ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯ ಹಿಜಾಬ್ ಎಳೆದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ನಿತೀಶ್ ನಡೆಯನ್ನು ಹಲವು ಮಂದಿ ವಿರೋಧಿಸಿದ್ದಾರೆ. ಆದರೆ ಉತ್ತರ ಪ್ರದೇಶದ ಮೀನುಗಾರಿಕಾ ಸಚಿವ ಸಂಜಯ್ ನಿಶಾದ್ ಮಾತ್ರ ನಿತೀಶ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಅಸಭ್ಯ, ಆಕ್ಷೇಪಾರ್ಹ, ಮಹಿಳಾ ವಿರೋಧಿ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ ಸಂಜಯ್ ನಿಶಾದ್, “ಬರೀ ಇಷ್ಟು ನಡೆದಿದ್ದಕ್ಕೆ ಇದರ ಬಗ್ಗೆ ತುಂಬಾ ಗಲಾಟೆ ನಡೆಯುತ್ತಿದೆ. ಒಂದು ವೇಳೆ ಕುಮಾರ್ ‘ಬೇರೆಡೆ ಮುಟ್ಟಿದ್ದರೆ’ ಏನಾಗುತ್ತಿತ್ತು” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಆ ಹೇಳಿಕೆ ಹಿಂಪಡೆಯುವುದಾಗಿ ಹೇಳಿದ್ದಾರೆ!
ಇದನ್ನು ಓದಿದ್ದೀರಾ? ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ: ನಿತೀಶ್ ಕುಮಾರ್ ವಿಚಿತ್ರ ವರ್ತನೆ ಇದೇ ಮೊದಲಲ್ಲ!
ಪಟನಾಟದಲ್ಲಿ ನಡೆದ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ಸ್ವೀಕರಿಸಲು ಬಂದ ನುಸ್ರತ್ ಪರ್ವೀನ್ ಎಂಬ ವೈದ್ಯೆಯ ಹಿಜಾಬ್ ಅನ್ನು ನಿತೀಶ್ ಎಳೆದಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಿಜಾಬ್‌ನತ್ತ ನಿತೀಶ್ ಸನ್ನೆ ಮಾಡುವುದು, ‘ಇದೇನು’ ಎಂದು ಕೇಳುವುದು ವಿಡಿಯೋದಲ್ಲಿ ಕಂಡುಬಂದಿದೆ. ಅದಾದ ಬಳಿಕ ಹಿಜಾಬ್ ತೆಗೆಯುವಂತೆ ಸೂಚಿಸುತ್ತಾ ಹಿಜಾಬ್ ಎಳೆದಿದ್ದಾರೆ. ಕೂಡಲೇ ಅಧಿಕಾರಿಯೊಬ್ಬರು ಆ ಮಹಿಳೆಯನ್ನು ಪಕ್ಕಕ್ಕೆ ಕರೆದೊಯ್ಯಲು ಯತ್ನಿಸಿದ್ದು, ಪಕ್ಕದಲ್ಲಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸಿಎಂ ನಿತೀಶ್ ಅವರನ್ನು ತಡೆಯಲು ಮುಂದಾಗಿರುವ ದೃಶ್ಯವೂ ವಿಡಿಯೋದಲ್ಲಿದೆ. ನಿತೀಶ್ ಮಾನಸಿಕ ಸ್ಥಿತಿಯ ಬಗ್ಗೆಯೂ ಪ್ರಶ್ನೆ ಎದ್ದಿದೆ.
ನಿತೀಶ್ ನಡೆಯನ್ನು ಸಮರ್ಥಿಸಿಕೊಂಡ ಉತ್ತರ ಪ್ರದೇಶ ಸಚಿವ ಸಂಜಯ್, “ನೇಮಕಾತಿ ಪತ್ರವನ್ನು ಸರಿಯಾದ ವ್ಯಕ್ತಿಗೆ ಹಸ್ತಾಂತರಿಸಲಾಗುತ್ತಿದೆಯೇ ಎಂದು ನೋಡಲು ನಿತೀಶ್ ಮಹಿಳೆಯ ಹಿಜಾಬ್ ಎಳೆದು ನೋಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ಆದರೆ ನಿತೀಶ್ ಈ ಹಿಂದೆ ಅಧಿಕಾರಿ ತಲೆಯ ಮೇಲೆ ಗಿಡ ಇಟ್ಟಿರುವುದು, ರಾಷ್ಟ್ರಗೀತೆ ವೇಳೆ ನಗುವುದು, ಚಪ್ಪಾಳೆ ತಟ್ಟುವುದು ಹೀಗೆ ವಿಚಿತ್ರವಾಗಿ ನಡೆದುಕೊಂಡಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
“ಜನರು ಕೂಗಾಡಬಾರದು. ಅವರೂ ಮನುಷ್ಯರು. ಹಿಜಾಬ್ ಮುಟ್ಟಿದ ಮಾತ್ರಕ್ಕೆ ಗಲಾಟೆ ಮಾಡಬಾರದು. ಹಿಜಾಬ್ ಮುಟ್ಟಿದ್ದಕ್ಕೆ ಇಷ್ಟೊಂದು ಗಲಾಟೆ ಇನ್ನು ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು” ಎಂದು ನಗುತ್ತಾ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ವೈದ್ಯೆಯ ಹಿಜಾಬ್ ಎಳೆದ ಆರೋಪ: ಬಿಹಾರ ಸಿಎಂ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು
ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ನಾಯಕಿ ಸುಮಯ್ಯ ರಾಣಾ ನಿತೀಶ್ ಕುಮಾರ್ ಮತ್ತು ಉತ್ತರ ಪ್ರದೇಶದ ಸಚಿವರ ವಿರುದ್ಧ ಲಕ್ನೋದಲ್ಲಿ ದೂರು ದಾಖಲಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ “ಇದು ಸ್ತ್ರೀ ವಿರೋಧಿ ಮತ್ತು ಕೆಟ್ಟ ಮನಸ್ಥಿತಿಯ ಹೇಳಿಕೆ” ಎಂದು ಖಂಡಿಸಿದ್ದು, ಇದು ಮಹಿಳೆಯರ ಘನತೆಗೆ ಧಕ್ಕೆ ತರುವಂತಹದ್ದು ಎಂದು ಟೀಕಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಈ ಹೇಳಿಕೆಯನ್ನು “ನಾಚಿಕೆಗೇಡಿನ ಸಂಗತಿ” ಎಂದು ಕರೆದು ತೀವ್ರ ವಿರೋಧ ವ್ಯಕ್ತಪಡಿಸಿದೆ.
ವಿರೋಧ ವ್ಯಕ್ತವಾಗುತ್ತಿದ್ದಂತೆ ನಿಶಾದ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. “ವಿಷಯಗಳನ್ನು ವಿವರಿಸಲು ಕೆಲವು ಅಭಿವ್ಯಕ್ತಿಗಳನ್ನು ಬಳಸುವ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ” ಎಂದಿದ್ದಾರೆ.
ಈ ಹಿಂದೆಯೂ ವಿವಾದಾದ್ಮಕ ಹೇಳಿಕೆ ನೀಡಿದ್ದ ಸಂಜಯ್ ನಿಶಾದ್
ಉತ್ತರ ಪ್ರದೇಶದ ಮೀನುಗಾರಿಕಾ ಸಚಿವ ಸಂಜಯ್ ನಿಶಾದ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2025ರ ಆಗಸ್ಟ್‌ನಲ್ಲಿಯೂ ನಿಶಾದ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಶಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ಗಂಗಾ ಮಾತೆಯು ತನ್ನ ಪುತ್ರರ ಪಾದಗಳನ್ನು ತೊಳೆಯಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಗಂಗೆಯ ದರ್ಶನ ಪಡೆಯುವ ಪುತ್ರರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ಬಾಲಿಶವಾಗಿ ಹೇಳಿಕೆ ನೀಡಿದ್ದರು. ಸಚಿವರ ಮಾತಿಗೆ ವೃದ್ಧೆಯೊಬ್ಬರು ಅಲ್ಲೇ ತೀಕ್ಷ್ಣವಾಗಿ ಉತ್ತರಿಸಿದ್ದು, ಸಚಿವರು ತಲೆತಗ್ಗಿಸುವಂತೆ ಮಾಡಿತ್ತು. “ಗಂಗೆ ನಿಮ್ಮ ಪಾದ ತೊಳೆಯಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ” ಎಂದ ಸಚಿವರಿಗೆ ವೃದ್ಧೆ, “ಹಾಗಿದ್ದರೆ ನೀವೂ ಇಲ್ಲೇ ನಮ್ಮ ಜೊತೆಗಿದ್ದು ಆ ಗಂಗೆಯ ಆಶೀರ್ವಾದವನ್ನು ಪಡೆದುಕೊಳ್ಳಿ” ಎಂದು ತಿರುಗೇಟು ನೀಡಿದ್ದರು.





