2015ರ ದಾದ್ರಿ ಗುಂಪು ಹಲ್ಲೆ ಪ್ರಕರಣದಲ್ಲಿ ಹತ್ಯೆಯಾದ ಮೊಹಮ್ಮದ್ ಅಖ್ಲಾಕ್ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಗ್ರೇಟರ್ ನೋಯ್ಡಾದ ಸೂರಜ್‌ಪುರದ ಜಿಲ್ಲಾ ನ್ಯಾಯಾಲಯವು ಆಪಾದಿತರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ನಡುವೆಯೇ ಯೋಗಿ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಪ್ರಶ್ನಿಸಿ ಅಖ್ಲಾಕ್ ಪತ್ನಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೊಹಮ್ಮದ್ ಅಖ್ಲಾಕ್‌ನನ್ನು ಕೊಂದ ಹಿಂದುತ್ವವಾದಿಗಳ ರಕ್ಷಣೆಗೆ ಇಳಿದಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಈ ಮೂಲಕ ಪ್ರಶ್ನಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?
ಉತ್ತರ ಪ್ರದೇಶದ ಗಡಿಭಾಗದ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಅಖ್ಲಾಕ್ ಹಿಂದುತ್ವವಾದಿಗಳ ಗುಂಪು ಜಜ್ಜಿ ಕೊಂದಿತ್ತು. ಇದಕ್ಕೆ ಕಾರಣ ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದ ಎಂಬ ಅನುಮಾನ! ಈಗಾಗಲೇ ಈ ಹತ್ಯೆಯ ಎಲ್ಲ ಆಪಾದಿತರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇಂತಹ ಹತ್ಯೆ ಮಾಡಿದವರ ಪರವಾಗಿ ನಿಂತಿರುವ ಬಿಜೆಪಿ ಸರ್ಕಾರ ಆಪಾದಿತರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅರ್ಜಿ ವಿರುದ್ಧ ಅಖ್ಲಾಕ್ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅದಾಗಲೇ ಸ್ಥಳೀಯ ನ್ಯಾಯಾಲಯ ಯೋಗಿ ಸರ್ಕಾರದ ಅರ್ಜಿ ವಜಾಗೊಳಿಸಿದೆ.
ಈ ಪ್ರಕರಣ ನಡೆದ ಆರಂಭದಲ್ಲಿ ಪೊಲೀಸರು ಕೊಲೆ ಆರೋಪ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 18 ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳಲ್ಲಿ ಓರ್ವ 2016ರಲ್ಲಿ ನಿಧನರಾಗಿದ್ದು, ಉಳಿದ 14 ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
2015ರ ಸೆಪ್ಟಂಬರ್ 28ರ ರಾತ್ರಿ ಅಖ್ಲಾಕ್ ಮತ್ತು ಆತನ 22 ವರ್ಷ ವಯಸ್ಸಿನ ಮಗ ದಾನಿಶ್ ನಿದ್ರಿಸುತ್ತಿದ್ದ ಹೊತ್ತು. ದೊಣ್ಣೆಗಳು, ಖಡ್ಗಗಳು, ನಾಡ ಪಿಸ್ತೂಲುಗಳನ್ನು ಹಿಡಿದ ಗುಂಪೊಂದು ಮನೆಗೆ ನುಗ್ಗಿತು. ಆಕಳೊಂದನ್ನು ಕೊಂದು ತಿಂದಿರುವುದಾಗಿ ಕುಟುಂಬವನ್ನು ನಿಂದಿಸಿತು. ರೆಫ್ರಿಜರೇಟರನ್ನು ತೆರೆದು ಅಲ್ಲಿ ಕಂಡ ಮಾಂಸವನ್ನು ಗೋಮಾಂಸ ಎಂದು ಸಾರಿತು. ಅದು ಕುರಿ ಮಾಂಸವೆಂದು ಕುಟುಂಬವು ಸಾಕ್ಷ್ಯಾಧಾರಗಳೊಂದಿಗೆ ವಾದಿಸಿದರೂ ಕೇಳಿರಲಿಲ್ಲ.
ಆಹಾರ ಸ್ವಾತಂತ್ರ್ಯದ ಮೇಲೆ, ಕೋಮು ಆಧಾರದಲ್ಲಿ ನಡೆದ ಈ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ, ನಂತರದ ಪಶುವೈದ್ಯಕೀಯ ವರದಿ ಮತ್ತು ಆರಂಭಿಕ ತನಿಖೆಗಳಲ್ಲಿ ಅದು ಗೋಮಾಂಸವಲ್ಲ, ಬದಲಿಗೆ ಮೇಕೆ ಮಾಂಸ ಎಂದು ದೃಢಪಟ್ಟಿತ್ತು. ಈ ಪ್ರಕರಣ ನಡೆದು ಹತ್ತು ವರ್ಷಗಳಾಗಿದೆ. ಆದರೆ ಇಂದಿಗೂ ಅಖ್ಲಾಕ್ ಕುಟುಂಬ ನ್ಯಾಯಕ್ಕಾಗಿ ಕೋರ್ಟ್ ಅಳೆಯುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇರಳಕ್ಕೂ ಕಾಲಿಟ್ಟಿತು, ಕೋಮುದ್ವೇಷಿ ಗುಂಪುಹತ್ಯೆಯ ಪಿಡುಗು!
2025ರ ಮೇ ತಿಂಗಳಲ್ಲಿ ಅಲಿಗಢದಲ್ಲಿ ನಾಲ್ವರು ಮುಸ್ಲಿಂ ವ್ಯಕ್ತಿಗಳ ಮೇಲೆ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ದಾಳಿ ನಡೆಸಿ, ಅವರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಅದಾದ ನಂತರ ಮಥುರಾದ ಸರ್ಕಾರಿ ಪ್ರಯೋಗಾಲಯದಿಂದ ಬಂದ ಫೋರೆನ್ಸಿಕ್ ವರದಿಯಲ್ಲಿ ಆ ಮಾಂಸವು ಗೋಮಾಂಸವಲ್ಲ ಎಂದು ಸಾಬೀತಾಗಿತ್ತು. ಹಾಗೆಯೇ 2024ರ ಆಗಸ್ಟ್‌ನಲ್ಲಿ ಹರಿಯಾಣದ ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಸಾಬಿರ್ ಮಲಿಕ್ ಎಂಬ ವಲಸೆ ಕಾರ್ಮಿಕನನ್ನು ಗೋಮಾಂಸ ಸೇವಿಸಿದ ಶಂಕೆಯ ಮೇಲೆ ಹತ್ಯೆ ಮಾಡಲಾಗಿತ್ತು. ಅದೇ ವರ್ಷ ಹರಿಯಾಣದ ಫರಿದಾಬಾದ್‌ನಲ್ಲಿ ತಮ್ಮನ್ನು ತಾವು ಗೋರಕ್ಷಕರು ಎಂದು ಹೇಳಿಕೊಳ್ಳುವ ಗುಂಪು ಆರ್ಯನ್ ಮಿಶ್ರಾ ಎಂಬ ವಿದ್ಯಾರ್ಥಿಯನ್ನು 30 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದಿತ್ತು.
ಉತ್ತರ ಭಾರತದಲ್ಲಿ ತೀವ್ರವಾಗಿರುವ ಗುಂಪು ಹತ್ಯೆಯ ಈ ಪಿಡುಗು ದಕ್ಷಿಣ ಭಾರತ ಅದರಲ್ಲಿಯೂ ಕೋಮು ಸಾಮರಸ್ಯಕ್ಕೆ ಹೆಸರಾದ ಕೇರಳಕ್ಕೆ ಕಾಲಿಟ್ಟಿದೆ. “ನೀನು ಬಾಂಗ್ಲಾದೇಶಿಯೇ” ಎಂದು ಕೇಳಿ ಛತ್ತೀಸಗಢದ ರಾಮನಾರಾಯಣ ಬಘೇಲ್ ಎಂಬ ಕಡುಬಡ ದಲಿತ ಯುವಕನ ಹತ್ಯೆ ಮಾಡಲಾಗಿದೆ. ಹಿಂದುತ್ವವಾದಿಗಳು ಹರಡಿರುವ ಈ ಬೆಂಕಿ ಇದೀಗ ದೇಶದಾದ್ಯಂತ ವ್ಯಾಪಿಸುತ್ತಿದ್ದು, ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ನೆಪ ಹುಡುಕಿ ಹಲ್ಲೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ರಾಜಕೀಯ ಅಸ್ತ್ರಕ್ಕೆ ಸೌಹಾರ್ದತೆ ಬಲಿಯಾಗುತ್ತಿದೆ.





