ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಯಾವುದೇ ಬಿರುಕು ಇಲ್ಲ. ಸರ್ಕಾರ ಮತ್ತು ಮೈತ್ರಿಕೂಟ ಬಂಡೆಯಂತೆ ಗಟ್ಟಿಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
ಆ ರಾಜ್ಯದಲ್ಲಿ ಆಡಳಿತಾರೂಢ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ವು ಇಂಡಿಯಾ ಬಣದಿಂದ ಹೊರನಡೆಯಲಿದೆ ಎಂಬುದಾಗಿ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಈ ಚರ್ಚೆ/ವದಂತಿಗಳನ್ನು ತಳ್ಳಿಹಾಕಿರುವ ವೇಣುಗೋಪಾಲ್, ಮೈತ್ರಿಯಲ್ಲಿ ಯಾವುದೇ ಬಿರುಕು ಇಲ್ಲ ಎಂದಿದ್ದಾರೆ.
“ಇಂಡಿಯಾ ಮೈತ್ರಿಕೂಟವು ಬಂಡೆಯಂತೆ ಗಟ್ಟಿಯಾಗಿದೆ, ಒಗ್ಗಟ್ಟಾಗಿದೆ. ಜನ-ಕೇಂದ್ರಿತ ನೀತಿಗಳಿಗೆ ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
“ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಯಾವುದೇ ಭಿನ್ನಮತವಿಲ್ಲ. ಯಾವುದೇ ಸಂದೇಹ ಬೇಡ – ಜಾರ್ಖಂಡ್‌ನಲ್ಲಿ ನಮ್ಮ ಮೈತ್ರಿಕೂಟವು ಬಂಡೆಯಂತೆ ಗಟ್ಟಿಯಾಗಿದೆ, ಒಗ್ಗಟ್ಟಾಗಿದೆ ಮತ್ತು ಜಾರ್ಖಂಡ್‌ನ ಪ್ರತಿಯೊಬ್ಬ ನಾಗರಿಕನ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಜನ-ಕೇಂದ್ರಿತ ಕಲ್ಯಾಣ ನೀತಿಗಳನ್ನು ಮುಂದುವರಿಸಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದಿದ್ದಾರೆ.
“ಬಲಪಂಥೀಯ ಟ್ರೋಲ್ ಜಾಲಗಳು ವದಂತಿ ಹರಡುತ್ತಿವೆ. ದುರುದ್ದೇಶಪೂರಿತ ನಿರೂಪಣೆಯನ್ನು ಪ್ರತಿಪಾದಿಸುತ್ತಿವೆ. ಇದು ಅವರಲ್ಲಿ ಹೆಚ್ಚುತ್ತಿರುವ ಹತಾಶೆ ಮತ್ತು ರಾಜಕೀಯ ಅಭದ್ರತೆಯನ್ನು ಸಂಕೇತಿಸುತ್ತದೆ. ಇಂತಹ ಕೀಳುಮಟ್ಟದ ಟ್ರೋಲ್‌ಗಳ ಪ್ರಭಾವಕ್ಕೆ ನಾವು ತುತ್ತಾಗುವುದಿಲ್ಲ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಈ ವದಂತಿಗಳು ದುರ್ಬಲಗೊಳಿಸುವುದಿಲ್ಲ. ನಮ್ಮ ಏಕತೆ ಅಖಂಡವಾಗಿದೆ. ನಮ್ಮ ಉದ್ದೇಶ/ಗುರಿ ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.
ಕಳೆದ ವರ್ಷ 81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಜೆಎಂಎಂ ನೇತೃತ್ವದ ಇಂಡಿಯಾ ಕೂಟವು 56 ಸ್ಥಾನಗಳನ್ನು ಗೆದ್ದು, ಅಧಿಕಾರ ಉಳಿಸಿಕೊಂಡಿತು. 56 ಸ್ಥಾನಗಳಲ್ಲಿ ಜೆಎಂಎಂ 34 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16 ಸ್ಥಾನ, ಆರ್‌ಜೆಡಿ ನಾಲ್ಕು ಮತ್ತು ಸಿಪಿಐ-ಎಂಎಲ್ ಎರಡು ಸ್ಥಾನಗಳನ್ನು ಗೆದ್ದಿತು.
ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 24 ಸ್ಥಾನಗಳನ್ನು ಗೆದ್ದಿತು. ಬಿಜೆಪಿ 21 ಸ್ಥಾನಗಳನ್ನು ಗಳಿಸಿದರೆ, ಅದರ ಮಿತ್ರಪಕ್ಷಗಳಾದ ಎಜೆಎಸ್‌ಯು ಪಕ್ಷ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಜೆಡಿ-ಯು ತಲಾ ಒಂದು ಸ್ಥಾನವನ್ನು ಗೆದ್ದವು.




