ಇಂದು (ಫೆ.1) ಕೇಂದ್ರ ಸರ್ಕಾರದ 2026-2027ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರುಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ಬೇಕೇ ಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ನಾವು ಕೇಳುತ್ತಿರುವುದು ನಮ್ಮ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ’ ಎಂದು ಹೇಳಿದೆ.
“ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಯೋಜನೆಗಳಿಲ್ಲ, ಕೇಂದ್ರ ಯೋಜನೆಗಳಿಗೆ ಪೂರಕ ಅನುದಾನವಿಲ್ಲ, ತೆರಿಗೆ ಹಂಚಿಕೆಯಲ್ಲಿ ನ್ಯಾಯವಿಲ್ಲ, ಇದು ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಪಾಲಿನ ಕೇಂದ್ರ ಬಜೆಟ್ಟಿನ ಚಿತ್ರಣ.ಸಾಕು ಕೇಂದ್ರದ ಅನ್ಯಾಯ, ಬೇಕು ಕರ್ನಾಟಕಕ್ಕೆ ನ್ಯಾಯ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಾಕು ಕೇಂದ್ರದ ಅನ್ಯಾಯ, ಬೇಕು ಕರ್ನಾಟಕಕ್ಕೆ ನ್ಯಾಯ!
— Karnataka Congress (@INCKarnataka) January 31, 2026
ಕರ್ನಾಟಕಕ್ಕೆ ವಿಶೇಷ ಯೋಜನೆಗಳಿಲ್ಲ, ಕೇಂದ್ರ ಯೋಜನೆಗಳಿಗೆ ಪೂರಕ ಅನುದಾನವಿಲ್ಲ, ತೆರಿಗೆ ಹಂಚಿಕೆಯಲ್ಲಿ ನ್ಯಾಯವಿಲ್ಲ, ಇದು ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಪಾಲಿನ ಕೇಂದ್ರ ಬಜೆಟ್ಟಿನ ಚಿತ್ರಣವಾಗಿದೆ.
ಈ ಬಾರಿ ಬಜೆಟ್ ನಲ್ಲಿ ನಮಗೆ ನ್ಯಾಯಯುತ ಪಾಲು ಬೇಕೇ ಬೇಕು. ನಾವು… pic.twitter.com/ETJG2bpMjB
“ಕೇಂದ್ರ ಸರ್ಕಾರ ಕನ್ನಡಿಗರಿಗೆ ಅಕ್ಷರಶಃ ನಾಮ ಇಡುತ್ತಿದೆ. ಇದರಲ್ಲಿ ಅನುಮಾನವೇ ಇಲ್ಲ.ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ ಎಂಬುದು ಒಂದೆಡೆಯಾದರೆ, ಕೇಂದ್ರ ಸರ್ಕಾರದ ಯೋಜನೆಗಳಲ್ಲೂ ಸರಿಯಾಗಿ ಅನುದಾನ ನೀಡುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ 23,402 ಕೋಟಿ ರೂ. ಹೊರೆಯಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಕಳೆದ ಐದು ವರ್ಷಗಳಿಂದ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು, ಸಾಕು. ಈ ಬಾರಿ ಬಜೆಟ್ ನಲ್ಲಿಯಾದರೂ ಕರ್ನಾಟಕಕ್ಕೆ ನ್ಯಾಯ ಒದಗಿಸಲಿ” ಎಂದು ಆಗ್ರಹಿಸಿದೆ.
“ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ವಿಷಕಾರುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲೂ ರಾಜ್ಯ ಸರ್ಕಾರ 50% ಗಿಂತ ಹೆಚ್ಚು ಅನುದಾನವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಹಣದಲ್ಲಿ ಕೇಂದ್ರ ಸರ್ಕಾರ ತನ್ನ ಯೋಜನೆ ಜಾರಿಗೊಳಿಸಿ ಹೆಸರು ಪ್ರಚಾರ ಪಡೆಯುತ್ತಿದೆ. 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗದಿರಲಿ” ಎಂದು ಹೇಳಿದೆ.
“14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 4.71% ತೆರಿಗೆ ಪಾಲು ನೀಡಲಾಗಿತ್ತು, ಆದರೆ 15ನೇ ಹಣಕಾಸು ಆಯೋಗದಲ್ಲಿ ಇದನ್ನು 3.64%ಗೆ ಇಳಿಸಲಾಗಿತ್ತು. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ 80 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಕರ್ನಾಟಕದ ಪಾಲು 50%ಗಿಂತ ಹೆಚ್ಚಾಗಿದೆ. ಕೇಂದ್ರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಕರ್ನಾಟಕಕ್ಕೆ 23,402 ಕೋಟಿ ರೂ. ಹೆಚ್ಚಿನ ಹೊರೆ ಬಿದ್ದಿದೆ” ಎಂದು ವಿವರಿಸಿದೆ.




