ಒಬ್ಬ ವಕೀಲ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಲಾರಂಭಿಸುತ್ತಾನೆ ಎನ್ನುವುದಾದರೆ, ಹಳ್ಳಿಗಳ ದೇಶವಾಗಿರುವ ಭಾರತೀಯ ಸಮಾಜದಲ್ಲಿ ಸಾಮಾನ್ಯ ನಾಗರಿಕರ ನಡುವೆ ತಳಸಮುದಾಯಗಳು ಬದುಕುವುದು ಹೇಗೆ? ಎಂಬುದು ಒಂದು ಗಂಭೀರವಾದಂತಹ ಸವಾಲಾಗಿದೆ.
ದೇಶದ ನ್ಯಾಯಾಂಗ ವ್ಯವಸ್ಥೆಯ ಪ್ರತಿನಿಧಿಯಾಗಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನ. ದೇಶದ ಸಾರ್ವಭೌಮತ್ವ, ಪ್ರಜಾಪ್ರಭುತ್ವದ ಮೇಲಿನ ದಾಳಿ ನಡೆಯುತ್ತಿದ್ದು, ಕಾನೂನಿನ ಶಿಷ್ಟತೆ ಕಾಪಾಡಬೇಕಾದವರಿಂದಲೇ ಸಂವಿಧಾನದ ಕಗ್ಗೊಲೆ ನಡೆಯುತ್ತಿದೆ ಎಂದು ಚಿತ್ರದುರ್ಗ, ದಾವಣಗೆರೆಯ ಸಂಘಟನೆಗಳು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಜುರಾಹೋ ದೇವಾಲಯದ ವಿಷ್ಣು ಮೂರ್ತಿ ಪುನಃಸ್ಥಾಪನೆ ಪಿಐಎಲ್‌ಗೆ ಸಂಬಂಧಿಸಿದಂತೆ ಈ ದುಷ್ಕೃತ್ಯ ನಡೆದಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲೆ ದಾಳಿ ಎಂದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ವಿಚಾರಣೆ ಸಮಯದಲ್ಲಿ ವಕೀಲ ರಾಕೇಶ್ ಕಿಶೋರ್ ಎಂಬಾತ ಸಿಜೆಐ ಗವಾಯಿ ಅವರ ಮೇಲೆ ಚಪ್ಪಲಿ ಎಸೆದಿದ್ದು, ʼಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲʼವೆಂದು ಕೂಗಾಡಿದರು. ಬಳಿಕ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಹೊರಗೆ ಎಳೆದೊಯ್ದರು.
ಈ ಕುರಿತು ಹಿರಿಯ ವಕೀಲ ಬಿ ಎಂ ಹನುಮಂತಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಕೀಲ ರಾಜೇಶ್ ಕಿಶೋರ್ ಎಂಬಾತನನ್ನು ಬಂಧಿಸಿ ದೇಶದ್ರೋಹಿ ಎಂದು ಘೋಷಿಸಬೇಕು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆಯುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸುತ್ತೇವೆ. ಈ ಘಟನೆ ದೇಶಕ್ಕೆ ಮಾಡಿದ ಅವಮಾನವಾಗಿದ್ದು, ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೋರ್ಟಿನಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ಆಗುವ ಅಪಮಾನವನ್ನು ಸಹಿಸುವುದಿಲ್ಲವೆಂದು ಹೇಳುತ್ತ ರಾಕೇಶ್ ಕಿಶೋರ್ ಎಂಬ ವಕೀಲ ತಾನು ಧರಿಸಿದ್ದ ಶೂ ಎಸೆದಿದ್ದಾನೆ. ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಅಧಿಪತ್ಯ ಸಾಧಿಸುತ್ತಿರುವ ಸಂಘ ಪರಿವಾರದವರು ನ್ಯಾಯಾಂಗವನ್ನೂ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸಿದ್ದಾರೆ. ಇದೇ ಮಾನಸಿಕತೆಯ ಜನರು ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಪಡಿಸುವ ಮಾತುಗಳನ್ನೂ ಆಡಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಕುಣಿಯದ ನ್ಯಾಯಾಧೀಶರನ್ನು ಬೆದರಿಸಲು ಇಂತಹ ಕೃತ್ಯಗಳನ್ನು ವ್ಯವಸ್ಥಿತವಾಗಿ ಎಸಗಲಾಗುತ್ತಿದೆ. ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗದ ಅಸ್ತಿತ್ವ ಉಳಿಸಲು ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್ ಖಂಡಿಸಿದ್ದಾರೆ.
ಜಿಲ್ಲಾ ವಕೀಲ ಸಂಘ ಅಧ್ಯಕ್ಷ ಎಸ್ ಎಂ ರಾಜೇಶ್, “ಇದು ನ್ಯಾಯಾಂಗ ವ್ಯವಸ್ಥೆಗೆ ನೇರ ಅವಮಾನ. ಸಿಜೆಐ ಅವರು ದಲಿತ ಸಮುದಾಯದಿಂದ ಬಂದಿರುವುದರಿಂದ ಜಾತಿ ಆಧಾರಿತ ದೌರ್ಜನ್ಯವಾಗಿದೆ. ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಮೂಲಕ್ಕೆ ಧಕ್ಕೆಯಾಗಿವೆ” ಎಂದು ಖಂಡಿಸಿದರು.
ಘಟನೆ ಖಂಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಚಳ್ಳಕೆರೆಯ ಮುದ್ರಣ ಪ್ರತಿನಿಧಿ, ಕರವೇ ಮುಖಂಡ ಮುರಳಿ, “ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ. ಇದು ಭಾರತದ ಸಂವಿಧಾನದ ಮೇಲಿನ ನೇರ ಹಲ್ಲೆ, ನ್ಯಾಯಾಂಗದ ಗೌರವದ ಮೇಲಿನ ದಾಳಿ. ಅಂಬೇಡ್ಕರ್‌ವಾದದ ವಿರುದ್ಧದ ಅಸಹಿಷ್ಣು ಪ್ರತೀಕಾರದ ರೂಪ. ಘಟನೆಯ ವಿವರ ನೋಡಿದರೆ ಸ್ಪಷ್ಟವಾಗುತ್ತದೆ. ಇದು ಏಕಾಏಕಿ ನಡೆದ ಘಟನೆ ಅಲ್ಲ, ವ್ಯವಸ್ಥಿತವಾಗಿ ರೂಪಿತವಾದ ಷಡ್ಯಂತ್ರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ-ರಾಜಕೀಯ ಸಂದರ್ಭ
ಭಾರತದಲ್ಲಿ ಜಾತಿ ತಾರತಮ್ಯ ಮಿತಿಮೀರಿದ್ದು, ಉನ್ನತ ಹುದ್ದೆಗಳಿಗೆ ಬರುವವರ ಮೇಲೆಯೂ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. 2025ರಲ್ಲಿ ದಲಿತ ನಾಯಕರ ಮೇಲಿನ 15% ದೌರ್ಜನ್ಯದ ಕೇಸ್‌ಗಳು ಏರಿಕೆಯಾಗಿರುವುದಾಗಿ NCRB ಡೇಟಾ ವರದಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವೈದಿಕ, ಅಧಿಕಾರಶಾಹಿಗಳಿಂದ ವಿಜ್ಞಾನ, ವೈಚಾರಿಕತೆ ನಿರಾಕರಿಸುವ ಯತ್ನ: ಡಾ. ಜಿ ರಾಮಕೃಷ್ಣ
ಇಂತಹ ಪ್ರಕರಣಗಳ ಮೂಲಕ ಸಾಮಾಜಿಕ ನ್ಯಾಯದ ಮೇಲೆ ದಾಳಿ ನಡೆಯುತ್ತಿದ್ದು, ತಳಸಮುದಾಯವನ್ನು ಮತ್ತಷ್ಟು ಶೋಷಣೆಗೆ ಗುರಿಮಾಡುವ ಹುನ್ನಾರ ನಡೆಯುತ್ತಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಸಿಜೆಐ ಗವಾಯಿ ಅವರ ಮೇಲಿನ ಚಪ್ಪಲಿ ಎಸೆತ ಪ್ರಕರಣದಂತಹ ಘಟನೆಗಳು ತಳಸಮುದಾಯಗಳ ಉನ್ನತೀಕರಣಕ್ಕೆ ಇನ್ನೂ ಮುಂದೆ ಸವಾಲುಗಳೇ ಸರಿ ಎಂಬುದನ್ನು ಎತ್ತಿ ತೋರಿಸುತ್ತವೆ.
ಕಾನೂನು ರಕ್ಷಣೆ: SC/ST ದೌರ್ಜನ್ಯ ತಡೆ ಕಾಯ್ದೆ 1989 ಅಡಿಯಲ್ಲಿ ಇಂತಹ ಘಟನೆಗಳಿಗೆ ಶಿಕ್ಷೆ ಇದ್ದರೂ ಕೂಡ ಯಾವುದೇ ಕಾನೂನು ಭಯವಿಲ್ಲದೆ ಮನುಷ್ಯ ತಳಸಮುದಾಯದ ಮೇಲೆ ಎಂತಹ ದುಷ್ಕೃತ್ಯ ಎಸಗುವುದಕ್ಕೂ ಯೋಚಿಸುವುದಿಲ್ಲವೆಂಬ ಕೊಳಕು ಮನಸ್ಥಿತಿಯನ್ನು ಈ ಘಟನೆಯಿಂದ ತಿಳಿಯಬಹುದು. ಒಬ್ಬ ವಕೀಲ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಲಾರಂಭಿತ್ತಾನೆ ಎನ್ನುವುದಾದರೆ, ಹಳ್ಳಿಗಳ ದೇಶವಾಗಿರುವ ಭಾರತೀಯ ಸಮಾಜದಲ್ಲಿ ಸಾಮಾನ್ಯ ನಾಗರಿಕರ ನಡುವೆ ತಳಸಮುದಾಯಗಳು ಬದುಕುವುದು ಹೇಗೆ? ಎಂಬುದು ಒಂದು ಗಂಭೀರವಾದಂತಹ ಸವಾಲಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




