“ಇಷ್ಟು ದೊಡ್ಡ ಸೇತುವೆ ಕುಸಿದಿದೆ. ಆದರೆ, ಸರ್ಕಾರ ಏನು ಹೇಳಿತು. ಇದು ದೇವರ ಕೃತ್ಯ ಎಂದಿತು. ದೀದೀ, ಇದು ದೇವರ ಕೃತ್ಯವಲ್ಲ. ಇದು ವಂಚನೆ, ವಂಚನೆಯ ಕೃತ್ಯ” – ಇದು 2016ರ ಏಪ್ರಿಲ್ 7ರಂದು ಬಂಗಾಳದ ಬಿರ್ಪಾರಾದಲ್ಲಿ ಮೋದಿ ಅವರು ಅಬ್ಬರ ದನಿಯಲ್ಲಿ ಹೇಳಿದ್ದ ಹೇಳಿಕೆ. ಈಗ, ಗುಜರಾತ್‌ನ ವಡೋದರಾದಲ್ಲಿ ಸೇತುವೆ ಕುಸಿದುಬಿದ್ದ ಬಳಿಕ, ಇದೇ ಹೇಳಿಕೆ ಮೋದಿ ಅವರಿಗೆ ತಿರುಗು ಬಾಣವಾಗಿದೆ. ಮೋದಿ ಅವರನ್ನು ಅವರದ್ದೇ ಹೇಳಿಕೆಯ ಮೇಲೆ ವಿಪಕ್ಷಗಳು ಟೀಕೆ ಮಾಡುತ್ತಿವೆ.
2016ರ ಮಾರ್ಚ್ 31ರಂದು ಕೋಲ್ಕತ್ತಾದಲ್ಲಿ ಫ್ಲೈಓವರ್ ಕುಸಿತು ಬಿದ್ದಿತ್ತು. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಆಗ ನಿರ್ಮಾಣ ಕಂಪನಿಯ ಅಧಿಕಾರಿಯೊಬ್ಬರು ‘ಇದು ದೇವರ ಕೃತ್ಯ’ ಎಂದಿದ್ದರು. ಆ ದುರಂತ ಘಟನೆ ಮತ್ತು ಅಧಿಕಾರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೋದಿ, “ಇದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ‘ವಂಚನೆಯ ಕೃತ್ಯ'” ಎಂದಿದ್ದರು. ಮಾತ್ರವಲ್ಲದೆ, “ಇದು ದೇವರ ಸಂದೇಶ. ತೃಣಮೂಲ ಕಾಂಗ್ರೆಸ್ (TMC) ಆಡಳಿತದಿಂದ ಬಂಗಾಳವನ್ನು ರಕ್ಷಿಸಲು ಜನರಿಗೆ ದೇವರು ನೀಡಿರುವ ಎಚ್ಚರಿಕೆ” ಎಂದೂ ಜನರ ಸಾವಿನ ಕುರಿತು ವಿಕೃತಿ ಮರೆದಿದ್ದರು.
ಇದೀಗ, ಮೋದಿ ಅವರ ತವರು, ಬಿಜೆಪಿಯೇ ಅಧಿಕಾರದಲ್ಲಿರುವ ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಮಹಿಸಾಗರ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದೆ. ದುರಂತದಲ್ಲಿ ಈವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ದುರಂತ ಘಟನೆಗೆ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿರುವ ಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿ, ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 2016ರಲ್ಲಿ ಮೋದಿ ನೀಡಿದ್ದ ‘ವಂಚನೆಯ ಕೃತ್ಯ’ ಹೇಳಿಕೆಯನ್ನು ನೆನಪಿಸಿದೆ.
🚨 141 lives lost in the Morbi bridge collapse
— All India Trinamool Congress (@AITCofficial) July 9, 2025
🚨 Newly built bridge on Mindhola river in Tapi collapsed
🚨 Two crushed to death after bridge collapsed in Palanpur
🚨 Old bridge collapsed in Surendranagar
🚨 10 killed in Vadodara bridge collapse
Tell us, @narendramodi: Are these… pic.twitter.com/8bvKhGuRAH
‘ಎಕ್ಸ್’ನಲ್ಲಿ 20 ಟ್ವೀಟ್ ಮಾಡಿರುವ ಟಿಎಂಸಿ, 2022ರ ಅಕ್ಟೋಬರ್ 30ರಂದು ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆ ಕುಸಿದು ಬಿದ್ದು, ಕನಿಷ್ಠ 141 ಜನರು ಸಾವನ್ನಪ್ಪಿದ್ದ ಸಂದರ್ಭದ ಚಿತ್ರ ಮತ್ತು ಪ್ರಸ್ತುತ ಕುಸಿದುಬಿದ್ದಿರುವ ವಡೋದರಾ ಸೇತುವೆಯ ಚಿತ್ರಗಳನ್ನು ಹಂಚಿಕೊಂಡಿದೆ. “ಡಬಲ್ ಎಂಜಿನ್ – ಡಬಲ್ ಡಿಸಾಸ್ಟರ್ (ಡಬಲ್ ಎಂಜಿನ್ ಸರ್ಕಾರ – ಡಬಲ್ ವಿನಾಶ). ಇದು ದೇವರ ಕೃತ್ಯ ಅಥವಾ ವಂಚನೆಯ ಕೃತ್ಯ” ಎಂದು ಹೇಳಿದೆ.
ಸದ್ಯ, ವಡೋದರಾದಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.
ಅಹಮದಾಬಾದ್ ಮೂಲದ ಹಿರಿಯ ಪತ್ರಕರ್ತ ದೀಪಲ್ ತ್ರಿವೇದಿ ಅವರು, “ಗುಜರಾತ್ ಮಾದರಿ ಬಗ್ಗೆ ಮಾತನಾಡುವ ಸರ್ಕಾರಗಳು ಈವರೆಗೆ ಏನನ್ನೂ ಮಾಡಿಲ್ಲ. ಸರ್ಕಾರ ಈಗ ಮಾಡಬಹುದಾದ ಏಕೈಕ ಕೆಲಸ ಮತ್ತೊಬ್ಬರ ಮೇಲೆ ಹೊಣೆ ಹೊರಿಸಿ, ಅವರನ್ನು ಶಿಕ್ಷಿಸುವುದು. ಈ ಗುಜರಾತ್ ಮಾದರಿಯ ಅಭಿವೃದ್ಧಿ, ವಿಕಾಸ ಎಂಬುದುತೀರಾ ಕಳಪೆಯಾಗಿದೆ:” ಎಂದಿದ್ದಾರೆ.




