‘ಅಹಿಂದ’ ರಾಜಕೀಯ ಪರಿಬಾಷೆಯ ಕರ್ತೃ ಡಿ. ದೇವರಾಜ ಅರಸು. ಹಿಂದುಳಿದ ವರ್ಗಗಳ ನಾಯಕರಾಗಿ, ಸರ್ವ ಸಮುದಾಯಗಳ ನಾಯಕ ಎನಿಸಿಕೊಂಡ ಅರಸು ಅವರು ರಾಜಕೀಯವಾಗಿ ತಳ ವರ್ಗಗಳನ್ನೊಳಗೊಂಡ ‘ಅಹಿಂದ’ ರಚನೆ ಅವರ ಕಾಲಾವಧಿಯಲ್ಲಿ ಆರಂಭವಾದದ್ದು. ಇದರ ಮಹತ್ವದ ರೂಪಕ ‘ಅಲ್ಪಸಂಖ್ಯಾತ, ಹಿಂದುಳಿದ, ದಲಿತ(ಅಹಿಂದ)’ ಎಂಬುದಾಗಿದೆ. ಹಿಂದುಳಿದ ಸಮುದಾಯಗಳ ಪ್ರಬಲ ನಾಯಕರಾಗಿ ಇಂದಿಗೂ ಪ್ರಸ್ತುತರಾದವರು. ಅದೇ ಮಾದರಿಯಲ್ಲಿಯೇ ಗಟ್ಟಿ ನಾಯಕತ್ವ ಹೊಂದಿ ರಾಜಕೀಯವಾಗಿ ಹಿಂದುಳಿದ ವರ್ಗಗಳ ಮತ್ತೋರ್ವ ನಾಯಕ ಎನಿಸಿದ್ದು ಸಿದ್ದರಾಮಯ್ಯ.
ಅಂದಿನ ಜನತಾ ಪರಿವಾರ ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರ ಹಾಕಿದ ಸಂದರ್ಭದಲ್ಲಿ ಕೈಹಿಡಿದಿದ್ದು ಇದೇ ‘ಅಹಿಂದ’ ಚಳವಳಿ. ಸಿದ್ದರಾಮಯ್ಯ, ಆರ್ ಎಲ್ ಜಾಲಪ್ಪ, ಸತೀಶ್ ಜಾರಕಿಹೊಳಿಯವರು ಸಮರ್ಥವಾಗಿ ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಒಳಗೊಂಡ ಹಾಗೇ ಸಂಘಟಿಸಿದರು. ಎಷ್ಟರ ಮಟ್ಟಿಗೆ ಎಂದರೆ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರು ಮೇಲ್ಪಂಕ್ತಿಯ ಸ್ಥಾನಮಾನ ಹೊಂದುವ ತನಕ ‘ಅಹಿಂದ’ ವರ್ಚಸ್ಸು ಎದ್ದು ಕಾಣುತ್ತದೆ. 2003ರಲ್ಲಿ ಆರಂಭಿಸಿದ ‘ಅಹಿಂದ’ ಮೊತ್ತ ಮೊದಲಿಗೆ 2005ರ ಜುಲೈ 22ರಂದು ಸರಿ ಸುಮಾರು 14 ಲಕ್ಷ ಮಂದಿ ಜನರನ್ನೊಳಗೊಂಡ ಬೃಹತ್ ಸಮಾವೇಶ ಮಾಡುವಷ್ಟು, ಎಲ್ಲ ಸಮುದಾಯಗಳು ಒಳಗೊಳ್ಳುವ ಮಟ್ಟಿಗೆ ಬಲಿಷ್ಠವಾಯಿತು. ಅರಸು ಬಳಿಕ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿ ಹೊರಹೊಮ್ಮಿದರು.
ರಾಜಕೀಯ ಲೆಕ್ಕಾಚಾರಗಳು, ಜಾತಿ, ಧರ್ಮದ ಮೇಲೆ ಕೇಂದ್ರೀಕೃತವಾದಾಗ ಶೋಷಿತ ಸಮುದಾಯಗಳು, ಹಿಂದುಳಿದ ವರ್ಗಗಳನ್ನು ಸೆಳೆದು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಸೃಷ್ಟಿಸಿದ್ದು ‘ಅಹಿಂದ’. ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ‘ಅಹಿಂದ’ ಪಾತ್ರ ಮಹತ್ವದ್ದಾಗಿದ್ದು, ರಾಜಕೀಯ ಏರಿಳಿತಗಳಲ್ಲಿ ಬೆನ್ನೆಲುಬಾಗಿ ನಿಂತಿದೆ. ಇತ್ತೀಚಿನ ಮುಡಾ ಹಗರಣ ಸಂದರ್ಭದಲ್ಲೂ ಕೈಹಿಡಿದಿದ್ದು ಇದೇ ಅಹಿಂದ, ಸಿಎಂ ಬದಲಾವಣೆ ಚಾಲ್ತಿಯಾದಾಗ ಸಾಂದರ್ಭಿಕ ಸಂದೇಶ ನೀಡಿದ್ದು ‘ಅಹಿಂದ’. ಸಿದ್ದರಾಮಯ್ಯ ಅವರೂ ಕೂಡ ಸಮಾಜವಾದಿ ಹಿನ್ನಲೆಯಿಂದ ಬಂದು ಅಹಿಂದ ನಾಯಕರಾಗಿ ಸಮರ್ಥವಾಗಿ ಪ್ರತಿಪಾದಿಸುತ್ತ ಸಮುದಾಯ ನಾಯಕರಾಗಿ ಹೊಮ್ಮಿದ್ದು ವಿಶೇಷ.

ಬಹಳಷ್ಟು ನಾಯಕರನ್ನು ಕಂಡಿರುವ ರಾಜ್ಯ ಒರೆಗಲ್ಲಿಗೆ ಹಚ್ಚಿದ್ದು ಅರಸು-ಸಿದ್ದರಾಮಯ್ಯನವರನ್ನು ಮಾತ್ರ. ಈ ಇಬ್ಬರು ನಾಯಕರು ಜಾತಿ ಮಂತ್ರ ಪಠಿಸದೆ, ಧರ್ಮ ಪ್ರತಿಪಾದನೆಯಿರದೆ ತಳಸಮುದಾಯಗಳ ರಾಜಕೀಯ ಧ್ವನಿಯಾಗಿ ಬೇರೂರಿದರು. ಅರಸು ಇಟ್ಟ ಮಹತ್ವದ ಹೆಜ್ಜೆಗಳಂತೆ ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ಜನಾನುರಾಗಿಯಾಗಿ ಅನ್ನಭಾಗ್ಯ, ಗ್ಯಾರೆಂಟಿ ಯೋಜನೆಗಳಂತಹ ಮಹತ್ವದ ಯೋಜನೆಗಳ ಮೂಲಕ ಅಡಿಯಿಟ್ಟು ಶೋಷಿತ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಇದರಿಂದಾಗಿಯೇ, ಸಿದ್ದರಾಮಯ್ಯನವರಿಗೆ ಅಹಿಂದ ಮನ್ನಣೆ ಹೆಚ್ಚಾಗಿದೆ. ಪ್ರಬಲ ಸಮುದಾಯಗಳ ಹಿಡಿತದಲ್ಲಿದ್ದ ರಾಜಕೀಯವನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವ ಕೆಲಸ ಮಾಡಿದವರು.
ಅರಸುರವರು ‘ಉಳುವವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಿ ಕಾಯ್ದೆ ಮೂಲಕ ತಳಸಮುದಾಯಗಳಿಗೆ ಭೂಮಿ ದೊರಕುವಂತೆ ಮಾಡಿದರು. ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ಎಸ್ ಜಿ ಹಾವನೂರು ಆಯೋಗ ನೇಮಿಸಿ, ವರದಿಯನುಸಾರ ಶೋಷಿತ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗುವಂತೆ ಮಾಡಿದರು. ಸಿದ್ದರಾಮಯ್ಯನವರೂ ಕೂಡ ಒಂದು ಹೆಜ್ಜೆ ಮುಂದಿರಿಸಿ 2025ನೇ ಸಾಲಿನಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಮೂಲಕ ಅರಸು ಅವರ ಹಾದಿಯಲ್ಲಿಯೇ ದಾಪುಗಾಲಿಟ್ಟಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಕೈಬಿಡದ ಜನ, ಅಧಿಕಾರದ ಗದ್ದುಗೆ ಏರಲು ಕಾರಣರಾದರು. ಅವರೂ ಕೂಡ ಆಗಿಂದಾಗ್ಗೆ ಮೆಲುಕು ಹಾಕುತ್ತ ಇರುವುದನ್ನು ಮನಗಾಣಬಹುದು. ಜಾತಿ ವ್ಯವಸ್ಥೆಯೇ ರಾಜಕೀಯ ಎನ್ನುವಂತಿದ್ದ ಸಂದರ್ಭದಲ್ಲಿ ‘ಅಹಿಂದ’ ಪ್ರಬಲವಾದ ಸವಾಲಾಗಿ ಪರಿಣಮಿಸಿತು. ರಾಜಕೀಯವಾಗಿ ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಹಿರಿಮೆಯನ್ನು ತಂದುಕೊಟ್ಟಿತು. ‘ಅಹಿಂದ’ ನಾಯಕರನ್ನು ಬೆಳೆಸುವ, ಅಧಿಕಾರ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಆದರ ಅದರ ಉದ್ದೇಶ ಇತ್ತೀಚಿನ ದಿನಗಳಲ್ಲಿ ನಿಷ್ಕ್ರಿಯವಾದಂತೆ ಕಂಡುಬರುತ್ತಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಜನಾಧಿಕಾರದತ್ತ ಮುಖ ಮಾಡಿದಾಗ ‘ಅಹಿಂದ’ ಚಳವಳಿ ಮಸುಕಾಗಿದೆʻ. ಎಲ್ಲರೂ ಎಲ್ಲದಕ್ಕೂ ಸಮರ್ಥರಲ್ಲ ಎನ್ನುವುದನ್ನು ತೋರಿಸಿದೆ. ಹಾಗೆಯೇ, ಸಮುದಾಯಗಳು ಎಲ್ಲರನ್ನು ಎಲ್ಲ ಸಮಯದಲ್ಲಿ ಅಪ್ಪುವುದು, ಒಪ್ಪುವುದಿಲ್ಲ ಎನ್ನುವುದನ್ನು ಮನದಟ್ಟು ಮಾಡಿದೆ. ಸದ್ಯದ ಮಟ್ಟಿಗೆ ಇಂದಿಗೂ ಆ ಹಿಡಿತ ಯಾರಿಗೂ ಬಂದಂತಿಲ್ಲ. ಹಾಗೆಯೇ, ಜನಮಾನಸದಲ್ಲಿ ಉಳಿಯುವುದು ಅಸಾಮಾನ್ಯವೇ ಸರಿ. ರಾಜಕೀಯ ಬದುಕೇ ಅತಂತ್ರ, ಮುಗಿದೇ ಹೋಯಿತು ಎನ್ನುವಂತಿದ್ದಾಗ ಎರಡು ಬಾರಿ ಮುಖ್ಯಮಂತ್ರಿಯಾಗಿ, ‘ಅಹಿಂದ’ ರಾಜಕೀಯ ಪರಿಭಾಷೆ ಕಟ್ಟಿದ ಅರಸು ಅವರನ್ನು ಮೀರಿ ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಖ್ಯಾತಿಗೂ ಬಂದಿರುವುದುಂಟು. ಇದರ ಒಳನೋಟ ಹೊಕ್ಕಾಗ ಕಾಣುವ ಗಂಟು ಸರ್ವ ಸಮುದಾಯಗಳು.
ರಾಜ್ಯ, ದೇಶದಲ್ಲಿ ವ್ಯಾಖ್ಯಾನಕ್ಕೆ ಸಿಲುಕದ ಮಟ್ಟಿಗೆ ರಾಜಕೀಯ ತನ್ನ ದಿಕ್ಕನ್ನು ಬದಲಿಸಿ, ಬೇರೆಯದ್ದೆ ದಾಟಿಯಲ್ಲಿ ಹಳಿ ತಪ್ಪಿ, ಸಂವಿಧಾನದ ಆಶೋತ್ತರ ಬುಡಮೇಲು ಮಾಡಿ, ಧರ್ಮದ ಅಮಲು, ಹಣದ ಆಮಿಷ, ಜಾತಿ ಜಾತಿಗಳ ಮೇಲಾಟ ಅಂಧಃಪತನದ ರಾಜಕೀಯದ ನಡುವೆಯೂ ಸಾಂದರ್ಭಿಕವಾಗಿ ಸಿದ್ದರಾಮಯ್ಯ ಅವರ ವರ್ಚಸ್ಸು ಚೇತೋಹಾರಿ, ಗಮನಾರ್ಹ ಎನಿಸುತ್ತದೆ. ಅವರು ರಾಜಕೀಯವಾಗಿ ಅಬ್ಬರಿಸದೆ ಸರ್ವ ಸಮುದಾಯಗನ್ನೇ ಶಕ್ತಿಯನ್ನಾಗಿಸಿಕೊಂಡ ಪ್ರಬಲ ನಾಯಕ.

ಪ್ರತಿ ಚಳವಳಿಗೆ ಗುರಿ ಇದ್ದೇ ಇರುತ್ತದೆ. ಅದರಂತೆ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಘನತೆಯ ಬದುಕನ್ನು ನೀಡುವುದು, ತಳ ಸಮುದಾಯದ ಯುವಜನರಿಗೆ ಆರ್ಥಿಕವಾಗಿ ಶಕ್ತಿ ತುಂಬುವುದು, ರಾಜಕೀಯ ಸ್ಥಾನಮಾನ ಕಲ್ಪಿಸುವುದು, ಸಮಾಜದಲ್ಲಿ ಪ್ರಬಲ ವ್ಯಕ್ತಿಯನ್ನಾಗಿಸುವ ಆಶಯವಾಗಿದೆ. ಜತೆಗೆ ಅಧಿಕಾರ ಹೊಂದುವಂತೆ ಮಾಡುವ ಮಹೋನ್ನತ ಉದ್ದೇಶವಿದೆ. ಆದರೆ, ಪ್ರಸ್ತುತ ಸಾಧ್ಯವಾಯಿತೇ?
ಕೆಲವು ಪ್ರಶ್ನೆಗಳಿಗೆ ಉತ್ತರ ಅಬಾಧಿತ. ಕಾರಣ ರಾಜಕಾರಣ ಹೇಳಿದಷ್ಟು, ಕೇಳಿದಷ್ಟು ಸರಳವಲ್ಲ. ಕಂಡಷ್ಟು, ಭಯಸುವಷ್ಟು ಸುಲಭವೂ ಅಲ್ಲ. ಮನಸಿದ್ದರೂ ಸಾಧ್ಯವಾಗದ ಕಗ್ಗಂಟುಗಳಿವೆ. ರಾಜಕೀಯ ಎಂದರೇನೇ ತೂಗಿಸುವುದು. ತೀರ ನಿಷ್ಟುರತೆ ತಿರುಗುಬಾಣವಾದಿತು ಎನ್ನುವ ಭಯ ಮಾಡಬೇಕಾದ, ಮಾಡಬೇಕಿದ್ದ ಕೆಲಸಕ್ಕೂ ಕಡಿವಾಣ ಹಾಕಿಸುತ್ತದೆ. ಸಾಮಾಜಿಕ ಬದ್ಧತೆ, ಸಾಮಾಜಿಕ ನಿಲುವು, ಸಾಮಾಜಿಕ ದೃಷ್ಟಿಕೋನ ಏನೇ ಇದ್ದರು, ಅದನ್ನೆಲ್ಲ ತರುವಲ್ಲಿ ಸುಲಭಸಾಧ್ಯ. ಅಂತಹ ನಿದರ್ಶನಗಳು ನಮ್ಮಲ್ಲಿ ಸಾಕಷ್ಟಿವೆ.
ಆದರೇ, ಅಹಿಂದ ಹಿನ್ನಲೆಯಲ್ಲಿನ ರಾಜಕೀಯ ಜನ ವಿರೋಧಿಯಾಗಿ ನಡೆದಿಲ್ಲ, ನಡೆಯುವುದಿಲ್ಲ, ಅಂತಃಕರಣ ಹೊಂದಿದೆ. ಜನರಿಂದ ದೂರ ಸರಿದು, ಯಾರನ್ನೋ, ಯಾವುದನ್ನೋ ಓಲೈಸುವ ಮಟ್ಟಿಗೆ ಇಳಿಯದಿರುವುದು ಪ್ರಜ್ಞಾವಂತಿಕೆಯ ಚಳವಳಿ. ಇದರಿಂದಾಗಿಯೇ, ರೂಪಿತವಾದ ಅಹಿಂದ ಅವಲೋಕನ ಪ್ರಸ್ತುತವಾಗಿ ಬಹು ಮುಖ್ಯವಾದದ್ದು.

ಮೈಸೂರಿನ ಅಹಿಂದ ಮುಖಂಡ ಕೆ ಶಿವರಾಮ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡ ಹೊರಟಿರುವುದೇ, ಅಹಿಂದ ಸಮುದಾಯದ ಪ್ರಸ್ತುತತೆಗೆ. ಅಹಿಂದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸಮುದಾಯಗಳಿಗೆ ಸಿಗಬೇಕಾದ ಸವಲತ್ತು, ಹಕ್ಕುಗಳು ಸಿಗುತ್ತಿವೆಯೇ ಎನ್ನುವ ನಿಟ್ಟಿನಲ್ಲಿ ಚರ್ಚಿಸಬೇಕಿದೆ. ಕಳೆದ ಬಾರಿ ಸ್ವತಃ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾಗಲೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಣ ನೀಡಿ ಜಾತಿಗಣತಿ(ಸಾಮಾಜಿಕ ಶೈಕ್ಷಣಿಕ ವರದಿ) ನಡೆಸಿದರು. ಆದರೂ ಕೂಡ ಜಾರಿ ಮಾಡಲು ಸಾಧ್ಯವೇ ಆಗಲಿಲ್ಲ. ಜಾರಿಯಾಗದಿರುವ ಹಿನ್ನಲೆಯೇನು? ಪಟ್ಟಭದ್ರ ಹಿತಾಸಕ್ತಿ ಏನಡಗಿದೆ? ಸಮೀಕ್ಷೆಯ ವಿರುದ್ಧ ನಡೆದ ಪಿತೂರಿಗಳೇನು? ಎನ್ನುವುದು ಚರ್ಚೆಯ ವಿಚಾರ. ಈಗ ಮತ್ತೆ ಸಮೀಕ್ಷೆ ನಡೆದಿದೆ, ವರದಿ ಸಲ್ಲಿಕೆಗೆ ಸಿದ್ದವಾಗಿದೆ. ಅದರಂತೆ ಜಾರಿಗೊಳಿಸುವ ನಿಟ್ಟಿನಲ್ಲಿ ಅಗ್ರಹಿಸಬೇಕಿದೆ” ಎಂದರು.
“ಇತ್ತೀಚಿಗೆ ಅಹಿಂದ ಸಂಘಟನೆ ವಿಗಡಣೆ ಕಡೆಗೆ ಸಾಗುತ್ತಿರುವುದರಿಂದ ಸಾಧಕ-ಬಾಧಕ ಕುರಿತಾಗಿಯೂ ಚರ್ಚೆ ನಡೆಯಬೇಕಿದೆ. ಪ್ರಮುಖವಾಗಿ ಪ್ರಸ್ತುತ ಸಂದರ್ಭದಲ್ಲಿ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣಕ್ಕೆ ಎಷ್ಟು ಅನಿವಾರ್ಯ ಎನ್ನುವುದನ್ನು ಸಮುದಾಯಗಳಿಗೆ ಅರ್ಥ ಮಾಡಿಸುವಲ್ಲಿ ಅಹಿಂದ ಸಮಾವೇಶದ ಆಗತ್ಯತೆ ಇದೆ. ಅದರಲ್ಲೂ ಮೈಸೂರಿನಲ್ಲೇ ಸಮಾವೇಶ ಮಾಡಬೇಕು ಎನ್ನುವುದಕ್ಕೂ ಕಾರಣ ಅಹಿಂದ ಹಿನ್ನಲೆಯ ಅರಸು ಆವರು. ಹಾಗೆಯೇ, ಈಗಿನ ಸಿಎಂ ಸಿದ್ದರಾಮಯ್ಯನವರು ಮೈಸೂರಿನವರೇ ಆಗಿರುವುದರಿಂದ ಇಲ್ಲಿಯೇ ಅಹಿಂದ ಸಮಾವೇಶ ನಡೆಯುವುದು ಸಮಂಜಸ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
“ಈಗಾಗಲೇ ಸಮಾವೇಶ ನಿಗದಿಯಾಗಿತ್ತು. ಆದರೆ, ವಿಶೇಷ ಅಧಿವೇಶನ, ಬಜೆಟ್ ಮಂಡನೆ ಸನ್ನಿತವಾದ್ದರಿಂದ ಫೆಬ್ರವರಿ ತಿಂಗಳ ಕೊನೆಗೆ ಮುಂದೂಡಲಾಗಿದ್ದು, ಸಮಾವೇಶ ನಡೆಸುವ ನಿಟ್ಟಿನಲ್ಲಿ ಕೆಲಸಗಳು ಸಾಗಿವೆ. ಸದ್ಯದಲ್ಲಿಯೇ ಈ ಸಂಬಂಧ ಸಭೆಗಳು ನಡೆಯಲಿದ್ದು, ಪತ್ರಿಕಾಗೋಷ್ಟಿ ಮೂಲಕ ಮಾಹಿತಿ ಹಂಚಿಕೊಳ್ಳಲಾಗುವುದು. ಹಾಗೆಯೇ, ಎಲ್ಲ ಸಮುದಾಯಗಳ ಮುಖಂಡರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಒಳಗೊಳ್ಳುವಂತೆ ಸಮಾವೇಶ ನಡಿಯಲಿದೆ” ಎಂದು ಹೇಳಿದರು.

ಅಹಿಂದ ಮುಖಂಡ ಜವರಪ್ಪ ಮಾತನಾಡಿ, “ಪ್ರಾರಂಭದಲ್ಲಿದ್ದಂತಹ ಒಗ್ಗಟ್ಟು ಈಗಿಲ್ಲ. ರಾಜಕೀಯ ಪಕ್ಷಗಳು ಸಾಕಷ್ಟು ಒಡಕು ಮೂಡಿಸಿವೆ. ಇದರ ಪರಿಣಾಮ ಅಹಿಂದ ವರ್ಗಗಳು ದೂರ ಸರಿಯುವಂತೆ ಮಾಡಿವೆ. ಈಗಲಾದರೂ ರಾಜಕೀಯ ಪ್ರವೇಶವಿರದಂತೆ ಅಹಿಂದ ವರ್ಗಗಳು ಒಂದಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರುವಂತಹ ಕೆಲಸವಾಗಬೇಕಿದೆ. ಹಿಂದುಳಿದ ವರ್ಗಗಳ ದುರುಪಯೋಗ ಮಿತಿಮೀರಿದೆ. ಅದರಲ್ಲೂ, ಹಿಂದುತ್ವವಾದಿಗಳು ಪ್ರತಿ ಜನಾಂಗವನ್ನು ತನ್ನತ್ತ ಸೆಳೆಯುವಲ್ಲಿ ನಿರತವಾಗಿವೆ. ಜಾತಿ ಜಾತಿಗಳ ಬೆಸುಗೆ ಮುಂದಿಟ್ಟಿದ್ದಾರೆ. ಜಾತಿಗಳನ್ನು ಒಡೆದು ರಾಜಕೀಯ ಮಾಡಲು ಮುಂದಾಗಿರುವ ಸಮಯದಲ್ಲಿ, ಶೋಷಿತ ಸಮುದಾಯಗಳ ಪ್ರಾಬಲ್ಯ, ಅಸ್ತಿತ್ವ ಉಳಿಸಿಕೊಳ್ಳಲು ‘ಅಹಿಂದ’ ಬಹು ಮುಖ್ಯವಾದದ್ದು. ಜತೆಗೆ ಈ ಮೂಲಕ ಎಲ್ಲರ ಒಳಗೊಂಡ ಸಮಾವೇಶ ಪ್ರಸ್ತುತ ಅತ್ಯಗತ್ಯವಾಗಿದೆ” ಎಂದು ತಿಳಿಸಿದರು.
“ಅಹಿಂದ ಚಳವಳಿ ಅರಸು ಅವರಿಂದ ಹೇಗೆ ಮೂಡಿಬಂದಿತ್ತೋ ಹಾಗೆ ಇಂದು ಉಳಿದಿಲ್ಲ. ಅದರ ಆಶಯ ಎಸ್ ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗುವಂತೆ ಮಾಡಿತು. ಅಂದರೆ, ಪ್ರಬಲ ಜನಾಂಗದ ಹಿಡಿತದಲ್ಲಿದ್ದ ಅಧಿಕಾರ, ಹಿಂದುಳಿದ ವರ್ಗಗಳಿಗೆ ವರ್ಗಾವಣೆ ಕಂಡಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜಾತಿ ಲೆಕ್ಕಾಚಾರ ಕೆಲಸ ಮಾಡಿಯೇ ಇಲ್ಲ. ಅವಕಾಶ ಕೂಡಿಬಂತು, ರಾಜಕೀಯ ಮೇಲಾಟ ಏನೇ ಇದ್ದರು ಬದಲಾವಣೆ ಪರ್ವ ಕಾಣಲು ಸಾಧ್ಯವಾಯಿತು. ಅದಾಗಿಯೂ ಇದುವರೆಗೆ ದಲಿತ, ಅಲ್ಪಸಂಖ್ಯಾತ ಮುಖ್ಯಮಂತ್ರಿ ನೋಡಲು ಸಾಧ್ಯವೇ ಆಗಿಲ್ಲ. ಹೀಗಿರುವಾಗ, ಹಿಂದುಳಿದ ವರ್ಗದ ಅಹಿಂದ ನಾಯಕರಾದ ಸಿಎಂ ಸಿದ್ದರಾಮಯ್ಯ ಅವರ ಅಗತ್ಯತೆ ಹಿಂದುಳಿದ ವರ್ಗಗಳಿಗೆ ಇದೆ. ಈಗ ಹಳೇ ಮೈಸೂರು ಪ್ರಾಂತ್ಯ ಅಹಿಂದ ಹಿನ್ನಲೆಯಲ್ಲಿಯೇ ರಾಜಕೀಯವಾಗಿ ಶಕ್ತಿ ಕೇಂದ್ರವಾಗಿದೆ. ಮುಖ್ಯಮಂತ್ರಿ ಬದಲಾವಣೆ ಅಸ್ತಿತ್ವನ್ನೇ ತೆಗೆಯುವ ಕೆಲಸ ಮಾಡಿದಂತೆ, ಹಿಂದುಳಿದ ವರ್ಗದ ನಾಯಕತ್ವ ಊಹೆಗೂ ನಿಲುಕದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿದೆ” ಎಂದರು.
“ಎಲ್ಲರನ್ನು, ಎಲ್ಲ ಸಂದರ್ಭಗಳಲ್ಲಿ ಒಟ್ಟಿಗೆ ಕರೆದೊಯ್ಯಬಲ್ಲ, ರಾಜಕೀಯವಾಗಿ ಎಲ್ಲ ಸಮುದಾಯಗಳ ಹಿತ ಕಾಯಬಲ್ಲ ಮುಖ್ಯಮಂತ್ರಿಯನ್ನು ಕಳೆದುಕೊಳ್ಳುವ ಸನ್ನಿವೇಶ ಆತಂಕಕಾರಿ. ಪ್ರಸ್ತುತ ಸಮಾಜವಾದಿ, ಅಹಿಂದ ಹಿನ್ನಲೆಯ ಮುಖ್ಯಮಂತ್ರಿಯವರಿಗೆ ಜನರ ನಾಡಿಮಿಡಿತ ಗೊತ್ತಿದೆ. ಎಲ್ಲವೂ ಆಗದಿರಬಹುದು, ನಿರೀಕ್ಷೆ ತಲುಪದೇ ಇರಬಹುದು. ಆದರೆ, ಶೋಷಿತ ಸಮುದಾಯಗಳ ಪರವಾಗಿ ಆಡಳಿತ ನಡೆಸುವ ವ್ಯಕ್ತಿತ್ವ, ನಾಯಕತ್ವ ಉಳಿದುಕೊಂಡಿದೆ. ಮುಂಬರುವವರಲ್ಲಿ ಇದನ್ನೆಲ್ಲಾ ಕಾಣಲು ಸಾಧ್ಯವೇ? ಸಾಧ್ಯವಿರದ ಪರಿಸ್ಥಿತಿಯು ಸವಲಾಗಲಿದೆ. ಜತೆಗೆ ಮುಂಬರುವ ಚುನಾವಣೆ ದೃಷ್ಟಿಯಿಂದಲೂ ಅಹಿಂದ ಚಳವಳಿ ಗಟ್ಟಿಗೊಳಿಸಿ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಸೂಕ್ತ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
“ಎಲ್ಲಿ ಎಡವಿದ್ದೀವಿ ಅದನ್ನೆಲ್ಲ ಸರಿಪಡಿಸಿಕೊಳ್ಳಲು, ರಾಜಕೀಯವಾಗಿ ಸಂದೇಶ ರವಾನಿಸಲು ತೀರಾ ಅಗತ್ಯ. ಬದಲಾವಣೆ ಕಂಡರೆ ರಾಜ್ಯದಲ್ಲಿ ಹಿಡಿತ ಕಳೆದುಕೊಳ್ಳುತ್ತದೆ. ಶೋಷಿತ ವರ್ಗಗಳು ರಾಜಕೀಯ ಪಕ್ಷಗಳ ದಾಳವಾಗಿ, ಆಸೆ, ಆಮಿಷಕ್ಕೆ ಬಲಿಯಾಗುವ ಸಂದರ್ಭ ಬರಬಹುದು. ಸಂವಿಧಾನಾತ್ಮಕ ಚಿಂತನೆಯುಳ್ಳ ನಾಯಕತ್ವಕ್ಕಾಗಿ ‘ಅಹಿಂದ ಸಮಾವೇಶ’ ಮೈಸೂರಿನಲ್ಲಿ ನಡೆಯಬೇಕು. ಈ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕಿದೆ” ಎಂದರು.
ಸಿದ್ದರಾಮಯ್ಯ ಅವರು ಇಂದು ‘ಅಹಿಂದ’ವನ್ನು ತಮ್ಮ ರಾಜಕೀಯ ಆಧಾರವಾಗಿ ಮಾಡಿಕೊಂಡು, ಹಿಂದುಳಿದ ವರ್ಗಗಳ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ನೇತೃತ್ವದಲ್ಲಿ ಅಹಿಂದ ಸಮುದಾಯಗಳನ್ನು ಒಗ್ಗೂಡಿಸಿ, ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಇತ್ತೀಚಿಗೆ ಸಿದ್ದರಾಮಯ್ಯ ಅವರು ಡಿ. ದೇವರಾಜ ಅರಸು ಅವರ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆಯನ್ನು ಮುರಿದು, ಕರ್ನಾಟಕ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅರಸು ಅವರ ಪರಂಪರೆಯನ್ನು ಮುಂದುವರೆಸುವ ಸಂಕೇತವಾಗಿದೆ.
ಈ ಇಬ್ಬರೂ ನಾಯಕರು ಕರ್ನಾಟಕದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯದ ಪ್ರತಿನಿಧಿಗಳಾಗಿ, ತಳವರ್ಗಗಳನ್ನು ರಾಜಕೀಯ ಕೇಂದ್ರಬಿಂದುವಾಗಿಸಿ, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಅರಸು ಅವರಿಂದ ಪ್ರೇರಿತರಾಗಿ ಸಿದ್ದರಾಮಯ್ಯ ಅವರು ಅಹಿಂದದ ಮೂಲಕ ಹೊಸ ಆಯಾಮ ನೀಡಿದ್ದಾರೆ. ಇದು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ ಮತ್ತು ಸಬಲೀಕರಣದ ಹೋರಾಟವನ್ನು ಮುಂದುವರೆಸುವ ಮಹತ್ವದ ಅಧ್ಯಾಯವಾಗಿದೆ.
‘ಅಹಿಂದ’ ಎಂಬ ಪರಿಭಾಷೆಯು ಕೇವಲ ರಾಜಕೀಯ ಸಾಧನವಲ್ಲ; ಅದು ಕರ್ನಾಟಕದ ಸಾಮಾಜಿಕ ನ್ಯಾಯದ ಸಂಕೇತವಾಗಿ ಮಾರ್ಪಟ್ಟಿದೆ. ಡಿ. ದೇವರಾಜ ಅರಸು ಅವರು ಅದಕ್ಕೆ ಆರಂಭವನ್ನು ನೀಡಿದರೆ, ಸಿದ್ದರಾಮಯ್ಯ ಅವರು ಅದನ್ನು ಇಂದಿನ ದಿನಗಳಲ್ಲಿ ಜೀವಂತವಾಗಿ ಇರಿಸಿ, ಹೊಸ ಉನ್ನತಿಗೆ ಕೊಂಡೊಯ್ದಿದ್ದಾರೆ. ಇದು ರಾಜ್ಯದ ತಳವರ್ಗಗಳಿಗೆ ಆಶಾಕಿರಣವಾಗಿ ಮುಂದುವರೆದರೆ ಒಳಿತಾಗಬಹುದು.





