ಛತ್ ಪೂಜೆಗಾಗಿ ದೆಹಲಿ ಬಳಿಯ ಯಮುನಾ ನದಿ ಸಮೀಪ ಸ್ನಾನಕ್ಕಾಗಿ ಕೆಲವರಿಗೆ ಪ್ರತ್ಯೇಕ ಕೊಳವನ್ನು ನಿರ್ಮಿಸಿದ್ದಕ್ಕಾಗಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಆಡಳಿತದಲ್ಲಿ ‘ಎರಡು ಭಾರತ’ಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಛತ್ ಪೂಜೆಯ ಸಮಯದಲ್ಲಿ, ಪ್ರಧಾನಿ ಮೋದಿ ಯಮುನಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಪ್ರತ್ಯೇಕ ಕೊಳವನ್ನು ನಿರ್ಮಿಸಿದರು. ದೆಹಲಿಯ ಜನರಿಗೆ ಶುದ್ಧ ನೀರು ಸಿಗುವುದಿಲ್ಲ. ಆದರೆ, ಪ್ರಧಾನಿ ಮೋದಿ ಸ್ನಾನ ಮಾಡಲು ಯಮುನಾ ನದಿಗೆ ಪೈಪ್‌ಗಳ ಮೂಲಕ ಶುದ್ಧ ನೀರನ್ನು ತರಲಾಯಿತು” ಎಂದು ವಿವರಿಸಿದ್ದಾರೆ.
“ಒಂದು ಕಡೆ, ಕಲುಷಿತಗೊಂಡ ಯಮುನಾ ನದಿ ಭಾರತ ಮತ್ತು ಬಿಹಾರದ ವಾಸ್ತವವನ್ನು ಹೊಂದಿತ್ತು. ಇದು ಒಂದು ಭಾರತ. ಮತ್ತೊಂದೆಡೆ, ಮೋದಿ ತಮಗಾಗಿ ಶುದ್ಧ ನೀರಿನ ಸಣ್ಣ ಕೊಳ ನಿರ್ಮಿಸಿಕೊಂಡಿದ್ದರು. ಅದನ್ನು ಪೈಪ್‌ಗಳ ಮೂಲಕ ಶುದ್ಧ ನೀರು ತಂದು ತುಂಬಿಸಲಾಗಿತ್ತು. ಇದು, ಮೋದಿ ಮತ್ತು ಅವರಂತಹ ಜನರು ಹಾಗೂ ಅದಾನಿ ಮತ್ತು ಅಂಬಾನಿಗೆ ಸೇರಿದ್ದು. ಇದು ಮತ್ತೊಂದು ಭಾರತ” ಎಂದು ಕಿಡಿಕಾರಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್, “ಬಿಹಾರದಲ್ಲಿ ಕೈಗಾರಿಕೆಗಳಿಗೆ ಭೂಮಿ ಇಲ್ಲವೆಂದು ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅದಾನಿಗೆ 1 ರೂ.ಗೆ ಭೂಮಿ ನೀಡಲಾಗಿದೆ. ಕೆಲವು ರೈತರಿಂದ ಭೂಮಿಯನ್ನು ಕಿತ್ತುಕೊಂಡು ಕೋಟ್ಯಾಧಿಪತಿಗಳಿಗೆ ಉಚಿತವಾಗಿ ನೀಡಿದೆ. ಲಕ್ಷಾಂತರ, ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ತೆಗೆದುಕೊಂಡು ಅದಾನಿಗೆ ಉಚಿತವಾಗಿ ಕೊಟ್ಟಿದೆ” ಎಂದು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
“2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ‘ಮತ ಕಳ್ಳತನ’ದ ಮೂಲಕ ಗೆದ್ದಿದೆ. ಎನ್‌ಡಿಎ ಮತ್ತು ಪ್ರಧಾನಿ ಮೋದಿ ಅವರು ಭೀಮರಾವ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಾಶಮಾಡುವ ಹಠಕ್ಕೆ ಬಿದ್ದಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ರೈತರು, ಕಾರ್ಮಿಕರು ಹಾಗೂ ದಲಿತರು ಸರ್ಕಾರವನ್ನು ರಚಿಸುತ್ತಾರೆ. ಎಲ್ಲ ಸಮುದಾಯಗಳ ಪ್ರಾತಿನಿಧ್ಯವನ್ನು ಹೊಂದಿರುತ್ತಾರೆ” ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.




