ರಾಷ್ಟ್ರದ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳು ತಮಗೆ ಸಾಂವಿಧಾನಿಕ ಮಾನ್ಯತೆ ದಕ್ಕಿಸಿಕೊಳ್ಳಲು, ಕೇಂದ್ರ ಸರ್ಕಾರ 2027ರಲ್ಲಿ ನಡೆಸಲು ಹೊರಟಿರುವ ಜಾತಿಗಣತಿಯಲ್ಲಿ ತಮಗೆ ಪ್ರತ್ಯೇಕ ಅಸ್ಮಿತೆ ನೀಡಿ, ತಮ್ಮ ಸಮುದಾಯಗಳನ್ನು ಪ್ರತ್ಯೇಕವಾಗಿಯೇ ಜಾತಿಗಣತಿಯಲ್ಲಿ ನಮೂದಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಎಸ್.ಸಿ, ಎಸ್.ಟಿ ಅಲೆಮಾರಿಗಳಿಗೆ ಒಂದು ಪರ್ಸಂಟ್ ಮೀಸಲಾತಿಗೂ ಸಂಚಕಾರ ತಂದಿದ್ದರೆ, ರಾಷ್ಟ್ರಮಟ್ಟದಲ್ಲಿ ಅಲೆಮಾರಿಗಳಿಗೆ ಒಂದು ಸಣ್ಣ ಬೆಳಕಿನ ಕಿರಣ ಕಾಣುವಂತಿದೆ. ರಾಷ್ಟ್ರದ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳು ತಮಗೆ ಸಾಂವಿಧಾನಿಕ ಮಾನ್ಯತೆ ದಕ್ಕಿಸಿಕೊಳ್ಳಲು, ಕೇಂದ್ರ ಸರ್ಕಾರ 2027ರಲ್ಲಿ ನಡೆಸಲು ಹೊರಟಿರುವ ಜಾತಿಗಣತಿಯಲ್ಲಿ ತಮಗೆ ಪ್ರತ್ಯೇಕ ಅಸ್ಮಿತೆ ನೀಡಿ, ತಮ್ಮ ಸಮುದಾಯಗಳನ್ನು ಪ್ರತ್ಯೇಕವಾಗಿಯೇ ಜಾತಿಗಣತಿಯಲ್ಲಿ ನಮೂದಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೇ ರೀತಿಯ ಮನವಿಯೊಂದನ್ನು “ಅಲೆಮಾರಿ ಬುಡಕಟ್ಟು ಮಹಾಸಭ” ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದೆ.
2027ರ ಜಾತಿ ಜನಗಣತಿಯಲ್ಲಿ ತಮಗೆ ‘ಪ್ರತ್ಯೇಕ ಕಾಲಮ್’ ನೀಡಬೇಕೆಂದು ವಿಮುಕ್ತ ಅಪರಾಧಿ ಬುಡಕಟ್ಟುಗಳು(DNT), ಅಲೆಮಾರಿ ಬುಡಕಟ್ಟುಗಳು(NT), ಅರೆ-ಅಲೆಮಾರಿ ಬುಡಕಟ್ಟುಗಳು(SNT) ಕೋರುತ್ತಿವೆ. ಈ ಸಮುದಾಯಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಗುಂಪುಗಳಲ್ಲಿ ವಿಂಗಡಿಸುವಾಗ ಹಿಂದೆ ತಮ್ಮನ್ನು ರಾಜಕೀಯವಾಗಿ ತಪ್ಪಾಗಿ ಪರಿಗಣಿಸಿ, ಅಸಮಾನವಾಗಿ ವರ್ಗೀಕರಿಸಲಾಗಿದೆ, ಈ ಗುಂಪಿನೊಳಗಿನ ಹಿಂದುಳಿದಿರುವಿಕೆಯನ್ನು ಎತ್ತಿ ತೋರಿಸಲು ಅವರು ಕಡ್ಡಾಯವಾಗಿ ಉಪ-ವರ್ಗೀಕರಣವಾಗಿ ವಿಂಗಡಿಸಬೇಕೆಂಬುದು ಈ ಸಮುದಾಯಗಳ ಒತ್ತಾಯವಾಗಿದೆ.
ಇದನ್ನು ಓದಿದ್ದೀರಾ?: ಜುದಾಯಿಸಂ, ಇಸ್ಲಾಂ, ಹಿಂದೂಯಿಸಂ, ಮೋದಿ, ನೆತನ್ಯಾಹು ಮತ್ತು ಟ್ರಂಪ್: ಒಂದಿಷ್ಟು ಟಿಪ್ಪಣಿಗಳು
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯವು ಈಗ ಭಾರತದ ರಿಜಿಸ್ಟ್ರಾರ್ ಜನರಲ್(ಆರ್.ಜಿ.ಐ) ಕಚೇರಿಗೆ ಪತ್ರ ಬರೆದು ಸದರಿ ವಿಮುಕ್ತ ಅಪರಾಧಿ ಅಲೆಮಾರಿ ಬುಡಕಟ್ಟುಗಳು ಮತ್ತು ಅರೆ-ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಮುಂಬರುವ ಜನಗಣತಿಯಲ್ಲಿ ಪ್ರತ್ಯೇಕವಾಗಿ ಸೇರಿಸಬೇಕೆಂದು ಈಗಾಗಲೇ ಶಿಫಾರಸು ಮಾಡಿದೆ. ದೇಶಾದ್ಯಂತದ ಅಧಿಸೂಚಿತ ಬುಡಕಟ್ಟು ಜನಾಂಗಗಳು, ಅಲೆಮಾರಿ ಬುಡಕಟ್ಟು ಜನಾಂಗಗಳು ಮತ್ತು ಅರೆ-ಅಲೆಮಾರಿ ಬುಡಕಟ್ಟು ಜನಾಂಗಗಳು 2027ರ ಜನಗಣತಿಯಲ್ಲಿ ತಮಗಾಗಿ ‘ಪ್ರತ್ಯೇಕ ಕಾಲಮ್’ಗಾಗಿ ಒತ್ತಾಯಿಸಲು ಒಗ್ಗೂಡುತ್ತಿರುವುದು ಗಮನಾರ್ಹ. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಜನಾಂಗಗಳು (SCs/STs) ಮತ್ತು ಇತರ ಹಿಂದುಳಿದ ವರ್ಗಗಳ (OBCs) ಅಸ್ತಿತ್ವದಲ್ಲಿರುವ ವರ್ಗೀಕರಣಗಳಿಗೆ ಸಮಾನವಾಗಿ, ಅಧಿಸೂಚಿತ ಬುಡಕಟ್ಟು ಜನಾಂಗದವರನ್ನು ಒಂದೇ ವೇಳಾಪಟ್ಟಿಯಲ್ಲಿ ಸಾಂವಿಧಾನಿಕವಾಗಿ ಗುರುತಿಸಬೇಕೆಂಬುದು ಅವರ ಬಹುದಿನದ ಬೇಡಿಕೆಯಾಗಿದೆ.

1931ರ ನಂತರ ಮೊದಲ ಬಾರಿಗೆ ಫೆಬ್ರವರಿ 2027ರಲ್ಲಿ ಭಾರತ ಸರ್ಕಾರವು ಜಾತಿ ಎಣಿಕೆಯನ್ನು ನಡೆಸಲು ಹೊರಟಿದೆ. 1931ರ ಜನಗಣತಿಯ ಐದು ವರ್ಷಗಳ ನಂತರ, ಪರಿಶಿಷ್ಟ ಜಾತಿಗಳ ಪಟ್ಟಿಯ ಮೂಲಗಳು ಭಾರತ ಸರ್ಕಾರದ (ಪರಿಶಿಷ್ಟ ಜಾತಿಗಳು) 1936ರ ಆದೇಶ ರೂಪದಲ್ಲಿ ಜಾರಿಗೆ ಬಂದವು. ಅರ್ಧ ಶತಮಾನದ ಹಿಂದೆ, 1871ರಲ್ಲಿ, ವಸಾಹತುಶಾಹಿ ಕಾನೂನು ಇಡೀ ಸಮುದಾಯಗಳನ್ನು, ವಿಶೇಷವಾಗಿ ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳನ್ನು “ಅಪರಾಧಿಗಳು” ಎಂದು ವರ್ಗೀಕರಿಸಿತ್ತು. 1952ರಲ್ಲಿ ಈ ಕಾನೂನನ್ನು ರದ್ದುಗೊಳಿಸಿದ ನಂತರ, ಈ ಗುಂಪುಗಳನ್ನು “ವಿಮುಕ್ತ”(Denotified) ಬುಡಕಟ್ಟುಗಳು ಎಂದು ತಿದ್ದುಪಡಿ ಮಾಡಲಾಯಿತು.
ಅಲೆಮಾರಿ ಸಮುದಾಯಗಳ ಬೇಡಿಕೆಯಂತೆಯೇ ಸಾಮಾಜಿಕ ನ್ಯಾಯ ಸಚಿವಾಲಯವು ಈಗ ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಈ ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಮುಂಬರುವ ಜನಗಣತಿಯಲ್ಲಿ ಸೇರಿಸಬೇಕೆಂದು ಶಿಫಾರಸು ಮಾಡಿದ್ದಲ್ಲದೆ ಮುಂದಿನ ವರ್ಷದ ಜಾತಿ ಎಣಿಕೆ ಕಾರ್ಯದಲ್ಲಿ ಅಲೆಮಾರಿಗಳನ್ನ ಸೇರಿಸಲು ಆರ್‌ಜಿಐ ಕಚೇರಿ ಕೂಡ ಒಪ್ಪಿಕೊಂಡಿದೆ ಎಂದು ಸಚಿವಾಲಯದ ಅಧಿಕಾರಿಗಳು ಜನವರಿ 30ರಂದು ನಡೆದ ವರ್ಚುವಲ್ ಸಭೆಯಲ್ಲಿ ಉತ್ತರ ಭಾರತದ ಸಮುದಾಯದ ಅಲೆಮಾರಿ ನಾಯಕರಿಗೆ ಭರವಸೆ ನೀಡಿದ್ದಾರೆ. “ಜನಗಣತಿಗಾಗಿ ಜಾತಿ ಕುರಿತ ಪ್ರಶ್ನೆಗಳನ್ನು ಎರಡನೇ ಹಂತಕ್ಕೆ ಮೊದಲೇ ತಿಳಿಸಲಾಗುವುದು” ಎಂದು ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ, “ಆದರೆ ಅವರು ಇದನ್ನು ಯಾವ ರೀತಿಯಲ್ಲಿ ಮಾಡುತ್ತಾರೆಂಬ ನಮಗೆ ತಿಳಿದಿಲ್ಲ” ಎಂದು ಜನವರಿ 30ರ ಸಭೆಯಲ್ಲಿದ್ದ ಉತ್ತರ ಪ್ರದೇಶದ ಅಲೆಮಾರಿ ಸಮುದಾಯಗಳ ಸಂಘಟಕ ಬಿ.ಕೆ. ಲೋಧಿ ಮಾದ್ಯಮಗಳಿಗೆ ತಿಳಿಸಿದ್ದಾರೆ.
“ಜನಗಣತಿ ನಮೂನೆಗಳಲ್ಲಿ ನಮ್ಮನ್ನು ಪ್ರತ್ಯೇಕ ಅಂಕಣದಲ್ಲಿ, ಪ್ರತ್ಯೇಕ ಸಂಹಿತೆಯಲ್ಲಿ ಎಣಿಸದಿದ್ದರೆ, ನಮ್ಮ ಸಮುದಾಯಗಳು ಮತ್ತೊಮ್ಮೆ ದಾರಿ ತಪ್ಪುತ್ತವೆ ಎನ್ನುವುದು ಖಚಿತ” ಎಂದು ಕರ್ನಾಲ್ ಮೂಲದ “ಅಖಿಲ ಭಾರತ ಅಧಿಸೂಚಿತ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಂಡಳಿ”ಯ ಸಂಘಟಕ ಬಾಲಕ್ ರಾಮ್ ಸಾನ್ಸಿ ಹೇಳಿದ್ದಾರೆ. ಜಾತಿ ಗಣತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ, ಆದರೆ ಈ ವರ್ಷದ ಜುಲೈ ವೇಳೆಗೆ ಪೂರ್ವಸಿದ್ಧತಾ ಕಾರ್ಯವನ್ನು ಯೋಜಿಸುತ್ತಿದೆ ಎಂದು ಈಗಾಗಲೇ ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಈ ಅಧಿಸೂಚನೆಯಿಂದ ಹೊರಗುಳಿದ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ನಾಯಕರು ತಮ್ಮದೇ ಆದ ವೇಳಾಪಟ್ಟಿಯನ್ನು ಹೊಂದಲು ಒಂದು ಕಡೆ ಹೋರಾಡುತ್ತಿದ್ದರೂ, ಮತ್ತೆ ಕೆಲವು ಅಲೆಮಾರಿ ಸಮುದಾಯಗಳ ನಾಯಕರು ಈ ಗುಂಪಿನೊಳಗೆ “ಶ್ರೇಣೀಕೃತ ಹಿಂದುಳಿದಿರುವಿಕೆ”ಯನ್ನು ಗುರುತಿಸುವ ಮಹತ್ವವನ್ನು ಒತ್ತಿ ಹೇಳಲು ಪ್ರಾರಂಭಿಸಿದ್ದಾರೆ. ಉಪ-ವರ್ಗೀಕರಣದ ಬೇಡಿಕೆಯು ಪ್ರತ್ಯೇಕ ವೇಳಾಪಟ್ಟಿಗಾಗಿ ಅದರೊಂದಿಗೆ ಕೈಜೋಡಿಸಬೇಕೆಂಬುದು ಅವರ ಆಶಯವಾಗಿದೆ. ಈ ಅಲೆಮಾರಿ ನಾಯಕರು, ಭಾರತದ ಸುಪ್ರೀಂ ಕೋರ್ಟ್ ಆಗಸ್ಟ್ 2024ರಂದು ನೀಡಿದ ತೀರ್ಪಿನ ಆಧಾರದ ಮೇಲೆ ತಮ್ಮ ವಾದಗಳನ್ನು ಎತ್ತಿ ಹಿಡಿಯುತ್ತಿದ್ದಾರೆ, ಅಂದಿನ ತೀರ್ಪುಗಳಲ್ಲಿ ಭಾರತದ ಸುಪ್ರೀಂ ಕೋರ್ಟ್ ಎಸ್‌ಸಿ ಮತ್ತು ಎಸ್‌ಟಿಗಳ ಉಪ-ವರ್ಗೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು ಎಂಬುದು ಗಮನಾರ್ಹ.
ಕ್ರಿಮಿನಲ್ ಟ್ರೈಬ್ಸ್ ಕಾಯ್ದೆಯನ್ನು ಮೊದಲು 1871ರಲ್ಲಿ ಜಾರಿಗೆ ತರಲಾಯಿತು ಮತ್ತು ನಂತರ 1924ರಲ್ಲಿ ತಿದ್ದುಪಡಿ ಮಾಡಲಾಯಿತು, ಆಗಸ್ಟ್ 31, 1952ರಂದು ಅಧಿಕೃತವಾಗಿ ರದ್ದುಗೊಳಿಸಲಾಯಿತು. 1871ರ ಕಾಯ್ದೆಯು “ಕೆಲವು ಕ್ರಿಮಿನಲ್ ಬುಡಕಟ್ಟುಗಳು ಮತ್ತು ನಪುಂಸಕರ ನೋಂದಣಿ, ಕಣ್ಗಾವಲು ಮತ್ತು ನಿಯಂತ್ರಣ”ಕ್ಕಾಗಿ ಎಂದು ವಸಾಹತು ಸರ್ಕಾರ ಹೇಳಿತ್ತು, “ಕ್ರಿಮಿನಲ್ ಬುಡಕಟ್ಟುಗಳನ್ನು” “ಬುಡಕಟ್ಟು ಗ್ಯಾಂಗ್ ಗಳು ಅಥವಾ ಅಪರಾಧಿ ವ್ಯಕ್ತಿಗಳ ವರ್ಗ” ಎಂದು ಆ ಕಾಯ್ದೆ ವಿವರಿಸುತ್ತದೆ, ಈ ಕ್ರಿಮಿನಲ್ ಟ್ರೈಬ್ಸ್ ಜಾಮೀನುರಹಿತ ಅಪರಾಧಗಳನ್ನು ಮಾಡುತ್ತಾರೆಂಬ “ಕಳಂಕ”ವನ್ನು ಹೊಂದಿದ್ದರು.

“ಈ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು ಬ್ರಿಟಿಷರನ್ನು ನೇರಾನೇರ ಎದುರಿಸಿದ ಮತ್ತು ತಮ್ಮ ಹೋರಾಟವನ್ನು ದಕ್ಕಿಸಿಕೊಂಡ ಮೊದಲ ಸಮುದಾಯಗಳ ಸಾಲಿನಲ್ಲಿ ಸೇರಿವೆ. ಅವರಲ್ಲಿ ಹಲವರು ಹಿಂದಿನಿಂದಲೂ ಅಲೆಮಾರಿ ಸಮುದಾಯಗಳಾಗಿದ್ದರು ಅಥವಾ ಇನ್ನೂ ಕೆಲವರು ವಸಾಹತುಶಾಹಿ ಆಡಳಿತಗಾರರನ್ನು ವಿರೋಧಿಸುತ್ತಲೇ ಅನಿವಾರ್ಯವಾಗಿ ಅಲೆಮಾರಿಗಳಾಗಬೇಕಾಯಿತು. ಅದಕ್ಕಾಗಿಯೇ ವಸಾಹತುಶಾಹಿ ಸರ್ಕಾರ ನಮ್ಮನ್ನು ‘ಅಪರಾಧ ಬುಡಕಟ್ಟು’ ಎಂದು ವರ್ಗೀಕರಿಸಿತು,” ಎಂಬುದು ಅಲೆಮಾರಿಗಳ ಪ್ರಾತಿನಿದಿಕ ನಾಯಕರ ವಾದವಾಗಿದೆ.
ಇದನ್ನು ಓದಿದ್ದೀರಾ?: ಕೊನೆಯುಸಿರಿನವರೆಗೂ ಸಮಸಮಾಜದ ಹೋರಾಟಕ್ಕೆ ಬದ್ಧರಾಗಿದ್ದ ಆರ್ ನಲ್ಲಕಣ್ಣು
ಅಲೆಮಾರಿ ಸಮುದಾಯಗಳ ಕುರಿತಂತೆ ಈಗಾಗಲೇ ಬಾಲಕೃಷ್ಣ ರೇಣುಕೆ ವರದಿ, ಬಿಕ್ಕು ಇದಾತೆ ವರದಿಗಳು ಸರ್ಕಾರದ ಮುಂದೆ ಇವೆ. ಹಾಗೇನಾದರೂ ಈಗಿನ ಜಾತಿ ಸಮೀಕ್ಷೆಯಲ್ಲಿ ಸದರಿ ಅಲೆಮಾರಿ ಸಮುದಾಯಗಳ ಪ್ರತ್ಯೇಕ ಗಣತಿ ಮಾಡಿ ಅದರಲ್ಲಿ ವೈಜ್ಞಾನಿಕ ಅಂಕಿಅಂಶಗಳನ್ನು ಕಲೆಹಾಕಿದರೆ ಮೇಲಿನ ವರದಿಗಳ ಆಧಾರದಲ್ಲಿ ಅಲೆಮಾರಿಗಳಿಗೆ ರಾಜಕೀಯ ಪ್ರಾತಿನಿದ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಮುಂತಾದ ಸವಲತ್ತುಗಳನ್ನು ದೊರಕಿಸಲು ಖಂಡಿತ ಸಹಕಾರಿಯಾಗುತ್ತದೆ. ಸದ್ಯ ಕರ್ನಾಟಕದಲ್ಲಿ ಮಾಡುತ್ತಿರುವ ಜಾತಿಸಮೀಕ್ಷೆಯಲ್ಲೂ ಕೇಂದ್ರದಲ್ಲಿ ನೀಡಲು ಹೊರಟಂತೆ ಅಲೆಮಾರಿಗಳಿಗೆ ಪ್ರತ್ಯೇಕ ಅಸ್ಮಿತೆ ನೀಡಿದರೆ ಕನಿಷ್ಠ ಮುಂದಿನ ದಿನಗಳಲ್ಲಾದರೂ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಬಹುದೆಂಬುದು ಅಲೆಮಾರಿಗಳ ಆಶಯವಾಗಿದೆ.


ಡಾ. ಸಿ.ಎಸ್. ದ್ವಾರಕಾನಾಥ್
ಹಿರಿಯ ವಕೀಲರು, ಪತ್ರಕರ್ತರು, ಲೇಖಕರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು




