20 ವರ್ಷ ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಿಗೆ ಜಾರಿಗೆ ಬಂದಿರುವ 2025ರ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆಗೆ ಕೇಂದ್ರ ಬಜೆಟ್‌ನಲ್ಲಿ 95,692.31 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ಹಣವು ಬರೀ 52 ದಿನಕ್ಕೆ ಸಾಕಾಗುತ್ತದೆ, 125 ದಿನಗಳಿಗೆ ಈ ಹಣ ಸಾಲದು ಎಂದು ತಜ್ಞರು ಹೇಳಿದ್ದಾರೆ.
ಲಿಬ್‌ಟೆಕ್‌ನ ತಜ್ಞ ಚಕ್ರಧರ್ ಬುದ್ಧ, “ಕೇಂದ್ರ ಸರ್ಕಾರವು 125 ದಿನಗಳ ಉದ್ಯೋಗದ ಭರವಸೆ ನೀಡಿ ಮನರೇಗಾಕ್ಕಿಂತ ವಿಬಿ-ಜಿ ರಾಮ್ ಜಿ ಸುಧಾರಿತ ಯೋಜನೆ ಎಂದು ಬಿಂಬಿಸುತ್ತದೆ. ಆದರೆ ಬಜೆಟ್ ವಿಭಿನ್ನವಾದ ಕಥೆಯನ್ನು ಹೇಳಿದೆ. ಪ್ರಸ್ತುತ ಮಾನದಂಡಗಳ ಪ್ರಕಾರ, ಎಲ್ಲಾ ಸಕ್ರಿಯ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಕನಿಷ್ಠ 2.3 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಕೇಂದ್ರ ಹಂಚಿಕೆ ಮಾಡುವ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2026 | ಕರ್ನಾಟಕಕ್ಕೆ ಸಿಕ್ಕಿದ್ದು ಒಂದು ‘ಹೈಸ್ಪೀಡ್ ರೈಲು’ ಮಾತ್ರ!
“ಕೇಂದ್ರ ಬರೀ 95,692 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಇದೂ ರಾಜ್ಯಗಳು ತಮ್ಮ ಶೇಕಡ 40ರಷ್ಟು ಪಾಲನ್ನು ನೀಡುವುದರ ಮೇಲೆ ಅವಲಂಬಿಸಿರುತ್ತದೆ. ಇದು ಸುಮಾರು 64,000 ಕೋಟಿ ರೂ.ಗಳಷ್ಟಾಗುತ್ತದೆ. ಇಷ್ಟು ಕಡಿಮೆ ಹಣದಲ್ಲಿ ಯೋಜನೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಇನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಲಿಬ್‌ಟೆಕ್ ಇಂಡಿಯಾದ ಸಂಶೋಧಕ ರಾಜೇಂದ್ರನ್ ನಾರಾಯಣನ್ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದು, “ಪ್ರಸ್ತುತ ಹಂಚಿಕೆಯು ರಾಜ್ಯ ಬಜೆಟ್ ಸಿದ್ಧತೆಗೆ ಸ್ಪಷ್ಟತೆ ನೀಡುವ ಬದಲಿಗೆ ಗೊಂದಲವನ್ನು ಉಂಟು ಮಾಡಿದೆ” ಎಂದು ಹೇಳಿದ್ದಾರೆ.





