ಗೋವಿನಜೋಳ ಬೆಳೆಯ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದರೆ ಈಗಿನ ಬೆಲೆ ಎಷ್ಟು ಲಾಭದಾಯಕ ಎಂದು ರೈತರು ಮತ್ತೆ ಮತ್ತೆ ಯೋಚಿಸಬೇಕಾದ ಸ್ಥಿತಿ ಈ ವರ್ಷ ನಿರ್ಮಾಣವಾಗಿದೆ. ಏಕೆಂದರೆ, ಗೋವಿನ ಜೋಳ ಹಾಕಿ ನೂರಕ್ಕೆ ನೂರರಷ್ಟು ಇಳುವರಿ ತೆಗೆಯುವುದು ಅಷ್ಟು ಸುಲಭದ ಮಾತಲ್ಲ.
ಮಧ್ಯ ಕರ್ನಾಟಕದ ಜಿಲ್ಲೆಗಳಾದ ಹಾವೇರಿ, ಗದಗ, ಧಾರವಾಡ, ಕೊಪ್ಪಳ ಮತ್ತು ದಾವಣಗೆರೆಗಳಲ್ಲಿ ಕಳೆದ ಹತ್ತು, ಹನ್ನೆರಡು ವರ್ಷಗಳಿಂದ ಗೋವಿನ ಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಗೋವಿನ ಜೋಳ ಉಪ ಉತ್ಪನ್ನ ತಯಾರಿಕೆಯ ಕಾರ್ಖಾನೆಗಳೂ ಈ ಭಾಗದಲ್ಲಿ ತಲೆ ಎತ್ತಿವೆ. ಹಾವೇರಿ ಜಿಲ್ಲೆಯೊಂದರಲ್ಲೆ ಇಂಥ ಆರೇಳು ಕಾರ್ಖಾನೆಗಳು ಕ್ರಿಯಾಶೀಲವಾಗಿವೆ. ಹೀಗಿದ್ದೂ ಗೋವಿನ ಜೋಳಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಗ್ಗಕ್ಕೆ ಮುಗ್ಗ ಎಂಬ ಸ್ಥಿತಿಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಬೇಕಾದ ಸಂಕಷ್ಟಕ್ಕೆ ನಮ್ಮ ರೈತರು ಸಿಕ್ಕಿಕೊಂಡಿದ್ದಾರೆ. ರೈತರಿಗೆ ಲಾಭದಾಯಕ ಬೆಲೆ ಸಿಕ್ಕುವುದಿಲ್ಲ ಎನ್ನುವುದಾದರೆ, ಈ ಕಾರ್ಖಾನೆಗಳನ್ನಾದರೂ ಏಕೆ ಸ್ಥಾಪಿಸಬೇಕಿತ್ತು ಎಂಬ ಸಹಜ ಪ್ರಶ್ನೆ ಏಳುತ್ತದೆ. ಇಲ್ಲಿನ ನೆಲ, ಜಲ ಹಾಗೂ ಪರಿಸರವನ್ನು ಮಾಲಿನ್ಯಗೊಳಿಸಲೆಂದೇ? ಅಥವಾ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಲೆಂದೇ? ಒಂದನೇಯ ಪರಿಣಾಮವಂತೂ ನಿಶ್ಚಿತ. ಎರಡನೆಯ ಕಾರಣಕ್ಕೆ ಬಂದರೆ ಈ ಕಾರ್ಖಾನೆಗಳು ಎಷ್ಟು ಜನರಿಗೆ ಉದ್ಯೋಗವಕಾಶ ಕಲ್ಪಿಸಿವೆ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
2005-06ರಲ್ಲಿ ಗೋವಿನ ಜೋಳದ ಬೆಲೆ ಕ್ವಿಂಟಾಲಿಗೆ 500-600 ರೂ. ಇತ್ತಷ್ಟೆ. ನಂತರ 700, 800 ಹಾಗೇ ಸಾವಿರಕ್ಕೂ ಬಂತು. 2012-13ರಲ್ಲಿ ಆಗಲೇ ಅದಕ್ಕೆ 1,360 ರೂ. ಬೆಂಬಲ ಬೆಲೆ ಘೋಷಣೆಯಾಗಿ ಅದರ ಬೆಲೆ 1,200ರ ಆಸುಪಾಸಿನಲ್ಲಿ ಸುಳಿದಾಡತೊಡಗಿತ್ತು. ಮುಖ್ಯವಾಗಿ ಎರೆಸೀಮೆಯ ಈರುಳ್ಳಿ/ಮೆಣಸಿನಕಾಯಿ/ಹತ್ತಿ ನವಣಿ/ಸಾವೆ/ತೊಗರಿ/ಹುರಳಿಗಳಂಥ ಮಿಶ್ರಬೆಳೆಗಳ ಮತ್ತು ಗೆಜ್ಜೆ ಶೇಂಗಾದ ಕ್ಷೇತ್ರವನ್ನು ಆಕ್ರಮಿಸಿಕೊಂಡ ಗೋವಿನಜೋಳ ಹೆಚ್ಚಿನ ಆಳುಕಾಳುಗಳ ಖರ್ಚು ಇಲ್ಲದ ಕಾರಣಕ್ಕೆ, ಮಳೆ ಎಷ್ಟೆ ಆದರೂ ಕೆಡದಿರುವ ಕಾರಣಕ್ಕೆ ರೈತರ ಮೊದಲ ಆಯ್ಕೆಯಾಗಿಬಿಟ್ಟಿತು.

ಈರುಳ್ಳಿ/ ಮೆಣಸಿನ ಗಿಡ/ ಹತ್ತಿ ಕ್ಷೇತ್ರದಲ್ಲಿ ತರಕಾರಿಗಳನ್ನೂ ಬೆಳೆಯುತಿದ್ದ ರೈತರು ಅವೆಲ್ಲವುಗಳಿಂದ ವಂಚಿತರಾಗಿ ತಾವೇ ಬೆಳೆಯುತಿದ್ದ ಬೆಳೆಗಳ ಗ್ರಾಹಕರಾಗಿ ಮಾರ್ಪಟ್ಟರು. ಇದ್ದುದರಲ್ಲಿ ಹೆಚ್ಚು ಲಾಭದಾಯಕ ಎಂಬ ಭ್ರಮೆಯಲ್ಲಿ, ತಾವು ಉಣ್ಣದಿದ್ದರೂ ಗೋವಿನ ಜೋಳಕ್ಕೆ ಜೋತು ಬಿದ್ದರು.
ಇದನ್ನು ಓದಿದ್ದೀರಾ?: ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು
ಈಗ ಗೋವಿನ ಜೋಳದ ಬೆಂಬಲ ಬೆಲೆ 2,400 ಇದೆ. ಆದರೆ ಮಾರುತ್ತಿರುವುದು 2,000 ರೂ. ಒಳಗೇ. ಕಳೆದ ವರ್ಷ2,300ರ ಆಸುಪಾಸಿನಲ್ಲಿ ಮಾರಾಟವಾಗಿದ್ದ ಗೋವಿನ ಜೋಳದ ಬೆಲೆ ಈಗ ಒಮ್ಮೆಲೆ 400 ರೂ. ಕಡಿಮೆ ಆಗಿರುವುದು ರೈತರನ್ನು ದಿಗ್ಮೂಢರನ್ನಾಗಿಸಿದೆ.
ಹೀಗೆ ಒಮ್ಮೆಲೆ ಬೆಲೆ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಕೃಷಿತಜ್ಞರಿಂದ ಈವರೆಗೂ ಯಾವುದೇ ವಿಶ್ಲೇಷಣೆ ನಡೆದ ಹಾಗಿಲ್ಲ. ಅಮೆರಿಕೆಯ ಸುಂಕ ಸಂಘರ್ಷ ಮತ್ತು ಕೇಂದ್ರ ಸರ್ಕಾರದ ರಫ್ತು ನೀತಿಯ ವೈಫಲ್ಯಗಳೂ ಇದಕ್ಕೆ ಕಾರಣವಾಗಿರಬಹುದು.
ಗೋವಿನಜೋಳ ಬೆಳೆಯ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿದರೆ ಈಗಿನ ಬೆಲೆ ಎಷ್ಟು ಲಾಭದಾಯಕ ಎಂದು ರೈತರು ಮತ್ತೆ ಮತ್ತೆ ಯೋಚಿಸಬೇಕಾದ ಸ್ಥಿತಿ ಈ ವರ್ಷ ನಿರ್ಮಾಣವಾಗಿದೆ. ಏಕೆಂದರೆ, ಗೋವಿನ ಜೋಳ ಹಾಕಿ ನೂರಕ್ಕೆ ನೂರರಷ್ಟು ಇಳುವರಿ ತೆಗೆಯುವುದು ಅಷ್ಟು ಸುಲಭದ ಮಾತಲ್ಲ.
ರೋಹಿಣಿ ಮಳೆಗೆ ಬಿತ್ತನೆಯಾಗುವ ಗೋವಿನಜೋಳಕ್ಕೆ ಅದು ಸಸಿಯಾಗಿದ್ದಾಗಲೂ ಮಳೆ ಓಡಾಡುತ್ತಲೇ ಇರಬೇಕು. ಮಳೆ ಇರದಿದ್ದರೆ ಅದಕ್ಕೆ ಸುಳಿಕೀಟ ಬಾಧೆ ಖಂಡಿತ. ಔಷಧೋಪಚಾರಕ್ಕೆ ಹೆಚ್ಚಿನ ಖರ್ಚು ಅನಿವಾರ್ಯ ಆದರೂ ಪರಿಣಾಮ ನಿಶ್ಚಿತವಿರುವುದಿಲ್ಲ. ತದನಂತರ ಪಂಚಮಿಯ ಆಸುಪಾಸಿನಲ್ಲಿ ಏನಾದರೂ ಮಳೆ ಕೈಕೊಟ್ಟರೆ ಬೆಳೆ ವಾರೊಪ್ಪತ್ತಿನಲ್ಲೆ ಬರ್ಬಾದು. ಗೋವಿನ ಜೋಳ ಒಮ್ಮೆ ಬಾಡಿತೆಂದರೆ, ನಂತರ ಮಳೆಯಾದರೂ ಚೇತರಿಸಿಕೊಳ್ಳುವುದು ಅಸಾಧ್ಯ. ಏನೋ ಸ್ವಲ್ಪ ಮಳೆ ಆಯಿತೆಂದರೂ ಇಳುವರಿ ಕುಂಠಿತಗೊಳ್ಳುವುದೂ ಅಷ್ಟೇ ಪಕ್ಕಾ. ಗೋವಿನ ಜೋಳ ನಿರಂತರ ಬಹಳಷ್ಟು ತೇವಾಂಶ ಬೇಡುವ ಬೆಳೆ ಆದ್ದರಿಂದ ಅದಕ್ಕೆ ಕೊನೆವರೆಗೂ ಮಳೆ ಬೇಕೆ ಬೇಕು. ನೀರಾವರಿ ಬೆಳೆಗಾರರದೂ ಇದಕಿಂಥ ವಿಭಿನ್ನ ಪರಿಸ್ಥಿತಿ ಇರಲ್ಲ. ಏಕೆಂದರೆ, ಮಳೆಗಾಲದಲ್ಲಿ ಮಳೆಯ ಸಾಧ್ಯತೆಯನ್ನು ನಂಬಿ, ಅಥವಾ ನೀರು ಹಾಯಿಸಿದ ಮೇಲೆ ಮಳೆ ಆದರೆ ಬೆಳೆಗೆ ಶೀತಬಾಧೆ ಕಾಡಬಹುದೆಂಬ ಲೆಕ್ಕಾಚಾರದಲ್ಲಿ ಅವರದೂ ಇದೇ ಕಥೆ ಆಗಿರುತ್ತದೆ. ಗೋವಿನಜೋಳ ಬೆಳೆವ ಪ್ರದೇಶ ಹೆಚ್ಚಾಗಿ ಅರೆಮಲೆನಾಡು ಹಾಗೂ ಬಯಲು ಸೀಮೆಯನ್ನೆ ಒಳಗೊಂಡಿರುವುದನ್ನು ನಾವಿಲ್ಲಿ ನೆನಪಿಗೆ ತಂದುಕೊಳ್ಳುವುದು ಅಗತ್ಯ. ಅಲ್ಲದೇ, ಕೃಷಿ ಈಗ ಸಂಪೂರ್ಣ ಯಾಂತ್ರೀಕರಣಗೊಂಡಿರುವುದರಿಂದ ಉಳುಮೆಯ ಖರ್ಚೂ ಸಹಜವಾಗಿ ಹೆಚ್ಚಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ಟ್ರ್ಯಾಕ್ಟರ್ ಇತ್ಯಾದಿ ಯಂತ್ರಗಳನ್ನೇ ಅವಲಂಬಿಸಬೇಕಾದ ಜರೂರತ್ತು ಉಂಟಾಗಿದೆ. ಎಲ್ಲ ಸೌಲಭ್ಯಗಳು ಎಲ್ಲರಿಗೂ ಇರುವುದಿಲ್ಲವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವು ಸಮಯಕ್ಕೆ ಒದಗದ ಪರಿಸ್ಥಿತಿಗಳೇ ಹೆಚ್ಚು.
ಈ ಎಲ್ಲ ವಾಸ್ತವಿಕ ಸಂಗತಿಗಳನ್ನು ಆಧರಿಸಿ ನೋಡಿದಾಗ ಗೋವಿನ ಜೋಳದ ಸರಾಸರಿ ಇಳುವರಿಯನ್ನು ಎಕರೆಗೆ 12-15 ಕ್ವಿಂಟಲ್ ಎಂದು ಪರಿಗಣಿಸಬಹುದು.

ಗೋವಿನ ಜೋಳದ ಸರಾಸರಿ ಇಳುವರಿ ಎಕರೆಗೆ 15 ಕ್ವಿಂಟಲ್ ಎಂದೇ ಪರಿಗಣಿಸೋಣ. ಇವತ್ತಿನ ಮಾರುಕಟ್ಟೆ ಬೆಲೆ 2,000 ಎಂದೇ ತಿಳಿಯೋಣ. ಇದರಿಂದ ನಮ್ಮ ರೈತರಿಗೆ ಎಕರೆಗೆ ಸಿಗುವ ಆದಾಯ 30,000 ರೂ. ಎಂದಾಯಿತು. ಇನ್ನು ಗೋವಿನ ಜೋಳವನ್ನು ಬೆಳೆಯಲು ಎಕರೆಗೆ ತಗಲುವ ಖರ್ಚುವೆಚ್ಚಗಳೆಷ್ಟು ಎಂಬುದನ್ನೂ ಕೂಡ ಹೀಗೆ ಅಂದಾಜಿಸಬಹುದು.
ರಂಟೆಗೆ-2,000 ರೂ. ಹರಗಿ ಬಿತ್ತಲು-2,000 ರೂ. ಎರಡು ಸಲ ಎಡೆ ಹೊಡೆಯಲು-2,000 ರೂ. 500 ರೂ.ಗೆ ಕೆಜಿ ಬೀಜ, ಎಕರೆ 6 ಕೆಜಿ ಬೀಜ ಬೇಕು. ಬೀಜಕ್ಕೆ-3,000 ರೂ. ಒಂದೇ ಡಿಎಪಿ, ಯೂರಿಯಾ, ಪೊಟ್ಯಾಷ್ ಅಂತ ಹಿಡಿದರೂ, ಗೊಬ್ಬರ ನೀಡುವ ಖರ್ಚು ಸೇರಿ, ಗೊಬ್ಬರಕ್ಕೆ-3,000 ರೂ. ಒಮ್ಮೆ ಮಾತ್ರ ಔಷಧಿ ಸಿಂಪಡಿಸಿದರೂ ಅದಕ್ಕೆ- 2,000 ರೂ. ಇನ್ನು ತೆನೆ ಮುರಿದು ಒಂದೆಡೆ ರಾಶಿ ಹಾಕಲಿಕ್ಕೆ-4,000 ರೂ. ಕ್ವಿಂಟಾಲ್‌ಗೆ 70 ರೂ.ನಂತೆ 15 ಕ್ವಿಂಟಲ್ ತೆನೆ ಒಕ್ಕಲು ಮಿಶನ್ನಿಗೆ- 1,050 ರೂ, ಮಾರುಕಟ್ಟೆಗೆ ಸಾಗಣಿಕೆಗೆ- 1,000 ರೂ. ಮಿಶನ್ ಕಾರ್ಮಿಕರು ಮತ್ತು ಹಮಾಲರಿಗೆ ಕಾಳು ತಲಾ 50 ಕೆಜಿ. ಅಂದರೆ ಇಲ್ಲಿಗೆ 14 ಕ್ವಿಂಟಲ್ ಆಯ್ತು ಮತ್ತು 28 ಸಾವಿರ ರೂ. ಪಟ್ಟಿ ಹುಟ್ಟಬೇಕು. ಆದರೆ ಇದರಲ್ಲಿ ತೂಕದಲ್ಲಿ ವ್ಯತ್ಯಯ ಆದರೆ?
ಎಲೆಕ್ಟ್ರಾನಿಕ್ ತಕ್ಕಡಿಯನ್ನೆ ಬಳಸಬೇಕು ಎಂಬ ನಿಯಮವಿದ್ದರೂ ವ್ಯಾಪಾರಸ್ಥರು ಇಂದಿಗೂ ಹಳೆಯ ಸ್ಕೇಲ್ ಕಾಟಾಗಳನ್ನೆ ಬಳಸುತ್ತಿರುವುದರಿಂದ ಇಂಥ ಸಾಧ್ಯತೆ ಇದ್ದೇ ಇರುತ್ತದೆ. 14 ಕ್ವಿಂಟಲ್‌ಗೆ 60 ಕೆಜಿಯ 19 ಚೀಲಗಳಾಗುತ್ತವೆ. ಪ್ರತಿ ಚೀಲಕ್ಕೆ ಅರ್ಧ ಕೆಜಿ ಕಾಳು ವ್ಯತ್ಯಯ ಹಾಗೂ ಚೀಲಕ್ಕೆ ಒಂದು ಕೆಜಿ ಮುರಿದರೆ ಇಳುವರಿ ಒಟ್ಟು ಕಡಿತ 28ವರೆ ಕೆಜಿ ಆಯ್ತು ಹಾಗೂ ಇಳುವರಿಯ ಲೆಕ್ಕ 13 ಕ್ವಿಂಟಲ್ 71ವರೆ ಕೆಜಿಗೆ ಬಂತು. ಪಟ್ಟಿಯ ಒಟ್ಟು ರಕಮು 27,430 ರೂ. ಹುಟ್ಟಿತು.
ಮತ್ತೆ ಇದರಲ್ಲಿ ನೂರಕ್ಕೆ ಎರಡು ರೂ. ದಲಾಲಿ 540 ರೂ. 60 ಪೈಸೆ ತೆಗೆದರೆ ರೈತನಿಗೆ ಸಿಗಬಹುದಾದ ನಿವ್ವಳ ಆದಾಯ 26,859 ರೂ. 40 ಪೈಸೆ.
ಇದನ್ನು ಓದಿದ್ದೀರಾ?: ಜಮೆಯಾಗದ ಬೆಳೆ ಹಾನಿ ಪರಿಹಾರ : ತಪ್ಪದ ರೈತರ ಸಂಕಷ್ಟ
ಈ ನಿವ್ವಳ ಆದಾಯದಲ್ಲಿ ಎಕರೆಯಲ್ಲಿ ಗೋವಿನಜೋಳ ಬೆಳೆಗೆ ಮಾಡಿದ ಖರ್ಚು 20,050 ರೂ. ಕಳೆದರೆ, ಅವನಿಗೆ ಉಳಿಯುವುದು 6,849 ರೂ. 40ಪೈಸೆ.
ಒಬ್ಬ ರೈತ ಹತ್ತು ಎಕರೆಯಲ್ಲಿ ಗೋವಿನ ಜೋಳ ಬೆಳೆದಿದ್ದರೆ ಎರಡು ಲಕ್ಷ ಖರ್ಚು ಮಾಡಿರುತ್ತಾನೆ. ಅವನಿಗೆ 68,000 ಆದಾಯ ಸಿಗುತ್ತದೆ. ಐದು ಎಕರೆಯಲ್ಲಿ ಬೆಳೆದವನು ಒಂದು ಲಕ್ಷ ಖರ್ಚು ಮಾಡಿರುತ್ತಾನೆ. ಅವನಿಗೆ 34,000 ರೂ. ಆದಾಯ ಸಿಗುತ್ತದೆ. ನಾಲ್ಕು ಎಕರೆಯಲ್ಲಿ ಬೆಳೆದವನು 80 ಸಾವಿರ ರೂ. ಖರ್ಚು ಮಾಡಿರುತ್ತಾನೆ. ಅವನಿಗೆ 28 ಸಾವಿರ ರೂ. ಆದಾಯ ಸಿಗುತ್ತದೆ. ಮೂರು ಎಕರೆಯಲ್ಲಿ ಬೆಳೆದವನು 60 ಸಾವಿರ ರೂ. ಖರ್ಚು ಮಾಡಿರುತ್ತಾನೆ. ಅವನಿಗೆ 22 ಸಾವಿರ ರೂ. ಆದಾಯ ಸಿಗುತ್ತದೆ. ಎರಡು ಎಕರೆಯಲ್ಲಿ ಬೆಳೆದವನು 40 ಸಾವಿರ ರೂ. ಖರ್ಚು ಮಾಡಿರುತ್ತಾನೆ. ಅವನಿಗೆ 13 ಸಾವಿರ ರೂ. ಆದಾಯ ಸಿಗುತ್ತದೆ. ಇದರಲ್ಲಿ ದೊಡ್ಡ ಹಿಡುವಳಿದಾರರಿಗೆ ಹೆಚ್ಚು ಲಾಭ. ಸಣ್ಣ ರೈತನಿಗೇ ನಷ್ಟ ಎನ್ನಬಹುದೇ? ಸಣ್ಣ ರೈತನಿಗೇ ಲಾಭ, ದೊಡ್ಡ ರೈತನಿಗೆ ಕಷ್ಟ ಎನ್ನಬಹುದೇ? ಇವರೆಲ್ಲ ಸಾಲ ಮಾಡಿ ಬೀಜ ಗೊಬ್ಬರ ತಂದು ಹಾಕಿ ಬಂದ ಆದಾಯದಲ್ಲಿ ಸಾಲಕ್ಕೆ ಬಡ್ಡಿ ತೆತ್ತರೆ ಇನ್ನು ಉಳಿದಿದ್ದರಲ್ಲಿ ವರ್ಷವಿಡೀ ಜೀವನೋಪಾಯ ಸಾಧ್ಯವೇ?
ಬೇರೆ ಬೆಳೆಗಳ ಬೆಲೆಗಳೂ, ವರಮಾನವೂ ಇದಕ್ಕಿಂತ ಉತ್ತಮವಾಗಿಲ್ಲ. ಬೇರೆ ಬೆಳೆಗಳಿಗಿಂತ ಗೋವಿನಜೋಳವೆ ಉತ್ತಮ ಎಂದೇ ಅವರು ಈ ಬೆಳೆಗೆ ಬಂದಿದ್ದು. ಇದಕ್ಕೇ ಹೀಗಾದರೆ… ಬೇರೆ ಬೆಳೆಗಳನ್ನು ಬೆಳೆವ ನಮ್ಮ ರೈತರ ಪಾಡನ್ನು ಕೇಳುವರಾರು?

ಈ ಕುರಿತು ನಮ್ಮ ಸರ್ಕಾರಗಳು, ಅಧಿಕಾರಿಗಳು, ಕಾರ್ಖಾನೆ ಮಾಲೀಕರು ಮುಕ್ತವಾಗಿ ಯಾಕೆ ಯೋಚಿಸುತ್ತಿಲ್ಲ. ಪ್ರಜ್ಞಾವಂತ ನಾಗರಿಕರು ಯಾಕೆ ಪ್ರಶ್ನಿಸುತ್ತಿಲ್ಲ? ಇನ್ನು ಯಾವ ಧೈರ್ಯದ ಮೇಲೆ ರೈತರು ನಮ್ಮ ನಡುವೆ ಬದುಕಿದ್ದಾರೆ? ಇದಲ್ಲವೇ ಆಧುನಿಕ ಕೃಷಿಯ ಪವಾಡ?

ಚಂಸು ಪಾಟೀಲ
ಕೃಷಿಯನ್ನು ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ, ಕವಿ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974) ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು.
ಕೃಷಿ ಸಮಸ್ಯೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು, ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.




