ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆ ದೀಪೋತ್ಸವ ಆಚರಣೆಯ ಬಳಿಕ ಪುರಸಭೆಯ ಪೌರ ಕಾರ್ಮಿಕರು ದೀಪಗಳನ್ನು ಗುಡಿಸಿ ನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿ ದೀಪಗಳನ್ನು ಕಸದಂತೆ ಗುಡಿಸಿ ನಂದಿಸಿದಿರುವುದನ್ನು ಸಮಾಜವಾದಿ ಪಕ್ಷ(ಎಸ್‌ಪಿ) ನಾಯಕರು ಖಂಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಯೋಧ್ಯೆ ಪುರಸಭೆಯ ಪೌರ ಕಾರ್ಮಿಕರು ದೀಪೋತ್ಸವ ಆಚರಣೆಯ ನಂತರ ಪೊರಕೆಗಳಿಂದ ಉರಿಯುತ್ತಿರುವ ದೀಪಗಳನ್ನು ತಳ್ಳಿ ನಂದಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿದ್ದೀರಾ? ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-2
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಎಸ್‌ಪಿ ನಾಯಕ, ಉತ್ತರ ಪ್ರದೇಶದ ಮಾಜಿ ಸಚಿವ ಜೈ ಶಂಕರ್ ಪಾಂಡೆ, “ಪುರಸಭೆಯ ನೈರ್ಮಲ್ಯ ಕಾರ್ಮಿಕರ ಕ್ರಮವು ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ” ಎಂದು ಹೇಳಿದ್ದಾರೆ.
“ರಾಮ ವನವಾಸದಿಂದ ಹಿಂದಿರುಗಿದರು ಎಂಬ ಭಕ್ತಿ ಮತ್ತು ನಂಬಿಕೆಯಿಂದ ಜನರು ಸರಯು ನದಿಯ ದಡದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಿದರು. ಆದರೆ ಪೊರಕೆಗಳಿಂದ ಉರಿಯುತ್ತಿರುವ ದೀಪಗಳನ್ನು ನಂದಿಸಲಾಗಿದೆ. ದೀಪ ಬೆಳಗಿಸಿದ ಕೆಲವೇ ಕ್ಷಣಗಳಲ್ಲಿ ಅಗೌರವದಿಂದ ಅವುಗಳನ್ನು ತೆಗೆದುಹಾಕುವುದು ಖಂಡಿತವಾಗಿಯೂ ಹಿಂದೂ ಧರ್ಮದ ಮೇಲಿನ ದಾಳಿ” ಎಂದಿದ್ದಾರೆ.
दीपोत्सव की भाजपाई सच्चाई।
— Samajwadi Party Media Cell (@mediacellsp) October 22, 2025
बस और कुछ नहीं कहना है। pic.twitter.com/G5rgmQ5cmA
ಇನ್ನು ಸ್ಥಳೀಯ ಎಸ್‌ಪಿ ನಾಯಕರು ಕೂಡಾ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಈ ಕ್ರಮವನ್ನು ಖಂಡಿಸಿದ್ದಾರೆ.
ಈ ವಿವಾದದ ಬಗ್ಗೆ ಅಯೋಧ್ಯೆ ಪುರಸಭೆ ಆಯುಕ್ತ ಜಯೇಂದ್ರ ಕುಮಾರ್ ಮಾತನಾಡಿ, “ಕೆಲವು ದೀಪಗಳು ಬಹುಶಃ ಉರಿಯುತ್ತಿದ್ದವು. ಆದರೆ ಪೌರ ಕಾರ್ಮಿಕರು ಹೆಚ್ಚಿನ ದೀಪಗಳು ಆರಿಹೋಗಿದ್ದವು” ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆಯು ಭಾನುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ನಡೆಯಿತು.





