ಮರಗಳ್ಳತನ ಪ್ರಕರಣದಲ್ಲಿ ಸಹೋದರ ವಿಕ್ರಂ ಸಿಂಹ ಬಂಧನ ವಿಚಾರವಾಗಿ ಮಾತನಾಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, “ಸಿಎಂ ಸಿದ್ದರಾಮಯ್ಯನವರ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿರುವ ಪಿತೂರಿ ಇದು” ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣ ಮುಂದುವರಿಯಲಿ. ನನ್ನ ಕುಟುಂಬದವರನ್ನು ಬೀದಿಗೆ ತರುತ್ತಿದ್ದೀರಿ. ವಯಸ್ಸಾಗಿರುವ ನಮ್ಮ ತಾಯಿ, ತಂಗಿಯನ್ನೂ ಕೂಡ ಬಂಧನ ಮಾಡಿ. ತಾಯಿ ಚಾಮುಂಡಿ, ಮೈಸೂರು ಮತ್ತು ಕೊಡಗು ಜನ ನನ್ನ ಕೈ ಬಿಡಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
“ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವನ ತೆಗೆಯಬಹುದು ಅಷ್ಟೇ. ಸಿದ್ದರಾಮಯ್ಯ ಸರ್, ನೀವು ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟಿಷಿಯನ್. ನಿಮ್ಮ ಮಗನನ್ನ ಎಂಪಿ ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ” ಎಂದು ಟೀಕಿಸಿದ್ದಾರೆ.
“ನಿಮ್ಮಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಲ್ಲ. ಎಲ್ಲಾ ಮಕ್ಕಳಿಗೂ ನಿಮ್ಮಂತಹ ತಂದೆ ಸಿಗಲ್ಲ. ಪ್ರತಾಪ್ ಸಿಂಹ ಅಡ್ಡಿ ಆಗಿದ್ದಾನೆ ಅಂತಾ ಮುಗಿಸಲು ಮುಂದಾಗಿದ್ದೀರಿ. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ” ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ವಿಕ್ರಂ ಸಿಂಹ ಬಂಧನ | ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ: ಅರಣ್ಯ ಸಚಿವ ಈಶ್ವರ ಖಂಡ್ರೆ
“ಡಿ. 16ರಂದು ಬೇಲೂರಿನ ಜಮೀನಿನ ವಿಚಾರವಾಗಿ ನನ್ನ ತಮ್ಮನ ಹೆಸರು ಎಳೆದು ತಂದ್ರಿ. ಮರವನ್ನು ಕಡಿದಿದ್ದಾರೆ ಎಂದು ಎಫ್ಐಆರ್ ದಾಖಲಾಗಿತ್ತು. ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರವಿ ಎಂಬವರು ಸಹಾಯ ಮಾಡಿ, ಪರಾರಿಯಾಗಿದ್ದಾರೆ. ಈವರೆಗೆ ಆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24ನೇ ತಾರೀಕಿನವರೆಗೆ ನಿಮ್ಮ ಅಧಿಕಾರಿಗಳಿಗೆ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ” ಎಂದರು.
“ಹನುಮ ಜಯಂತಿ ಸಂದರ್ಭ ನಾನು ಒಂದು ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್‌ನವರು ಟ್ವೀಟ್ ಮಾಡಿದ್ದಾರೆ. ಎಫ್‌ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪ್ ಸಿಂಹನನ್ನ ಮುಗಿಸುವ ಯತ್ನಿಸಿದ್ದೀರಿ. ನನ್ನ ತಮ್ಮ ತಲೆ ಮರೆಸಿಕೊಂಡಿದ್ದಾನಾ? ಎರಡು ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಎಫ್‌ಐಆರ್ ಆಗಿಲ್ಲ. ಆತ ತಲೆ ಮರೆಸಿಕೊಂಡಿರಲಿಲ್ಲ. ಯಾಕೆ ದಾರಿ ತಪ್ಪಿಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
“ವಿಕ್ರಂ ಸಿಂಹನನ್ನು ನಿನ್ನೆ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ? ಆದರೆ ಈವರಗೆ ಯಾಕೆ ಕೋರ್ಟಿಗೆ ಹಾಜರುಪಡಿಸಿಲ್ಲ. ಪಿಸಿಎಫ್‌ಗೆ ಕರೆ ಮಾಡಿ ಮಾತನಾಡುತ್ತಿದ್ದೀನಿ. ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತೀರಿ. ಇಷ್ಟೊತ್ತು ಯಾಕೆ ಇಟ್ಕೊಂಡಿದ್ದೀರಿ?” ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.





