ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶುಕ್ರವಾರ ತಳ್ಳಿಹಾಕಿದೆ. ಪಕ್ಷದ ಮುಖ್ಯಸ್ಥ ವಿಜಯ್ ಮೇಲೆ ಮೈತ್ರಿ ಮಾಡಿಕೊಳ್ಳುವಂತೆ ಭಾರೀ ಒತ್ತಡ ಹೇರಲಾಗಿತ್ತು. ಆದರೆ, ಅವರು ಒತ್ತಡಕ್ಕೆ ಮಣಿಯಲಿಲ್ಲ. ದೃಢವಾಗಿ ನಿಂತರು ಎಂದು ಟಿವಿಕೆ ಹೇಳಿದೆ.
ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಮಾತನಾಡಿರುವ ಟಿವಿಕೆ ಪ್ರಧಾನ ಕಾರ್ಯದರ್ಶಿ ಅರುಣ್ ರಾಜ್, “ಸಿಬಿಐ ವಿಚಾರಣೆಗಳು ಮತ್ತು ಚಲನಚಿತ್ರ ಸಂಬಂಧಿತ ವಿಷಯಗಳ ಮೂಲಕ ಬಿಜೆಪಿಯಿಂದ ವಿಜಯ್ ಮೇಲೆ ಒತ್ತಡ ತೀವ್ರಗೊಂಡಿವೆ. ಈ ಎಲ್ಲ ಒತ್ತಡಗಳ ಹೊರತಾಗಿಯೂ, ಕೋಮುವಾದಿ ಶಕ್ತಿಗಳೊಂದಿಗೆ ಮೈತ್ರಿ ಇಲ್ಲವೆಂದು ವಿಜಯ್ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇನ್ನೇನು ಹೇಳಬೇಕು?” ಎಂದು ಹೇಳಿದ್ದಾರೆ.
“ವಿಜಯ್ ಅವರು ಮಾಮಲ್ಲಪುರಂನಲ್ಲಿ ನಡೆದ ಸಮಾವೇಶದಲ್ಲಿ ‘ಕೋಮುವಾದಿ ಶಕ್ತಿಗಳೊಂದಿಗೆ ಮೈತ್ರಿ ಇರುವುದಿಲ್ಲ’ವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂತಹ ನಿಲುವನ್ನು ವಿಜಯ್ ಸ್ಪಷ್ಟಪಡಿಸಿರುವಾಗ ಬಿಜೆಪಿ ವಿರುದ್ಧ ಅವರು ಮಾತನಾಡುತ್ತಿಲ್ಲ ಎಂಬ ತರ್ಕಕ್ಕೆ ಅವಕಾಶವಿಲ್ಲ” ಎಂದಿದ್ದಾರೆ.
“ಮೊದಲ ಸಮ್ಮೇಳನದಲ್ಲಿಯೇ, ವಿಜಯ್ ಅವರು ಬಿಜೆಪಿಯನ್ನು ಸೈದ್ಧಾಂತಿಕ ಎದುರಾಳಿ ಎಂದು ಸ್ಪಷ್ಟವಾಗಿ ಘೋಷಿಸಿದರು. ರಾಜ್ಯದಲ್ಲಿನ ಆಡಳಿತ ಪಕ್ಷ ಮತ್ತು ಕೇಂದ್ರದಲ್ಲಿನ ಆಡಳಿತ ಪಕ್ಷ ಎರಡನ್ನೂ ತಮ್ಮ ವಿರೋಧಿಗಳು ಎಂದು ಬಹಿರಂಗವಾಗಿ ಘೋಷಿಸಲು ಬಹಳ ಧೈರ್ಯ ಬೇಕು. ಹಲವು ಸಂದರ್ಭಗಳಲ್ಲಿ ಕೇಂದ್ರದ ಆಡಳಿತ ಪಕ್ಷವು ಒತ್ತಡ ಹೇರಿತು. ಆದರೆ, ನಮ್ಮ ನಾಯಕನ ನಿಲುವು ತುಂಬಾ ಸ್ಪಷ್ಟವಾಗಿದೆ” ಎಂದು ರಾಜ ಹೇಳಿದ್ದಾರೆ.
ತಮಿಳುನಾಡು ಈ ವರ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಪ್ರಮುಖ ಸ್ಪರ್ಧೆ ಇರಲಿದೆ. ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್, ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಹಾಗೂ ಇತರ ಪಕ್ಷಗಳು ಸೇರಿವೆ. ಎಐಎಡಿಎಂಕೆ ನೇತೃತ್ವದಲ್ಲಿ ಬಿಜೆಪಿ, ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಮತ್ತು ಇತರ ಪಕ್ಷಗಳ ಎನ್‌ಡಿಎ ಸ್ಪರ್ಧೆಯಲ್ಲಿದೆ. ವಿಜಯ್ ಅವರ ಟಿವಿಕೆ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಏಕಾಂಗಿ ಸ್ಪರ್ಧೆಗೆ ನಿರ್ಧರಿಸಿದೆ.




