ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ

Date:

ಯಾವುದೇ ಮಹತ್ತರ ಬದಲಾವಣೆ ಕಾಣದೇ, ರಾಜಕಾರಣ ಸಾಗುತ್ತಿರುವ ಇಳಿಜಾರಿನ ಹಾದಿ ಹೀಗೇ ಮುಂದುವರೆದರೆ, ಇನ್ನು ಮೂವತ್ತು ವರ್ಷಗಳ ನಂತರ ಸಿದ್ದರಾಮಯ್ಯನವರನ್ನು ಸ್ವಾತಂತ್ರ್ಯೋತ್ತರ ಕಾಲದ ಆಶಯಗಳನ್ನು ಹೊಂದಿದ್ದ ಕಟ್ಟಕಡೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಗುರುತಿಸಲಾಗುತ್ತದೆ. ಈ ಮಾತುಗಳನ್ನು ಈ ಸಂದರ್ಭದಲ್ಲಿ ಹೇಳುವುದನ್ನು ದುಬಾರಿ ಎಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರವಿದ್ದೇ ಇದನ್ನು ಬರೆಯುತ್ತಿದ್ದೇನೆ.

ದೇವರಾಜ ಅರಸು ಅವರ ಜೊತೆಗಿನ ಹೋಲಿಕೆಯನ್ನು ಬಹುಶಃ ಸಿದ್ದರಾಮಯ್ಯನವರು ಇಷ್ಟಪಡಲಿಕ್ಕಿಲ್ಲ. ಆದರೆ, ಅವರು ಬಯಸಲಿ, ಬಿಡಲಿ ಎರಡು ಕಾರಣಗಳಿಂದಾಗಿ ಈ ಹೋಲಿಕೆ ನಡೆಯುತ್ತಾ ಇರುತ್ತದೆ. ಇಬ್ಬರೂ ಶೋಷಿತ ಸಮುದಾಯಗಳ ಪರವಾದ ರಾಜಕಾರಣ ಮಾಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿ ಅಂತಹ ಕ್ರಮಗಳಿಗೆ ಮುಂದಾಗಿದ್ದು ಒಂದು ಕಾರಣ. ಕರ್ನಾಟಕದ ದೀರ್ಘ ಅವಧಿಯ ಸಿಎಂ ಆಗಿ ಇದುವರೆಗೂ ಇದ್ದದ್ದು ದೇವರಾಜ ಅರಸರಾಗಿದ್ದರೆ, ಅವರ ನಂತರ ಅದನ್ನು ದಾಟಿದವರು ಸಿದ್ದರಾಮಯ್ಯ ಎಂಬುದು ಎರಡನೆಯ ಕಾರಣ. ಸಹಜವಾಗಿ ಈ ಎರಡನೆಯ ಕಾರಣ ಇಂದು ಇಬ್ಬರನ್ನೂ ಹೋಲಿಸಿ ವಿಶ್ಲೇಷಣೆ ಮಾಡುವುದಕ್ಕೆ ದಾರಿ ಮಾಡಿಕೊಟ್ಟಿದೆ. ಇಂತಹ ಹಲವು ವಿಶ್ಲೇಷಣೆಗಳನ್ನು ನೋಡುತ್ತಾ, ಕೇಳುತ್ತಾ ಒಂದು ಸಂಗತಿ ಗಾಢವಾಗಿ ಎದ್ದು ಕಾಣುತ್ತದೆ. ದೇವರಾಜ ಅರಸರು ಇದ್ದ ಕಾಲದಲ್ಲಿ ಅವರ ಕುರಿತ ವಿಶ್ಲೇಷಣೆಗಳಲ್ಲಿ ಅವರಿಗೆ ಹೇಗೆ ನ್ಯಾಯ ಸಿಗಲಿಲ್ಲವೋ, ಅದೇ ರೀತಿ ʼಸಿದ್ದರಾಮಯ್ಯನವರ ಕಾಲಘಟ್ಟʼದ ವಿಶ್ಲೇಷಣೆಗಳಲ್ಲಿ ಅವರಿಗೂ ನ್ಯಾಯ ಸಿಗುತ್ತಿಲ್ಲ.

ಯಾವುದೇ ಮಹತ್ತರ ಬದಲಾವಣೆ ಕಾಣದೇ, ರಾಜಕಾರಣ ಸಾಗುತ್ತಿರುವ ಇಳಿಜಾರಿನ ಹಾದಿ ಹೀಗೇ ಮುಂದುವರೆದರೆ, ಇನ್ನು ಮೂವತ್ತು ವರ್ಷಗಳ ನಂತರ ಸಿದ್ದರಾಮಯ್ಯನವರನ್ನು ಸ್ವಾತಂತ್ರ್ಯೋತ್ತರ ಕಾಲದ ಆಶಯಗಳನ್ನು ಹೊಂದಿದ್ದ ಕಟ್ಟಕಡೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಗುರುತಿಸಲಾಗುತ್ತದೆ. ಈ ಮಾತುಗಳನ್ನು ಈ ಸಂದರ್ಭದಲ್ಲಿ ಹೇಳುವುದನ್ನು ದುಬಾರಿ ಎಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರವಿದ್ದೇ ಇದನ್ನು ಬರೆಯುತ್ತಿದ್ದೇನೆ. ಯಾವುದೇ ಕಾಲಘಟ್ಟದ ಸಾಧ್ಯತೆ ಮತ್ತು ಮಿತಿಗಳನ್ನು ಗಮನದಲ್ಲಿಟ್ಟುಕೊಳ್ಳದೇ ಪರಸ್ಪರ ಹೊಂದಾಣಿಕೆಯಾಗದ ಎರಡು ಬೇರೆ ಬೇರೆ ಕಾಲಘಟ್ಟಗಳ ಇಬ್ಬರು ಮುಖ್ಯಮಂತ್ರಿಗಳನ್ನು ಹೋಲಿಸುವುದೇ ತಪ್ಪು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲು ದೇವರಾಜ ಅರಸರಿಂದ ಶುರು ಮಾಡೋಣ. ನನ್ನ ಅತ್ಯಂತ ಚಿಕ್ಕ ವಯಸ್ಸಿನ ರಾಜಕೀಯ ನೆನಪು – ನನ್ನ ತಂದೆ ನಮ್ಮೂರಿನ ಮನೆಯೊಳಗೆ ಇನ್ಯಾರ ಜೊತೆಗೋ ಅರಸು ಅವರನ್ನು ಕುರಿತು ಆಡುತ್ತಿದ್ದ ಮಾತಿನದ್ದು. ʼಅರಸರು ವಿಪರೀತ ಭ್ರಷ್ಟಾಚಾರ ಮಾಡಿದರು ಅನ್ನೋದು ಸರಿಯಲ್ಲ; ರಾಜಕಾರಣ ನಡೆಸೋಕೆ ಬೇಕಾಗುವಷ್ಟು ಸಣ್ಣಪುಟ್ಟ ಹಣ ಮಾಡಿರಬಹುದೇ ಹೊರತು, ತಮ್ಮದೇನೋ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿರಲಿಲ್ಲ. ಅರಸು ಅವರ ತಪ್ಪುಗಳನ್ನು ತುಂಬಾ ಜಾಸ್ತಿ ಮಾಡಿ ಹೇಳ್ತಾ ಇದ್ದಾರೆʼ. ಬಹುಶಃ ಅರಸರು ತೀರಿಕೊಂಡ ಸಂದರ್ಭ(ನಾನಾಗ ಎರಡನೇ ಕ್ಲಾಸು)ದ ಮಾತಿರಬಹುದು ಅದು. ಆಗ ಆ ಮಾತುಗಳು ಅರ್ಥವಾಗದಿದ್ದರೂ, ಮಾತುಕತೆಯಂತೂ ಸ್ಪಷ್ಟವಾಗಿ ನೆನಪಿದೆ. ನಂತರ ಲಂಕೇಶ್‌ ಪತ್ರಿಕೆಯನ್ನು ಓದುತ್ತಾ, ಲಂಕೇಶರ ಹಳೆಯ ಸಂಪಾದಕೀಯ, ಅರಸರ ಸಂದರ್ಶನ ಮತ್ತಿತರ ಬರೆಹಗಳನ್ನು ಓದಿದ ಮೇಲೆ ಇದು ಅರ್ಥವಾಯಿತು. ಅರಸರು ಬದುಕಿದ್ದಾಗ ಅವರನ್ನು ʼಕರ್ನಾಟಕದ ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಅಧಿಕೃತವಾಗಿ ದೊಡ್ಡ ಮಟ್ಟದಲ್ಲಿ ಉದ್ಘಾಟಿಸಿದವರುʼ ಅಂತಲೂ, ʼತಮ್ಮ ಅಳಿಯನ ಮೂಲಕ ಗೂಂಡಾಗಳನ್ನು ಸಾಕಿಕೊಂಡವರುʼ ಅಂತಲೂ ಟೀಕಿಸಲಾಗುತ್ತಿತ್ತು. ಅಲ್ಲಿಂದಾಚೆಗೆ ಸುಮಾರು 20-30 ವರ್ಷಗಳ ನಂತರ ಅರಸರನ್ನು ʼಹಿಂದುಳಿದ ವರ್ಗಗಳ ಪಾಲಿನ ಸೂರ್ಯ, ಹರಿಕಾರʼ ಎಂದೆಲ್ಲಾ ಕರೆದ ಹಲವರು ಅವರು ಬದುಕಿದ್ದಾಗ ಟೀಕಿಸುತ್ತಿದ್ದರು. ಅವರೇ ಸ್ಥಾಪಿಸಿದ ಕರ್ನಾಟಕ ಕ್ರಾಂತಿರಂಗದಲ್ಲಿ ಅವರ ನಂತರ ಆಯಕಟ್ಟಿನ ಜಾಗಗಳಲ್ಲಿ ಕೂತವರೂ, ಅರಸರ ಬದುಕಿನ ಕೊನೆಯ ದಿನಗಳಲ್ಲಿ ಅವರ ಜೊತೆಗೆ ಇರಲಿಲ್ಲ. ಅರಸರಿಂದಲೇ ರಾಜಕೀಯ ಅವಕಾಶಗಳನ್ನು ಪಡೆದವರೂ ಸಹಾ ಅವರನ್ನು ಕೈಬಿಟ್ಟು ಇಂದಿರಾ ಕಾಂಗ್ರೆಸ್ಸಿನ ಜೊತೆಗೇ ಉಳಿದಿದ್ದರು.

ವಿವಿಧ ರಾಜಕೀಯ ಪಾತ್ರಗಳನ್ನು ನಿರ್ವಹಿಸಿದವರ ಕುರಿತು ವರ್ತಮಾನ ಕಾಲದ ವಿಶ್ಲೇಷಣೆಗಳ ವಿಪರ್ಯಾಸವಿದು. ಎರಡು ಪೂರ್ಣ ಅವಧಿಗಳಿಗೆ ಪ್ರಧಾನಿಯಾಗಿದ್ದ ಮನಮೋಹನಸಿಂಗ್‌ ಅವರು ತಮ್ಮ ಕಟ್ಟಕಡೆಯ ಪತ್ರಿಕಾಗೋಷ್ಠಿಯಲ್ಲಿ ʼI honestly believe that history will be kinder to me’ ಎಂದಿದ್ದರು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು 2018ರ ಚುನಾವಣೆಯಲ್ಲಿ ಬಹುಮತ ಪಡೆಯದಿದ್ದಾಗ ಹಿರಿಯ ಪತ್ರಕರ್ತ ಮತ್ತು ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್‌ ಅಮಿನ್‌ ಮಟ್ಟು ಅವರೂ ಇದೇ ಮಾತನ್ನು ಹೇಳಿದ್ದರು.

ದೇವರಾಜ ಅರಸರ ಕಾಲದ ಭೂಸುಧಾರಣೆಗಳನ್ನು ಎಂದೂ ಹೃತ್ಪೂರ್ವಕವಾಗಿ ಶ್ಲಾಘಿಸದೇ ಇದ್ದ ಕೆಲವು ಎಡಪಂಥೀಯ ಸಂಘಟನೆಗಳು ಅವರ ಜನ್ಮಶತಮಾನೋತ್ಸವದ ದಿನ, ಅರಸರ ಫೋಟೋವನ್ನು ತಮ್ಮ ಬ್ಯಾನರಿನಲ್ಲೇ ಹಾಕಿಕೊಂಡು ಭೂಮಿಗಾಗಿನ ಹೋರಾಟವನ್ನು ನಡೆಸಿದ್ದರು. ಅಂದು ಅದರ ನೇತೃತ್ವವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್‌.ಎಸ್.ದೊರೆಸ್ವಾಮಿಯವರು ವಹಿಸಿಕೊಂಡಿದ್ದರು. ಇದಕ್ಕೆ ಬಹಳ ಹಿಂದೆ ʼತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅರಸರು ಉಳಿದ ಕಾಂಗ್ರೆಸ್‌ ಮುಖ್ಯಮಂತ್ರಿಗಳಷ್ಟು ದಮನಕಾರಿಯಾಗಿ ನಡೆದುಕೊಳ್ಳಲಿಲ್ಲʼ ಎಂದು ಹೇಳಿದ್ದು ಬಿಟ್ಟರೆ, ದೊರೆಸ್ವಾಮಿಯವರು ಅರಸರ ಭೂಸುಧಾರಣೆ ಅಥವಾ ಶೋಷಿತ ಸಮುದಾಯಗಳ ಪರವಾದ ಕ್ರಮಗಳನ್ನು ವಿಶೇಷವಾಗಿ ಶ್ಲಾಘಿಸಿದ ಉಲ್ಲೇಖಗಳಿಲ್ಲ. ಇದು ದೊರೆಸ್ವಾಮಿಯವರ ಕುರಿತ ಟೀಕೆಯಲ್ಲ. ಸಮಕಾಲೀನ ಸಂದರ್ಭವೊಂದರಲ್ಲಿ ನಾವು ವ್ಯಕ್ತಿಯನ್ನು ನೋಡುವುದಕ್ಕೂ, ನಂತರ ಅದೇ ವ್ಯಕ್ತಿಯನ್ನು ಕಾಲಘಟ್ಟದ ಚೌಕಟ್ಟಿನೊಳಗೆ ಇಟ್ಟು ನೋಡುವುದಕ್ಕೂ ಇರುವ ವ್ಯತ್ಯಾಸದ ಕುರಿತಾಗಿಯಷ್ಟೇ ಹೇಳುತ್ತಿದ್ದೇನೆ.

WhatsApp Image 2026 01 06 at 11.27.19 PM
ಮುಖ್ಯಮಂತ್ರಿ ಜೆ ಎಚ್‌ ಪಟೇಲ್‌ ಮತ್ತು ರಾಜ್ಯಪಾಲ ಖುರ್ಷಿದ್‌ ಆಲಂ ಖಾನ್‌, ಎಚ್‌ ಕೆ ಪಾಟೀಲ್‌ ಮತ್ತಿತರರ ಜೊತೆಗೆ ಸಿದ್ದರಾಮಯ್ಯ
WhatsApp Image 2026 01 06 at 11.28.08 PM
ಸದನದಲ್ಲಿ ಆರ್‌ ವಿ ದೇಶಪಾಂಡೆ ಮತ್ತು ಎಂ ಪಿ ಪ್ರಕಾಶ್‌ ಜೊತೆಗೆ ಸಿದ್ದರಾಮಯ್ಯ

ಇದೇ ದೊರೆಸ್ವಾಮಿಯವರು ಸಿದ್ದರಾಮಯ್ಯನವರ ಕುರಿತು ವಿಶೇಷ ಅಭಿಮಾನ ಹೊಂದಿದ್ದರು. ತಮ್ಮ ಸ್ವಂತಕ್ಕೆಂದು ಮುಖ್ಯಮಂತ್ರಿಗಳಿಂದ ಯಾವ ಸಹಾಯವನ್ನೂ ಅಪೇಕ್ಷಿಸದ ಅವರು ಬದಲಾದ ಕಾಲಘಟ್ಟದಲ್ಲೇಕೆ ಸಿದ್ದರಾಮಯ್ಯನವರ ಬಗ್ಗೆ ಅಭಿಮಾನ ಹೊಂದಿದ್ದರು ಎಂಬುದನ್ನು ನೋಡಿದರೆ, ಈ ಕಾಲಘಟ್ಟದಲ್ಲಿ ʼಸಿದ್ದರಾಮಯ್ಯನವರ ಪಾತ್ರʼ ಏನೆಂಬುದು ಅರ್ಥವಾಗುತ್ತದೆ.

ದೇವರಾಜ ಅರಸರಿಗೆ ಇರದಿದ್ದ ಎಷ್ಟೋ ಅನುಕೂಲಗಳು ಸಿದ್ದರಾಮಯ್ಯನವರಿಗೆ ಇವೆ, ಆದರೂ ಅವರು ಸಾಧಿಸಬೇಕಾದಷ್ಟು ಸಾಧಿಸಲಿಲ್ಲ ಎಂಬ ವಿಶ್ಲೇಷಣೆಗಳನ್ನು ನೋಡಿದೆ. ಅವರವರ ನಿರೀಕ್ಷೆಗಳು ಮತ್ತು ಅಸಮಾಧಾನಗಳ ಬಗ್ಗೆ ನನಗ್ಯಾವ ತಕರಾರೂ ಇಲ್ಲ. ಆದರೆ, ಎರಡೂ ಸಂಪೂರ್ಣ ಬೇರೆ ಕಾಲಘಟ್ಟಗಳು ಮತ್ತು ಹೋಲಿಸಲಾಗದಷ್ಟು ಭಿನ್ನ ಕಾಲಘಟ್ಟಗಳು ಎಂದೇ ನನಗನ್ನಿಸುತ್ತವೆ.

ಬಹಳ ಮುಖ್ಯವಾಗಿ ಮೂರು ಭಿನ್ನತೆಗಳು ಎದ್ದು ಕಾಣುತ್ತವೆ. ಸ್ವತಃ ದೇವರಾಜ ಅರಸರು ರಾಜಕಾರಣದಲ್ಲಿ ಅತ್ಯಪೂರ್ವ ಪ್ರಯೋಗಗಳನ್ನು ನಡೆಸಿದ್ದು, ಬೇರಾವ ರಾಜ್ಯದಲ್ಲೂ ಕಾಣದಿದ್ದ ಸುಧಾರಣೆಗಳನ್ನು ಕೈಗೊಂಡಿದ್ದು, ಜನಪ್ರಿಯ ಮುಖ್ಯಮಂತ್ರಿಯಾಗಿದ್ದದ್ದು ನಿಜವಾದರೂ – ಅದು ಈ ದೇಶದಲ್ಲಿ ʼಇಂದಿರಾಗಾಂಧಿ ಯುಗʼ ಎಂದು ಕರೆಯಬಹುದಾದ ಕಾಲಘಟ್ಟದಲ್ಲಿ. ಇಂದಿರಾಗಾಂಧಿ ಹೆಸರಿನಲ್ಲೇ ಚುನಾವಣೆ ಗೆಲ್ಲುವ ಕಾಲ ಸುಮಾರು 10-15 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಆಗರ್ಭ ಶ್ರೀಮಂತ ಮೋತಿಲಾಲ್‌ ನೆಹರೂ ಅವರ ಮೊಮ್ಮಗಳಾದ ಇಂದಿರಾಗಾಂಧಿಯವರು ದೇಶದ ಬಡವರ ಬಂಧುವಾಗಿದ್ದರು. ಬಡವರೇ ಅಧಿಕವಾಗಿದ್ದ ದೇಶದಲ್ಲಿ ಅವರ ಹೆಸರಿನಲ್ಲಿ ಓಟು ಬೀಳುತ್ತಿತ್ತು. ಕರ್ನಾಟಕದ ಮಟ್ಟಿಗಂತೂ ಇದು ಇನ್ನೂ ಹೆಚ್ಚು ನಿಜವಾಗಿತ್ತು. ಇಡೀ ಉತ್ತರ ಭಾರತದಲ್ಲಿ ಇಂದಿರಾ ಕಾಂಗ್ರೆಸ್ಸು ಧೂಳೀಪಟವಾದ 1977ರ ಚುನಾವಣೆಯಲ್ಲಿ (85 ಸೀಟುಗಳ ಉತ್ತರ ಪ್ರದೇಶ ಮತ್ತು 54 ಸೀಟುಗಳ ಬಿಹಾರದಲ್ಲಿ ಇಂದಿರಾಗಾಂಧಿಯವರ ಪಕ್ಷ ಒಂದು ಸೀಟನ್ನೂ ಗೆದ್ದಿರಲಿಲ್ಲ), ಕರ್ನಾಟಕದಲ್ಲಿ 28ರ ಪೈಕಿ 26ನ್ನು ಕಾಂಗ್ರೆಸ್ಸು ಗೆದ್ದಿತ್ತು. ಇದಕ್ಕೆ ಅರಸು ಅವರೇ ಕಾರಣ ಎನ್ನಲು ಸಾಧ್ಯವೇ ಇಲ್ಲ. ಏಕೆಂದರೆ, ಇಂದಿರಾಗಾಂಧಿಯವರಿಂದ ಅವರು ದೂರವಾಗಿ, ಸ್ವತಃ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೂ, 1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ಸು 27 ಸೀಟುಗಳನ್ನು ಗೆದ್ದರೆ, ಅರಸು ಅವರ ಪಕ್ಷ ಕೇವಲ 1 ಸೀಟು ಗೆದ್ದಿತ್ತು! ಇದನ್ನು ಪೂರಾ ಪೂರಾ ಕಡೆಗಣಿಸಿ, ಅವತ್ತಿನ ಸಂದರ್ಭವನ್ನೇ ʼಆ ಕಾಲದವರೂʼ ಮರೆಯುವುದು ಸೋಜಿಗದ ಸಂಗತಿ.

ಸಿದ್ದರಾಮಯ್ಯನವರಿಗಿಲ್ಲದ ಅನುಕೂಲವೆಂದರೆ ಪ್ರಧಾನವಾಗಿ ಇದೇ. (ಅನುಕೂಲಗಳೂ ಇವೆ, ಅವನ್ನು ಪ್ರತ್ಯೇಕವಾಗಿ ನೋಡೋಣ). ಅಂದರೆ, ಇಡೀ ದೇಶದಲ್ಲಿ ಫ್ಯಾಸಿಸ್ಟ್‌ ಪಕ್ಷವೊಂದರ ಕಾರ್ಯಕರ್ತಗಣ, ಮಾಧ್ಯಮ ಸಮೂಹ, ʼಸ್ವಾಯತ್ತವೆಂದು ಕರೆಯಲಾಗುತ್ತಿದ್ದʼ ಸಂಸ್ಥೆಗಳು, ನರೇಂದ್ರ ಮೋದಿಯವರ ಸುತ್ತ ಕಟ್ಟಲಾದ ಪ್ರಭಾವಳಿಯಿಂದ ಉಂಟಾಗಿರುವ ನಾಮಬಲ – ಇವೆಲ್ಲವೂ ಸಿದ್ದರಾಮಯ್ಯನವರಿಗೂ, ಕಾಂಗ್ರೆಸ್ಸಿಗೂ ವಿರುದ್ಧವಾಗಿವೆ.

ಎರಡನೆಯದಾಗಿ, ದೇವರಾಜ ಅರಸರ ಕಾಲದಲ್ಲಿ ಸಮಾಜದಲ್ಲಿದ್ದ ಅಲೆ. ಆ ಅಲೆಯು ಎಡ, ಪ್ರಜಾಸತ್ತಾತ್ಮಕ, ಸಮಾಜವಾದಿ ಚಿಂತನೆಗಳಿಂದ ಕೂಡಿತ್ತು. ಹಿಂದುಳಿದ ವರ್ಗಗಳು ರಾಜಕೀಯ ಪ್ರವರ್ಧಮಾನಕ್ಕೆ ಬರಲು ಅಗತ್ಯವಿದ್ದ ವಾತಾವರಣ ದೇಶದೆಲ್ಲೆಡೆ ನಿರ್ಮಾಣವಾಗಿತ್ತು. ದಲಿತ ಸಂಘರ್ಷ ಸಮಿತಿಯೂ ಅದೇ ದಶಕದಲ್ಲಿ ಹುಟ್ಟಿಕೊಂಡಿತು. ಜನಪರ ಸಂಘಟನೆಗಳು ಮತ್ತು ಚಳವಳಿಗಳ ಸಮೂಹನೆಲೆ, ಸಂಘಟನಾ ಶಕ್ತಿ, ಮಧ್ಯಮ ವರ್ಗದಲ್ಲೂ ಇದ್ದ ಈ ಚಿಂತನೆಯ ಪ್ರಭಾವವು ಬದಲಾವಣೆಗಳಿಗೆ ಹೇಳಿ ಮಾಡಿಸಿದ ರಾಜಕೀಯ ಸಂದರ್ಭವನ್ನು ನಿರ್ಮಿಸಿತ್ತು. ಕಿಡಿಗಳು ಜ್ವಾಲೆಗಳ ಕುಡಿಗಳಾಗುತ್ತವೆ. 21ನೇ ಶತಮಾನಕ್ಕೆ ಬರುವ ಹೊತ್ತಿಗೆ ಇವೆಲ್ಲವೂ ಸಾಂಕೇತಿಕ ಮಟ್ಟಕ್ಕೆ ಇಳಿದವು. ಸಂಘಟನೆಗಳ ಸಂಖ್ಯೆ ಹೆಚ್ಚಾಯಿತೇ ಹೊರತು, ಚಳವಳಿಗಳು ಇಳಿಮುಖವಾದವು. ಸಮಾಜದ ಮುಖ್ಯವಾಹಿನಿ ಮತ್ತು ಮಾಧ್ಯಮಗಳ ಮುಖ್ಯವಾಹಿನಿಯು ಪ್ರಭುತ್ವದ (ಅಂದರೆ ಬಲಪಂಥೀಯ ಚಿಂತನೆಯ) ಕಡೆಗೆ ಹೊರಳಿದವು. ಸಮಾಜದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಚಿಂತನೆ (ವಿಶೇಷವಾಗಿ ಪ್ರಭಾವೀ ಮಧ್ಯಮ ವರ್ಗದ ರಾಜಕೀಯ ಚಿಂತನೆ)ಯು ರಾಜಕಾರಣದ ಮೇಲೆ ಪ್ರಭಾವ ಬೀರುತ್ತವೆ. ಅಂತಹ ಸಂದರ್ಭದಲ್ಲಿ ಹೊಸದಾಗಿ ಮೇಲೆದ್ದು ಬರುತ್ತಿರುವ ವರ್ಗಗಳು (ಜಾತಿ ಸಮುದಾಯಗಳು ಅಥವಾ ವರ್ಗ ಸಮುದಾಯಗಳು) ಯಾವುವಾದರೂ ಇದ್ದು, ಅವುಗಳ ಸಂಘಟನೆಯ ಆಧಾರದ ಮೇಲೆ ರಾಜಕಾರಣ ಮಾಡುವುದು ಸುಲಭ ಸಾಧ್ಯ. ಇಲ್ಲದೇ ಇದ್ದರೆ, ಬೆಟ್ಟಕ್ಕೆ ಬಂಡಿ ಎಳೆದುಕೊಂಡು ಹೋಗುವಷ್ಟು ತ್ರಾಸದಾಯಕ. ದೇವರಾಜ ಅರಸರು ಮತ್ತು ಸಿದ್ದರಾಮಯ್ಯನವರ ಕಾಲಘಟ್ಟಗಳಲ್ಲಿದ್ದ ಈ ದೊಡ್ಡ ವ್ಯತ್ಯಾಸವನ್ನು ಕಡೆಗಣಿಸಿ ಹೋಲಿಸುವುದು ತಪ್ಪು ತೀರ್ಮಾನಗಳಿಗೆ ಕಾರಣವಾಗುತ್ತದೆ.

ಈ ಎರಡೂ ಕಾಲಘಟ್ಟಗಳ ನಡುವಿರುವ ಮೂರನೆಯ ವ್ಯತ್ಯಾಸವೆಂದರೆ, ರಾಜಕಾರಣದಲ್ಲಿರುವ ಹಣಕಾಸಿನ ಪ್ರಭಾವ ಇಂದು ಅಪಾಯಕಾರಿ ಪ್ರಮಾಣದಲ್ಲಿದೆ. ಬದಲಾವಣೆಯ ರಾಜಕಾರಣದ ಕನಸು ಹೊತ್ತ ಯಾರಿಗೇ ಆದರೂ ಅಸಾಧ್ಯವೆನಿಸುವ ರೀತಿಯಲ್ಲಿ ಇದು ವ್ಯಾಪಕಗೊಳ್ಳುತ್ತಿದೆ. ಜನತಾದಳದಿಂದ ಹೊರಬಿದ್ದು ಎಬಿಪಿಜೆಡಿ ಬ್ಯಾನರಿನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಮಯ್ಯನವರು ಒಂದೇ ತಾ.ಪಂ., ಜಿ.ಪಂ ಚುನಾವಣೆಯ ಸಂದರ್ಭದಲ್ಲಿ, ಹಣದ ಚಲಾವಣೆ ನೋಡಿ ಗಾಬರಿಯಾಗಿ ಕಾಂಗ್ರೆಸ್‌ ಸೇರಿಕೊಂಡರು ಎನಿಸುತ್ತದೆ.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಹಿಂದುಳಿದ ಸಮುದಾಯಕ್ಕೆ ಸೇರಿದ ರಾಜಕಾರಣಿಯೊಬ್ಬರು, ತಾನು ಶೋಷಿತ ಸಮುದಾಯಗಳ ಪರ ಇರುವವನೇ ಎಂದು ಘೋಷಿಸಿ ಅಧಿಕಾರದ ಕೇಂದ್ರಕ್ಕೆ ಬಂದು, ಅಧಿಕಾರದ ಕೇಂದ್ರದಲ್ಲೇ ಉಳಿದುಕೊಳ್ಳಬೇಕೆಂದರೆ ಹಲವು ಬಗೆಯ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯನವರು ಅಂತಹ ರಾಜಿಗಳನ್ನು ಮಾಡಿಕೊಂಡಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಸ್ವತಃ 70ರ ದಶಕದ ಮೌಲ್ಯಗಳ ಪ್ರಾಡಕ್ಟ್‌ ಆದ ಸಿದ್ದರಾಮಯ್ಯನವರು, ಅಂತಹ ಯಾವ ಮೌಲ್ಯಗಳೂ ರಾಜಕಾರಣದಲ್ಲಾಗಲೀ, ಸಮಾಜದ ಮುಖ್ಯವಾಹಿನಿಯಲ್ಲಾಗಲೀ ಇರದ ಹೊತ್ತಿನಲ್ಲೂ ಪ್ರಸ್ತುತರಾಗಿರುವುದು ಹೇಗೆ? ಹಳೆಯ ಮೌಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಒಂಟಿ ಕತ್ತಿ ಬೀಸುತ್ತಾ, ಅದೇ ಹೊತ್ತಿನಲ್ಲಿ ಹಲಬಗೆಯ ರಾಜಿಗಳನ್ನು ಮಾಡಿಕೊಳ್ಳುತ್ತಾ, ಒಂದು ರೀತಿಯ ಬ್ಯಾಲೆನ್ಸ್‌ನಲ್ಲಿ ಸಾಗಿದ್ದಾರೆ. ತೀವ್ರ ರೂಪದ ಜನಚಳವಳಿಯೊಂದು ನಡೆದಾಗ ಅದಕ್ಕೆ ಸ್ಪಂದಿಸುವಷ್ಟು ಸಂವೇದನೆ ಉಳಿಸಿಕೊಂಡಿದ್ದಾರೆ. ಕೆಲವೊಮ್ಮೆ ತಾವೇ ಮುಂದೆ ಬಿದ್ದು ಜನಸಾಮಾನ್ಯರ ಪರವಾದ ನೀತಿ, ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಹಲವು ಸಾರಿ ನಿರಾಶೆಗೊಳಿಸುತ್ತಾರೆ. 2023ರ ನಂತರದ ಈ ಅವಧಿಯಲ್ಲಿ ಹೆಚ್ಚಿನ ನಿರಾಶೆ ಹಲವರಿಗೆ ಇರಬಹುದಾದರೂ, 2014ರಲ್ಲೇ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದ ಹಿರಿಯ ರಾಜಕಾರಣಿಯೊಬ್ಬರು ಇದನ್ನು ತೋಡಿಕೊಂಡಿದ್ದರು. ಅಂದು ನಮ್ಮ ಗೆಳೆಯರಲ್ಲಿ ಕೆಲವರ ಮುಂದೆ, ಮೈಸೂರಿನ ಜಲದರ್ಶಿನಿಯಲ್ಲಿ ʼವರ್ಷದ ನಿರಾಶೆ ಎಂದು ಯಾರಿಗಾದರೂ ಪ್ರಶಸ್ತಿ ಕೊಡುವುದಾದರೆ ಸಿದ್ದರಾಮಯ್ಯನವರಿಗೆ ಕೊಡಬೇಕುʼ ಎಂದಿದ್ದ ಅವರು ಸಾಯುವವರೆಗೂ ಸಿದ್ದರಾಮಯ್ಯನವರ ಜೊತೆಯಲ್ಲೇ ಇದ್ದರು!! ಅರಸರು ಬದುಕಿದ್ದಾಗ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸದೇ ಇದ್ದ ದೊರೆಸ್ವಾಮಿಯವರು ಸಿದ್ದರಾಮಯ್ಯನವರ ಬಗ್ಗೆ ಅಭಿಮಾನ ಹೊಂದಿದ್ದ ರೀತಿಯಲ್ಲಿ!!!

ದೊರೆಸ್ವಾಮಿ 1

ಏಕೆಂದರೆ, ಅವರಿಬ್ಬರು ಸಿದ್ದರಾಮಯ್ಯನವರ ಸಾಮರ್ಥ್ಯ ಮತ್ತು ಮಿತಿಗಳ ನಡುವಿನ ವೈರುಧ್ಯಗಳನ್ನು ಈ ಕಾಲಘಟ್ಟದ ಚೌಕಟ್ಟಿನಲ್ಲಿ ಇಟ್ಟು ನೋಡಿದ್ದರು. ಇದಕ್ಕೆ ಇನ್ನೂ ಒಂದು ಆಯಾಮವಿದೆ. ಭಾರತದ ಸಮಾಜವಾದಿ ಚಳವಳಿಯಲ್ಲಿ ಮುಖ್ಯವಾಹಿನಿ ರಾಜಕಾರಣ ಮಾಡಲು ಹೊರಟ ಹಲವರು ಒಂದು ನಿರ್ಧಾರ ಮಾಡಿದ್ದಾರೆ. ʼಜನರ ಪರವಾಗಿ ಸಾಧ್ಯವಿರುವಷ್ಟು ಒಳ್ಳೆಯ ಕೆಲಸ ಮಾಡಲು ಅಧಿಕಾರ ಪಡೆದುಕೊಳ್ಳಬೇಕುʼ. ಸಿದ್ದರಾಮಯ್ಯನವರೂ ಅದನ್ನು ನಿರ್ಧಾರ ಮಾಡಿದ್ದಾರೆ. ತಾನು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ವ್ಯಕ್ತಿಗತ ಮಹತ್ವಾಕಾಂಕ್ಷೆಯ ಜೊತೆಗೆ ಈ ತಾತ್ವಿಕ ಹಿನ್ನೆಲೆಯನ್ನೂ ಗಮನಿಸಬೇಕು. ಅಧಿಕಾರ ಪಡೆದುಕೊಳ್ಳಲು ಮತ್ತು ಉಳಿಸಿಕೊಳ್ಳಲು ಅಗತ್ಯವಿರುವ ರಾಜಿಗಳಿಗೆ ಅವರು ಸಿದ್ಧರಾಗಿರುತ್ತಾರೆ. ಈ ರಾಜಿಗಳು ಅಧಿಕಾರ ರಾಜಕಾರಣದ ಅಗತ್ಯವಿಲ್ಲದವರಿಗೆ ನಿರಾಶೆ ಮೂಡಿಸುತ್ತವೆ. ಮೌಲ್ಯಗಳ ಅಧಃಪತನದಂತೆ ಕಾಣುತ್ತವೆ. ಅದರ ಹೊರತಾಗಿ ಪ್ರತಿಯೊಬ್ಬರ ವ್ಯಕ್ತಿತ್ವದಲ್ಲಿರುವ ದೌರ್ಬಲ್ಯಗಳು, ಮಿತಿಗಳಂತೆ ಸಿದ್ದರಾಮಯ್ಯನವರ ವ್ಯಕ್ತಿತ್ವದಲ್ಲೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾಲಘಟ್ಟದ ಅತ್ಯಂತ ಜನಪ್ರಿಯ ನಾಯಕರಾದ ಅವರಿಂದ ವಿಪರೀತ ನಿರೀಕ್ಷೆಗಳು ಇವೆ. ಈ ನಿರೀಕ್ಷೆಗಳೂ ಸೇರಿಕೊಂಡು ಸಿದ್ದರಾಮಯ್ಯನವರ ಕುರಿತು ಪ್ರೀತಿಯಿರುವವರೂ ಸಾಕಷ್ಟು ಸಿಟ್ಟನ್ನು ತೋರುತ್ತಾರೆ.

ಸಿದ್ದರಾಮಯ್ಯನವರ ಆಡಳಿತವನ್ನು ಹೋಲಿಸಬೇಕಾದ್ದು ಈ ಕಾಲಘಟ್ಟದ ಇತರ ರಾಜ್ಯ ಸರ್ಕಾರಗಳ ಜೊತೆಗೆ ಮತ್ತು ನಮ್ಮದೇ ರಾಜ್ಯದ ಇತರ ಮುಖ್ಯಮಂತ್ರಿಗಳ ಆಡಳಿತದ ಜೊತೆಗೆ. ತಮಿಳುನಾಡು ಮತ್ತು ಕೇರಳಗಳ ಮುಖ್ಯಮಂತ್ರಿಗಳಿಗೆ ಇರುವ ಅನುಕೂಲ (ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಕಾರಣಕ್ಕೆ)ವೂ ಸಿದ್ದರಾಮಯ್ಯರಿಗಿಲ್ಲ. ಇಂದು ಇಡೀ ದೇಶದ ಎಲ್ಲೆಡೆ ವಿಸ್ತಾರವಾಗುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಕರ್ನಾಟಕದಿಂದ ಹೊರಟಿದ್ದು, ನವ ಆರ್ಥಿಕ ನೀತಿಯ ಕಾಲಘಟ್ಟದಲ್ಲಿ ಎಂಬುದು ಗಮನಾರ್ಹ. ಕರ್ನಾಟಕದ ವಿಧಾನಪರಿಷತ್ತಿನಲ್ಲಿನ ಸಮುದಾಯ ಪ್ರಾತಿನಿಧ್ಯ, ವಿವಿಧ ನಿಗಮ ಮಂಡಳಿಗಳಲ್ಲಿ ಯಾವ್ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ಒರೆಗೆ ಹಚ್ಚಿ ನೋಡಬೇಕು. ಸಿದ್ದರಾಮಯ್ಯನವರೇ ತೀರ್ಮಾನಿಸಿ ನೇಮಿಸುವ ಅವಕಾಶವಿರುವ ಸಿಂಡಿಕೇಟ್‌ ಸದಸ್ಯರ ಯಾದಿ, ಅವರ ಮಾತು ನಡೆಯುವ ಮಾಹಿತಿ ಆಯುಕ್ತರ ನೇಮಕಾತಿಗಳು ಇವೆಲ್ಲದರಲ್ಲಿ ಯಾರಿದ್ದಾರೆ ಎಂಬುದರ ಬಗ್ಗೆ ನಿಷ್ಪಕ್ಷಪಾತ ಲೆಕ್ಕಾಚಾರ ನಡೆಯಬೇಕು. ಸಂಘಟನೆಯೊಂದರ ಮುಖಂಡರು ಒಂದು ದಿನ ಫೇಸ್‌ಬುಕ್ಕಿನಲ್ಲಿ ಕರ್ನಾಟಕದ ಡಿಸಿಗಳಲ್ಲಿ ಅದೆಷ್ಟೋ ಜನ ಕುರುಬರೇ ಇದ್ದಾರೆ ಎಂದು ಬರೆದುಬಿಟ್ಟರು. ಕುತೂಹಲಕ್ಕೆ ಪಟ್ಟಿ ತೆರೆದು ನೋಡಿದರೆ, ಒಬ್ಬರು ಮಾತ್ರ ಕುರುಬರಿದ್ದರು! ಈ ಲೇಖನ ಬರೆಯುತ್ತಿರುವ ಹೊತ್ತಿಗೆ ಒಬ್ಬರೂ ಇಲ್ಲ!! ತಮ್ಮ ಜಾತಿಯವರೊಬ್ಬರು ಸಿಎಂ ಆದಾಗ, ಆಯಾ ಜಾತಿಯ ಜನ ಸುತ್ತಿಕೊಳ್ಳುವುದು ಸಹಜ ವಿದ್ಯಮಾನವೆಂಬಂತಾಗಿದೆ. ಆದರೆ, ಹಿಂದುಳಿದ ಸಮುದಾಯಕ್ಕೆ ಸೇರಿದವರೊಬ್ಬರ ಸುತ್ತ ನಿಜ ಮತ್ತು ಸುಳ್ಳುಗಳನ್ನು ಬೆರೆಸಿ ಇಂತಹ ʼಅಂಕಿ-ಅಂಶʼಗಳನ್ನು ಹರಡುತ್ತಲೇ ಇರುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇಂದು ಈ ದೇಶದ ಅತ್ಯಂತ ಅನಿವಾರ್ಯ, ಅತ್ಯಗತ್ಯ ಹೋರಾಟವಿರುವುದು ಸೈದ್ಧಾಂತಿಕ ನೆಲೆಯದ್ದು. ಆ ವಿಚಾರದಲ್ಲಿ ಇಡೀ ದೇಶದಲ್ಲಿ ಪಿನರಾಯಿ ವಿಜಯನ್ ಮತ್ತು ಸ್ಟಾಲಿನ್‌ ಅವರಲ್ಲದೇ ಇನ್ಯಾರನ್ನೂ (ಕಾಂಗ್ರೆಸ್‌ ಸಿಎಂಗಳನ್ನೂ ಒಳಗೊಂಡು) ಸಿದ್ದರಾಮಯ್ಯನವರ ಜೊತೆಗೆ ನಿಲ್ಲಿಸುವುದು ಸಾಧ್ಯವೇ ಇಲ್ಲ. ಇವೆರಡೂ ವಿಚಾರಗಳಲ್ಲಿ – ಕೋಮುವಾದ ಮತ್ತು ಸಾಮಾಜಿಕ ನ್ಯಾಯ – ಸಿದ್ದರಾಮಯ್ಯರಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಇರುವುದು ವಾಸ್ತವ. ಸ್ವಂತ ಮುಂದೊಡಗಿನಿಂದ ಮುನ್ನೋಟವಿರುವ ನಿರ್ದಿಷ್ಟ ಯೋಜನೆ ಹಾಗೂ ನಿರಂತರ ಪ್ರಯತ್ನದ ಕೊರತೆಯಂತೂ ಎದ್ದು ಕಾಣುತ್ತದೆ. ಆದರೆ, ಸಿದ್ದರಾಮಯ್ಯನವರ ಜಾಗದಲ್ಲಿ ಇರಬಹುದಾದ ಬೇರೆ ಇನ್ಯಾರಾದರೂ ಈ ಎರಡೂ ಸಂಗತಿಗಳಲ್ಲಿ ಯಾವ ರೀತಿಯ ಬದ್ಧತೆ ತೋರಬಹುದು ಎಂಬುದನ್ನು ನೆನಪಿಸಿಕೊಂಡರೆ ಇವರ ಮಹತ್ವ ಅರ್ಥವಾಗುತ್ತದೆ. ಹಾಗೆಯೇ ಮೋದಿ ಸರ್ಕಾರದ ವಿರುದ್ಧ ಒಕ್ಕೂಟ ತತ್ವದ ಪರವಾಗಿ ನಡೆಸುವ ಹೋರಾಟದ ವಿಚಾರದಲ್ಲೂ ಕರ್ನಾಟಕ ಮಾದರಿಯಾಗಿರುವುದರಲ್ಲಿ ಸಿದ್ದರಾಮಯ್ಯನವರ ನಾಯಕತ್ವ ಗಮನಾರ್ಹವಾಗಿದೆ. ಇವೆಲ್ಲದರಾಚೆಗೆ ಎರಡನೇ ಅವಧಿಯಲ್ಲಿ ಆಡಳಿತದಲ್ಲಿ ದಕ್ಷತೆ, ಭ್ರಷ್ಟಾಚಾರ ನಿಯಂತ್ರಣ, ವರ್ಗಾವಣೆಯಲ್ಲಿನ ಸಮಸ್ಯೆ – ಇವೆಲ್ಲದರಲ್ಲಿ ಸಂಪುಟದ ನಾಯಕರಾಗಿ ಅವರತ್ತಲೇ ಬೆರಳು ಮಾಡಿ ತೋರಿಸುತ್ತಿದ್ದರೆ, ಅದರ ಹೊಣೆಯನ್ನು ಅವರೇ ಹೊತ್ತುಕೊಳ್ಳಬೇಕು.

ಅದೇನೇ ಇದ್ದರೂ, ದೇವರಾಜ ಅರಸರಿಗಿಂತ ಬಹಳ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿದ್ದರಾಮಯ್ಯನವರು ಅಧಿಕಾರವನ್ನು ನಿಭಾಯಿಸಿದ ರೀತಿಯನ್ನು ಇನ್ನು ಹತ್ತು ವರ್ಷಗಳ ನಂತರ ಅಧ್ಯಯನ ನಡೆಸಿದರೆ ಇನ್ನೂ ನಿಷ್ಪಕ್ಷಪಾತಿ ವಿಶ್ಲೇಷಣೆ ಸಾಧ್ಯ ಎನಿಸುತ್ತದೆ.

ಇದರ ಅರ್ಥ ದೇವರಾಜ ಅರಸರ ಸಾಧನೆಗಳು ಕಡಿಮೆಯೆಂದಲ್ಲ. ಈ ರಾಜ್ಯದ ಇತಿಹಾಸದ ಅತಿ ವಿಶಿಷ್ಟ ಸಾಧಕರಾಗಿ ಅವರ ಹೆಸರು ಅಜರಾಮರವಾಗಿರುತ್ತದೆ. ಅದನ್ನು ಪ್ರತ್ಯೇಕವಾಗಿ ಬರೆಯಬಹುದು. ಈ ಲೇಖನದ ಉದ್ದೇಶವು – ಅಂತಹ ಹೋಲಿಕೆ ಹೇಗೆ ತಪ್ಪು ಎಂದು ಚರ್ಚಿಸುವುದಾಗಿದೆ. ಹಾಗಾಗಿ ದೇವರಾಜ ಅರಸರ ಮಹತ್ವದ ರಾಜಕೀಯ, ಸಾಮಾಜಿಕ ಪ್ರಯೋಗಗಳ ಕುರಿತು ಇಲ್ಲಿ ಬರೆಯುತ್ತಿಲ್ಲ. ಅದೇ ಸಂದರ್ಭದಲ್ಲಿ ದೇವರಾಜ ಅರಸರಿಗೆ ರಾಜಕಾರಣದಲ್ಲಿ, ಸಮಾಜದಲ್ಲಿ, ಮಾಧ್ಯಮ ವಲಯದಿಂದ ಯಾವ ಸವಾಲುಗಳೂ ಇರಲಿಲ್ಲ ಎಂದೂ ಅರ್ಥವಲ್ಲ. ಆದರೆ, ಆ ಕಾಲಘಟ್ಟದ ಸಮಾಜವೇ ಹೊಸ ಸಂಚಲನ, ಸಕಾರಾತ್ಮಕ ತಲ್ಲಣಗಳಿಗೆ ಪೂರಕವಾಗಿತ್ತು ಎಂಬುದನ್ನು ಕಡೆಗಣಿಸಲಾಗದು.

ಇಷ್ಟನ್ನು ಹೇಳಿದ ಮೇಲೆ ಸಿದ್ದರಾಮಯ್ಯನವರಿಗೆ ಇದ್ದ, ಇರುವ ಅನುಕೂಲಗಳನ್ನು ಹೇಳದೇ ಇದ್ದರೆ ತಪ್ಪಾಗುತ್ತದೆ.

ದೇವರಾಜ ಅರಸರ ನಂತರ ಮುಖ್ಯಮಂತ್ರಿಗಳಾದ ಹಿಂದುಳಿದ ಸಮುದಾಯಗಳಿಗೆ ಸೇರಿದ ಬಂಗಾರಪ್ಪನವರು, ವೀರಪ್ಪ ಮೊಯ್ಲಿಯವರು, ಧರ್ಮಸಿಂಗರಿಗೆ ಇಲ್ಲದ ಅನುಕೂಲಗಳು ಸಿದ್ದರಾಮಯ್ಯನವರಿಗೆ ಇತ್ತೆಂಬುದು ನಿಜ.

೧. ಕುರುಬ ಸಮುದಾಯದಂತಹ ಒಂದು ದೊಡ್ಡ ಸಮುದಾಯದ ಅಖಂಡ ಬೆಂಬಲ ಅವರಿಗೆ ಇದೆ ಅಥವಾ ಅಂತಹ ಬೆಂಬಲವಿದೆ ಎನ್ನುವ ಭಾವನೆಯೇ ಅವರಿಗೆ ಬಲ ತಂದುಕೊಡುತ್ತದೆ. ಕುರುಬರ ಎಸ್‌ ಟಿ ಹೋರಾಟದ ದಿನ, ಅಲ್ಲಿ ಭಾಗವಹಿಸಿರದ ಸಿದ್ದರಾಮಯ್ಯನವರ ಹೆಸರನ್ನು ಎಚ್‌.ಎಂ.ರೇವಣ್ಣನವರು ಪ್ರಸ್ತಾಪಿಸಿದ ಕ್ಷಣ, ಆ ಮೈದಾನದಲ್ಲಿ ಮೂಡಿದ ರೋಮಾಂಚನ ಅಧ್ಯಯನ ಯೋಗ್ಯವಾದದ್ದು.

೨. ಹಿಂದೆಂದಿಗಿಂತಲೂ ಹೆಚ್ಚಾಗಿ ಅಹಿಂದ ಸಮುದಾಯಗಳು – ಅದರಲ್ಲೂ ಮುಸ್ಲಿಮರು ಮತ್ತು ದಲಿತರು ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದು ಈ ಕಾಲಘಟ್ಟದಲ್ಲಿ. ಅದಕ್ಕೆ ಬಿಜೆಪಿಯ ರಾಜಕಾರಣವೂ ಒಂದು ಕಾರಣವಿರಬಹುದು. ಜನತಾದಳದಲ್ಲಿದ್ದು ಅಹಿಂದ ಮಾಡುವುದಕ್ಕೆ ಇರುವ ಮಿತಿಯನ್ನು ಇದರ ಜೊತೆಗೆ ಹೋಲಿಸಿ ನೋಡಬಹುದು.

೩. ಕರ್ನಾಟಕದ ಏಳಿಗೆಯ ಕುರಿತು ಕಾಳಜಿ ಇರುವ ಹಲವಾರು ಜನರು, ಸಂಘಟಕರು, ಪ್ರಗತಿಪರ ಸಂಘಟನೆಗಳು, ಬುದ್ಧಿಜೀವಿಗಳು ಸಿದ್ದರಾಮಯ್ಯರಿಗೆ ನೀಡಿದಂತಹ ಬೆಂಬಲ ಬೇರಾರಿಗೂ ನೀಡಿದಂತಿಲ್ಲ. ಎಂದೂ ಸಿದ್ದರಾಮಯ್ಯನವರನ್ನು ಭೇಟಿಯಾಗದೇ ಇದ್ದರೂ, ಅವರ ಪರವಾಗಿ ಕೆಲಸ ಮಾಡುವವರು, ಪರಿಚಯವಿದ್ದರೂ ಅವರಿಂದ ಯಾವ ಪ್ರಯೋಜನವನ್ನೂ ಬಯಸದೇ ಜೊತೆಗೂಡುವ ದೊಡ್ಡ ಸಮೂಹವಿದೆ. ಏಕೆಂದರೆ, ಸಿದ್ದರಾಮಯ್ಯನವರಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆ, ಅದನ್ನು ಬಹಿರಂಗವಾಗಿ ಹೇಳುವ ಛಾತಿ, ಬದ್ಧತೆಯನ್ನು ಗೌರವಿಸುವ ಸಮೂಹವಿದು.

೪. ಕರ್ನಾಟಕದ ಸಾಮಾನ್ಯ ಜನರು (ಇವರಲ್ಲಿ ಅಹಿಂದ ಸಮುದಾಯಗಳಷ್ಟೇ ಅಲ್ಲದೇ, ಗ್ರಾಮೀಣ ಭಾಗದ ಎಲ್ಲಾ ಜಾತಿಗಳಿಗೆ ಸೇರಿದವರೂ ಇದ್ದಾರೆ) ತಮ್ಮ ನೋವು, ನಲಿವು, ಆಶೋತ್ತರಗಳನ್ನು ಸಿದ್ದರಾಮಯ್ಯನವರ ವ್ಯಕ್ತಿತ್ವದ ಜೊತೆಗೆ ಸಮೀಕರಿಸಿಕೊಂಡ ಪರಿ ಮತ್ತು ತೋರಿದ ಪ್ರೀತಿ ಅಗಾಧವಾದದ್ದು. 2022ರ ಆಗಸ್ಟ್‌ನಲ್ಲಿ ನಡೆದ ದಾವಣಗೆರೆಯ ಕಾರ್ಯಕ್ರಮವು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹಳ ಕಾಲ ಉಳಿದು ಹೋಗುತ್ತದೆ.

Siddu Road

ಈ ಪ್ರೀತಿ, ಈ ಅಭಿಮಾನಕ್ಕೆ ತಕ್ಕುನಾಗಿ ಸಿದ್ದರಾಮಯ್ಯನವರು ಇನ್ನೂ ಏನೇನೋ ಮಾಡಬೇಕಿತ್ತು ಎಂಬ ನಿರೀಕ್ಷೆಯೇ ಹಲವರಲ್ಲಿದೆ. ಆ ನಿರೀಕ್ಷೆಯು ನ್ಯಾಯಯುತವಾಗಿದೆ.

ಯಾವ ವ್ಯಕ್ತಿಯನ್ನೂ, ನಾಯಕ-ನಾಯಕಿಯರನ್ನೂ ನಾವು ತಯಾರಿಸಿಕೊಳ್ಳಲಾಗದು – ಅವರು ಇದ್ದ ಹಾಗೆ ಅವರಿರುತ್ತಾರೆ; ಕಾಲಘಟ್ಟವೇ ಕೆಲವರನ್ನು ಆರಿಸಿಕೊಳ್ಳುತ್ತದೆ. ಹೀಗಿರುವಾಗ – ನಾವಿರುವ ಸಂದರ್ಭದಲ್ಲಿ ಕಾಲಘಟ್ಟ ಆರಿಸಿಕೊಳ್ಳಬಹುದಾದ ಆಯ್ಕೆಗಳಲ್ಲಿ ಉತ್ತಮವಾದುದನ್ನು ನಮ್ಮದಾಗಿಸಿಕೊಳ್ಳುವುದಷ್ಟೇ ಚುನಾವಣಾ ರಾಜಕಾರಣವು ಮುಂದಿಡುವ ಆಯ್ಕೆ. ಅದರಲ್ಲೂ ಹೊಸದೊಂದು ರಾಜಕೀಯ ಅಲೆ ಬೀಸದೇ ಜನಸಮೂಹದೊಳಗಿಂದಲೂ ಅದಕ್ಕೆ ಬೆಂಬಲ ಸಿಗದೇ ನಾಯಕರೊಬ್ಬರು ತಮ್ಮಂತೆ ತಾವೇ ದೊಡ್ಡ ಸಾಧನೆ ಮಾಡುವುದು ಸಾಧ್ಯವಿಲ್ಲ. ಕಾಲಘಟ್ಟದ ಮಿತಿಗಳನ್ನೂ ಮೀರಿ, ಅಂತಹ ಜನಬೆಂಬಲವನ್ನೂ ತಾವೇ ಕ್ರೋಢೀಕರಿಸಿಕೊಳ್ಳುವ ಸಂಘಟನಾ ಸಾಮರ್ಥ್ಯ, ಕಠಿಣ ಶ್ರಮ, ತ್ಯಾಗ, ಉದಾರತೆಯನ್ನು ಎಲ್ಲಾ ಕಾಲದಲ್ಲೂ ನಿರೀಕ್ಷಿಸುವುದು ದುರಾಸೆಯಾದೀತೇನೋ.

ಅತಿಯಾಸೆಯನ್ನಲ್ಲದಿದ್ದರೂ, ಈ ನಾಡಿನ ಜನರು ಸಿದ್ದರಾಮಯ್ಯನವರತ್ತ ತೋರಿದ ಅಭಿಮಾನದ ಋಣ ತೀರಿಸಲು ಅವರಿಗೆ ಇನ್ನೂ ಸಾಧ್ಯತೆಯಿದೆ. ಅವರು ಇನ್ನಷ್ಟು ಕಾಲ ಮುಖ್ಯಮಂತ್ರಿಯಾಗಿ ಮತ್ತು ಮುಖ್ಯಮಂತ್ರಿ ಜವಾಬ್ದಾರಿಯಿಂದ ಇಳಿದ ನಂತರವೂ ಅದನ್ನು ಪೂರೈಸಲೆಂದು ಹಾರೈಸೋಣ.

WhatsApp Image 2025 12 18 at 19.04.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...