ಬಿಹಾರದಲ್ಲಿ ನಡೆದಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯು ಗಂಭೀರ ವಿಷಯ ಎಂದು ಹೇಳಿರುವ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಂಸತ್ ಭವನದ ಸಂಕೀರ್ಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, “ಈ ವಿಷಯವು ಮತದಾರರ ಪಟ್ಟಿಯ ಮೇಲೆ ನೇರವಾಗಿ ಪರಿಣಾಮ ಬೀರುವಾಗ ವಿರೋಧ ಪಕ್ಷಗಳು ಏಕೆ ಕಳವಳ ವ್ಯಕ್ತಪಡಿಸಬಾರದು” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಭ್ರಷ್ಟಾಚಾರ ತಡೆಯುವ ಬದಲು ಯುವಕರ ಮೇಲೆ ಲಾಠಿ ಚಾರ್ಜ್: ಪ್ರಿಯಾಂಕಾ ಗಾಂಧಿ ಆಕ್ರೋಶ
ಇನ್ನು ವಿರೋಧ ಪಕ್ಷಗಳು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಆಗ್ರಹಿಸಿದೆ. ನಿರಂತ ಪ್ರತಿಭಟನೆ ನಡೆಸಿದ್ದು ಮಧ್ಯಾಹ್ನ ಎರಡು ಗಂಟೆವರೆಗೆ ಸಂಸತ್ತನ್ನು ಮುಂದೂಡಿಕೆ ಮಾಡಲಾಗಿದೆ.
ಈಗಾಗಲೇ ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮುಗಿದಿದ್ದು, ಸುಮಾರು 64 ಲಕ್ಷ ಅಧಿಕ ಮತದಾರರ ಹೆಸರನ್ನು ಪಟ್ಟಿಯಿಂದ ‘ಡಿಲೀಟ್’ ಮಾಡಲಾಗಿದೆ. ಈ ಪೈಕಿ ಮೃತರು, ಶಾಶ್ವತವಾಗಿ ವಲಸೆ ಹೋದವರು, ಬಹು ಸ್ಥಳಗಳಲ್ಲಿ ನೋಂದಾಯಿಸಲ್ಪಟ್ಟವರು ಮತ್ತು ಪತ್ತೆಹಚ್ಚಲಾಗದವರು ಸೇರಿದ್ದಾರೆ ಎನ್ನಲಾಗಿದೆ.
“ಸುಮಾರು 22 ಲಕ್ಷ ಮತದಾರರನ್ನು ಮೃತರೆಂದು ಘೋಷಿಸಲಾಗಿದೆ. 35 ಲಕ್ಷ ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದರು ಅಥವಾ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸುಮಾರು 7 ಲಕ್ಷ ಜನರು ಬಹು ಸ್ಥಳಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ” ಎಂದು ವರದಿಯಾಗಿದೆ.
ಈ ಪ್ರಕ್ರಿಯೆಯು ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಈ ಪ್ರಕ್ರಿಯೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಇಂಡಿಯಾ ಒಕ್ಕೂಟ ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನದಿಂದಾಗಿ ಸೋಮವಾರ ಪ್ರತಿಭಟನೆ ನಡೆದಿಲ್ಲ. ಆದರೆ ವಿರೋಧ ಪಕ್ಷವು ಸಂಸತ್ತಿನ ಎರಡೂ ಸದನಗಳಲ್ಲಿ ಈ ವಿಷಯವನ್ನು ಚರ್ಚಿಸಬೇಕೆಂದು ಒತ್ತಾಯಿಸುತ್ತಿದೆ.





