ಉತ್ತರ ಪ್ರದೇಶದಲ್ಲಿ ಕ್ರಿಸ್‌ಮಸ್ ಆಚರಣೆಗಾಗಿ ಶಾಲೆಗಳಿಗೆ ರಜೆ ನೀಡಲಾಗಿಲ್ಲ. ಸರ್ಕಾರದ ಆದೇಶದಂತೆ ಶಾಲೆಗಳನ್ನು ತೆರೆಯಲಾಗಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಆಚರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ವಿದ್ಯಾರ್ಥಿಗಳ ಕ್ರಿಸ್‌ಮಸ್ ರಜೆಯನ್ನು ಕಸಿದುಕೊಂಡಿದೆ. ಇದು, ಬಿಜೆಪಿ ಕೋಮು ರಾಜಕಾರಣದ ಮುಂದುವರೆಕೆಯೆಂದು ರಾಜಕೀಯ ವಿಶ್ಲೇಷಕರು ಮತ್ತು ವಿಪಕ್ಷಗಳು ಆರೋಪಿಸಿವೆ.
ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಕ್ರಿಸ್‌ಮಸ್ ಆಚರಣೆ ಬದಲಿಗೆ, ವಾಜಪೇಯಿ ಜನ್ಮ ದಿನಾಚರಣೆಯ ಅಂಗವಾಗಿ ‘ಬಾಲ ಗೌರವ ಮತ್ತು ಉತ್ತಮ ಆಡಳಿತ ದಿನ’ವನ್ನು ಆಚರಿಸಬೇಕೆಂದು ಬಜರಂಗ ದಳ ಆಗ್ರಹಿಸಿತ್ತು. ಈ ಬೆನ್ನಲ್ಲೇ, ಸರ್ಕಾರವು ಕ್ರಿಸ್‌ಮಸ್ ರಜೆಯನ್ನು ರದ್ದಗೊಳಿಸಿ, ವಾಜಪೇಯಿ ಜನ್ಮದಿನೋತ್ಸವ ಆಚರಿಸುವುದಂತೆ ಆದೇಶಿಸಿದೆ.
ಸರ್ಕಾರವು ಬುಧವಾರ ಹೊರಡಿಸಿದ್ದ ಆದೇಶದಲ್ಲಿ, “ಗುರುವಾರ (ಡಿ.25) ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಬೇಕು. ವಾಜಪೇಯಿ ಅವರನ್ನು ಗೌರವಿಸಲು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಮರಣಾರ್ಥ ಚಟುವಟಿಕೆಗಳನ್ನು ಶಾಲೆಗಳು ಆಯೋಜಿಸಬೇಕು. ಈ ಆದೇಶವು ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅನ್ವಯಿಸುತ್ತದೆ” ಎಂದು ಹೇಳಿದೆ.
ಕ್ರಿಸ್‌ಮಸ್ ರಜೆ ರದ್ದುಗೊಳಿಸಿದ್ದನ್ನು ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ. ಕ್ರಿಸ್‌ಮಸ್ ರಜೆ ರದ್ದತಿಯು ಕ್ರೈಸ್ತ ಸಮುದಾಯದ ಕಡೆಗಣನೆ. ಇದು ಸಾರ್ವಜನಿಕ ಶಿಕ್ಷಣದಲ್ಲಿನ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




