ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯನನ್ನು ಸರ್ಕಾರದ ‘ಯಶಸ್ವಿನಿ ಟ್ರಸ್ಟ್’ಗೆ ಟ್ರಸ್ಟಿಯಾಗಿ ನೇಮಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷವು ಹೊಂದಿರುವ ಕೋಮುವಾದಿ ವಿರೋಧಿ ಮತ್ತು ಸಾಮರಸ್ಯ ನೀತಿಗೆ ವಿರುದ್ಧವಾಗಿದೆ. ತಕ್ಷಣವೇ ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಶಿಧರ್, “ಅಕ್ಟೋಬರ್ 12ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಅವರು ಗಣವೇಶ ಧರಿಸಿ ಭಾಗಿಯಾಗಿದ್ದರು. ಮಾತ್ರವಲ್ಲದೆ, ಆ್ಯಂಬುಲೆನ್ಸ್‌ಅನ್ನೂ ಕೊಂಡೊಯ್ದಿದ್ದರು. ಅವರನ್ನು ಸರ್ಕಾರದ ‘ಯಶಸ್ವಿನಿ ಟ್ರಸ್ಟ್’ಗೆ ಟ್ರಸ್ಟಿಯಾಗಿ ನೇಮಿಸುವಂತೆ ಕಾಂಗ್ರೆಸ್ ಶಾಸಕ ಪಡಕ್ಷರಿ ಅವರು ಶಿಫಾರಸು ಮಾಡಿದ್ದರು. ಅವರ ಶಿಫಾರಸಿನಂತೆ ಸರ್ಕಾರವು ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿದೆ. ಇದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಳವಳ ಹುಟ್ಟುಹಾಕಿದೆ” ಎಂದು ತಿಳಿಸಿದ್ದಾರೆ.

“ಸಂಘಪರಿವಾರ ಮತ್ತು ಅದರ ಕೋಮುವಾದದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಸಮರ ಸಾರಿದೆ. ಇಂತಹ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕ ಷಡಕ್ಷರಿ ಅವರು ಸಂಘಪರಿವಾರದ ಕಟ್ಟಾ ಕಾರ್ಯಕರ್ತನಾಗಿರುವ ಡಾ. ಶೀಧರ್ ಅವರನ್ನು ‘ಯಶಸ್ವಿನಿ ಟ್ರಸ್ಟ್’ಗೆ ಶಿಫಾರಸು ಮಾಡಿದ್ದಾರೆ. ಷಡಕ್ಷರಿ ಅವರ ನಡೆಯು ಪಕ್ಷದ ಸಿದ್ಧಾಮತಗಳಿಗೆ ವ್ಯತಿರಿಕ್ತವಾಗಿದೆ. ಕೋಮುವಾದಿಗಳ ಪರ ಎನ್ನಿಸಿಕೊಂಡಿರುವ ಶಾಸಕರ ಇಂಥ ಧೋರಣೆಯನ್ನು ಸಹಿಸಲು ಅಸಾಧ್ಯ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸ್ಪರ್ಧೆಯಿಂದ ಹೊರಗುಳಿದ ಪ್ರಶಾಂತ್ ಕಿಶೋರ್ ತಂತ್ರವೇನು?
“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ‘ಯಶಸ್ವಿನಿ ಟ್ರಸ್ಟ್’ಗೆ ಪ್ರಧಾನ ಪೋಷಕರಾಗಿದ್ದಾರೆ. ಆದರೂ, ಈ ಟ್ರಸ್ಟ್‌ಗೆ ಸಂಘಪರಿವಾದ ಕಾರ್ಯಕರ್ತನನ್ನು ಟ್ರಸ್ಟಿಯಾಗಿ ನೇಮಿಸಿ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಯನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಗಮನಸಿಲ್ಲವೇ? ಈ ಸುತ್ತೋಲೆಯು ತುಮಕೂರು ಮತ್ತು ತಿಪಟೂರಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಆಕ್ರೋಶಕ್ಕೆ ಕಾರಣವಾಗಿದೆ” ಎಂದಿದ್ದಾರೆ.
“ಡಾ. ಶ್ರೀಧರ್ ಅವರ ನೇಮಕವು ಕಾಂಗ್ರೆಸ್‌ನ ಕೋಮುವಾದ ವಿರೋಧಿ ನಿಲುವಿಗೆ, ಸಾಮರಸ್ಯ ನೀತಿಗೆ ಹಾಗೂ ಘನತೆಗೆ ಚ್ಯುತಿ ತಂದಂತಾಗಿದೆ. ಕೂಡಲೇ, ನೇಮಕಾತಿ ಸುತ್ತೋಲೆಯನ್ನು ವಾಪಸ್ ಪಡೆದುಕೊಳ್ಳಬೇಕು. ಡಾ. ಶ್ರೀಧರ್ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.




