ಬಿಲಿಯನೇರ್ ಅನಿಲ್ ಅಗರ್ವಾಲ್ ಅವರ ಗಣಿಗಾರಿಕೆ ಸಂಸ್ಥೆ ವೇದಾಂತ ಲಿಮಿಟೆಡ್, ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ನೀಡಿದ ದೇಣಿಗೆಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ವೇದಾಂತ ಬಿಜೆಪಿಗೆ 97 ಕೋಟಿ ರೂ.ಗಳನ್ನು ನೀಡಿದೆ ಎಂದು ಅದರ ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ.
ವೇದಾಂತವು ತನ್ನ ಪೋಷಕ ಸಂಸ್ಥೆಯಾದ ಲಂಡನ್‌ನ ವೇದಾಂತ ರಿಸೋರ್ಸಸ್ ಪಿಎಲ್‌ಸಿಗೆ ‘ವಿವಿಧ ವೆಚ್ಚಗಳು’ ಅಡಿಯಲ್ಲಿ ನೀಡಿದ ರಾಜಕೀಯ ದೇಣಿಗೆಗಳು ಮತ್ತು ನಿರ್ವಹಣೆ ಮತ್ತು ಬ್ರಾಂಡ್ ಶುಲ್ಕದ ವೆಚ್ಚಗಳನ್ನು ತನ್ನ ವಾರ್ಷಿಕ ವರದಿಯಲ್ಲಿ ವಿವರಿಸಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಪುನರುಜ್ಜೀವನ; ನಿರ್ಮಲಾ ಸೀತಾರಾಮನ್
ರಾಜಕೀಯ ದೇಣಿಗೆಗಳು 2024-25ರಲ್ಲಿ ಒಟ್ಟು 157 ಕೋಟಿ ರೂ.ಗಳಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ಇದು 97 ಕೋಟಿ ರೂ.ಗಳಷ್ಟಿತ್ತು. ಬಿಜೆಪಿಗೆ ನೀಡಿದ ದೇಣಿಗೆ ಗಗನಕ್ಕೇರಿದರೆ, ವಿರೋಧ ಪಕ್ಷ ಕಾಂಗ್ರೆಸ್‌ಗೆ ನೀಡಿದ ದೇಣಿಗೆ ಕೇವಲ ಹತ್ತು ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ?
2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗಿನ ಹಣಕಾಸು ವರ್ಷ 2025ರಲ್ಲಿ ವೇದಾಂತ ದೇಣಿಗೆಯಾಗಿ ಬಿಜೆಪಿಗೆ 97 ಕೋಟಿ ರೂಪಾಯಿ, ಬಿಜು ಜನತಾ ದಳಕ್ಕೆ 25 ಕೋಟಿ ರೂಪಾಯಿ, ಜಾರ್ಖಂಡ್ ಮುಕ್ತಿ ಮೋರ್ಚಾ 20 ಕೋಟಿ ರೂಪಾಯಿ, ಕಾಂಗ್ರೆಸ್‌ಗೆ 10 ಕೋಟಿ ರೂಪಾಯಿ ನೀಡಿದೆ ಎಂದು 2024-25ರ ವಾರ್ಷಿಕ ವರದಿ ಹೇಳುತ್ತದೆ.
2024 ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬಿಜೆಪಿಗೆ 26 ಕೋಟಿ ರೂಪಾಯಿ, ಬಿಜು ಜನತಾ ದಳಕ್ಕೆ 15 ಕೋಟಿ ರೂಪಾಯಿ, ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ 5 ಕೋಟಿ ರೂಪಾಯಿ, ಕಾಂಗ್ರೆಸ್‌ಗೆ 49 ಕೋಟಿ ರೂಪಾಯಿ ವೇದಾಂತ ನೀಡಿತ್ತು.
ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಗಳಲ್ಲಿ ವೇದಾಂತವು ಒಂದಾಗಿದೆ. 2022-23ರಲ್ಲಿ ಇದು ರಾಜಕೀಯ ಪಕ್ಷಗಳಿಗೆ ಒಟ್ಟು 155 ಕೋಟಿ ರೂ.ಗಳನ್ನು ಮತ್ತು 2021-22ರಲ್ಲಿ 123 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿತ್ತು.
ಇದೀಗ ಚುನಾವಣಾ ಬಾಂಡ್ ಆರಂಭದಿಂದ ರದ್ದಾದವರೆಗಿನ ವೇದಾಂತದ ದೇಣಿಗೆಯನ್ನೂ ಬಹಿರಂಗಪಡಿಸಲಾಗಿದೆ. 2017ರಿಂದ ಪ್ರಾರಂಭವಾದ ಐದು ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ವೇದಾಂತ 457 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದೆ.





