‘ಅಹಿಂದ’ ಸಂಘಟನೆಯ ಅಸ್ತಿತ್ವ, ಹಿಂದೆಂದಿಗಿಂತಲೂ ಇಂದು ಅತ್ಯಗತ್ಯ!       

Date:

'ಅಹಿಂದ' ಎಂಬುದು ಒಂದು ಪೇಪರ್ ಟೈಗರ್ ಆಗಿದೆ, ಕೆಲವರಿಗೆ ಸಂದರ್ಭ ಸೃಷ್ಟಿಯಾದಾಗ ರಕ್ಷಣೆ ಒದಗಿಸುವ ಪಂಜರದೊಳಗಿನ 'ಗುಮ್ಮ'ನಾಗಿ ಪರಿವರ್ತಿತವಾಗಿದೆ. ವಾಸ್ತವದಲ್ಲಿ ಅಂಥಾ ಸಂಘಟನೆಯೊಂದು ಅಸ್ತಿತ್ವಕ್ಕೆ ಬರದೇ ಹೋದದ್ದು ಮಾತ್ರ ಆ ಎಲ್ಲಾ ವರ್ಗಗಳ ದೌರ್ಭಾಗ್ಯ ಮತ್ತು ದುರಂತ.

ಮೂರು ದಶಕಗಳ ಆಜುಬಾಜಿನಲ್ಲಿ ‘ಅಹಿಂದ’ ಎಂಬ ಮೂರು ಅಕ್ಷರಗಳ ಜೋಡಣೆಯ ಪದವೊಂದು ಆ ವರ್ಗದವರೆಲ್ಲರಿಗೂ ಆತ್ಮಸ್ಥೈರ್ಯ ಮೂಡಿಸಿದ್ದಷ್ಟೇ ಅಲ್ಲ; ತೀವ್ರ ರಾಜಕೀಯ ಸಂಚಲನವನ್ನೂ ಉಂಟು ಮಾಡಿತ್ತು.

ಮೊದಲ ಬಾರಿಗೆ ದಿ.ಜಾಲಪ್ಪನವರ ಕಟಾಕ್ಷದಿಂದ ಕೋಲಾರದಲ್ಲಿ ಅಹಿಂದ ಮೂರ್ತ ರೂಪ ತಾಳಿತು. ಆನಂತರ ಕರ್ನಾಟಕದ ಮೂರ್ನಾಲ್ಕು ನಗರಗಳಲ್ಲಿ ಸಮಾವೇಶ ನಡೆಸಿ ಅದರ ಜನಪ್ರಿಯತೆಯ ಅಡಿಯಲ್ಲಿ ಕಾವು ಕಾಯಿಸಿಕೊಂಡ ಹಲ ಅಗ್ರಣಿಗಳು ಅದರ ಸುಫಲ ಅನುಭವಿಸುತ್ತಿದ್ದಾರೆ. ಹೇಳಬೇಕೆಂದರೆ ನೋಂದಾವಣೆ ಹೋಗಲಿ ವಾಸ್ತವಿಕವಾಗಿ ಅಹಿಂದ ಎಂಬುದೊಂದು ಸಂಘಟನೆ ಕಾರ್ಯರೂಪಕ್ಕೆ ಬಂದೇ ಇರಲಿಲ್ಲ; ರಾಜ್ಯಮಟ್ಟದಲ್ಲಿ ಅದು ಅಧಿಕೃತವಾಗಿ ಅಸ್ತಿತ್ವಕ್ಕೂ ಬಂದಿರಲಿಲ್ಲ; ಬರೇ ಹೆಸರಷ್ಟೇ. ರಾಜ್ಯ ಮಟ್ಟದ ಪದಾಧಿಕಾರಿಗಳನ್ನೂ ನೇಮಕ ಮಾಡಿ ಜವಾಬ್ದಾರಿಯನ್ನೂ ಹೊರಿಸಿರಲಿಲ್ಲ. ರಾಜ್ಯಮಟ್ಟದ ಸಂಸ್ಥೆಗೆ ಅಸ್ತಿತ್ವವಿಲ್ಲದ ಮೇಲೆ ಮತ್ತೆ ಜಿಲ್ಲಾ-ತಾಲೂಕು ಮಟ್ಟದಲ್ಲಿ ಅದರ ಇರುವಿಕೆಯ ಪ್ರಶ್ನೆಯೇ ಆವಿರ್ಭವಿಸುವುದಿಲ್ಲ. ಕೆಲವರು ಸ್ವಯಂಘೋಷಿತ ‘ಅಹಿಂದ ‘ ನಾಯಕರೆನಿಸಿಕೊಂಡು ಲೆಟರ್ ಹೆಡ್ಡಿನ ನಾಮ್-ಕೆ-ವಾಸ್ತೆ ನೇತಾರರಾಗಿದ್ದರು. ಇನ್ನು ಕೆಲವರು ಮುಂದುವರೆದು, ಅವರ ಹೆಸರಿನ ಹಿಂದೆ ‘ಅಹಿಂದ’ ಪದ ಅಂಟಿಸಿಕೊಂಡಿದ್ದರು. ಹೇಗೋ ಆ ಹೆಸರು ಚಾಲ್ತಿಗಂತೂ ಬಂತು. ಅದರ ಪ್ರಯೋಜನ ಪಡೆದು ರಾಜಕೀಯದಲ್ಲಿ ಏಳಿಗೆ ಸಾಧಿಸಿಕೊಂಡ ಅಗ್ರಣಿಯೊಬ್ಬರು ಅದರ ಸೊಲ್ಲನ್ನೇ ಅಡಗಿಸಿಬಿಟ್ಟರು. ಕೆಲವು ಸ್ವಯಂಘೋಷಿತ ‘ಅಹಿಂದ’ ನಾಯಕರು ಅದರ ಹೆಸರು ಹೇಳಿಕೊಂಡು ಗತ್ತು-ಗಮ್ಮತ್ತಿನಿಂದ ತಿರುಗಾಡಿದ್ದೇ ಬಂತು. ಇಂದಿಗೂ ಅದರ ಪ್ರಭಾವದಿಂದ ಹೊರಬರದವರು ‘ಅಹಿಂದ ಎಕ್ಸ್’, ‘ಅಹಿಂದ ವೈ’, ಮತ್ತು ‘ಅಹಿಂದ ಜಡ್’ ಎಂದು ಕರೆದುಕೊಂಡು ಕಾರ್ಯಕ್ರಮ ಮುಂತಾದವುಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಬಹುದು.

ಇದನ್ನು ಓದಿದ್ದೀರಾ?: ಕರ್ನಾಟಕದಲ್ಲಿ ‘ಯುವಜನ ಆಯೋಗ’ದ ಅಗತ್ಯ: ಭವಿಷ್ಯದ ದಿಕ್ಸೂಚಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಅಧಿಕಾರ ದಕ್ಕಿದ ನಂತರ, ಅದರ ಅವಶ್ಯಕತೆಯೇ ಇಲ್ಲವೆಂಬಂತೆ, ಅಟ್ಟ ಏರಿದ ಮೇಲೆ ಏಣಿಯನ್ನು ಒದ್ದಂತೆ ‘ಅಹಿಂದ’ವನ್ನು ಮೂಲೆಗುಂಪು ಮಾಡಿದರು ಆ ಅಗ್ರಣಿ. ಅದೇ ಅಗ್ರಣಿಯ ಪಕ್ಕಾ ಹಿಂಬಾಲಕನೊಬ್ಬ ರಾಜ್ಯಮಟ್ಟದ ಅಧ್ಯಕ್ಷ ಅಂತ ಹೇಳಿಕೊಂಡು ತಿರುಗಾಡುತ್ತಿದ್ದ. ಈರ್ವರ ನಡುವಿನ ವೈಮನಸ್ಸಿನಿಂದಾಗಿ ಆತ ಅಗ್ರಣಿಯ ಸಹವಾಸವನ್ನೇ ತೊರೆದು ಬೇರೊಂದು ಪಕ್ಷಕ್ಕೆ ನುಣುಚಿಕೊಂಡ ಗುಂಡುಗೋವಿ. ಅಧಿಕಾರದ ಅಮಲೇರಿದ ನಂತರ ‘ಅದನ್ನು’ ಸಂಪೂರ್ಣ ಮರತೆ ಬಿಟ್ಟರೆಲ್ಲರೂ. ಅಪ್ಪಿತಪ್ಪಿಯೂ ತಮ್ಮ ಭಾಷಣದಲ್ಲಿ ಎಲ್ಲಿಯೂ ಕೂಡ ಅಗ್ರಣಿಗೆ ಅದರ ಹೆಸರನ್ನೂ ಪ್ರಸ್ತಾಪ ಮಾಡದಂಥ ಮತಿವಂತ ಮರೆವು. ಅಹಿಂದ ಎಂಬ ಏಣಿಯು ಒದೆಸಿಕೊಂಡು ಕಾಲುಗಳನ್ನು ಕಳಚಿಕೊಂಡ ಸ್ಥಿತಿಯಲ್ಲಿ ಎಲ್ಲೋ ಬಿದ್ದಿತು.

ಅನೇಕ ಸಲ ಅವರಿಗೆ ಆ ವರ್ಗಕ್ಕೆ ಸೇರಿದ ಅನೇಕ ಗಣ್ಯರು ಅದನ್ನು ಪುನರುಜ್ಜೀವನಗೊಳಿಸಿ ಎಂದು ಬೇಡಿಕೆ ಇಟ್ಟಾಗಲು ಅವರ ಕಿವಿ ಕಡು ಕಿವುಡಾಯಿತು. ಇನ್ನು ಮುಂದಿನದೆಲ್ಲ ಚಿರಪರಿಚಿತ.

ಈಗ ಮುಖ್ಯ ವಿಷಯಕ್ಕೆ ಬರೋಣ- ಅಲ್ಪಸಂಖ್ಯಾತ-ಹಿಂದುಳಿದ-ದಲಿತ ಎಂಬ ವರ್ಗಗಳು ಸೇರಿ ‘ಅಹಿಂದ’ವಾಗಿರುವುದು ಗೊತ್ತಿರುವ ವಿಷಯ. ದಲಿತರಿಗೆ ಅವರಿಗಿರುವ ಸಾಂವಿಧಾನಿಕ ಹಕ್ಕಿನ ಸಲುವಾಗಿ ‘ಅಹಿಂದ’ದ ಗೊಡವೆ ಬೇಕಾಗಿಲ್ಲ. ಇಷ್ಟೇ ಅಲ್ಲದೆ, ಅಸ್ಪೃಶ್ಯರಲ್ಲಿ ಎಡಗೈಗೊಂದು, ಬಲಗೈಗೊಂದು ಸಂಘದಿಂದಾಗಿ ಛಿದ್ರವಾಗಿದ್ದಾರೆ. ಮತ್ತು ಸ್ಪೃಶ್ಯ ‘ಕೊಲಂಬೋ’ಗಳು, ಕೊರಚ-ಕೊರಮ, ಲಂಬಾಣಿ ಮತ್ತು ಬೋವಿ ಎಂಬ ಪ್ರತ್ಯೇಕ ಹೆಸರುಗಳಲ್ಲಿ ಸಂಘ ರಚಿಸಿಕೊಂಡು ತಮ್ಮ ಹಿತಾಸಕ್ತಿಗಷ್ಟೇ ಲಕ್ಷ್ಯವಿತ್ತಿದ್ದಾರೆ. ಇನ್ನು ಅಲ್ಪಸಂಖ್ಯಾತರು ಬಹಿರಂಗವಾಗಿ ಗುರುತಿಸಿಕೊಳ್ಳಲು ಅವರುಗಳದೇ ಕೆಲವು ಇತಿ ಮಿತಿಗಳಿವೆ. ಮತ್ತುಳಿದವರು ಹಿಂದುಳಿದ ವರ್ಗಗಳು. ಅವರಲ್ಲಿ ಹಿಂದುಳಿದ ವರ್ಗಗಳಲ್ಲಿ ಮುಂಚೂಣಿಯಲ್ಲಿರುವ ಒಂದು ಜಾತಿಗೆ ಉಳಿದ ಚಿಕ್ಕ ಪುಟ್ಟ ಜಾತಿಗಳು ರಾಜಕೀಯ ದಾಳವಾಗಿವೆ, ಅಲ್ಲದೇ ಅಲಕ್ಷ್ಯಕ್ಕೂ ಒಳಪಟ್ಟಿವೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅಥವಾ ಊಟದಲ್ಲಿ ಕರಿಬೇವು ಇದ್ದಂತೆ. ಅವರು ಮತ ನೀಡಲಷ್ಟೇ ಬೇಕು. ಅಧಿಕಾರಕ್ಕೇರಿದ ನಂತರ ಅವರನ್ನು ಕಾಲು ಕಸದಂತೆ ಕಾಣಲಾಗುವುದು. ಮಿಗಿಲಾಗಿ ಅಸಂಘಟಿತರಾಗಿರುವುದೇ ಆ ಜಾತಿಗಳ ರಾಜಕೀಯ ದೌರ್ಬಲ್ಯ. ಈ ಹಿಂದುಳಿದ ಜಾತಿಗಳಲ್ಲಿ ಮುಂಚೂಣಿಯಲ್ಲಿರುವ ಅದೊಂದೇ ಜಾತಿ ಸಂಘಟನೆ ಆಗಿರುವುದು. ಉಳಿದೆಲ್ಲಾ ದಮನಿತ ಜಾತಿಗಳು, ಸಂಘಟನೆ-ಧುರೀಣತ್ವ-ಧನ ಬಲ ಮುಂತಾದ ಘನ ಘೋರ ಕೊರತೆಗಳು ಅವರನ್ನು ಹೆಕ್ಕಿ ತಿನ್ನುತ್ತಿವೆ. ಸದ್ಯ ಅವರು ಗಾಢ ನಿದ್ದೆಗೆ ಜೋತು ಬಿದ್ದಿದ್ದಾರೆ. ಅವರಿಗೊಬ್ಬ ಅವಧೂತನ ಅಗತ್ಯವಿದೆ. ಈ ದಮನಿತ ಜಾತಿಗಳಲ್ಲಿ ಮುಖಂಡತ್ವ ವಹಿಸಿ ಅವರನ್ನೆಲ್ಲ ಸಂಘಟಿಸುವ ಚತುರತೆ ಇರುವವರು ಅಪರೂಪ. ಅಥವಾ ಇಲ್ಲವೆಂದರೂ ಸರಿಯೇ. ಅಕಸ್ಮಾತ್ ಇದ್ದರೂ ಕಡು ಸ್ವಾರ್ಥಿಗಳವರು. ಇನ್ನು ಈ ಅಲಕ್ಷಿತ ಜಾತಿಗಳ ಸಂಘಟನೆ ಹೇಗೆ ಆಗಬೇಕು? ಸದ್ಯಕ್ಕೆ ಅದು ನೆಲದಿಂದ ಮೇಲೆದ್ದಿಲ್ಲ.

ಬಾಬಾ ಸಾಹೇಬರು ಜಾತಿಗಳನ್ನು “ಮೆಟ್ಟಿಲಿಲ್ಲದ ಮಹಡಿ” ಮನೆಗೆ ಹೋಲಿಸಿದ್ದಾರೆ. ಮೇಲಿನ ಮಹಡಿಯಲ್ಲಿ ಬ್ರಾಹ್ಮಣರಿದ್ದರೆ, ಎರಡನೇ ಮಹಡಿಯಲ್ಲಿ ಕ್ಷತ್ರಿಯರು, ಮೂರನೇ ಮಹಡಿಯಲ್ಲಿ ವೈಶ್ಯರು, ಕೆಳಗಿನ ಮಹಡಿಯಲ್ಲಿ ಶೂದ್ರರು. ಪಂಚಮರಿಗೆ ಈ ಮಹಡಿಯಲ್ಲಿ ಸ್ಥಳವೇ ಇಲ್ಲ! ಯಾವ ಮಹಡಿಯಲ್ಲಿ ಜನನ ಪಡೆವರೋ ಅದೇ ಮಹಡಿಯಲ್ಲಿ ಸಾಯಬೇಕು. ಇದು ಧಾರ್ಮಿಕ ನಿಬಂಧನೆ. ಉಲ್ಲಂಘಿಸುವ ಹಾಗಿಲ್ಲ. ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದರೂ, ಸಮಗ್ರವಾಗಿ ಅದು ಅನುಷ್ಠಾನಕ್ಕೆ ಬರಲು ಕೊಳಕು ಜಾತಿಯ ಹುಳಗಳು ಆಗಗೊಡುತ್ತಿಲ್ಲ. ಇದು ನಮ್ಮ ಭಾರತೀಯ ಕ್ರೂರ ಜಾತಿ ವ್ಯವಸ್ಥೆ. ಈ ‘ಅಹಿಂದ’ ವರ್ಗದವರೆಲ್ಲ, ನೆಲದ ಮೇಲೆ ಯಾವ ಚಿಂತೆಯೂ ಇಲ್ಲದೆ ಮಲಗಿದ್ದಾರೆ. ಮೇಲಿನ ಮೂರೂ ವರ್ಣದವರಿಂದ ತುಳಿತಕ್ಕೊಳಗಾಗಿದ್ದಾರೆ. ಜೊತೆಗೆ ಶೂದ್ರರಲ್ಲಿಯೇ ಎರಡು ಬಲಿಷ್ಠ ಜಾತಿಗಳ ಬಲವಾದ ರಾಜಕೀಯ ಹಿಡಿತ. ಈ ಎಲ್ಲಾ ಅನಿಷ್ಟಗಳಿಂದ ಪಾರಾಗಲೋ ಏನೋ ಎಂಬಂತೆ ‘ಅಹಿಂದ’ ಸಂಘಟನೆಗೆ ಒತ್ತುಕೊಟ್ಟು ಅದು ಸೃಷ್ಟಿಯಾಯಿತು ಎಂಬುದು ನಿಜ. ಆದರೆ ಪೋಷಕರಿಲ್ಲದೆ ಅದು ಜೀವಚ್ಛವವಾಗಿದೆ.

ಅದರ ಪುನರುಜ್ಜೀವನಕ್ಕೆ ಪ್ರಯತ್ನಿಸಬೇಕಾಗಿದ್ದ ನಮ್ಮ ನೇತಾರರು, ಪ್ರಬಲ ಎರಡು ಶೂದ್ರ ಸಮುದಾಯಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರಿಗೆ ಈ ಆಟವೆಲ್ಲ ಗೊತ್ತಿಲ್ಲ ಅಂತ ತಿಳಿಯುವ ಹಾಗಿಲ್ಲ. ಗೊತ್ತಿದ್ದು ಚತುರ ಮೌನ ವಹಿಸಿದ್ದಾರೆ.

ಸದ್ಯ ಸರ್ಕಾರ ಎಚ್ಚೆತ್ತುಕೊಂಡು ಈ ದಮನಿತ ಹಿಂದುಳಿದ ಜಾತಿಗಳ ಕೈಹಿಡಿಯಬೇಕೆನ್ನುವ ಸಂಕಲ್ಪ ಮಾಡಿದರೆ- ಒಂದು- 2015ರ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು. ಯಾರು ಒಪ್ಪಲಿ, ಬಿಡಲಿ, ಆ ಕೆಲಸ ಮೊದಲಾಗಬೇಕು. ಹಿಂದುಳಿದ ವರ್ಗಗಳ ಕಾಯ್ದೆ ಪ್ರಕಾರ, ಹತ್ತು ವರ್ಷಗಳು ಆಗಿರುವುದರಿಂದ, ಎರಡನೇ ಸಮೀಕ್ಷೆ ನಡೆಸಲೇಬೇಕು. ಅದು ಮರು ಅಥವಾ ಪುನರ್ ಸಮೀಕ್ಷೆಯಲ್ಲ. ಹತ್ತು ವರ್ಷದೊಳಗೆ ಆಕ್ಷೇಪ ಬಂದಿದ್ದಲ್ಲಿ, ಮೊದಲನೇ ಸಮೀಕ್ಷೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡು ಮರು ಸಮೀಕ್ಷೆ ಎಂಬ ಹೆಸರಿನಲ್ಲಿ ದತ್ತಾಂಶಗಳ ಸಂಗ್ರಹಕ್ಕೆ ಅವಕಾಶವಿತ್ತು. ಈಗ ಅದಿಲ್ಲ. ಆದರೆ ಸರ್ಕಾರಕ್ಕೆ ಈ ತಿಳಿವಳಿಕೆ ನೀಡುವವರು ಯಾರು? ಇರುವವರೆಲ್ಲ “ಎಸ್” ಮಾಸ್ಟರ್‍‌ಗಳು.

ಇದನ್ನು ಓದಿದ್ದೀರಾ?: ಭಾರತದ ಅರ್ಥ ವ್ಯವಸ್ಥೆಯ 7.4% ಬೆಳವಣಿಗೆ ಅಂದಾಜು: ವಾಸ್ತವಕ್ಕೆ ಎಷ್ಟು ಹತ್ತಿರ?

ಅಧಿಕಾರ ಕಳೆದುಕೊಳ್ಳುವ ಸಂಭವ ಇದ್ದಲ್ಲಿ ಅಹಿಂದ ಎಂಬ ಬೆದರು ಬೊಂಬೆಯನ್ನು ಹೊರಬಿಡುತ್ತಾರೆ. ಆ ಬೊಂಬೆಗೆ ರಾಜಕೀಯ ಬಲಾಢ್ಯರು ಎಷ್ಟು ಗಾಬರಿಗೊಳ್ಳುವರು ಎಂಬುದನ್ನು ಯಾರು ಸಮೀಕ್ಷೆ ಮಾಡಿದ್ದಾರೆ? ಯಾರೂ ಇಲ್ಲ!

ಹೀಗಾಗಿ ‘ಅಹಿಂದ’ ಎಂಬುದು ಒಂದು ಪೇಪರ್ ಟೈಗರ್ ಆಗಿ ಉಳಿದು, ಕೆಲವರಿಗೆ ಸಂದರ್ಭ ಸೃಷ್ಟಿಯಾದಾಗ ರಕ್ಷಣೆ ಒದಗಿಸಲೋ ಎಂಬಂತೆ ಪಂಜರದೊಳಗಿನ ‘ಗುಮ್ಮ’ನಾಗಿ ಪರಿವರ್ತಿತವಾಗಿದೆ. ಆದರೂ ನೈಜ ಅರ್ಥದಲ್ಲಿ ಅಂಥಾ ಸಂಘಟನೆಯೊಂದು ಅಸ್ತಿತ್ವಕ್ಕೆ ಬರದೇ ಹೋದದ್ದು ಮಾತ್ರ ಆ ಎಲ್ಲಾ ವರ್ಗಗಳ ದೌರ್ಭಾಗ್ಯ ಮತ್ತು ದುರಂತ, ಅಲ್ಲವೇ?

KN Lingappa
ಕೆ.ಎನ್. ಲಿಂಗಪ್ಪ
+ posts

ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...