ನುಡಿದೀಪಗಳು ಕಾಣುತ್ತವೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ನೆಲೆಯ ಅಸಮಾನತೆ ಹಾಗೂ ಕರ್ಮಠತೆಗಳನ್ನು ಧಿಕ್ಕರಿಸುತ್ತಾ ಶ್ರೀಸಾಮಾನ್ಯ ಸರ್ವರನ್ನೂ ಸಮಾನವಾದ ಪ್ರಾತಿನಿಧ್ಯತೆಯಲ್ಲಿ ಒಳಗೊಳ್ಳುವ ಮಹಾಯಾನಕ್ಕೆ ಕವಿ ಕರೆ ನೀಡುತ್ತಾರೆ. ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ದಕ್ಕಬೇಕಾದ ‘ಶ್ರೀ’ತ್ವದ ಸಮಾನ ಗೌರವ ಹಾಗೂ ಸರ್ವರಿಗಾಗಿ ಸರ್ವರೂ ಕೈಗೊಳ್ಳಬೇಕಾದ ಪ್ರತಿಜ್ಞೆಗೆ ಪೂಜ್ಯತೆಯ ಸ್ಪರ್ಶ ನೀಡುತ್ತಾರೆ. ಸರ್ವ ಭಾರತೀಯರನ್ನೂ ಅತ್ಯಂತ ಸಂಭ್ರಮದಿಂದ ಕವಿ ಸ್ವಾಗತಿಸುತ್ತಾರೆ. ಇಲ್ಲಿ ಆದಿಮ ನೆಲಮೂಲ ಸಂಸ್ಕೃತಿಯ ಜನತಾ ಅಧ್ಯಾತ್ಮವೂ ಆಧುನಿಕ ಭಾರತದ ಸಂವಿಧಾನಕೃತ ‘ಭಾರತದ ಜನತೆಯಾದ ನಾವು’ ಎಂಬ ಜನಮೈತ್ರಿಯೂ ಅನುರಣನಗೊಂಡಿದೆ.

ಕೊನೆಗಂಡಿತೊ ಓರೋರ್ವರ ಗರ್ವದ ಕಾಲ,
ಇದು ಸರ್ವರ ಕಾಲ!
‘ಸರ್ವೋದಯ!’ ‘ಸರ್ವೋದಯ!’
ಸರ್ವೋದಯ ಯುಗಮಂತ್ರ!
ಸರ್ವೋದಯವೇ ಸ್ವಾತಂತ್ರ‍್ಯದ ಶ್ರೀತಂತ್ರ!
ಮೇಲಿಲ್ಲವೊ ಕೀಳಿಲ್ಲವೊ
ಸರ್ವ ಸಮಾನದ ರಾಜ್ಯ:
ಅಧ್ಯಕ್ಷನೊ ಸೇನಾನಿಯೊ
ಕಮ್ಮಾರನೊ ಚಮ್ಮಾರನೊ
ಕಾಯಕವೆಲ್ಲವು ಪೂಜ್ಯ!
ಕೈಗಾರನೊ ಕಲೆಗಾರನೊ
ಇರ್ವರಿಗೂ ಸಮಭೋಜ್ಯ;
ಇನ್ನಿಲ್ಲವೊ ಅಹಮಹಮಿಕೆ,
ತರತಮಗಳ ವ್ಯಾಜ್ಯ!

ಯುಗಮಾನವೊಂದರಲ್ಲಿ ಯಾಜಮಾನ್ಯ ನಡೆಯ ವಿಕೃತ ಉತ್ಪನ್ನವಾಗಿ ಬೆಳೆದುಬಂದ ಜಾತಿ ಅಸಮಾನತೆಗಳು ಮಾನವಸಮೂಹವನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಛಿದ್ರೀಕರಿಸಿದವು. ಒಂದು ಇನ್ನೊಂದರ ಮೇಲೆ ನಿಯಂತ್ರಣ ಮಾಡುತ್ತಾ ದೌರ್ಜನ್ಯ ಎಸಗಿದವು; ಎಂದೂ ಒಂದಾಗದಂತೆ ದೂರವಿರಿಸಿದವು. ಅಂತಹ ಯುಗಮಾನವು ಅಂತ್ಯಗೊಂಡು ಇದೀಗ ಸರ್ವಜನಮಾನ್ಯವಾದ ಭಾರತ ಸಂವಿಧಾನವು ಜಾರಿಯಾದ ಮೇಲೆ ಶತಶತಮಾನಗಳಿಂದ ಪಾಲಿಸಿಕೊಂಡು ಬಂದ ಯಾವುದೇ ತಾರತಮ್ಯಗಳು ಇರುವಂತಿಲ್ಲ. ಜಾತಿ, ಮತ ಮೊದಲಾದವುಗಳ ಯಾಜಮಾನ್ಯ ದರ್ಪವು ಅನುಸರಿಸಿದ ಯಾವ ನಡೆಯೂ ಇನ್ನಿಲ್ಲವಾಗಿ ಸರ್ವರೂ ಸಮಾನವಾದ ಸ್ಥಾನಮಾನ ಹಾಗೂ ಘನತೆ-ಗೌರವ ಪಡೆಯುವಂತಾಗಯುವುದು. ಭಾರತದ ಜನರು ತಮಗೆ ಸೂಕ್ತವೆನಿಸುವ ಸರ್ಕಾರವನ್ನು ಆಯ್ಕೆಮಾಡುವಲ್ಲಿ “ಒಬ್ಬ ವ್ಯಕ್ತಿ ಒಂದು ಓಟು; ಒಂದು ಓಟು ಒಂದು ಮೌಲ್ಯ” ಎಂಬ ಸಂವಿಧಾನಕೃತ ಮೌಲ್ಯವು ಸರ್ವರಿಗೂ ಸಮಾನ. ಆಗರ್ಭ ಶ್ರೀಮಂತನೇ ಆಗಿರಲಿ, ಮೇಲ್ಜಾತಿಯವನೇ ಆಗಿರಲಿ ಅವರ ಓಟಿಗೂ ಒಂದೇ ಮೌಲ್ಯ; ಅತ್ಯಂತ ಕಟ್ಟಕಡೆಯ ಜಾತಿಯ ವ್ಯಕ್ತಿಗಾಗಲೀ ಕಡುಬಡವನಿಗಾಗಲೀ ಅವರ ಓಟಿಗೂ ಒಂದೇ ಮೌಲ್ಯ. ನುಡಿಯುವ ಬಾಯಿಗೂ ಗುಡಿಸುವ ಕೈಯಿಗೂ ಯಾವುದೇ ಭಿನ್ನಭೇದಗಳಿಲ್ಲ. ಸಮಾಜದ ಎಲ್ಲಾ ಕಾಯಕಗಳಿಗೂ ಸಮಾನ ಗೌರವ ಮತ್ತು ಮೌಲ್ಯ. ಈ ಮೌಲ್ಯವರ್ಧನೆಯಿಂದ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಸಾಕಾರಗೊಳ್ಳಲಿದೆ.

why ambedkar didn t like india s constitution

ಕವಿಕುವೆಂಪು ಅವರು ಆಶಿಸುವ ಇಂತಹ ಸರ್ವ ಸಮಾನತೆಯ ಸರ್ವೋದಯ ಭಾರತವು ನಿರ್ಮಾಣವಾಗಬೇಕಾದರೆ ಅಂಬೇಡ್ಕರ್ ಅವರು ನೀಡಿರುವ ಎಚ್ಚರಿಕೆಯ ನುಡಿಗಳು ಅತ್ಯಂತ ಮನನೀಯವಾಗಿವೆ. ”ನಾವು ಭಾರತದಲ್ಲಿ ಶ್ರೇಣೀಕೃತ ತತ್ತ್ವವನ್ನು ಆಧರಿಸಿದ ಅಸಮಾನತೆಯ ಸಮಾಜವನ್ನು ಹೊಂದಿದ್ದೇವೆ. ಅದರಲ್ಲಿ ಕೆಲವರು ಮೇಲಿದ್ದರೆ ಮತ್ತೆ ಕೆಲವರು ಕೆಳಸ್ತರದಲ್ಲಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ, ಕೆಲವರು ಅಪಾರವಾದ ಆಸ್ತಿ, ಸಂಪತ್ತನ್ನು ಹೊಂದಿದ್ದರೆ, ಮತ್ತೆ ಕೆಲವರು ಕಡುಬಡತನದ ಸ್ಥಿತಿಯಲ್ಲಿದ್ದಾರೆ. ಜನವರಿ 26, 1950ರಂದು ನಾವು ವೈರುಧ್ಯಗಳ ಜೀವನವನ್ನು ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಹೊಂದಿದ್ದೇವೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಅಸಮಾನತೆಯನ್ನು ಹೊಂದಿದ್ದೇವೆ. ರಾಜಕೀಯದಲ್ಲಿ ನಾವು ‘ಒಬ್ಬ ವ್ಯಕ್ತಿ ಒಂದು ಓಟು ಮತ್ತು ಒಂದು ಓಟು ಒಂದು ಮೌಲ್ಯ’ ಎಂಬ ಸಿದ್ಧಾಂತವನ್ನು ಗುರುತಿಸಿದ್ದೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಈಗಿರುವ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ರಚನೆಯ ಕಾರಣದಿಂದಾಗಿ ಒಬ್ಬ ವ್ಯಕ್ತಿ ಒಂದು ಮೌಲ್ಯ ಸಿದ್ಧಾಂತವನ್ನು ಅಳವಡಿಸುವುದು ಅಸಾಧ್ಯವಾಗಿದೆ. ನಾವು ಈ ವೈರುಧ್ಯಗಳ ಜೀವನವನ್ನು ಇನ್ನೂ ಎಷ್ಟು ವರ್ಷ ಮುಂದುವರಿಸಬೇಕಾಗಬಹುದು? ನಮ್ಮ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ನಾವು ಇನ್ನೂ ಎಷ್ಟು ವರ್ಷಗಳ ಕಾಲ ಸಮಾನತೆಯ ನಿರಾಕರಣೆಯನ್ನು ಮುಂದುವರಿಸಬೇಕು? ಒಂದು ವೇಳೆ ನಾವು ತುಂಬಾ ಸಮಯ ಈ ನಿರಾಕರಣೆಯನ್ನು ಮುಂದುವರಿಸಿದರೆ, ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಗಂಡಾಂತರಕ್ಕೆ ದೂಡಿದಂತಾಗುತ್ತದೆ. ನಾವು ಈ ವೈರುಧ್ಯವನ್ನು ಆದಷ್ಟು ಕಡಿಮೆ ಸಮಯದ ಅವಧಿಯಲ್ಲಿ ತೊಡೆದುಹಾಕಬೇಕು ಅಥವಾ ಯಾರು ಈ ಅಸಮಾನತೆಯಿಂದ ಪರಿತಪಿಸುತ್ತಿದ್ದಾರೋ ಅವರು ಬಹಳ ಕಷ್ಟಪಟ್ಟು ಈ ಸಭೆಯು ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನು ಧ್ವಂಸಮಾಡುತ್ತಾರೆ”4 ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕವಿ ಕುವೆಂಪು ಅವರೂ ಸಹ ಭವಿಷ್ಯ ಭಾರತದಲ್ಲಿ ಯಾವುದೇ ಬಗೆಯ ತಾರತಮ್ಯಗಳು ಇರಬಾರದೆಂದೇ ಆಶಿಸಿದ್ದಾರೆ.

ಉಣಿಸಿಗೆ ಮೇಣ್ ಉಡುಪಿಗೆ ಮೇಣ್
ಆರಾಗಲಿ ಆರಡಿಯನ್
ಹಿಡಿಯುವುದಿನ್ ತ್ಯಾಜ್ಯ!
ಲೌಕಿಕದೊಳ್ ಲೌಕಿಕರಿಗೆ
ಆರಾಗಲಿ ಆರಡಿಯೊಳ್
ಹೊರಳುವುದಿನ್ ‘ಪೂಜ್ಯ’!
-ಇದು ಲೌಕಿಕ ರಾಜ್ಯ!

ಸಾಂಸ್ಕೃತಿಕ ಯಾಜಮಾನ್ಯದ ಕಾರಣದಿಂದ ಅಬಲರು ಪ್ರಬಲರ ಅಡಿಯಾಳಾಗಿರಬೇಕಾಗಿದ್ದ ಕಾಲವು ಮುಗಿದು ಇನ್ನು ಮುಂದೆ ಯಾರಿಗಾರೂ ಅಡಿಯಾಳಾಗದೆ ಸರ್ವರೂ ತಮಗೆ ದೊರೆಯುವ ಸಮಾನ ಪ್ರಾತಿನಿಧ್ಯವುಳ್ಳ ಪ್ರಜಾಪ್ರಭುತ್ವದ ಮೂಲಕ  ಸಬಲೀಕರಣಗೊಳ್ಳುವರು ಎಂಬುದು ಕವಿಯ ಕಣ್ಣೋಟ. ಇದು ಸಂವಿಧಾನದಿಂದ ಸಾಧ್ಯವಾದಷ್ಟೂ ಸಾಬೀತಾಗಿದೆ ಕೂಡ. ಈ ದಾರಿಯಲ್ಲಿ ಜಾತ್ಯತೀತ ಮತಿ ಬಹುಮುಖ್ಯ. ಆದರೆ ಯಾಜಮಾನ ಸಂಸ್ಕೃತಿ ಚಹರೆಗಳು ತಮ್ಮ ಮೂಲಭೂತ ನೆಲೆ-ನಿಲುವುಗಳಿಗೆ ಆಗುವ ಧಕ್ಕೆಯನ್ನು ಸಹಿಸಿಕೊಳ್ಳದೆ, ‘ಶ್ರೇಷ್ಠತೆಯ ವ್ಯಸನ’ದ ವಿಷಬಿತ್ತುತ್ತವೆ. ಸಾಂಸ್ಕೃತಿಕ ಪರಿವರ್ತನೆಯ ಕ್ರಾಂತಿಗೆ ಪ್ರತಿಕ್ರಾಂತಿಗಳನ್ನು ರೂಪಿಸುತ್ತಾ ತಮ್ಮ ಅಡಿಯಲ್ಲೇ ಕಾಯಕಜೀವಿ ಜನಸಮಾನ್ಯರನ್ನು ಕಾಯ್ದುಕೊಳ್ಳುವ ಪ್ರಮೇಯಗಳನ್ನು ದೈವನಿಯಾಮಕವೆಂಬಂತೆ ಪ್ರಸ್ತುತಪಡಿಸುತ್ತವೆ. ಇಂದಿಗೂ ಮಹಿಳೆಯರಾಗಲೀ ತಳಸಮುದಾಯದವರಾಗಲೀ ಉನ್ನತ ಹುದ್ದೆಗಳಲ್ಲಿ ಕೂರುವುದನ್ನು ಸಹಿಸದೆ ಹೊಸರೀತಿಯಲ್ಲಿ ಡಿಸ್ಟರ್ಬ್ ಮಾಡುವ, ಡಿಸ್ಟೆನ್ಸ್ ಮಾಡುವ ಹಾಗೂ ಡಿಸ್ಕ್ರಿಮಿನೇಟ್ ಮಾಡುವ ಜೀವವಿರೋಧಿ ಕೃತ್ಯಗಳು ಲಜ್ಜೆಯಿಲ್ಲದೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಭಾರತ ಸಂವಿಧಾನ ಅಂಗೀಕಾರ ಸಭೆಯಲ್ಲಿ ಅಂಬೇಡ್ಕರ್ ಅವರು ಹೇಳುತ್ತಾರೆ: ”…ಭಾರತದಲ್ಲಿ ಅನೇಕ ಜಾತಿಗಳಿವೆ. ಜಾತಿಗಳು ದೇಶವಿರೋಧಿಗಳು. ಇದಕ್ಕೆ ಮೊದಲ ಕಾರಣವೇನೆಂದರೆ ಅವು ಸಾಮಾಜಿಕ ಜೀವನದಲ್ಲಿ ಪ್ರತ್ಯೇಕತೆಯನ್ನು ತರುತ್ತವೆ. ಅವು ದೇಶವಿರೋಧಿಗಳು ಎಂಬುದಕ್ಕೆ ಇನ್ನೂ ಒಂದು ಕಾರಣವೇನೆಂದರೆ ಇವು ಜಾತಿ-ಜಾತಿಗಳ ನಡುವೆ ಅಸೂಯೆ ಮತ್ತು ದ್ವೇಷವನ್ನು ಹುಟ್ಟುಹಾಕುತ್ತವೆ. ಒಂದು ವೇಳೆ ನಾವು ನಿಜ ಅರ್ಥದಲ್ಲಿ ಒಂದು ದೇಶವಾಗಲು ಬಯಸುವುದಾದರೆ ಈ ಎಲ್ಲ ತೊಂದರೆಗಳಿಂದ ನಾವು ಹೊರಬರಬೇಕು. ಭ್ರಾತೃತ್ವವು ಒಂದು ವಾಸ್ತವ ವಿಷಯವಾಗುತ್ತದೆ… ಈ ದೇಶದಲ್ಲಿ ರಾಜಕೀಯ ಅಧಿಕಾರವು ಬಹಳ ಕಾಲ ಕೆಲವೇ ಜನರ ಏಕಸ್ವಾಮ್ಯವಾಗಿತ್ತೆಂದು ಹಲವರು ಭಾರ ಹೊರುವ ಪ್ರಾಣಿಗಳು ಮತ್ತು ಬಲಿಪಶುಗಳಾಗಿದ್ದರೆಂದು ಹೇಳುವುದನ್ನು ಯಾರೂ ವಿರೋಧಿಸಲಾರರು. ಈ ಏಕಸ್ವಾಮ್ಯವು ಸುಧಾರಣೆಯ ಅವಕಾಶವನ್ನು ಕಿತ್ತುಕೊಳ್ಳುತ್ತದೆ; ಅವರ ಜೀವವನ್ನು ನಿಸ್ವಾದಗೊಳಿಸುತ್ತವೆ. ಹೀಗೆ ತುಳಿತಕ್ಕೊಳಗಾದ ವರ್ಗಗಳು ಆಳಿಸಿಕೊಂಡು ದಣಿದಿವೆ. ತಮ್ಮನ್ನು ತಾವು ಆಳಿಕೊಳ್ಳಲು ಆತುರರಾಗಿದ್ದಾರೆ. ಈ ತುಳಿತಕ್ಕೊಳಗಾದ ವರ್ಗದವರು ತಮ್ಮನ್ನು ತಾವು ಅರ್ಥಮಾಡಿಕೊಳ್ಳುವಿಕೆಯು ಜಾತಿ ಹೋರಾಟ ಅಥವಾ ಅಂತರ್ಜಾತಿ ಯುದ್ಧಕ್ಕೆ ದಾರಿ ಮಾಡಿಕೊಡಬಾರದು…”5 ಎಂದು. ಸರ್ವರೊಳಗಣ ಸಮಾನ ಸಬಲೀಕರಣವು ಸಮತಾ ಸಮಾಜ ನಿರ್ಮಾಣಕ್ಕೆ ಕಾರಣವಾಗುವಂಥದ್ದು. ಆದರೆ ಇದಕ್ಕೆ ಅಡೆತಡೆಯಾಗುವ ದೇಶದ್ರೋಹೀ ಜಾತೀಯ ವಿಷಮತಿಯು ಉಲ್ಬಣಗೊಳ್ಳಬಾರದೆಂದು ಅಂಬೇಡ್ಕರ್ ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಜಾತ್ಯತೀತ ಭಾತೃತ್ವಭಾವವನ್ನು ಭಾರತೀಯರೆಲ್ಲರೂ ಒಮ್ಮತದಿಂದ ಜೀವಿಸುವ ಸಂಕಲ್ಪ ಮಾಡಬೇಕೆಂದು ಭಾರತ ಸಂವಿಧಾನ ಪೀಠಿಕೆಯ ಮೂಲಕ ಸಾರಿರುವುದು:6

ಇದನ್ನು ಓದಿದ್ದೀರಾ?: ಅದಾನಿ ಕಾವಲಿಗೆ ‘ವಿಶ್ವಗುರು’: ಅಮೆರಿಕದ ಸಮನ್ಸ್‌ಗಳಿಗೆ ಕೇಂದ್ರದ ಸುರಕ್ಷೆ!

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ‘ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ‍್ಯ: ಸ್ಥಾನಮಾನ ಹಾಗೂ ಅವಕಾಶ ಸಮಾನತೆ

ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, (ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು) ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃತ್ವಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ;

ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.

WhatsApp Image 2026 01 26 at 12.16.15

ಭಾರತ ಸಂವಿಧಾನದ ಪೀಠಿಕೆಯ ಆಂತರ್ಯ-ಆಶಯವನ್ನು ಅರಿತ ಕುವೆಂಪು ಅವರು ಅದನ್ನು ಮತ್ತಷ್ಟು ಜನೈಕ್ಯಗೊಳಿಸುವ ನಿಟ್ಟಿನಲ್ಲಿ ತಮ್ಮ ಇಡೀ ಕವಿತೆಯನ್ನು ಸೃಜಿಸಿರುವಂತೆ ಕಾಣುತ್ತದೆ. ದಿಟವಾಗಿಯೂ ನಮ್ಮ ಸಂವಿಧಾನ ಕರ್ತೃಗಳು ಹಾಗೂ ಕುವೆಂಪು ಅಂಥ ಕವಿಗಳು ಆಶಿಸಿದಂತೆ ಭವಿಷ್ಯದ ‘ಸದೃಢ ಸಮತಾ ಭಾರತ’ ನಿರ್ಮಾಣಕ್ಕಾಗಿ ಅತ್ಯಂತ ಪ್ರಾಮಾಣಿಕವೂ ಪ್ರಬುದ್ಧವೂ ಆಗಿ ನಡೆ-ನುಡಿಯಬೇಕಾಗಿದೆ. ಜನಮನವಿಕಾಸದಿಂದ ದೇಶಕೋಶವಿಕಾಸವೂ ಸುಸಾಧ್ಯ. ಇದನ್ನೇ ಕುವೆಂಪು ಅವರು, ‘ಸಾಮಾನ್ಯರೊ ನಾವು: ಓ ಬನ್ನಿಂ. ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ ನೀವೂ! ನೀವೂ! ನೀವೂ!-ನಿಲ್ ಇನ್, ದಿಟ್ಟಗೆ ನಿಲ್ ಇನ್’ ಎಂದು ಜನಜಾಗೃತಿಯಿತ್ತು ದೌರ್ಜನ್ಯ ಮತ್ತು ದಾಸ್ಯಗಳಿಂದ ಮುಕ್ತರಾಗಿ ಘನತೆ ಹಾಗೂ ಸಮತೆಯ ಸಾಧನೆಗೆ ಛಲ-ಸಂಚಲನಗೊಳ್ಳುವ ಬಗೆಯನ್ನು ತಿಳಿಸಿದ್ದಾರೆ.

ತೊಲಗಿತು ನಿನ್ನೆಯ ನಾಯ್ ಪಾಡು;
ಇನ್ನಿದು ದಿಟಕ್ಕೂ ನಿನ್ನಯ ತಾಯ್ನಾಡು:
ನಿನ್ನದೆ ನೆಲ! ನಿನ್ನದೆ ಹೊಲ!
ನಿನ್ನದೆ ಕಾನ್! ನಿನ್ನದೆ ಬಾನ್
ನಿನ್ನದೆ ನುಡಿ! ನಿನ್ನದೆ ಗುಡಿ!
ನಿನ್ನದೆ ಹೊಳೆ! ನಿನ್ನದೆ ಬೆಳೆ!
ನಿನಗಾಗಿಯೆ ನಿನ್ನೊಲವಿಗೆ
ಇನ್ ಮೀಸಲ್ ನೀ ಬೆಳೆವ ಬೆಳೆ!
ನಿನಗಾಗಿಯೆ ನಿನ್ನೊಲವಿಗೆ
ಇನ್ ಮೀಸಲ್ ನೀ ಉಳುವ ಇಳೆ!

ಈ ಸಾಲುಗಳನ್ನು ಗಮನಿಸಿದರೆ, ಒಬ್ಬ ಮಹಾಕವಿಗೆ ಇರಬಹುದಾದ ಭವಿಷ್ಯದ್ದರ್ಶನ ದೃಷ್ಟಿಯು ಇಲ್ಲಿ ಧ್ವನಿತಗೊಂಡಿರುವುದು ಕಾಣುತ್ತದೆ. ಯಾವ ಸ್ವಾತಂತ್ರ‍್ಯ ಹಾಗೂ ಸಮಾನತೆಗಾಗಿ ಅಂಬೇಡ್ಕರ್ ತಮ್ಮ ಜೀವನಪರ್ಯಂತ ಹೋರಾಡಿದರೋ, ಅದನ್ನು ಸಾಂವಿಧಾನಿಕವಾಗಿ ಸಾಕಾರಾಗೊಳಿಸಲು ಸಕ್ರಿಯರಾಗಿ ದುಡಿದರೋ ಅದರ ಸಾಧನಗನ್ನಡಿಯಂತೆ ಈ ಕಾವ್ಯಸಾಲುಗಳು ಕಂಗೊಳಿಸುತ್ತವೆ. ಸಂವಿಧಾನೋತ್ತರ ಭಾರತದಲ್ಲಿ ಪ್ರತಿಯೊಬ್ಬರಿಗೂ ದೊರೆಯುವ ಮುಕ್ತ ಹಾಗೂ ಯುಕ್ತ ಜೀವನಾವಕಾಶದ ಬಹುಸಂಗತಿಗಳನ್ನು ಇಲ್ಲಿ ಸೂಚಿಸಲಾಗಿದೆ. ಶೋಷಣೆಯಿಲ್ಲದ ಸ್ವಾಭಿಮಾನೀ-ಸಮಾನ ಬದುಕು ಸಹನೀಯವಾಗುತ್ತದೆ; ವಾರಸುದಾರಿಕೆಯನ್ನು ಅಧಿಕೃತಗೊಳಿಸುತ್ತದೆ. ಬಹುಶಃ ಅಂಬೇಡ್ಕರ್ ಅವರು ‘ಭೂರಾಷ್ಟ್ರೀಕರಣ’ ಕುರಿತು ಮೂಡಿಸಿದ್ದ ದಾರ್ಶನಿಕ ಅರಿವಾಗಲೀ ಮತ್ತು ಕರ್ನಾಟಕದಲ್ಲಿ ಆನಂತರ ಸಾಕಾರಗೊಂಡ ‘ಉಳುವವನೆ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಕ ನಡೆಯಾಗಲೀ ಕವಿಕಣ್ಣಲ್ಲಿ ಪ್ರತಿಧ್ವನಿಸಿರುವುದು ಸೋಜಿಗವೆನಿಸುತ್ತದೆ. “ಕುವೆಂಪು ಅವರು ‘ಸಾಮಾನ್ಯತಾಶ್ರೀ’ಯನ್ನು ಸೃಜನ ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಸಮಗ್ರ ಚಿಂತನೆ ಮತ್ತು ದಾರ್ಶನಿಕ ದೃಷ್ಟಿಯಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ…”7 ನಿಜಕ್ಕೂ ವೈಶ್ವಿಕ ಹೃದಯವುಳ್ಳ ಚಿಂತನಶೀಲರೊಳಗೆ ಮಾತ್ರ ಮೂಡಬಲ್ಲ ಕಾಲಾತೀತ ಕಣ್ಣೋಟಕ್ಕೆ ಇಂತಹ ಶ್ರೀಸಾಮಾನ್ಯರ ದರ್ಶನವೇ ಸಾಕ್ಷಿಯೆನಿಸುತ್ತವೆ.

ಸಂವಿಧಾನವು ಸರ್ವರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡುವ ಮೂಲಕ ಸಬಲೀಕರಿಸುವುದೇನೋ ಸತ್ಯ. ಆದರೆ ಹಾಗೆ ಸಬಲೀಕರಣಗೊಂಡ ದೇಶಬಾಂಧವರು ವ್ಯಕ್ತಿಗೌರವ, ನಿಸ್ವಾರ್ಥ ಹಾಗೂ ಸಹಬಾಳ್ವೆಯನ್ನು ಮರೆತು ಸಂಕುಚಿತ ಸ್ವಾರ್ಥ, ಭ್ರಷ್ಟತಾ ಭೋಗ ಹಾಗೂ ಕೊಳಕು ರಾಜಕಾರಣಗಳ ವಿಷಕ್ಕೆ ಸಿಲುಕಬಾರದೆಂದು ಕವಿ ತಿಳಿಸುತ್ತಾರೆ:

ಹೆಸರಾಸೆಗೆ ಕೆಸರಾಸೆಗೆ
ಉಸಿರನು ನೋಯಿಸೆವಾವು;
ಹಿಡಿಯದು ನಮ್ಮನು ಕೀರ್ತಿಯ ಹವ್ಯಾಸದ ಹೆಬ್ಬಾವು!….
ನೇಗಿಲ್ ಲೇಖನಿ ತಕ್ಕಡಿ ಕತ್ತಿ
ನಮಗೆಲ್ಲಂ ಸಮರಸ ಸಂಪತ್ತಿ.
ನಮಗಲ್ಲವೊ ಪತ್ರಿಕೆಗಳ್
ಪೊತ್ತಿಸುವಾ ಪ್ರಖ್ಯಾತಿಯ
ಪುಲ್ವೆಂಕೆಯ ಕಾಂತಿ,
ಹೆಸರಿನ ವಿಭ್ರಾಂತಿ! ಹೆಸರರಿಯದ ದಿನದಿನದಾ
ಒಲುಮೆಯ ಬಾಳಿನ, ನಲುಮೆಯ ಸೇವೆಯ
ಅಖ್ಯಾತಿಯೆ ನಮ್ಮಾತ್ಮದ ಚಿರಶಾಂತಿ!
ಶಾಂತಿಗೆ ದುರ್ಗಂ, ಶಾಂತಿಸ್ವರ್ಗಂ,
ಅಖ್ಯಾತಿಯೆ ಸಾಮಾನ್ಯರ ಶ್ರೀಮನ್ ಮಾರ್ಗಂ:…

ಭಾರತದ ಜನತೆಯಾದ ನಮಗೆ ಇರಬೇಕಾದ ಮನೋವೈಜ್ಞಾನಿಕ ಅರಿವನ್ನು ಕವಿತೆ ಕುವೆಂಪು ಅವರು ಇಲ್ಲಿ ಸ್ಪಿರಿಚುವಲ್ ಸೂಕ್ಷ್ಮತೆಯಿಂದ ನೀಡಿದ್ದಾರೆ. ನಾಲಿಗೆಯಿಂದ ನಾವೆಲ್ಲರೂ ಒಂದೇ ಎನ್ನುತ್ತಾ ಎದೆಯಲ್ಲಿ ನಾನೇ ಬೇರೆ, ನೀನೇ ಬೇರೆ ಎಂದು ಒಡೆದು ನೋಡುವ ವಿಶ್ವಾಸಘಾತಕ ವರ್ತನೆಗಳು ಅಳಿದು ಇರುವಷ್ಟು ಕಾಲವೂ ಸಹಯಾನದಲ್ಲಿ ಜೀವಮೈತ್ರಿಯಲ್ಲಿ ಮುನ್ನಡೆಯಬೇಕಿದೆ. ಯಾವುದೇ ದೇಶದ ವೈವಿಧ್ಯಮಯ ಜನಜೀವನವು ಸಮರಸ ಸಂಪತ್ತಿನಲ್ಲಿ ಸುಗಮಗೊಳ್ಳುವಂತೆ ಮಾಡುವುದು ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಕರ್ತವ್ಯ ಎಂದು ಭಾವಿಸಲಾಗಿದೆ. ಆದರೆ ಮಾಧ್ಯಮಾಂಗವು ತನ್ನ ನೈತಿಕ ಜವಾಬ್ದಾರಿಯನ್ನು ಮರೆತು ಆರ್ಥಿಕ ದುರಾಸೆಗೆ ಬಲಿಯಾಗಿ ಜನಮನಭಾವನೆಗಳೊಂದಿಗೆ ಚೆಲ್ಲಾಟವಾಡುವ ಕುಕೃತ್ಯವು ಇಂದಿಗೂ ನಿಂತಿಲ್ಲ. ನಿಜಸಂಗತಿಗಳು ಹಾಗೂ ವೈಜ್ಞಾನಿಕ ವಿಚಾರಗಳ ಪ್ರಸರಣವು ಮೂಲೆಗೆ ತಳ್ಳಲ್ಪಟ್ಟು ವರ್ಣರಂಜಿತ ಹುಸಿ ಹಾಗೂ ಮೌಢ್ಯ ವಿಚಾರಗಳೆ ವಿಜೃಂಭಿಸುತ್ತಿವೆ. ದುಡ್ಡಿದವರ ದುನಿಯಾ ಮಾತ್ರ ಶ್ರೇಷ್ಠ; ಉಳಿದವರು ಕನಿಷ್ಠ ಎಂಬ ವಿಬೇಧವು ವಿಕೃತಗೊಳ್ಳುತ್ತದೆ. ನಿಜಸಾಧಕರು ಹಿಂದಾಗಿ ಹುಸಿಸಾಧಕರು ಮುನ್ನೆಲೆಯ ‘ಸೆಲೆಬ್ರೇಟಿ’ಗಳಾಗಿ, ‘ವ್ಯಕ್ತಿಪೂಜೆ’ಗೊಳಗಾಗಿ ಶ್ರೀಸಾಮಾನ್ಯರ ದಿಕ್ಕೆಡುತ್ತದೆ. ವ್ಯಕ್ತಿಪೂಜೆಯು ವೈಭವೋಪೇತ ಪ್ರಚಾರವಾಗಿಯೂ ಭಾವನಾತ್ಮಕ ವ್ಯಾಪಾರವಾಗಿಯೂ ಯಜಮಾನ್ಯ ರಾಜಕಾರಣ ಅಥವಾ ಸರ್ವಾಧಿಕಾರೀ ರಾಜಕಾರಣವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅಂಬೇಡ್ಕರರ ನುಡಿಜಾಗೃತಿಯಿತ್ತಂತೆ, ”ಭಾರತದಲ್ಲಿ ಭಕ್ತಿ ಅಥವಾ ಇದನ್ನು ಭಕ್ತಿಮಾರ್ಗ ಎನ್ನಬಹುದು ಅಥವಾ ವ್ಯಕ್ತಿಪೂಜೆಯು ರಾಜಕೀಯದಲ್ಲಿ ವಹಿಸುವ ಪಾತ್ರವನ್ನು ವಿಶ್ವದ ಇತರ ಯಾವುದೇ ದೇಶದ ರಾಜಕೀಯದಲ್ಲಿ ಕಾಣುವುದು ಸಾಧ್ಯವಿಲ್ಲ. ಧರ್ಮದಲ್ಲಿನ ಭಕ್ತಿಯು ಆತ್ಮದ ಮೋಕ್ಷಕ್ಕೆ ಮಾರ್ಗವಾಗಬಹುದು. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆಯು ಖಂಡಿತವಾಗಿ ಅವನತಿ, ಮಾನಹಾನಿ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ…”8 ಆದ್ದರಿಂದಲೇ ಕವಿ ಬಹಳ ಸೂಕ್ಷ್ಮವಾಗಿ ಸ್ವಾರ್ಥ-ಮತಕೇಂದ್ರಿತ ಪ್ರಚಾರಗಳು ಹಿಂದಾಗಿ ಪ್ರಜಾವಿಚಾರಗಳು ಮುಂದಾಗುವತ್ತ ಮುನ್ನಡೆಯುವುದು ಅವಶ್ಯಕವೆಂದಿದ್ದಾರೆ.

ಇದನ್ನು ಓದಿದ್ದೀರಾ?: ಒಡಿಶಾದಲ್ಲಿ ಕ್ರೈಸ್ತರ ಮೇಲೆ ಬಜರಂಗದಳದ ದಾದಾಗಿರಿ: ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರೇ ಗುರಿ

ಪ್ರಭುತ್ವಗಳ ಅಧಿಕಾರ ದಾಹ ಮತ್ತು ಕೀರ್ತಿಯ ಅಮಲಿನಲ್ಲಿ ಪ್ರಜೆಗಳ ಜೀವನಗಳು ಮುಳುಗುವಂತಾಗಬಾರದೆAಬ ಆಶಯದಲ್ಲಿ ಕವಿ ಕುವೆಂಪು ಅವರು ‘ಪ್ರಜಾಭಾರತ’ದಲ್ಲಿ ಎದುರಾಗುವ ಸವಾಲುಗಳೆದುರು ಪ್ರಜೆಗಳನ್ನು ಪ್ರಜ್ಞಾಶೀಲರನ್ನಾಗಿಸುತ್ತಾರೆ.

ಬರಿ ಲೌಕಿಕವಲ್ಲಯ್ ನಮ್ಮೆದೆಯುಸಿರಿನ ಗಮನಂ:
ಹುಸಿಯಲ್ಲದ ಋಷಿತನಕಿದೊ ನಮ್ಮಯ ನಮನಂ;
ರಸ ತುಂಬಿದ ಕವಿಕಲೆಗಿದೊ ನಮ್ಮಯ ನಮನಂ!
ಭಗವತ್ ತ್ಯಾಗಿಗೆ ಇದೊ ನಮನಂ!
ಶ್ರೀಮದ್ ಯೋಗಿಗೆ ಇದೊ ನಮನಂ:….
ಮರೆ ಮೋಸದ ಬೂಟಾಟಿಕೆಗಿದೊ ಮರ್ದನ ದಮನಂ!
ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ;
ಮೇಣ್ ಬಲಭೇಷಜ ವಮನಂ!-
ಹನಿ ಹನಿ ಸೇರುತ ಹರಿಯುವ ಜನ ಜನತಾ ಭಕ್ತಿ
ತಾನದೆ ತಿಳಿಯಯ್ ಸಾಮಾನ್ಯರ ಶ್ರೀಶಕ್ತಿ.
ಸರ್ವೋದಯವೆಮ್ಮಯ ಗುರುದೀಕ್ಷಾಮಂತ್ರಂ;
ಸರ್ವಪ್ರೇಮಜ ಸಮತಾಭಾವಂ ಶಿಕ್ಷಾತಂತ್ರಂ;
ಸರ್ವಸಮರ್ಪಣ ಯೋಗದ ಮರ್ಮಂ
ಬೋಧಿಪ ನಿತ್ಯ ನಿರಂತರ ಕರ್ಮಂ
ಸಾಧಿಪ ಲೀಲಾನಂದದ ಧಮ್ಮಂ ರಕ್ಷಾಯಂತ್ರಂ!

ಕವಿಯ ಕಾವ್ಯಧ್ವನಿಯಲ್ಲಿ ಅನುರಣಿಸುವಂತೆ, ಭಾರತ ಸ್ವಾತಂತ್ರ‍್ಯ ಸಾಧನೆ ಮತ್ತು ದೇಶ ನಿರ್ಮಾಣದಲ್ಲಿ ಶ್ರೀಸಾಮಾನ್ಯ ಆದಿವಾಸಿಗಳ ಆದಿಯಾಗಿ ಗಾಂಧಿ-ಅಂಬೇಡ್ಕರರಂಥ ರಾಷ್ಟ್ರ ನಾಯಕರ ಹೋರಾಟ, ತ್ಯಾಗ ಹಾಗೂ ದೂರದೃಷ್ಟಿಗಳು ಅವಿಸ್ಮರಣೀಯವೂ ಅನುಕರಣೀಯವೂ ಆಗಿವೆ. ಸರ್ವಜನತೆಯ ಸೌಹಾರ್ದತೆ ಸಾಧಿತವಾಗಿ ಸಮೃದ್ಧ ದೇಶವಾಗಲು ಸದಾ ಜಾಗೃತರಾಗಿರಬೇಕಿದೆ. ಇಲ್ಲವಾದರೆ ನಮ್ಮ ಪ್ರಜಾಪ್ರಭುತ್ವದ ಮತ ಪಡೆದು ನಮ್ಮನ್ನು ಆಳುವ ನಮ್ಮದೇ ಸರ್ಕಾರಗಳು ಜಾತಿಪ್ರಭುತ್ವ ಮತ್ತು ಧರ್ಮಪ್ರಭುತ್ವಗಳ ಜೊತೆಗೆ ‘ಬಹುಮತ(ಮೆಜಾರಿಟಿ)’ವನ್ನು ಮೇಲೆತ್ತಿ ಮರೆಮಮೋಸದಾಟ ಆಡುತ್ತವೆ. ಆಧುನಿಕ ಭಾರತದಲ್ಲಿ ಋಷಿಸಾಮಾನರಾಗಿದ್ದ ಗುರುಹಿರಿಯರು ತಂದಿತ್ತ ಸ್ವಾತಂತ್ರ‍್ಯ ಮತ್ತು  ಸಂವಿಧಾನಗಳು ಗಂಡಾಂತರಕ್ಕೆ ಸಿಲುಕುತ್ತವೆ. ಹೀಗಾಗಿ ಸಂವಿಧಾನಿಕ ಅಡಿಪಾಯಕ್ಕೆ ಧಕ್ಕೆಯಾಗದಂತೆ ಸರ್ವರೂ ಕಣ್ಣಲ್ಲಿ ಕಣ್ಣಿಟ್ಟು, ಕೈಕೈ ಹಿಡಿದು ಮುನ್ನಡೆಯಬೇಕಿದೆ. ‘ಶ್ರೀಸಾಮಾನ್ಯರೊ’ ನಾವು: ಓ ಬನ್ನಿಂ… ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ, ನೀವೂ! ನೀವೂ! ನೀವೂ !…’ ಎಂದು ಕುವೆಂಪು ಅವರು ಶ್ರೀಸಾಮಾನ್ಯತೆಯ ಸಮ್ಯಕ್ ಸಾಧನೆಗಾಗಿ ದೀಕ್ಷೆ ಕೈಗೊಳ್ಳುವ ಬಗ್ಗೆ ಮತ್ತೆ ಮತ್ತೆ ಕರೆ ನೀಡುತ್ತಿರುವುದರ  ಹಿಂದೆ ಭವಿಷ್ಯದ ಜಾಗೃತಿಯ ಒತ್ತು ಇರುವುದನ್ನು ಗಮನಿಸಬೇಕಾಗಿದೆ. ಭವಿಷ್ಯ ಭಾರತದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಕುರಿತು ಹೇಳುತ್ತಾ ಅಂಬೇಡ್ಕರ್ ಅವರು, “ಇತಿಹಾಸ ತನ್ನಷ್ಟೇ ತಾನು ಮರುಕಳಿಸಬಹುದೇ? ಈ ಯೋಚನೆಯೇ ನನ್ನ ಮನಸ್ಸಿನಲ್ಲಿ ಆತಂಕವನ್ನು ಹುಟ್ಟುಹಾಕಿದ್ದು, ಈ ಆತಂಕ ಆಳವಾಗುತ್ತ ಹೋಗಿದ್ದು ಒಂದು ವಾಸ್ತವವು ಅರ್ಥವಾಗುತ್ತ ಬಂದಾಗ, ನಮ್ಮ ಹಳೆಯ ಶತ್ರುಗಳಾದ ಜಾತಿ ಮತ್ತು ಮತಗಳ ಬದಲು, ಹೊಸ ಹೊಸ ರಾಜಕೀಯ ಪಕ್ಷಗಳು ಮತಗಳನ್ನು ಬಳಸಿಕೊಳ್ಳುವ ರೀತಿ ಹೊಸ ಶತ್ರು ಎನಿಸುತ್ತಿದೆ. ಭಾರತವು ಮತಗಳನ್ನು ದೇಶಕ್ಕಿಂತ ಎತ್ತರದ ಸ್ಥಾನದಲ್ಲಿ ಇಡುತ್ತದೆಯೇ ಅಥವಾ ದೇಶವನ್ನು ಮತಕ್ಕಿಂತ ಎತ್ತರದ ಸ್ಥಾನದಲ್ಲಿ ಇಡುತ್ತದೆಯೇ? ನನಗೆ ತಿಳಿದಿಲ್ಲ. ಆದರೆ ಇದು ಮಾತ್ರ ಸತ್ಯ. ಒಂದು ವೇಳೆ ರಾಜಕೀಯ ಪಕ್ಷಗಳು ಮತಗಳನ್ನು ದೇಶಕ್ಕಿಂತ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದರೆ, ನಮ್ಮ ಸ್ವಾತಂತ್ರ‍್ಯವು ಎರಡನೇ ಬಾರಿ ಗಂಡಾಂತರದಲ್ಲಿ ಸಿಲುಕಲಿದೆ ಮತ್ತು ಎಂದೆಂದಿಗೂ ಕಳೆದುಕೊಳ್ಳಲಿದೆ. ಈ ಸಂಭವನೀಯ ಘಟನೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ನಾವು ನಮ್ಮ ರಕ್ತದ ಕೊನೆಯ ಹನಿ ಇರುವ ತನಕ ನಮ್ಮ ಸ್ವಾತಂತ್ರ‍್ಯವನ್ನು ರಕ್ಷಿಸಿಕೊಳ್ಳುತ್ತೇವೆಂದು ಇಂದೇ ನಿರ್ಧರಿಸಬೇಕಿದೆ…”9 ಎಂದು ಎಚ್ಚರಿಸಿ ದೃಢ ನಿರ್ಧಾರದತ್ತ ಮಾರ್ಗದೋರುತ್ತಾರೆ. ಕವಿ ಕುವೆಂಪು ಅವರ ಕಾವ್ಯಧ್ವನಿಯಲ್ಲೇ ಕಾಣುವುದಾದರೆ, ‘ಮೆಜಾರಿಟಿಯ ಮರೆಮೋಸದಾಟ’ಕ್ಕೆ ಭಾರತೀಯರು ಬಲಿಯಾಗಬಾರದು. ಜಾತಿ ಮತ್ತು ಮತಗಳನ್ನು ಭಾವನಾತ್ಮಕವಾಗಿ ವಿಭಜಿಸಿ ಮೆಜಾರಿಟಿ ಗಳಿಸಿ ದುರ್ಬಳಕೆ ಮಾಡಿಕೊಳ್ಳುವ ‘ಯಾಜಮಾನ್ಯ ರಾಜಕಾರಣ’ವನ್ನು ಸೂಕ್ಷ್ಮವಾಗಿ ಅರಿತು ಯಾವುದೇ ಸಂಕುಚಿತ ಉನ್ಮಾದಗಳಿಲ್ಲದೆ ಭವಿಷ್ಯಭಾರತವನ್ನು ಕಾಪಿಡಬೇಕಾಗಿದೆ. ಸಂವಿಧಾನ ನಿರ್ಮಾತೃಗಳು ಕಂಡ ಆಶಯದಂತೆಯೇ ಕುವೆಂಪು ಅವರೂ ಸಹ “ಭರತಖಂಡದ ಐಕ್ಯತೆ ನಮ್ಮೆಲ್ಲರ ಉಸಿರಾಗಬೇಕು. ಅದಕ್ಕಾಗಿ ಅರ್ಪಿತಪ್ರಾಣರಾಗಬೇಕು”10 ಎನ್ನುವ ಮೂಲಕ ಭಾರತ ಗಳಿಸಿದ ಸ್ವಾತಂತ್ರ‍್ಯಕ್ಕೆ ಎಂದಿಗೂ ಯಾವ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಕರೆ ನೀಡಿದ್ದಾರೆ. ಜೊತೆಗೆ, ”ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲೀ ಸಮಾಜವಾದವಾಗಲೀ, ಸಮಾನತಾ ಭಾವಸ್ಥಾಪನೆಯಾಗಲೀ ಎಂದೆಂದಿಗೂ ಸಾಧ್ಯವಾಗುವುದಿಲ್ಲ…”11 ಎಂದು ಪ್ರಜಾಪ್ರಭುತ್ವದ ಉಳಿವಿನ ದಾರಿತೋರುತ್ತಾರೆ. ಹೀಗೆ ಅಂಬೇಡ್ಕರ್ ಮತ್ತು ಕುವೆಂಪು ಅವರು ಭವಿಷ್ಯದ ಪ್ರಜಾಭಾರತದ ಉಳಿವು-ಬೆಳೆವುಗಳನ್ನು ಕುರಿತು ದಾರ್ಶನಿಕ ಸಹಯಾನಿಗಳಂತೆ ದಿಕ್ಸೂಚಿಗಳಾಗಿದ್ದಾರೆ.

ಸರ್ವಭಾರತೀಯರ ಬದುಕುಗಳನ್ನು ಹಸನಾಗಿಸುವ ಮಹದಾಶಯವುಳ್ಳ ಭಾರತ ಸಂವಿಧಾನದ ಶಕ್ತಿಯನ್ನು ಕುಂದಿಸುವ ಕೆಲಸವು ಇಂದು ಎಗ್ಗಿಲ್ಲದೆ ನಡೆಯುತ್ತಿದೆ. ಪ್ರತಿಯೊಬ್ಬ ಪ್ರಜೆಗೂ ಇರಬೇಕಾಗಿದ್ದ ಸಾಂವಿಧಾನಿಕ ನೈತಿಕತೆಯನ್ನು ಮಸುಕಾಗಿಸುತ್ತಾ ಜಾತಿ-ಮತಗಳ ಅಸಹಿಷ್ಣುತೆಯನ್ನು ಆಪಾದಮಸ್ತಕಕ್ಕೇರಿಸಲಾಗುತ್ತಿದೆ. ಸಂವಿಧಾನ ರಚನೆಯ ಪೂರ್ವೋತ್ತರಗಳನ್ನು ಅಪವ್ಯಾಖ್ಯಾನಕ್ಕೆ ಒಳಗುಮಾಡುತ್ತಾ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಒಡೆಯಲಾಗುತ್ತಿದೆ. ಸ್ವಾತಂತ್ರೋತ್ತರ ಭಾರತ ಸಂದರ್ಭದಲ್ಲಿ ಕಟ್ಟಿಕೊಂಡ ‘ಸಶಕ್ತ ಸಂವಿಧಾನ’ವನ್ನು ದೇಶಪ್ರಗತಿ ನಿಮಿತ್ತವಾಗಿ ಸದಾ ‘ಸಕ್ರಿಯ’ಗೊಳಿಸುವ ಬದಲು ಪಕ್ಷರಾಜಕಾರಣದ ಮೂಲಕ ನಿಷ್ಕ್ರಿಯಗೊಳಿಸುವ ದೇಶದ್ರೋಹೀ ಕಾರ್ಯಗಳು ಗೋಮುಖವ್ಯಾಘ್ರರಿಂದ ನಡೆಯುತ್ತಿವೆ. ಸರ್ವ ಜನಾಂಗದ ಸಮತೆಯ ಮಹಾದೀಪವಾದ ಸಂವಿಧಾನದ ಬೆಳಕನ್ನು ಆರಿಸಿ ಏಕಮತೀಯ ಸರ್ವಾಧಿಕಾರ ಸ್ಥಾಪನೆಗಾಗಿ ಹಿಡಿದಿರುವ ಅಡ್ಡದಾರಿಗಳನ್ನೂ ಕಾನೂನುಬದ್ಧಗೊಳಿಸುತ್ತಿರುವುದು ದುರಂತ. ಇಂಥ ಹೊತ್ತಲ್ಲಿ ಭಾರತ ಸಂವಿಧಾನವು ಭವಿಷ್ಯದಲ್ಲಿ ಗಂಡಾಂತರಕ್ಕೆ ಒಳಗಾಗುವ ಬಗ್ಗೆ ತಿಳಿಸಿದ ಅಂಬೇಡ್ಕರ್ ಅವರಂತೆ ಕವಿ ಕುವೆಂಪು ಅವರು ಸೂಚಿಸಿರುವ ”ಮರೆ ಮೋಸದ ಬೂಟಾಟಿಕೆಗಿದೊ ಮರ್ದನ ದಮನಂ! ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ” ಧ್ವನಿಯು ಭಾರತೀಯ ಪ್ರಜೆಗಳೆಲ್ಲರ ಎದೆಯ ದನಿಯಾಗಬೇಕಿದೆ.

ambedkar kuvempu 1

ಒಟ್ಟಿನಲ್ಲಿ, ಭಾರತ ಸಂವಿಧಾನಕ್ಕೆ ಕನ್ನಡ ನೆಲದ ಸೃಜನಶೀಲ ಮನಸ್ಸು ನೀಡಿದ ಹೃದಯಸಂವಾದದ ಸಾಕ್ಷಿಯಾಗಿಯೂ ಭಾರತ ಸಂವಿಧಾನ ಎಂಬೊ ಕಾನೂನಾತ್ಮಕ ಸಂರಚನೆಗೆ ಕುವೆಂಪು ಕವಿಹೃದಯ ಇತ್ತ ಕಾವ್ಯಾತ್ಮಕ ಸಹಸ್ಪಂದನೆಯಾಗಿಯೂ ‘ಶ್ರೀಸಾಮಾನ್ಯರ ದೀಕ್ಷಾಗೀತೆ’ಯ ದರ್ಶನವಾಗುತ್ತದೆ. ಆಧುನಿಕ ಭಾರತದ ಸಮಕಾಲೀನ ಇಬ್ಬರು ಮಹಾಚೇತನಗಳಾದ ಭೀಮರಾವ್ ರಾಮ್ಜಿ ಅಂಬೇಡ್ಕರ್ ಹಾಗೂ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಭಿನ್ನ ಭಾಷೆಯ ರಾಜ್ಯದವರಾದರೂ ವಿಶ್ವಮಾನವತೆಯ ಆಶಯದಲ್ಲಿ ಐಕ್ಯವಾದವರು. ಇವರಿಬ್ಬರೂ ಸ್ವಾತಂತ್ರ‍್ಯ ಪೂರ್ವದಲ್ಲಿಯಾಗಲೀ, ಸ್ವಾತಂತ್ರ‍್ಯೋತ್ತರ ಸಂದರ್ಭದಲ್ಲಿಯಾಗಲೀ ಎಂದೂ ಮುಖತಃ ಭೇಟಿಯಾದವರಲ್ಲ. ಆದರೆ ಅವರು ತಮ್ಮದೇ ಆದ ಸೃಜನಶೀಲತೆ ಹಾಗೂ ವೈಚಾರಿಕತೆಗಳಲ್ಲಿ ಒಂದಾಗಿಯೇ ಪಯಣಿಸಿದವರು. ಜಾತಿವಿನಾಶದ ಜ್ಯೋತಿಹಿಡಿದು ಮುನ್ನಡೆದವರು. ಒಬ್ಬರು ಸಮಾನತೆಯ ಕಾನೂನುಹೃದಯಿ, ಮತ್ತೊಬ್ಬರು ಸಮಾನತೆಯ ಕವಿಹೃದಯಿ. ವಿಶ್ವಕವಿ ಕುವೆಂಪು ಅವರಿಗೆ ವಿಶ್ವಜ್ಞಾನಿ ಅಂಬೇಡ್ಕರ್ ಅವರ ಬಗ್ಗೆ ಆಳವಾಗಿ ತಿಳಿವಿತ್ತು. ಅಂಬೇಡ್ಕರ್ ಅವರೊಬ್ಬ ಮಹಾಜ್ಞಾನಿ, ರಾಷ್ಟ್ರನಾಯಕ, ವಿಶ್ವವ್ಯಕ್ತಿ ಎಂದು ಕುವೆಂಪು ಅವರು ಕರೆದಿದ್ದಾರೆ. ದಿನಾಂಕ: 20-04-1974ರಂದು ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಬರಹಗಾರರ ಹಾಗೂ ಕಲಾವಿದರ ಒಕ್ಕೂಟವನ್ನು ಉದ್ಘಾಟಿಸುತ್ತಾ ಕುವೆಂಪು ಅವರು ಮಾಡಿದ ‘ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ’ ಎಂಬ ಭಾಷಣವು ಚಾರಿತ್ರಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ತರವಾದುದು. ಈ ಭಾಷಣದಲ್ಲಿ ನಮ್ಮ ಭಾರತ ಸಂವಿಧಾನಕ್ಕೆ ವಿರುದ್ಧವೂ ಜನತಾಘಾತುಕವೂ ವಿವೇಕಗಳಿಂದ ಖಂಡಿಸಲ್ಪಡುವುವೂ ಕೋಮುವಾದಿಗಳೂ ಆದ ವ್ಯಕ್ತಿತ್ವಗಳನ್ನು ತಿರಸ್ಕರಿಸಬೇಕು. ರಾಷ್ಟ್ರ ಹಾಗೂ ವಿಶ್ವವಿವೇಕವುಳ್ಳ ವ್ಯಕ್ತಿತ್ವಗಳನ್ನು ಅರಿಯಬೇಕೆನ್ನುತ್ತಾ ನಾರಾಯಣಗುರು, ಸ್ವಾಮಿವಿವೇಕಾನಂದ, ಬಸವೇಶ್ವರ ಮೊದಲಾದವರ ಸಾಲಿನಲ್ಲಿ ಅಂಬೇಡ್ಕರ್ ಅವರನ್ನು ಸೂಚಿಸಿದ್ದಾರೆ.12 ಮತ್ತೊಂದು ಕಡೆಯಲ್ಲಿ, ಅಂಬೇಡ್ಕರ್ ಅವರ ಜ್ಞಾನಯಾನದ ಔನ್ನತ್ಯವನ್ನು ಸ್ಮರಿಸಿದ್ದಾರೆ.13 ಜನಬೇಧಕ ಹಾಗೂ ದೇಶಬಾಧಕವಾದ ಜಾತೀಯತೆ ಮತ್ತು ಮತೀಯತೆಯನ್ನು ವಿನಾಶಗೊಳಿಸುವ ಕೈಂಕರ್ಯದಲ್ಲಿ ಏಕವಾಗಿ ನುಡಿದ-ದುಡಿದ ವಿಶ್ವಮಾನವ ಮತಿತ್ವದ ಅಂಬೇಡ್ಕರ್-ಕುವೆಂಪು ಅವರು ಸದಾ ಸ್ಮರಣೀಯರು.

ಭಾರತದೇಶವನ್ನು ಯುಗಯುಗಗಳಿಂದಲೂ ಬಾಧಿಸುತ್ತಿರುವ ಜಾತಿ, ಮತ ಮೊದಲಾದ ಬೇಧಕೃತ ಶ್ರೇಷ್ಠತೆಯ ವ್ಯಸನವನ್ನು ತೊಡೆದು ಸಮತೆಯನ್ನು ಮೂಡಿಸುವ ದೇಶಮುಖೀ-ಜನಮುಖೀ ಕಾರ್ಯವು ನಿರಂತರವಾಗಿ ನಡೆದಿದೆ, ನಡೆಯುತ್ತಿದೆ ಮತ್ತು ನಡೆಯಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಕುವೆಂಪು ಅವರ ಈ ಕವಿತೆಯು ಭಾರತ ಸಂವಿಧಾನದ ಆಶಯಗಳನ್ನು ಹೃದಯಸ್ಥ ಮಾಡಿಕೊಳ್ಳಬೇಕಾದ ಬಗೆ ಹಾಗೂ ಬೇಧರಾಹಿತ್ಯ ಭಾರತದ ಭವಿಷ್ಯತ್ ನಿರ್ಮಾಣವನ್ನು ದರ್ಶಿಸುತ್ತದೆ.  ವಿಶ್ವಕಲ್ಯಾಣವನ್ನು ಬಯಸುವ ಇಂಥ ವ್ಯಕ್ತಿತ್ವಗಳು ಯಾವ ಕಾಲದಲ್ಲೇ ಇರಲಿ, ಯಾವ ನೆಲೆಯಲ್ಲೇ ಇರಲಿ, ಯಾವ ದೇಶದಲ್ಲೇ ಇರಲಿ, ಯಾವ ಭಾಷೆಯನ್ನೇ ಆಡಲಿ-ಅವರೆಲ್ಲರ ಆಶಯವು ಸಾರ್ವಕಾಲಿಕ, ಸಾರ್ವದೇಶಿಕ ಹಾಗೂ ಸಾರ್ವತ್ರಿಕ ಎಂಬುದನ್ನು ಮರೆಯಲಾಗದು.

ಕೊನೆಟಿಪ್ಪಣಿಗಳು:
1. ಕುವೆಂಪು ಸಮಗ್ರ ಕಾವ್ಯ-ಸಂಪುಟ 2; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ; 2013; ಪುಟ 75-78.
2. ಗಮನಿಸಿರಿ: ಕುವೆಂಪು ಸಮಗ್ರ ಕಾವ್ಯ-ಸಂಪುಟ 2; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ; 2013; ಪುಟ 75ರ ಅಡಿಟಿಪ್ಪಣಿಯಲ್ಲಿ.
3. ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು) – ಸಂಪುಟ 10; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು; 2018; ಪುಟ 500-501.
4. ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು) – ಸಂಪುಟ 10; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು; 2018; ಪುಟ 802.
5. ಅದೇ; ಪುಟ 804.
6. ಭಾರತ ಸಂವಿಧಾನ; ಇಂಗ್ಲೀಷ್-ಕನ್ನಡ ಆವೃತ್ತಿ; ಕಾನೂನು ಮತ್ತು ನ್ಯಾಯ ಮಂತ್ರಾಲಯ, ವಿಧಾಯೀ ಇಲಾಖೆ; ನವದೆಹಲಿ; 2019; ಪೀಠಿಕೆ-ಪುಟ 01.
7. ಆಲಿಸಯ್ಯ ಮಲೆಯ ಕವಿ (ಕುವೆಂಪು ಸಾಹಿತ್ಯ: ವಸ್ತುಗತಿ ತತ್ವದ ಅಧ್ಯಯನ); ಚಂದ್ರಶೇಖರ ನಂಗಲಿ ವಿ.; ನವಕರ್ನಾಟಕ ಪ್ರಕಾಶನ, ಬೆಂಗಳೂರು; 2005; ಪುಟ 117.
8. ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು) – ಸಂಪುಟ 10; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು; 2018; ಪುಟ 802.
9. ಅದೇ; ಪುಟ 800.
10. ಕುವೆಂಪು ಸಮಗ್ರ ಕಾವ್ಯ-ಸಂಪುಟ 2; ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ; 2013; ಪುಟ 631.
11. ವಿಚಾರಕ್ರಾಂತಿಗೆ ಆಹ್ವಾನ; ಕುವೆಂಪು; ಉದಯರವಿ ಪ್ರಕಾಶನ, ಮೈಸೂರು; 1976; ಪುಟ 6-7.
12. ಅದೇ; ಪುಟ 62.
13. ನೋಡಿ: ಕುವೆಂಪು ಸಮಗ್ರ ಗದ್ಯ; ಸಂಪುಟ-2; ಸಂ.ಕೆ.ಸಿ.ಶಿವಾರೆಡ್ಡಿ; ಕನ್ನಡ ವಿಶ್ವವಿದ್ಯಾಲಯ, ಹಂಪಿ; 2004; ಪುಟ 1071.

Dr. Kuppanahalli M Byrappa
ಡಾ. ಕುಪ್ಪನಹಳ್ಳಿ ಎಂ. ಬೈರಪ್ಪ
+ posts

ಲೇಖಕರು, ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಡಾ. ಕುಪ್ಪನಹಳ್ಳಿ ಎಂ. ಬೈರಪ್ಪ
ಡಾ. ಕುಪ್ಪನಹಳ್ಳಿ ಎಂ. ಬೈರಪ್ಪ
ಲೇಖಕರು, ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...