ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಸತ್ತಂತಿರುವವರು…!

Date:

ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ಜಾರಿಗೆ ತಂದ ಅಮಾನವೀಯ ಗೋ ಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಅವರ ಆಡಳಿತ ಅವಧಿಯಲ್ಲಿ ಅದೇ ಕಾಯ್ದೆಯನ್ನು ಬಿಜೆಪಿಗಿಂತಲೂ ಉಗ್ರ ರೀತಿಯಲ್ಲಿ ಜಾರಿಗೆ ತರುತ್ತಿದೆ. ಇದು ಸಿದ್ದರಾಮಯ್ಯನವರ 'ಸಾವಿರದ ಸರ್ಕಾರ'ದ ಸಾಧನೆಗಳಲ್ಲೊಂದು...

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಶಸ್ವಿ 1,000 ದಿನಗಳನ್ನು ಪೂರೈಸಿದ್ದು, ಮುಂದೆಯೂ ನಮ್ಮದೇ ಸರ್ಕಾರ ಎಂದು ಘೋಷಿಸಿಕೊಂಡು “ನುಡಿದಂತೆ ನಡೆದ ಸಾವಿರ ದಿನಗಳು” ಎಂದು ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಪಂಚ ಗ್ಯಾರಂಟಿಗಳ ಮೂಲಕ ಜನಪರ ಆಡಳಿತ, ಆರ್ಥಿಕ ಸಮಾನತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

ಇಂದು ‘ಅಭಿವೃದ್ಧಿ’ ಎಂಬ ಪದವನ್ನು ಹೆಚ್ಚಾಗಿ ಆರ್ಥಿಕ ಅಂಕಿಅಂಶಗಳ ಮೂಲಕ ಅಳೆಯಲಾಗುತ್ತದೆ. ಜಿಡಿಪಿ ಏರಿಕೆಯಾಯಿತೇ? ಹೂಡಿಕೆ ಹೆಚ್ಚಾಯಿತೇ? ರಸ್ತೆಗಳು, ಕಟ್ಟಡಗಳು ನಿರ್ಮಾಣವಾದುವೇ? ಇವುಗಳನ್ನೇ ಅಭಿವೃದ್ಧಿಯ ಮಾಪಕಗಳೆಂದು ಪ್ರದರ್ಶಿಸಲಾಗುತ್ತಿದೆ. ಆದರೆ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ವೃದ್ಧಿಯಲ್ಲ; ಅದು ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಭಯರಹಿತ ಜೀವನ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಯ ಸಮಗ್ರ ಪ್ರಕ್ರಿಯೆಯನ್ನು ಅಭಿವೃದ್ಧಿ ಎನ್ನುತ್ತಾರೆ.

ಸಾಮಾಜಿಕ ನ್ಯಾಯದ ಪ್ರತಿಪಾದಕ ಎಂದು ತನ್ನನ್ನು ತಾನು ಆರೋಪಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ಸಾವಿರ ದಿನಗಳು ಕಳೆದವು. ರಾಜ್ಯದಲ್ಲಿ, ಒಳಗೊಳ್ಳುವಿಕೆಯ ಅಭಿವೃದ್ಧಿ(Inclusive Development), ಸಮಾನತಾಧಾರಿತ ಅಭಿವೃದ್ಧಿ(Equity-based Development), ಕಲ್ಯಾಣ ರಾಜ್ಯ ಮಾದರಿ(Welfare State Model) ಅಭಿವೃದ್ಧಿಗಳನ್ನು ‘ಸಾಮಾಜಿಕ ನ್ಯಾಯದ ಅಭಿವೃದ್ಧಿ’ ಎಂದು ಕರೆಯುವುದಾದರೆ, ಅದು ಹೇಗೆ ಅನುಷ್ಠಾನದಲ್ಲಿದೆ ಎಂಬುದು ಮುಖ್ಯವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ಸಮುದಾಯಕ್ಕೆ ಯೋಜನೆಗಳನ್ನು ನೀಡಿ, ಮತ್ತೊಂದು ಕಡೆ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ವಿಫಲವಾದರೆ ಅದು ನಿಜವಾದ ಅಭಿವೃದ್ಧಿಯಲ್ಲ. ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ಹಿಂಸೆ, ಹಿಂದುಳಿದ ವರ್ಗಗಳ ಸಾಮಾಜಿಕ ಬಹಿಷ್ಕಾರ- ಇವು ಮುಂದುವರಿದರೆ ಸರ್ಕಾರದ ಯಾವುದೇ ಯೋಜನೆಯೂ ಅವರಿಗೆ ನಿಜವಾದ ಭದ್ರತೆಯನ್ನು ನೀಡಲಾರದು. ಬದುಕಿನ ಭದ್ರತೆ ಇಲ್ಲದಿದ್ದರೆ ಆರ್ಥಿಕ ನೆರವು ಅರ್ಥಹೀನವಾಗುತ್ತದೆ.

ಇದನ್ನು ಓದಿದ್ದೀರಾ?: ಗ್ರಾಮದಲ್ಲಿ ವಿದ್ಯುತ್, ನೀರು ಸರಬರಾಜು ಕಡಿತ; ‘ಜಾತಿ ಪಕ್ಷಪಾತ’ವೆಂದು ದಲಿತ ನಿವಾಸಿಗಳ ಆರೋಪ

2025 ಎಪ್ರಿಲ್ 27ರಂದು ಕೇರಳದ ವಯನಾಡ್ ನಿವಾಸಿ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥನನ್ನು ಕುಡುಪು ಭಟ್ರಕಲ್ಲರ್ಟಿ ರಸ್ತೆಯಲ್ಲಿ ಗುಂಪು ಹತ್ಯೆ ಮಾಡಲಾಗಿತ್ತು. ಮುಸ್ಲಿಮನೆಂಬ ಏಕೈಕ ಕಾರಣಕ್ಕೆ ಕೊಲೆಯಾಗಿದ್ದ ಅಮಾಯಕ ಮಾನಸಿಕ ಅಸ್ವಸ್ಥನನ್ನು ಕೊಲೆ ಮಾಡಿ ಹೆಣವನ್ನು ಮೈದಾನದಲ್ಲೇ ಇಟ್ಟು ಆಟವಾಡಿಕೊಂಡಿದ್ದ ಕ್ರೂರಿ ಹಂತಕರನ್ನು ಜನರ ಪ್ರತಿಭಟನೆಯ ಬಳಿಕ ಬಂಧಿಸಲಾಯಿತು. 21 ಮಂದಿಯನ್ನು ಬಂಧಿಸಲಾಗಿದ್ದರೂ, ಆರೋಪಿಗಳಿಗೆ ಮೇ 31ರಿಂದ ಜಾಮೀನು ಮಂಜೂರಾಯಿತು. ಈ ಬಗ್ಗೆ ರಾಜ್ಯ ಸರ್ಕಾರ ಕನಿಷ್ಠ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಜಾಮೀನು ಸಿಗದಂತೆ ಪ್ರಕರಣ, ಸೆಕ್ಷನ್ ದಾಖಲಿಸುವ ಪ್ರಯತ್ನವನ್ನೂ ರಾಜ್ಯ ಸರ್ಕಾರ ಮಾಡಲಿಲ್ಲ.

ಮಂಗಳೂರು ಕೋಮುಗಲಭೆ

2025 ಮೇ 01 ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ಮಾಡಲಾಯಿತು. ಒರ್ವ ದಲಿತ ಯುವಕನ ಹತ್ಯೆ ಸೇರಿದಂತೆ ಹಲವು ಹಿಂದೂ ರೌಡಿಗಳ ಕೊಲೆ, ದರೋಡೆಯ ಪ್ರಮುಖ ಆರೋಪಿಯಾಗಿದ್ದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಇತ್ತಿಚೆಗೆ ಅಮಾಯಕ ಮುಸ್ಲಿಂ ಯುವಕನನ್ನು ಕೊಲೆ ಮಾಡುವ ಮೂಲಕ ಹಿಂದುತ್ವವಾದಿ ಪದವಿಗೆ ಭಡ್ತಿ ಹೊಂದಿದ್ದ. ಇಂತಹ ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜಪೆ ಕಿನ್ನಿ ಪದವು ಎಂಬಲ್ಲಿ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಬಳಿಕ ಕೇಂದ್ರ ಗೃಹ ಸಚಿವಾಲಯವು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿದೆ. ಈ ರೀತಿ ರಾಜ್ಯದ ಲಾ ಅಂಡ್ ಆರ್ಡರ್ ವಿಷಯದಲ್ಲಿ ಕೇಂದ್ರದ ಗೃಹ ಇಲಾಖೆ ಮಧ್ಯ ಪ್ರವೇಶಿಸುವುದನ್ನು ಸಿದ್ದರಾಮಯ್ಯ ಸರ್ಕಾರ ವಿರೋಧಿಸಲಿಲ್ಲ. ಅಮಾಯಕ ಅಶ್ರಫ್ ಕೊಲೆ ಆರೋಪಿಗಳಿಗೆ ತಿಂಗಳೊಳಗೆ ಜಾಮೀನು ಸಿಕ್ಕಿದರೆ ರೌಡಿಶೀಟರ್ ಕೊಲೆ ಆರೋಪಿಗಳಿಗೆ ಜಾಮೀನು ಸಿಗುತ್ತಿಲ್ಲ!

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ 2025 ಮೇ 27ರಂದು ಕೊಳ್ತಮಜಲು ಅಬ್ದುಲ್‌ ರಹೀಂ ಹತ್ಯೆ ನಡೆಯಿತು.ಈ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಭಜರಂಗದಳದ ಭರತ್ ಕುಮ್ಡೇಲ್ ಸೇರಿ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಈ ಮಧ್ಯೆ ಅಮಾಯಕ ರಹೀಂ ಕೊಲೆ ಭಜರಂಗದಳದ ಸಂಘಟಿತ ಕೃತ್ಯವಾದ್ದರಿಂದ ಕೋಕಾ‌ ಕಾಯ್ದೆ ದಾಖಲಿಸಬೇಕು ಎಂದು ಪ್ರಗತಿಪರ ಮನಸ್ಸುಗಳು ಆಗ್ರಹಿಸಿದ್ದವು. ಈ ಹಿನ್ನಲೆಯಲ್ಲಿ ಕೋಕಾ ಕಾಯ್ದೆ ದಾಖಲಿಸುವುದಾಗಿ ಜಿಲ್ಲಾ ಪೊಲೀಸರು ಪ್ರಕಟಿಸಿದರು. ‘ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (THE KARNATAKA CONTROL OF ORGANISED CRIME ACT- 2000)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಆದರೆ ಸಮಯದ ವ್ಯಾಪ್ತಿಯನ್ನು ಮೀರಿ ಕೋಕಾ ಕಾಯ್ದೆ ಅಳವಡಿಸಿದ್ದರಿಂದ ಮೈಸೂರಿನ ವಿಶೇಷ ನ್ಯಾಯಾಲಯವು ಕೋಕಾವನ್ನು ರದ್ದುಗೊಳಿಸಿತ್ತು. ಇದು ಕೋಕಾ ಹಾಕಿದಂತೆಯೂ ಆಗಬೇಕು, ಹಿಂದುತ್ವವಾದಿಗಳಿಗೆ ಕೋಕಾ ಕಾಯ್ದೆಯಡಿ ಶಿಕ್ಷೆಯೂ ಆಗಬಾರದು ಎಂಬ ನಿಲುವಿನಂತೆ ಕಾಣುತ್ತದೆ. ಒಂದೆಡೆ ಹಿಂದುತ್ವವಾದಿ ರೌಡಿಶೀಟರ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಮಾಯಕ ಮುಸ್ಲಿಂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋಕಾ ಹಾಕುವ ಅವಕಾಶವನ್ನೂ ಸರ್ಕಾರದ ಬೇಜವಾಬ್ದಾರಿಯಿಂದ ಕಳೆದುಕೊಂಡಿತ್ತು.

2025 ಅಕ್ಟೋಬರ್ 22 ರಂದು ಮುಂಜಾನೆ ‘ಅಕ್ರಮ ಗೋಸಾಗಾಟಗಾರರು’ ಎಂಬ ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ ಎಂಬವರ ಮೇಲೆ ಪುತ್ತೂರು ಪೊಲೀಸರು ಗುಂಡು ಹಾರಿಸುತ್ತಾರೆ. ಆರೋಪಿಗಳು ಓಡಿ ಹೋದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ಹೇಳಿದರು. ‘ಈಗ ಕಾಲಿಗೆ ಗುಂಡು ಹಾಕಲಾಗಿದೆ. ಇದೇ ರೀತಿ ಗೋಸಾಗಾಟ ನಡೆದರೆ ದೇಹದ ಬೇರೆ ಭಾಗಗಳಿಗೂ ಗುಂಡು ಬೀಳುತ್ತದೆ’ ಎಂದು ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಹೇಳಿಕೆ ಕೊಟ್ಟರು. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಪೊಲೀಸರು ಗುಂಡು ಹಾರಿಸುವಂತಿಲ್ಲ. ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸಬಹುದು. ಅಕ್ರಮ ಗೋಸಾಗಾಟ ಅಥವಾ ಗೋ ಕಳ್ಳತನ ಎಂಬುದು ಆರೋಪಿಗಳು ತಪ್ಪಿಸಿಕೊಂಡಾಗ ಗುಂಡು ಹಾರಿಸುವಂತಹ ಗಂಭೀರ ಪ್ರಕರಣವಲ್ಲ. ಹಾಗಾಗಿ ಪೊಲೀಸರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಈವರೆಗೂ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆ ಬಳಿಕ ನಾವುಗಳು ಗುಂಡೇಟು ಬಿದ್ದ ಅಬ್ದುಲ್ಲರ ಕುಟುಂಬದವರನ್ನು ಮಾತನಾಡಿಸಿದಾಗ, ದನ ಸಾಗಾಟಕ್ಕೆ ಇರುವ ಅನುಮತಿ, ದನ ಖರೀದಿಯ ರಶೀದಿಯನ್ನು ತೋರಿಸಿದ್ದರು. ಇನ್ನೂ ಅಬ್ದುಲ್ಲರಿಗೆ ನ್ಯಾಯ ಸಿಕ್ಕಿಲ್ಲ.

ಇದನ್ನು ಓದಿದ್ದೀರಾ?: ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಕುಬ್ಜರು – 14%ರಷ್ಟು ಮಕ್ಕಳ ಬೆಳವಣಿಗೆ ಕುಂಠಿತ; ಭ್ರಷ್ಟಾಚಾರಕ್ಕೆ ಎಳೆಯರ ಬಲಿ?

ಪೊಲೀಸರ ‘ಗುಂಡೇಟು ಕಾರ್ಯಾಚರಣೆ’ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪೊಲೀಸರು ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿ ನಿಲ್ಲಿಸಿ, ದನಗಳನ್ನು ವಾಹನದಿಂದ ಇಳಿಸುವಾಗ ಸ್ಥಳದಲ್ಲಿ ಹಿಂದುತ್ವ ನಾಯಕ ಅರುಣ್ ಪುತ್ತಿಲರವರಿದ್ದರು. ದನವನ್ನು ವಾಹನದಿಂದ ಇಳಿಸುವ ಬಗ್ಗೆ ಅರುಣ್ ಪುತ್ತಿಲರವರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಹಿಂದುತ್ವವಾದಿಗಳ ಮಾರಲ್ ಪೊಲೀಸಿಂಗ್ ಸ್ವರೂಪ ಬದಲಾಗಿದೆಯೇ ಎನ್ನುವ ಅನುಮಾನ ‘ಪುತ್ತೂರು ದನ ಸಾಗಾಟಗಾರರ ಮೇಲೆ ಫೈರಿಂಗ್’ ಪ್ರಕರಣ ಅನುಮಾನ ಮೂಡಿಸಿತು. ಪೊಲೀಸ್ ಕಾರ್ಯಾಚರಣೆಯ ಮಧ್ಯೆ ಅರುಣ್ ಪುತ್ತಿಲ ಕಾಣಿಸಿಕೊಂಡಿದ್ದು ಹೇಗೆ? ಇದು ಪೊಲೀಸ್ ಮತ್ತು ಹಿಂದುತ್ವದ ಜಂಟಿ ಕಾರ್ಯಾಚರಣೆಯೇ? ಪೊಲೀಸರು ಆರೋಪಿಗಳಿಗೆ ಗುಂಡು ಹಾಕಿದ ಕೆಲವೇ ಕ್ಷಣಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ‘ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಲ್ಲದೇ, ತನ್ನ ಫೋಟೋದ ಜತೆ ಎಸ್ಪಿ ಅರುಣ್ ಕೆ, ಡಿವೈಎಸ್ಪಿ ಅರುಣ್ ನಾಗೇಗೌಡ, ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಫೋಟೋ ಹಾಕಿ ಅಭಿನಂದನೆಯ ಪೋಸ್ಟರ್ ತಯಾರಿಸಿ ಹಾಕಿಕೊಂಡಿದ್ದರು. ಪೋಸ್ಟರ್‍‌ನಲ್ಲಿಯೂ ‘ಗೋಪೂಜೆಯಂದೇ ಗೋಹಂತಕರಿಗೆ ಗುಂಡೇಟು ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಫೋಟೋದ ಕೆಳಗೆ ಬರೆಯಲಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರ ಈ ನಡೆಯು ‘ಪೊಲೀಸರ ಕಾನೂನು ಕ್ರಮವನ್ನೇ ಒಂದು ಧಾರ್ಮಿಕ ಪ್ರತೀಕಾರ ಅಥವಾ ಕೋಮು ಆಕ್ರೋಶದ ಕ್ರಿಯೆಯಾಗಿ ಚಿತ್ರಿಸುವ ಪ್ರಯತ್ನ’ವಾಗಿತ್ತು‌. ಇದು ಸಂವಿಧಾನದ ಮೂಲಮೌಲ್ಯಗಳ ವಿರುದ್ಧದ ನಿಲುವು ಆಗಿದೆ. ಕಾನೂನಿನ ದೃಷ್ಟಿಯಿಂದಲೂ ಅರುಣ್ ಕುಮಾರ್ ಪುತ್ತಿಲ ಮಾಡಿರುವುದು ಅಪರಾಧವಾಗಿದೆ(Bharatiya Nyaya Sanhita (BNS) ಸೆಕ್ಷನ್ 197: Provocation with intent to cause riot). ಯಾರು ಜನಾಂಗ, ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಅಥವಾ ಅಸಮಾಧಾನ ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡುತ್ತಾರೋ, ಅವರು ಶಿಕ್ಷಾರ್ಹರು. ಇಷ್ಟಾದರೂ ಸರ್ಕಾರ ಕನಿಷ್ಠ ಅರುಣ್ ಪುತ್ತಿಲ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ.

ಗೋ ಸಾಗಾಟ

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಅಕ್ರಮ ದನ ಸಾಗಾಟ ಮತ್ತು ದನ ಹತ್ಯೆಯ ಕುರಿತು ಮಸೀದಿಗಳಿಗೆ ಭೇಟಿ ನೀಡಿ ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ ಜಾಗೃತಿ ಎಂಬ ಕಾರ್ಯಕ್ರಮದ ಅಸಂವಿಧಾನಿಕ, ತಾರತಮ್ಯದ ಕೃತ್ಯವನ್ನು ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಮಾಡಿದರು. ಕಾಯ್ದೆಯೊಂದನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸಿ ಸಮುದಾಯವನ್ನು ಅವಮಾನಿಸುವ, ಧಾರ್ಮಿಕ ಕೇಂದ್ರವನ್ನು ಕ್ರಿಮಿನಲೈಸ್ ಮಾಡುವ ಕೆಲಸ ಸರ್ಕಾರದಿಂದಲೇ ನಡೆಯಿತು. ಧರ್ಮಸ್ಥಳ ಪೊಲೀಸರು ಕೊಕ್ಕಡ ಮಸೀದಿಗೆ ಭೇಟಿ ನೀಡಿ ಜನಜಾಗೃತಿ ಹೆಸರಿನಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸುಳ್ಯ ವ್ಯಾಪ್ತಿಯ ಸುಳ್ಯ ಕೇಂದ್ರ ಜುಮ್ಮಾ ಮಸೀದಿ, ಮೊಗರ್ಪಣೆ ಜುಮಾ ಮಸೀದಿ, ದುಗಲಡ್ಕ ಮಸೀದಿ, ಸುಣ್ಣಮೂಲೆ, ಕುಂಭಕ್ಕೋಡು, ಅರಂತೋಡು ಮಸೀದಿಗಳಲ್ಲಿ ಪ್ರಾರ್ಥನೆಗೆ ಬಂದ ಜನರನ್ನು ನಿಲ್ಲಿಸಿ ‘ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ’ಯನ್ನು ವಿವರಿಸಿದ್ದಾರೆ. ಕಾಯ್ದೆ ಉಲ್ಲಂಘಿಸಿದವರ ಮನೆಗಳನ್ನು ಜಪ್ತಿ ಮಾಡಲಾಗುವುದು ಎಂದು ಪೊಲೀಸರು ಮಸೀದಿಯಲ್ಲಿ ಬೆದರಿಸಿದ್ದರು. ಇದು ಕರ್ನಾಟಕ ಗೋ ವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆಯನ್ನು ಮುಸ್ಲಿಮರು ಮಾತ್ರ ಉಲ್ಲಂಘಿಸುತ್ತಾರೆ ಎಂಬ ಸಂದೇಶ ನೀಡುತ್ತದೆ. ಕಾಯ್ದೆಯೊಂದನ್ನು ಒಂದು ಸಮುದಾಯದವರು ಮಾತ್ರ ಉಲ್ಲಂಘಿಸುತ್ತಾರೆ ಎಂದು ಹೇಳುವುದು ‘ಸಮುದಾಯವನ್ನು ಕ್ರಿಮಿನಲೈಸ್’ ಮಾಡುವ ಕೃತ್ಯವಾಗುತ್ತದೆ. ಬ್ರಿಟೀಷರು ಆದಿವಾಸಿ, ಅಲೆಮಾರಿ ಸಮುದಾಯವನ್ನು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಘೋಷಿಸಿದಂತೆ ದಕ್ಷಿಣ ಕನ್ನಡ ಪೊಲೀಸರು ಮುಸ್ಲಿಂ ಸಮುದಾಯವನ್ನು ‘ಕ್ರಿಮಿನಲ್ ಕಮ್ಯೂನಿಟಿ’ ಎಂದು ಘೋಷಿಸಿದಂತಾಯಿತು.

ಧರ್ಮಸ್ಥಳ ಪೊಲೀಸರು 2025 ನವೆಂಬರ್ 02 ರಂದು ಮಹಮ್ಮದ್ ಸಿನಾನ್, ಇಬ್ರಾಹಿಂ ಖಲೀಲ್, ಜೊಹಾರ ಎಂಬವರ ವಿರುದ್ದ ಅಕ್ರಮ ದನ ಸಾಗಾಟದ ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ಪ್ರಕಾರ ಮಹಮ್ಮದ್ ಸಿನಾನ್ ಮತ್ತು ಇಬ್ರಾಹಿಂ ಖಲೀಲ್ ಅವರು ದನದ ಸಾಗಾಟಗಾರರಾಗಿದ್ದರೆ, ಜೊಹಾರ ಅವರು ದನದ ಮಾರಾಟಗಾರರು. ಆದರೆ ಪೊಲೀಸರು ಎಫ್ಐಆರ್‍‌ನಲ್ಲಿ ಹೆಸರು ಇಲ್ಲದೇ ಇರುವ ಸಾರಮ್ಮ ಅವರಿಗೆ ಜಪ್ತಿ ನೋಟಿಸ್ ಜಾರಿ ಮಾಡಿ ಮನೆಯನ್ನು ಜಪ್ತಿ ಮಾಡಿದ್ದರು. ಎಫ್ಐಆರ್‍‌ನಲ್ಲಿ ಜೊಹಾರ ಎಂಬ ಹೆಸರಿದೆ. ಜೊಹಾರ ಮತ್ತು ಸಾರಮ್ಮ ಒಂದೇ ವ್ಯಕ್ತಿಗಳೇ ಎಂಬ ಸ್ಪಷ್ಟತೆ ಇಲ್ಲ. ಸಾರಮ್ಮ ಮತ್ತು ಜೊಹಾರ ಒಂದೇ ಆಗಿದ್ದರೆ, ಎಫ್ಐಆರ್ ಪ್ರಕಾರ ಅಪರಾಧದಲ್ಲಿ ಜೊಹಾರ ಅವರ ಪಾತ್ರ ಏನೆಂದರೆ, ದನ ಸಾಗಾಟಗಾರರಿಗೆ ದನವನ್ನು ಮಾರಾಟ ಮಾಡಿರುವುದು.‌ ದನದ ಹತ್ಯೆ ಜೊಹಾರ ಅವರಿಗೆ ಸೇರಿದ ಸ್ಥಳದಲ್ಲಿ ನಡೆದಿರುವ ಬಗ್ಗೆ ಎಫ್ಐಆರ್‍‌ನಲ್ಲಿ ಮಾಹಿತಿ ಇಲ್ಲ. ಸಾಗಾಟವಾದ ದನ ಜೊಹಾರ ಅವರ ಮನೆಗೆ ಸಾಗಾಟವಾಗುತ್ತಿದ್ದರೆ ಅದು ವಧೆಗೆ ಎಂದು ಊಹಿಸಬಹುದಿತ್ತು. ದನವನ್ನು ಸಾಗಾಟಗಾರರಿಗೆ ಮಾರಾಟ ಮಾಡುವುದೇ ಸ್ಥಳವನ್ನು ಜಪ್ತಿ ಮಾಡುವಂತಹ ಅಪರಾಧವಾದರೆ ಸಾವಿರಾರು ರೈತರ ಜಮೀನು ಮನೆಗಳನ್ನು ಜಪ್ತಿ ಮಾಡಬೇಕಾಗುತ್ತದೆ. ಕೊನೆಗೆ ಬಿ.ಎಂ. ಭಟ್, ಮುನೀರ್ ಕಾಟಿಪಳ್ಳ ನೇತೃತ್ವದ ಪ್ರಗತಿಪರರ ತಂಡ ಮಧ್ಯಪ್ರವೇಶ ಮಾಡಿ ಜಪ್ತಿಗೊಂಡ ಮನೆಯನ್ನು ಬಿಡಿಸಿಕೊಟ್ಟಿತ್ತು. ಮನೆ, ಮನೆಯ ಆವರಣ ಎನ್ನುವುದು ಯಾವುದೇ ಒಬ್ಬ ಆರೋಪಿಗೆ/ವ್ಯಕ್ತಿಗೆ ಸೇರಿರುವುದಿಲ್ಲ. ಆರೋಪಿಗಳ, ಕೃತ್ಯಗಳ ಅರಿವೇ ಇಲ್ಲದ ಮಕ್ಕಳು, ಮೊಮ್ಮಕ್ಕಳು, ತಾಯಂದಿರು ಮನೆಯಲ್ಲಿ ಇರುತ್ತಾರೆ. ಅಂತವರನ್ನು ಏಕಾಏಕಿ ಮಾಹಿತಿಯನ್ನೂ ನೀಡದೇ ಮನೆಯಿಂದ ಹೊರಹಾಕುವುದು ಆರೋಪಿಗಳಲ್ಲದವರಿಗೂ ಶಿಕ್ಷೆ ನೀಡಿದಂತಾಗುತ್ತದೆ. ಪೊಲೀಸರು ಕಾನೂನನ್ನು ಈ ರೀತಿ ಈ ಸರ್ಕಾರದಲ್ಲಿ ಬಳಸಿದ್ದರು.

ನಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಜಪ್ತಿಗೊಂಡ ಅಮಾಯಕ ಸಾರಮ್ಮರ ಮನೆಯನ್ನೇನೋ ಬಿಡಿಸಿಕೊಡಲಾಯಿತು. ಈ ರೀತಿ ಹಲವು ಮುಸ್ಲಿಮರ ಮನೆಗಳನ್ನು ದನದ ಕಾರಣಕ್ಕಾಗಿ ಜಪ್ತಿ ಮಾಡಲಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ಜಾರಿಗೆ ತಂದ ಅಮಾನವೀಯ ಗೋ ಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಅವರ ಆಡಳಿತ ಅವಧಿಯಲ್ಲಿ ಅದೇ ಕಾಯ್ದೆಯನ್ನು ಬಿಜೆಪಿಗಿಂತಲೂ ಉಗ್ರ ರೀತಿಯಲ್ಲಿ ಜಾರಿಗೆ ತರುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಏಕೈಕ ವಧಾಗಾರವನ್ನು ರಿಪೇರಿಯ ನೆಪದಲ್ಲಿ ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ. ಹಾಗಾಗಿ ಅಧಿಕೃತವಾಗಿ ಖರೀದಿ ಮಾಡಿಕೊಂಡು ಬಂದ ಜಾನುವಾರುಗಳನ್ನು ಕಾನೂನುಬದ್ಧವಾಗಿ ಕಡಿಯುವ ಸ್ಥಳ ಇಲ್ಲವಾಗಿದೆ. ಆಡು/ಕುರಿಗಳನ್ನೂ ಶುಚಿಯಿಲ್ಲದ ಸ್ಥಳಗಳಲ್ಲಿ ಮಾಂಸವನ್ನಾಗಿ ಸಿದ್ದಪಡಿಸುವ ಸ್ಥಿತಿ ಇದೆ. ಸರ್ಕಾರದ ಈ ವಧಾಗಾರ ಮುಚ್ಚಿರುವುದರಿಂದ ಹಲವು ಅಧಿಕೃತ ದನದ ವ್ಯಾಪಾರಿಗಳು ‘ಅಕ್ರಮ ದನದ ವ್ಯಾಪಾರಿ’ಗಳಾಗಿ ಪರಿವರ್ತನೆ ಹೊಂದಿ ಆರೋಪಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ.

ದನ ಸಾಗಾಟವನ್ನೇ ಮಾಡದ, ಈವರೆಗೂ ಒಂದೇ ಒಂದು ಪ್ರಕರಣದಲ್ಲಿ ಆರೋಪಿಯಲ್ಲದ ‘ಮಾಂಸ ವರ್ತಕರ ಸಂಘ’ದ ಉಪಾಧ್ಯಕ್ಷ ಅಬ್ದುಲ್ ಖಾದರ್ ಅವರ ಪುತ್ರನನ್ನು ದನದ ಮಾಂಸ ಪತ್ತೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಖಾದರ್ ಪುತ್ರನ ವಿರುದ್ದ ಮೊದಲ ಬಾರಿ (ಸುಳ್ಳು?) ಪ್ರಕರಣ ದಾಖಲಾಗಿದ್ದರೂ ಅವರ ಮೇಲೆ ಕೋಕಾ ಕಾಯ್ದೆ ಹಾಕಲಾಗಿದೆ! ಯಾವ ಸಂಘಟಿತ ಅಪರಾಧವನ್ನೂ ಮಾಡದ, ಮೊದಲ ಪ್ರಕರಣದಲ್ಲೇ ದನದ ವ್ಯಾಪಾರಿ ಎಂಬ ಒಂದೇ ಕಾರಣಕ್ಕೆ ಕೋಕಾ ಕಾಯ್ದೆ ಅಳವಡಿಸಿ ಜಾಮೀನು ಸಿಗದಂತೆ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ‘ಸಾವಿರದ ಸರ್ಕಾರದ ಸಾಧನೆ’ಯೇ ಸರಿ!

ಪುನೀತ್ ಕೆರೆಹಳ್ಳಿಯು 2023 ಏಪ್ರಿಲ್‌ನಲ್ಲಿ ಚುನಾವಣಾ ಸಮಯದಲ್ಲಿ ಮಂಡ್ಯ ಮೂಲದ ಜಾನುವಾರು ಸಾಗಾಟಗಾರ ಇದ್ರಿಸ್ ಪಾಷಾ ಅವರನ್ನು ಕೊಂದಿದ್ದ. ಅದಕ್ಕಾಗಿ ಪುನೀತ್‌ನನ್ನು ಸಾತನೂರು ಪೊಲೀಸರು ಬಂಧಿಸಿದ್ದರು. ನಂತರ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ಜಾಮೀನಿನ ಮೇಲೆ ಹೊರಬಂದ ನಂತರವೂ ಕೋಮುಪ್ರಚೋದನೆ ಮಾಡುತ್ತಿದ್ದ ಹಲವು ದೂರು ದಾಖಲಾಗಿತ್ತು. ಆ ಕಾರಣದಿಂದ ಪುನೀತ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ ಸಲಹಾ ಮಂಡಳಿ ಶಿಫಾರಸ್ಸಿನಂತೆ ಹೈಕೋರ್ಟ್ ಪುನೀತ್‌ನನ್ನು ಬಿಡುಗಡೆ ಮಾಡಿತ್ತು. ಸಲಹಾ ಮಂಡಳಿ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಕಮಿಷನರ್ ಬಿ. ದಯಾನಂದ್ ಹೇಳಿದ್ದರು. ಆದರೆ ಈವರೆಗೂ ಮೇಲ್ಮನವಿ ಸಲ್ಲಿಸಿ ಮರಳಿ ಗೂಂಡಾ ಕಾಯ್ದೆಯನ್ನು ಪುನೀತ್ ಮೇಲೆ ಜಾರಿಯಲ್ಲಿಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬದಲಾಗಿ, ವೇಶ್ಯಾವಾಟಿಕೆಯ ಪ್ರಕರಣದಲ್ಲಿ ಬಂಧಿತನಾಗಿದ್ದ ಪುನೀತ್ ಕೆರೆಹಳ್ಳಿಯ ವಿಷಯ ವಿಧಾನಸಭೆಯಲ್ಲಿ ಚರ್ಚೆಯಾಗಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿತ್ತು!

ಮುನೀರ್ ಕಾಟಿಪಳ್ಳ ನೇತೃತ್ವದ ಟೋಲ್ ವಿರೋಧಿ ಹೋರಾಟ ಸಮಿತಿಯು ದಿನಗಟ್ಟಲೆ ಅಹೋರಾತ್ರಿ ಪ್ರತಿಭಟನೆ ನಡೆಸಿ ಟೋಲ್ ತೆರವು ಮಾಡಿತ್ತು. ಈ ಪ್ರತಿಭಟನೆ ಬಿಜೆಪಿ ಸರ್ಕಾರದ ವಿರುದ್ಧ ನಡೆದಿದ್ದು, ಎಲ್ಲಾ ಕಾಂಗ್ರೆಸ್ ನಾಯಕರು ವೇದಿಕೆ ಹತ್ತಿ ಭಾಷಣ ಮಾಡಿದ್ದರು. ಪೊಲೀಸರು ಟೋಲ್ ವಿರೋಧಿ ಹೋರಾಟ ಸಮಿತಿಯ 101 ಪದಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದ್ದರು. ಈವರೆಗೂ ಸರ್ಕಾರ ಪ್ರಕರಣ ವಾಪಸ್ ಪಡೆದುಕೊಳ್ಳುವ ಕರ್ತವ್ಯ ನಿರ್ವಹಿಸಲಿಲ್ಲ. ಕೋಮುಗಲಭೆ ಮಾಡಿದ ಆರೋಪಿಗಳು ಕೇಸುಗಳನ್ನು ರದ್ದು ಮಾಡಿಸಿಕೊಂಡು ಆರಾಮವಾಗಿ ಓಡಾಡಿಕೊಂಡಿದ್ದರೆ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಡಿದ 101 ಹೋರಾಟಗಾರರು ಕೋರ್ಟ್ ಅಲೆದಾಡುತ್ತಿದ್ದಾರೆ.

news display image 1615482413

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದ 30ಕ್ಕೂ ಹೆಚ್ಚು ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಾಮೀನು ಪಡೆಯುವುದು, ಜಾಮೀನು ನೀಡುವುದು ವ್ಯಕ್ತಿ ಮತ್ತು ನ್ಯಾಯಾಲಯದ ಸಾಂವಿಧಾನಿಕ ಹಕ್ಕು. ಆದರೆ, ಪ್ರಭಾಕರ ಭಟ್ ರೀತಿಯ ಹಲವು ಅಬಿಚ್ಯುವಲ್ ಅಫೆಂಡರ್‍‌ಗಳು ಸುಲಭವಾಗಿ ಜಾಮೀನು ಪಡೆದುಕೊಂಡು ಧಕ್ಕಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ನಾವು ಒಂದು ಸಣ್ಣ ತಂಡವಾಗಿ ಹಲವು ದ್ವೇಷ ಭಾಷಣ ಪ್ರಕರಣಗಳ ವಿರುದ್ಧ ಕಾನೂನು ಹೋರಾಟವನ್ನು ನಡೆಸುತ್ತಿದ್ದೇವೆ. ಸರ್ಕಾರ ಮಾಡಬೇಕಿರುವ ಕೆಲಸವಮ್ನು ನಮ್ಮ ತಂಡ ಒಂದು ರೂಪಾಯಿ ಖರ್ಚಿಲ್ಲದೆ ಸಂಘಟಿತವಾಗಿ ನಿಭಾಯಿಸುತ್ತಿದೆ. ಸಣ್ಣ ತಂಡಕ್ಕೆ ಸಾಧ್ಯವಾಗೋದು ನೂರಾರು ವಕೀಲರನ್ನು ಹೊಂದಿರುವ ಘನ ಸರ್ಕಾರದಿಂದ ಯಾಕೆ ಸಾದ್ಯವಾಗುತ್ತಿಲ್ಲ?

2024 ನವೆಂಬರ್ 18ರಂದು ಸೋಮವಾರ ಸಂಜೆ 6 ಗಂಟೆಯ ವೇಳೆಗೆ ನಕ್ಸಲ್ ನಾಯಕ ವಿಕ್ರಂ ಗೌಡ ರನ್ನು ‘ಎನ್ಕೌಂಟರ್’ ಹೆಸರಿನಲ್ಲಿ ಹತ್ಯೆ ಮಾಡಲಾಯಿತು. ಕೊಲ್ಲದೆ ಸೆರೆ ಹಿಡಿಯಬಹುದಾಗಿದ್ದರೂ ಕ್ರೂರವಾಗಿ ಕೊಂದು ಹಾಕಿತ್ತು. ನಾವು ಒಂದು ನಿಯೋಗ ರಚಿಸಿ ಸತ್ಯಶೋಧನೆ ಮಾಡಿದಾಗ ಅದೊಂದು ಫೇಕ್ ಎನ್ಕೌಂಟರ್ ಎಂಬುದು ಸ್ಪಷ್ಟವಾಗಿತ್ತು. ಈವರೆಗೂ ಫೇಕ್ ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಕನಿಷ್ಠ ತನಿಖೆಯನ್ನೂ ಮಾಡಲಿಲ್ಲ. ಆ ನಂತರ ನಾಗರಿಕ ಸಮಾಜದ ಗಣ್ಯರು ಮತ್ತು ಶರಣಾಗತಿ ಸಮಿತಿಯ ನಾಗರಿಕ ಸದಸ್ಯರ ಪ್ರಯತ್ನಗಳಿಂದಾಗಿ ವಿಕ್ರಂ ಗೌಡ ಅವರ ಜೊತೆಗಿದ್ದ ಆರು ಜನ ನಕ್ಸಲ್ ಚಳವಳಿಗಾರರು ಮುಖ್ಯಮಂತ್ರಿಯ ಮುಂದೆಯೇ ಶರಣಾದರು. ಕೇರಳ ಮತ್ತು ತಮಿಳುನಾಡಿನಲ್ಲಿ ಶರಣಾದ ಹಲವು ನಕ್ಸಲ್ ಚಳವಳಿಗಾರರು ಈಗಾಗಲೇ ಪ್ರಕರಣಗಳನ್ನು ಮುಗಿಸಿಕೊಂಡು ಬಂಧಮುಕ್ತಗೊಂಡರೂ ಕರ್ನಾಟಕದಲ್ಲಿ ಶರಣಾದ ನಕ್ಸಲ್ ಚಳವಳಿಗಾರರು ಇನ್ನೂ ಜೈಲಿನಲ್ಲೇ ಇದ್ದಾರೆ.

ಧರ್ಮಸ್ಥಳ ಹತ್ಯೆ/ನಾಪತ್ತೆ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ನಿಲುವು ನಿರಾಶದಾಯಕ. ನೂರಾರು ಅಸಹಜ ಸಾವುಗಳಿಗೆ ನ್ಯಾಯ ಒದಗಿಸಬೇಕು ಎಂದು ಜನಾಗ್ರಹ ಕೇಳಿ ಬಂದಾಗ ಅನಿವಾರ್ಯವಾಗಿ ಎಸ್ಐಟಿಯನ್ನು ರಚಿಸಿದರು. ಎಸ್ಐಟಿ ರಚಿಸಿದ ಬಳಿಕ ಯಾರ ವಿರುದ್ಧ ಆರೋಪಗಳಿವೆಯೋ ಅವರನ್ನು ತನಿಖೆ ಮಾಡದೇ ಆರೋಪಿಸಿದವರೇ ಕಟಕಟೆಗೆ ನಿಲ್ಲಿಸುವ ಪ್ರಯತ್ನಗಳಾದವು. ಉಪಮುಖ್ಯಮಂತ್ರಿಗಳು ಹೋರಾಟಗಾರರನ್ನೇ ಒದ್ದು ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದರು. ಹೋರಾಟಗಾರರನ್ನು ಹಣಿಯಲು ಗಡಿಪಾರು, ಎಫ್ಐಆರ್ ಅಸ್ತ್ರವನ್ನು ಸರ್ಕಾರ ಬಳಸಿತ್ತು. ಹೋರಾಟಗಾರರು ನ್ಯಾಯಾಲಯದ ಮೊರೆ ಹೋಗಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಯಿತು. ಇದು ಕಲ್ಯಾಣ ರಾಜ್ಯದ ಮಾದರಿಯಲ್ಲ!

ದಲಿತರಿಗೆ ಮೀಸಲಾಗಿರುವ ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ, ಒಳಮೀಸಲಿನಲ್ಲಿ ಅಲೆಮಾರಿಗಳಿಗೆ ಅನ್ಯಾಯ, ರೈತರ ಭೂಸ್ವಾಧೀನ, ಕೋಗಿಲು ಬಡವರ ಮನೆಯನ್ನು ತೆರವು ಮಾಡಿ ಅದನ್ನು ಅಮಾನವೀಯವಾಗಿ ಸಮರ್ಥಿಸಿಕೊಂಡಿದ್ದು ಹೀಗೆ ಸಾಲು ಸಾಲು ವೈಫಲ್ಯ ಮತ್ತು ಬದ್ಧತೆ ರಹಿತ ಆಡಳಿತದಿಂದಾಗಿ ದಲಿತ-ಆದಿವಾಸಿ-ಹಿಂದುಳಿದ-ಅಲ್ಪಸಂಖ್ಯಾತ ಸಮುದಾಯಗಳು ಸಿದ್ದರಾಮಯ್ಯರ ಆಡಳಿತದ ಬಗ್ಗೆ ನಿರೀಕ್ಷೆ ಕಳೆದುಕೊಂಡಿದ್ದಾರೆ.

ಅಭಿವೃದ್ಧಿ ಎಂದರೆ ಎಲ್ಲರೂ ಬದುಕುವ ಅವಕಾಶ ಹೊಂದಿರುವ ಸಮಾಜದ ನಿರ್ಮಾಣ. ಅಲ್ಲಿ ಯಾರೂ ತಮ್ಮ ಗುರುತು ಕಾರಣದಿಂದ ಭಯಪಡುವಂತಿರಬಾರದು. ಮಕ್ಕಳು ತಮ್ಮ ಧರ್ಮ ಅಥವಾ ಜಾತಿ ಕಾರಣದಿಂದ ಭೇದಭಾವಕ್ಕೆ ಒಳಗಾಗಬಾರದು. ಮಹಿಳೆಯರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗಬೇಕು. ಉದ್ಯೋಗ, ಶಿಕ್ಷಣ, ಆರೋಗ್ಯ- ಇವುಗಳಲ್ಲಿಯೂ ಸಮಾನ ಪ್ರವೇಶ ಇರಬೇಕು.

ಸರ್ಕಾರವು ಯೋಜನೆಗಳ ಮೂಲಕ ಆರ್ಥಿಕ ಸಹಾಯ ನೀಡಬೇಕು ನಿಜ. ಆದರೆ ಅದಕ್ಕಿಂತ ಮುಖ್ಯವಾಗಿ, ಸಮಾನತೆಯ ಸಾಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವುದು, ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸುವುದು, ಮತ್ತು ನ್ಯಾಯಯುತ ಆಡಳಿತವನ್ನು ನೀಡುವುದು ಅದರ ಮೂಲ ಕರ್ತವ್ಯ. ಅಭಿವೃದ್ಧಿಯ ಅರ್ಥವನ್ನು ಕೇವಲ ಕಟ್ಟಡಗಳ ಎತ್ತರದಲ್ಲಿ ಅಳೆಯದೆ, ನಾಗರಿಕರ ಗೌರವದ ಮಟ್ಟದಲ್ಲಿ ಅಳೆಯುವ ಮನೋಭಾವ ಬೆಳೆಸಿದಾಗ ಮಾತ್ರ ಅದು ನಿಜವಾದ ಪ್ರಗತಿ.

ಬಡವರು

ಸರ್ಕಾರದ ಕೆಲಸ ಯೋಜನೆ ಘೋಷಣೆಗಳಲ್ಲಿಯೇ ಮುಗಿಯುವುದಿಲ್ಲ. ಅದು ಪ್ರಜೆಯ ಬದುಕನ್ನು ಭದ್ರಗೊಳಿಸುವ, ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸುವ, ಎಲ್ಲರೂ ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಿಸುವ ಹೊಣೆಗಾರಿಕೆಯನ್ನು ನಿಭಾಯಿಸಿದಾಗ ಮಾತ್ರ ‘ಸಿದ್ದರಾಮಯ್ಯರ ಸಾವಿರದ ಸರ್ಕಾರ’ದ ”ಅಭಿವೃದ್ಧಿ” ಎಂಬ ಪದಕ್ಕೆ ಅರ್ಥ ಸಿಗುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಸಾಮಾಜಿಕ ನ್ಯಾಯದ ಅಭಿವೃದ್ಧಿ ಮಾಡುವ ಸಾಧ್ಯತೆ ಇರುವುದು ಸದ್ಯ ಸಿದ್ದರಾಮಯ್ಯರಿಗೆ ಮಾತ್ರ! ಹಾಗಾಗಿ ಇನ್ನು ಮುಂದಿರುವ ಸಾವಿರ ದಿನಗಳಲ್ಲಿ ಸಿದ್ದರಾಮಯ್ಯ ಮೈಕೊಡವಿ ನಿಂತರೆ, ಸಿದ್ದರಾಮಯ್ಯರನ್ನು ಶತಮಾನ ಕಳೆದರೂ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯರ ಸರ್ಕಾರ ನಿಜವಾಗಿಯೂ ‘ಸಾವಿರದ ಸರ್ಕಾರ’ವಾಗುತ್ತದೆ.

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...