ಅಮೆರಿಕ ಟ್ರಂಪ್ ಮತ್ತು ಮಾಧ್ಯಮಗಳು ವೆನೆಜುವೆಲಾ ಎಂದರೆ, ಡ್ರಗ್ ಕ್ಯಾಪಿಟಲ್ ಎಂದು ಬ್ರಾಂಡ್ ಮಾಡಿ, ಅಧ್ಯಕ್ಷ ಮದುರೋರನ್ನು ನಾರ್ಕೋಟೆರರಿಸ್ಟ್ ಎಂದು ಕರೆದು ಯುದ್ಧಕ್ಕೆ ಸಜ್ಜಾಗಿವೆ. ಅಸಲಿಗೆ, ಇದು ಕೊಕೇನ್ ನಿಯಂತ್ರಣಕ್ಕಾಗಿಯಲ್ಲ, ಕ್ರೂಡ್ ಆಯಿಲ್ ಕೈವಶಕ್ಕಾಗಿ...
ಕಳೆದ ಶುಕ್ರವಾರ, ಅಕ್ಟೋಬರ್ 24ರಂದು, ಪೆಂಟಗನ್ ಜಗತ್ತಿನ ಅತಿದೊಡ್ಡ ವಿಮಾನವಾಹಕ ನೌಕೆ ಯು.ಎಸ್.ಎಸ್. ಜೆರಾಲ್ಡ್ ಆರ್. ಫೋರ್ಡ್ ಅನ್ನು ವೆನೆಜುವೆಲಾದ ಕರಾವಳಿ ಪ್ರದೇಶಕ್ಕೆ ನಿಯೋಜಿಸುವ ಆದೇಶ ನೀಡಿತು. ಅಷ್ಟೇ ಅಲ್ಲ, ಅಧ್ಯಕ್ಷ ಟ್ರಂಪ್, ವೆನೆಜುವೆಲಾ ವಿರುದ್ಧ ಸಿಐಎ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿದರು.
ಟ್ರಂಪ್ ಆದೇಶದಂತೆ, ಅಕ್ಟೋಬರ್ 26ರಂದು ಅಮೆರಿಕದ ಶಸ್ತ್ರಸಜ್ಜಿತ ಬೃಹತ್ ಯುದ್ಧನೌಕೆಯೊಂದು ಪುಟ್ಟ ದೇಶ ವೆನೆಜುವೆಲಾದ ಕರಾವಳಿ ಪ್ರದೇಶಗಳಾದ ಟ್ರಿನಿಡಾಡ್ ಮತ್ತು ಟೊಬಾಗೋಗೆ ಆಗಮಿಸಿತು. ಇದ್ದಕ್ಕಿದ್ದಂತೆ ಆಗಮಿಸಿದ ಯುದ್ಧನೌಕೆ, ಸಹಜವಾಗಿಯೇ ವೆನೆಜುವೆಲಾ ಜನರಲ್ಲಿ ಭಯ, ಆತಂಕ ಮೂಡಿಸಿತು.
ಈ ಯುದ್ಧನೌಕೆಗಳು ಅ.30ರವರೆಗೂ ಕೆರಿಬಿಯನ್ ಪ್ರದೇಶದಲ್ಲಿ ಉಳಿಯಲಿವೆ. ಈ ಸಮಯದಲ್ಲಿ ಅಮೆರಿಕದ ನೌಕಾಪಡೆಗಳು ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಸಂಯುಕ್ತ ತರಬೇತಿ ನಡೆಸಲಿವೆ. ಈ ಅಭ್ಯಾಸಗಳು ಲ್ಯಾಟಿನ್ ಅಮೆರಿಕದಲ್ಲಿ ಡ್ರಗ್ ಕಳ್ಳಸಾಗಣೆ ಸಂಘಟನೆಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಸೇನಾ ಅಭಿಯಾನದ ಭಾಗವಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಅದಕ್ಕೆ ಪೂರಕವಾಗಿ ಸೋಮವಾರ, ಅಕ್ಟೋಬರ್ 27ರಂದು ಅಮೆರಿಕ ನೌಕಾಪಡೆಗಳು ಕನಿಷ್ಠ ಹತ್ತು ದೋಣಿಗಳನ್ನು ಸ್ಫೋಟಿಸಿವೆ, ನಲವತ್ಮೂರು ಜನರನ್ನು ಕೊಂದಿವೆ. ಕೊಂದಿದ್ದಕ್ಕೆ ಕೊಟ್ಟ ಕಾರಣವೇನೆಂದರೆ, ಆ ದೋಣಿಗಳಲ್ಲಿ ನಾರ್ಕೋಟಿಕ್ಸ್ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅದಕ್ಕೆ ವೆನೆಜುವೆಲಾ ಅಧ್ಯಕ್ಷ ಮದುರೋ ಅವರ ಸಹಕಾರವಿತ್ತು. ವೆನೆಜುವೆಲಾ ಈಗ ಡ್ರಗ್ ಕ್ಯಾಪಿಟಲ್ ಆಗಿದೆ. ಅದನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಹೇಳಲಾಯಿತು. ಇದು ಸಹಜವಾಗಿಯೇ ವೆನೆಜುವೆಲಾ ಮೇಲೆ ಯುದ್ಧ ಸಾರುವ ಸೂಚನೆ ನೀಡಿತು. ನಾಯಕ ನಿಕೋಲಸ್ ಮದುರೋ ಮೇಲೆ ಒತ್ತಡ ಹೆಚ್ಚಿಸಿತು.

ಇದನ್ನು ಓದಿದ್ದೀರಾ?: ಬ್ರೆಜಿಲ್ | ಡ್ರಗ್ ಮಾಫಿಯಾ ಗ್ಯಾಂಗ್‌ನೊಂದಿಗೆ ಪೊಲೀಸ್ ಕಾರ್ಯಾಚರಣೆ; 64 ಮಂದಿ ಸಾವು
ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲಾ ಪುಟ್ಟ ಸ್ವತಂತ್ರ ರಾಷ್ಟ್ರ. ಉತ್ತರಕ್ಕೆ ಕೆರಿಬಿಯನ್ ಸಮುದ್ರ, ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ ಮತ್ತು ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿರುವ ವೆನೆಜುವೆಲಾ, ಕೇವಲ 9 ಸಾವಿರ ಚದರ ಕಿಲೋಮೀಟರ್ ವಿಸ್ತ್ರೀರ್ಣವುಳ್ಳ, ಮೂರು ಕೋಟಿ ಜನರನ್ನು ಹೊಂದಿರುವ ಪುಟ್ಟ ದೇಶ.
ಈ ಮೊದಲು ಸ್ಪೇನ್ ವಸಾಹತು ಕಾಲನಿಯಾಗಿದ್ದ ವೆನೆಜುವೆಲಾ, ಈಗ ಸ್ವತಂತ್ರ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದೆ. ಜನರಿಂದ ಆಯ್ಕೆಯಾದ ಜನನಾಯಕರು ಎಡಪಂಥೀಯ ವಿಚಾರಧಾರೆ ಮತ್ತು ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದು, ಪ್ರಪಂಚದಲ್ಲಿಯೇ ಅತ್ಯುತ್ತಮ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಒಳಪಡುವ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಸರು ಪಡೆದಿದೆ.
ನಿಸರ್ಗದತ್ತ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ, ಶೇ. 80ರಷ್ಟು ಕಚ್ಚಾ ತೈಲವನ್ನು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಅರ್ಥವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಸಂಪದ್ಭರಿತ ದೇಶವೆನಿಸಿಕೊಂಡಿದೆ. ಆದರೆ ವೆನೆಜುವೆಲಾ ಕಚ್ಚಾ ತೈಲವನ್ನಷ್ಟೇ ರಫ್ತು ಮಾಡುತ್ತಿದ್ದು, ಅದರ ಸಂಸ್ಕರಿತ ತೈಲದ ಒಡೆತನ ಅಮೆರಿಕದ ಕೈಯಲ್ಲಿದೆ. ಅಮೆರಿಕದ ಅಧೀನದಲ್ಲಿರುವ ದ್ವೀಪರಾಷ್ಟ್ರಗಳಲ್ಲಿ ಸಂಸ್ಕರಿತ ಘಟಕಗಳಿದ್ದು, ಅಲ್ಲಿಂದ ಅಮೆರಿಕ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿ, ಭಾರೀ ಲಾಭ ಮಾಡಿಕೊಳ್ಳುತ್ತಿದೆ. ತೈಲ ಉತ್ಪನ್ನ ಮತ್ತು ಮಾರಾಟದ ಮೇಲೆ ಹಿಡಿತ ಸಾಧಿಸಿದೆ.
ಹಲವಾರು ವರ್ಷಗಳ ಹೋರಾಟದ ಫಲವಾಗಿ ವೆನೆಜುವೆಲಾ ಸ್ಪೇನ್ ವಸಾಹುತುವಿನಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾದರೂ, ದೈತ್ಯ ಅಮೆರಿಕದ ಕಪಿಮುಷ್ಟಿಯಿಂದ ಹೊರಬರಲಾಗಿಲ್ಲ. ಕಚ್ಚಾ ತೈಲವನ್ನು ಅಮೆರಿಕಕ್ಕಷ್ಟೇ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡರೂ, ದುಷ್ಟ ಅಮೆರಿಕದ ಕುತಂತ್ರ-ಕಿರುಕುಳಗಳಿಂದ ಪಾರಾಗಲು ಸಾಧ್ಯವಾಗಿಲ್ಲ. ವೆನೆಜುವೆಲಾದ ಚುನಾಯಿತ ಸರ್ಕಾರಗಳು ಈ ಹಾದಿಯಲ್ಲಿ ನಿರಂತರ ಪ್ರಯತ್ನದಲ್ಲಿವೆ. ಆದರೆ, ವೆನೆಜುವೆಲಾದ ಅಮೆರಿಕ ಪ್ರಾಯೋಜಿತ ಸೇನಾ ವ್ಯವಸ್ಥೆ ಅದಕ್ಕೆ ಆಸ್ಪದ ಕೊಡದೆ; ಸರ್ಕಾರಗಳನ್ನೇ ಅಸ್ಥಿರಗೊಳಿಸುವ, ತಾವೇ ಅಧಿಕಾರಕ್ಕೇರುವ ಕ್ಷಿಪ್ರ ಕ್ರಾಂತಿಗಳೂ ನಡೆಯುತ್ತಿವೆ.
ಇಲ್ಲಿಯವರೆಗೆ ದುಷ್ಟ ಅಮೆರಿಕ ಪುಟ್ಟ ದೇಶವಾದ ವೆನೆಜುವೆಲಾದ ಮೇಲೆ ಕಳೆದ 27 ವರ್ಷಗಳಿಂದ ಸುಮಾರು 8 ಬಾರಿ ಕ್ರಿಪ್ರ ಕ್ರಾಂತಿಗಳನ್ನು ಹುಟ್ಟುಹಾಕಿದೆ, ಸೋತಿದೆ. ಆದರೆ ಈಗ ಅಮೆರಿಕ ಟ್ರಂಪ್ ಕೈವಶವಾಗಿರುವುದರಿಂದ, ಆತ ಈ ಹಿಂದಿನ ಅಮೆರಿಕದ ಅಧ್ಯಕ್ಷರಂತಲ್ಲದಿರುವುದರಿಂದ, ನೇರವಾಗಿಯೇ ದಾಳಿಗೆ ಇಳಿದಿದ್ದಾರೆ.
ಶತಾಯ ಗತಾಯ ವೆನೆಜುವೆಲಾದ ಅಧ್ಯಕ್ಷ ಮದುರೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲು, ದೇಶ ಆರ್ಥಿಕ ಕುಸಿತ ಕಂಡಿದೆ ಎಂದು ಆರೋಪಿಸಿದ್ದಾರೆ. ಮದುರೋ ಅವರಿಗೆ ‘ನಾರ್ಕೋಟೆರರಿಸ್ಟ್’ ಎಂಬ ಪಟ್ಟ ಕಟ್ಟಿದ್ದಾರೆ. ವೆನೆಜುವೆಲಾ ದೇಶ ಮಾದಕವಸ್ತು ಕಳ್ಳಸಾಗಾಣಿಕೆಗೆ ಸಹಕಾರ ನೀಡುತ್ತಿದೆ ಎಂದು ದೂರಿದ್ದಾರೆ. ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಹತ್ತಿಕ್ಕಲು ವೆನೆಜುವೆಲಾದ ಸುತ್ತ ಬೃಹತ್ ಯುದ್ಧನೌಕೆಗಳನ್ನು ನಿಲ್ಲಿಸಿ ಅವರಲ್ಲಿ ಭಯ ಹುಟ್ಟಿಸಿದ್ದಾರೆ. ಅದಕ್ಕೂ ಬಗ್ಗದಿದ್ದರೆ, ಪ್ಯಾಲೆಸ್ತೀನಿ-ಗಾಜಾ ಮೇಲೆ ನಡೆಸಿದ ಕ್ರೌರ್ಯವನ್ನು ವೆನೆಜುವೆಲಾ ಮೇಲೂ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ಯುಎನ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಟ್ರಂಪ್, ‘ಏಳು ಅಸಾಧ್ಯ ಯುದ್ಧಗಳನ್ನು ನಿಲ್ಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಮತ್ತು ಇತ್ತೀಚೆಗೆ ಅದನ್ನು ಅವರೆ ಎಂಟಕ್ಕೆ ಏರಿಸಿಕೊಂಡಿದ್ದಾರೆ. ಅವರ ಪ್ರಕಾರ, ಭಾರತ-ಪಾಕಿಸ್ತಾನ; ಇಸ್ರೇಲ್-ಇರಾನ್; ಥೈಲ್ಯಾಂಡ್-ಕಾಂಬೋಡಿಯಾ; ಅರ್ಮೇನಿಯಾ-ಅಜರ್‍ಬೈಜಾನ್; ರ್‍ವಾಂಡಾ-ಕಾಂಗೋ; ಸರ್ಬಿಯಾ-ಕೊಸಾವೊ; ಈಜಿಪ್ಟ್-ಇಥಿಯೋಪಿಯಾ; ಇಸ್ರೇಲ್-ಹಮಾಸ್ ದೇಶಗಳ ನಡುವಿನ ಯುದ್ಧಗಳು ಎಂದು ಲೆಕ್ಕ ಕೊಟ್ಟಿದ್ದಾರೆ. ಶಾಂತಿಧೂತನ ಬಿರುದು ಗಳಿಸಲು- ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ಹಪಾಹಪಿಸಿದ್ದಾರೆ.
ಟ್ರಂಪ್ ಹೀಗೆ ಆಡುತ್ತಿರುವ ಹಿಂದೆ ಹಲವು ಕಾರಣಗಳಿವೆ. ಒಂದು- ವೆನೆಜುವೆಲಾ ಅಮೆರಿಕ ಹೇಳಿದಂತೆ ಕೇಳುವ ಗುಲಾಮ ರಾಷ್ಟ್ರವಾಗಬೇಕು. ಎರಡು- ತೈಲ ನಿಕ್ಷೇಪ ಹೊಂದಿರುವ ಸಂಪದ್ಭರಿತ ವೆನೆಜುವೆಲಾ ತಮ್ಮ ಹಿಡಿತದಲ್ಲಿರಬೇಕು. ಮೂರು- ತಮ್ಮ ಮಾತು ಕೇಳುವ- ಗೊಂಬೆಯಂತಿರುವ ವ್ಯಕ್ತಿ ಅಧ್ಯಕ್ಷರಾಗಬೇಕು.
ಮೂರನೇ ಮುಖ್ಯ ಕಾರಣ ಈಗ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಾರಿಯಾ ಕೊರಿನಾ ಮ್ಯಾಕಡೊ ವೆನೆಜುವೆಲಾದವರು. ಅವರು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮತ್ತು ಜನತಾಂತ್ರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ರಾಜಕಾರಣಿ. ದುರದೃಷ್ಟಕರ ಸಂಗತಿ ಎಂದರೆ, ಈಕೆ ಕ್ರೌರ್ಯ ಮೆರೆದ ಇಸ್ರೇಲ್ ಪರ ನಿಲುವು ತಾಳಿದ ಅಮೆರಿಕದ ಏಜೆಂಟ್. ಟ್ರಂಪ್ ಹೇಳಿದಂತೆ ಕೇಳುವ ಮಹಿಳೆ. ಈಕೆಯನ್ನು ಅಧಿಕಾರಕ್ಕೇರಿಸಿ, ವೆನೆಜುವೆಲಾವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬುದು ಅಮೆರಿಕದ ದುಷ್ಟ ದೂರಾಲೋಚನೆ.
ಆದರೆ, ಕ್ಯೂಬಾ, ಕೊಲಂಬಿಯಾ, ಬೊಲಿವಿಯಾ ಮತ್ತು ವೆನೆಜುವೆಲಾ ದೇಶಗಳು ಅಮೆರಿಕದ ದುಷ್ಟತನದ ವಿರುದ್ಧ ಸೆಟೆದು ನಿಂತು ಸ್ವತಂತ್ರ ರಾಷ್ಟ್ರಗಳಾಗಿವೆ. ಎಡಪಂಥೀಯ ವಿಚಾರಧಾರೆ ಮತ್ತು ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿವೆ. ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಪ್ರಶಂಸೆಗೆ ಪಾತ್ರವಾಗಿವೆ. ಇದು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸರ್ವಾಧಿಕಾರಿ ಧೋರಣೆಯಂತೆ ಕಾಣುತ್ತಿದೆ. ಆ ದೇಶಗಳ ಮೇಲೆ ಯುದ್ಧ ಸಾರುವಂತೆ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಅಮೆರಿಕದ ಸುದ್ದಿ ಮಾಧ್ಯಮಗಳು ವೆನೆಜುವೆಲಾ ಎಂದರೆ, ಡ್ರಗ್ ಕ್ಯಾಪಿಟಲ್ ಎಂದು ಬ್ರಾಂಡ್ ಮಾಡುತ್ತಿವೆ. ಅದನ್ನು ಪ್ರಪಂಚದಾದ್ಯಂತ ಬಿತ್ತರಿಸುತ್ತಿವೆ. ಅಸಲಿಗೆ, ಇದು ಕೊಕೇನ್ ನಿಯಂತ್ರಣಕ್ಕಾಗಿ ಯುದ್ಧವಲ್ಲ, ಕ್ರೂಡ್ ಆಯಿಲ್‌ಗಾಗಿ ಯುದ್ಧ.
ಇದನ್ನು ಓದಿದ್ದೀರಾ?: ಗಾಜಾದಲ್ಲಿ ಶಾಂತಿ ಒಪ್ಪಂದ ಉಲ್ಲಂಘನೆ: ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ 30 ಮಂದಿ ಸಾವು

ವೆನೆಜುವೆಲಾ ಪುಟ್ಟ ದೇಶವಾದರೂ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಧ್ಯಕ್ಷ ಮದುರೋ, ದೇಶದ ಒಳಿತಿಗಾಗಿ ಒಂದಾಗಿ ಎಂದು ಜನತೆಗೆ ಕರೆ ಕೊಟ್ಟಿದ್ದಾರೆ. 10ರಿಂದ 60ರ ವಯಸ್ಸಿನ ಎಲ್ಲರೂ ದೇಶಕ್ಕಾಗಿ ಹೋರಾಡಲು ಮುಂದೆ ಬನ್ನಿ ಎಂದಿದ್ದಾರೆ. ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ. ಅಮೆರಿಕಕ್ಕೆ ಪ್ರತಿರೋಧ ಒಡ್ಡಲು ಸಜ್ಜಾಗಿದ್ದಾರೆ.
ಒಟ್ಟಿನಲ್ಲಿ ಪುಟ್ಟ ದೇಶ ವೆನೆಜುವೆಲಾದ ಮೇಲೆ ದೈತ್ಯ-ದುಷ್ಟ ಅಮೆರಿಕ ಯುದ್ಧ ಸಾರಿದೆ. ಅಮೆರಿಕದ ಈ ಸಾಮ್ರಾಜ್ಯಶಾಹಿ ದಬ್ಬಾಳಿಕೆಯನ್ನು ಕಂಡಿರುವ ಪ್ರಪಂಚದ ಜನ ಪುಟ್ಟ ವೆನೆಜುವೆಲಾದ ಪರ ನಿಲ್ಲಬೇಕಾಗಿದೆ. ದಮನಕಾರಿ ಅಮೆರಿಕ ನಿಲುವನ್ನು ವಿರೋಧಿಸಿ, ಛೀಮಾರಿ ಹಾಕಬೇಕಾಗಿದೆ.

ಲೇಖಕ, ಪತ್ರಕರ್ತ




