ಸನಾತನ ಧರ್ಮವನ್ನು ಗುರಿಯಾಗಿಸಿಕೊಂಡ ಚಲನಚಿತ್ರದ ನಿರ್ಮಾಪಕರ ಮನೆಗೆ ನುಗ್ಗಿ ಪಾಠ ಕಲಿಸುವುದಾಗಿ ಹಿಂದೂ ಬಲಪಂಥೀಯ ಸಂಘಟನೆ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಬೆದರಿಕೆ ಹಾಕಿದ್ದಾರೆ.
‘ಯಾದವ್ ಜಿ ಕಿ ಲವ್ ಸ್ಟೋರಿ’ ಮತ್ತು ‘ಘೂಷ್ಖೋರ್ ಪಂಡಿತ್’ ಹಿಂದಿ ಚಲನಚಿತ್ರ ಪ್ರಸ್ತುತ ತನ್ನ ಶೀರ್ಷಿಕೆ ಮತ್ತು ಕಥಾವಸ್ತುವಿನ ಕಾರಣದಿಂದ ಭಾರಿ ವಿವಾದಕ್ಕೆ ಒಳಗಾಗುತ್ತಿದೆ. ಈ ಎರಡೂ ಸಿನಿಮಾಗಳ ವಿರುದ್ಧ ರಾಜ್ ಶೇಖಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಎಂಪುರಾನ್’ ಸಿನಿಮಾ ನಿರ್ಮಾಪಕರ ಮನೆ, ಕಚೇರಿ ಮೇಲೆ ಇಡಿ ದಾಳಿ
“ನಮ್ಮ ದೇವತೆಗಳು ಮತ್ತು ಸಂಸ್ಕೃತಿಯ ಬಗ್ಗೆ ಚಲನಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರು ಮತ್ತು ನಿರ್ದೇಶಕರ ಮನೆಗಳಿಗೆ ಪ್ರವೇಶಿಸಿ ಅವರಿಗೆ ಪಾಠ ಕಲಿಸುವ ಸಮಯ ಬಂದಿದೆ” ಎಂದು ಶೇಖಾವತ್ ಹೇಳಿದ್ದಾರೆ.
ಈ ಹಿಂದೆ ಕ್ಷತ್ರಿಯ ಮತ್ತು ಬ್ರಾಹ್ಮಣ ಸಮುದಾಯಗಳನ್ನು ಗುರಿಯಾಗಿಸಿಕೊಂಡ ಚಲನಚಿತ್ರ ನಿರ್ಮಾಪಕರು ಈಗ ಸಿನೆಮಾದ ಮೂಲಕ ಯಾದವ್ ಸಮುದಾಯವನ್ನು ಅವಮಾನಿಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಯುವಕರನ್ನು ದಾರಿ ತಪ್ಪಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಯಾದವ್ ಸಮುದಾಯದ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ಪ್ರಣಯ ಸಂಬಂಧವು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುತ್ತದೆ. ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಯಾದವ್ ಸಮುದಾಯದ ಕೆಲವರಿಂದ ಆಕ್ಷೇಪಣೆಗಳು ಬಂದಿವೆ. ಬಿಜೆಪಿ ನಾಯಕರು ಈ ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆಯೂ ಕೋರಿದ್ದಾರೆ. ಆದರೆ ಆರೋಪಗಳ ಬಗ್ಗೆ ಚಲನಚಿತ್ರ ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮುಖ್ಯ ನಟಿ ಪ್ರಗತಿ ತಿವಾರಿ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ಇದು ಕೇವಲ ಒಂದು ಕಾಲ್ಪನಿಕ ಪ್ರೇಮಕಥೆ ಎಂದು ಹೇಳಿದ್ದಾರೆ. ಚಿತ್ರವು ಸಮಾಜದ ಕನ್ನಡಿಯಾಗಿದ್ದು, ಅದನ್ನು ನೋಡದೆ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಹಲವು ಮಂದಿ ವಾದಿಸಿದ್ದಾರೆ.





