ದೇಶದಲ್ಲಿ ನಿನ್ನೆ ಸೌಹಾರ್ದತೆಯಿಂದ ಕ್ರಿಸ್‌ಮಸ್ ಆಚರಣೆ ಮಾಡಲಾಗುತ್ತಿರುವಾಗ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರ ಹಲವೆಡೆ ದಾಂಧಲೆ ನಡೆಸಿದ್ದಾರೆ. ಅಸ್ಸಾಂನ ನಲ್ಬಾರಿ ಜಿಲ್ಲೆಯ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಬಳಸಲಾದ ಅಲಂಕಾರಿಕ ವಸ್ತುಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು, ಅಂಗಡಿಗಳಲ್ಲಿದ್ದ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳನ್ನು ಕಿತ್ತುಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳಕ್ಕೆ ಸಂಬಂಧಿಸಿದ ನಾಲ್ವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬೆಲ್ಸೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಾಣಿಗಾಂವ್ ಗ್ರಾಮದಲ್ಲಿರುವ ಸೇಂಟ್ ಮೇರಿ ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಣೆಗಾಗಿ ಮಾಡಲಾಗಿದ್ದ ಅಲಂಕಾರವನ್ನು ಸುಟ್ಟು ಹಾಕಿದ್ದಾರೆ. ಕಾನೂನುಬಾಹಿರವಾಗಿ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಕ್ರಿಸ್‌ಮಸ್ ಆಚರಣೆಗೆ ಸಂಘಪರಿವಾರ ಅಡ್ಡಿ; ಗೋದಲಿ ಧ್ವಂಸ, ಬೆದರಿಕೆ
ಆರೋಪಿಗಳು ಹೊರಗಿನ ಅಲಂಕಾರಗಳು, ದೀಪಗಳು, ಸಸಿಗಳ ಕುಂಡಗಳು, ಇತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲವು ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಶಾಲೆಯ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಬೆಲ್ಸೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಭಾಗಿಯಾಗಿರುವ ಇನ್ನೂ ಕೆಲವರನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಲ್ಲಿ ವಿಎಚ್‌ಪಿ ನಲ್ಬರಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ದೇಕಾ, ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಮನಶ್ ಜ್ಯೋತಿ ಪಟಗಿರಿ ಮತ್ತು ಸಹ ಕಾರ್ಯದರ್ಶಿ ಬಿಜು ದತ್ತ, ಬಜರಂಗದಳದ ಜಿಲ್ಲಾ ಸಂಚಾಲಕ ನಯನ್ ತಾಲ್ಲೂಕುದಾರ್ ಸೇರಿದ್ದಾರೆ. ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದ ಅವರು ಕ್ರಿಸ್‌ಮಸ್ ಆಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.
ರಾಯ್‌ಪುರದ ಮ್ಯಾಗ್ನೆಟೋ ಮಾಲ್‌ನಲ್ಲಿ ಸುಮಾರು 36ರಿಂದ 50 ಮಂದಿ ಹಿಂದುತ್ವವಾದಿಗಳು ನುಗ್ಗಿ ಕ್ರಿಸ್‌ಮಸ್ ಅಲಂಕಾರ ಮತ್ತು ಸಂತಕ್ಲಾಸ್ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬರೇಲಿಯ ಸೇಂಟ್ ಅಲ್ಫೋನ್ಸಸ್ ಚರ್ಚ್ ಎದುರು ಜಮಾಯಿಸಿದ ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ ನಡೆಸಿದ್ದಾರೆ. ಲಜಪತ್ ನಗರದಲ್ಲಿ ಸಂತ ಹ್ಯಾಟ್ ಧರಿಸಿದ್ದ ಮಹಿಳೆಯರು ಮತ್ತು ಮಕ್ಕಳನ್ನು ತಡೆದ ಬಜರಂಗದಳದ ಕಾರ್ಯಕರ್ತರು, ಅವರು ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ.
ಹೀಗೆ ಸದ್ಯ ದೇಶದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹಲವು ಘಟನೆಗಳು ನಡೆಯುತ್ತಿದೆ. ಈ ಹಿಂದೆ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದ್ದ ಹಿಂದುತ್ವವಾದಿಗಳು, ಈಗ ಕ್ರೈಸ್ತ ಸಮುದಾಯದ ಮೇಲೆಯೂ ದಾಳಿಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವಂತೆ ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನವು (CBCI) ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದೆ.





