ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಪ್ರಕ್ರಿಯೆ ನಡೆಸಿರುವ ಚುನಾವಣಾ ಆಯೋಗವು ಮೊದಲ ಕರಡು ಮತದಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಪರಿಶೀಲಿಸಿದಾಗ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲೇ ಅಧಿಕ ಮತದಾರರ ಹೆಸರನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ. ಇದು ಎಸ್‌ಐಆರ್ ನಡೆಸಿ ಅಲ್ಪಸಂಖ್ಯಾತರು, ದಲಿತರು, ಬಡವರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡಿದೆ.
ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.19.26ರಷ್ಟು ಮುಸ್ಲಿಮರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 10 ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯೆ ಅಧಿಕವಾಗಿದೆ. ಅಂದರೆ ಸರಿಸುಮಾರು ಶೇ.33ರಿಂದ ಶೇ.50ರವರೆಗೆ ಇದೆ. ರಾಮ್‌ಪುರ್ (50.57%), ಮೊರಾದಾಬಾದ್ (47.12%), ಬಿಜ್ನೋರ್ (43%), ಸಹರಾನ್‌ಪುರ (41.95%), ಮುಜಫ್ಫರ್ ನಗರ (41.3%), ಅಮ್ರೋಹಾ (40.78%), ಬಲರಾಮ್‌ಪುರ (37.51%), ಬರೇಲಿ (34.54%), ಮೀರಠ್ (34.43%) ಮತ್ತು ಬಹ್ರೈಚ್ (33.53%) ಇದರಲ್ಲಿ ಸೇರಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ SIR: ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್
ಎಸ್‌ಐಆರ್ ಬಳಿಕ ಬಿಡುಗಡೆಯಾದ ಮೊದಲ ಕರಡು ಪಟ್ಟಿಯನ್ನು ಪರಿಶೀಲಿಸಿದಾಗ ಇಡೀ ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಶೇ.18.70ರಷ್ಟು ಮತದಾರರ ಹೆಸರು ತೆಗೆದುಹಾಕಲಾಗಿರುವುದು ಕಂಡುಬಂದಿದೆ. ಅದೇ ಪ್ರತ್ಯೇಕವಾಗಿ ಮುಸ್ಲಿಮರು ಅಧಿಕವಾಗಿರುವ ಜಿಲ್ಲೆಗಳಲ್ಲಿನ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಸರಾಸರಿ ಶೇ.18.75ರಷ್ಟು ಮತದಾರರ ಹೆಸರು ಡಿಲೀಟ್ ಆಗಿರುವುದು ಕಂಡುಬಂದಿದೆ.
| ಜಿಲ್ಲೆಗಳು | ಮುಸ್ಲಿಮರ ಸಂಖ್ಯೆ | ಅಳಿಸಲಾದ ಮತದಾರರ ಪ್ರಮಾಣ |
| ರಾಮ್‌ಪುರ್ | 50.57% | 18.29% |
| ಮೊರಾದಾಬಾದ್ | 47.12% | 15.76% |
| ಬಿಜ್ನೋರ್ | 43% | 18.75% |
| ಸಹರಾನ್‌ಪುರ | 41.95% | 16.37% |
| ಮುಜಫ್ಫರ್ ನಗರ | 41.3% | 16.29% |
| ಅಮ್ರೋಹಾ | 40.78% | 18.75% |
| ಬಲರಾಮ್‌ಪುರ | 37.51% | 25.98% |
| ಬರೇಲಿ | 34.54% | 20.99% |
| ಮೀರಠ್ | 34.43% | 24.65% |
| ಬಹ್ರೈಚ್ | 33.53% | 20.44% |
ಉತ್ತರ ಪ್ರದೇಶದಾದ್ಯಂತ ಅತಿ ಹೆಚ್ಚು ಮತದಾರರ ಹೆಸರನ್ನು ಲಕ್ನೋ (30%), ಗಾಜಿಯಾಬಾದ್ (28.83%), ಕಾನ್ಪುರ (25.50%), ಮೀರಠ್ (24.65%), ಪ್ರಯಾಗ್‌ರಾಜ್ (24.64%), ಗೌತಮ್ ಬುದ್ಧ ನಗರ (23.98%), ಆಗ್ರಾ (23.25%), ಹಾಪುರ್ (22.30%) ಮತ್ತು ಶಹಜಹಾನ್‌ಪುರ (21.76%)ದಲ್ಲಿ ತೆಗೆದುಹಾಕಲಾಗಿದೆ.
ಬಿಹಾರ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಎಸ್‌ಐಆರ್ ನಡೆಸಲಾಗಿದ್ದು, ಉತ್ತರ ಪ್ರದೇಶದಲ್ಲೇ ಅಧಿಕ ಮತದಾರರ ಹೆಸರನ್ನು ತಗೆದುಹಾಕಲಾಗಿದೆ. ಇದಕ್ಕೆ ಚುನಾವಣಾ ಆಯೋಗ ನೀಡಿರುವ ಕಾರಣ ಮತದಾರರು ಮೃತಪಟ್ಟಿದ್ದಾರೆ, ಸ್ಥಳಾಂತರಗೊಂಡಿದ್ದಾರೆ, ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ, ಹಲವು ಸ್ಥಳಗಳಲ್ಲಿ ಒಂದೇ ಹೆಸರು ನೋಂದಾಯಿಸಲಾಗಿದೆ ಎಂಬುದು. ಹಾಗೆಯೇ ಜನರು ಆಕ್ಷೇಪ ಸಲ್ಲಿಸಲು ಅವಕಾಶವಿರುವುದರಿಂದ ಈ ಸಂಖ್ಯೆ ಕಡಿಮೆಯಾಗಬಹುದು ಎಂದಿದ್ದಾರೆ.
ಇನ್ನು ನೇಪಾಳದ ಗಡಿಯಲ್ಲಿರುವ ಅಧಿಕ ಮುಸ್ಲಿಮ್ ಜನಸಂಖ್ಯೆಯಿರುವ ಬಲರಾಮ್‌ಪುರದಲ್ಲಿ ಅಧಿಕ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಆದರೆ ಇದಕ್ಕೆ ಚುನಾವಣಾ ಆಯೋಗ ನೀಡಿರುವ ಕಾರಣ “ಫಾರ್ಮ್ ಹಿಂಪಡೆದಿಲ್ಲ” ಎಂಬುದಾಗಿದೆ. ಶೇ.10ರಷ್ಟು ಮಂದಿ ಪ್ರಕ್ರಿಯೆ ವೇಳೆ ಗೈರಾಗಿದ್ದರು ಮತ್ತು ಅವರ ಸುಳಿವು ಸಿಕ್ಕಿಲ್ಲ. ಶೇ. 8.43ರಷ್ಟು ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ 2.89 ಕೋಟಿ ಹೆಸರು ರದ್ದತಿ; ತನಿಖೆಗೆ ವಿಪಕ್ಷಗಳ ಆಗ್ರಹ
SIR ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಬಲರಾಮ್‌ಪುರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 15.83 ಲಕ್ಷ ಹೆಸರುಗಳಿದ್ದವು. ಆದರೆ ಎಸ್‌ಐಆರ್ ನಂತರದ ಶೇಕಡ 25.98ರಷ್ಟು ಹೆಸರುಗಳನ್ನು ಅಳಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ 11.71 ಲಕ್ಷ ಹೆಸರುಗಳು ಉಳಿದಿವೆ. ಮುಸ್ಲಿಂ ಜನಸಂಖ್ಯೆ ಅಧಿಕವಾಗಿರುವ ಇತರೆ ಒಂಬತ್ತು ಜಿಲ್ಲೆಗಳಿಗೆ ಹೋಲಿಸಿದರೆ ಬಲರಾಮ್‌ಪುರವ ಭಿನ್ನ ಹೇಗೆಂದರೆ ಅದು ಪ್ರಧಾನವಾಗಿ ಗ್ರಾಮೀಣ ಪ್ರದೇಶವಾಗಿರುವುದು. ಆದರೆ ಉತ್ತರ ಪ್ರದೇಶದಾದ್ಯಂತ ನಗರ ಪ್ರದೇಶಗಳಲ್ಲಿ ಅಧಿಕ ಮತದಾರರ ಹೆಸರನ್ನು ಅಳಿಸಲಾಗುತ್ತಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿಯೇ ಇದೇ ರೀತಿ ಅನುಮಾನ ಹುಟ್ಟಿಸುವ ಪ್ರಕ್ರಿಯೆ ನಡೆದಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಭಬಾನಿಪುರ ಕ್ಷೇತ್ರವು ಅತೀ ಹೆಚ್ಚು ಮತದಾರರನ್ನು ಹೊರಹಾಕಲಾದ ಕ್ಷೇತ್ರಗಳಲ್ಲಿ ಒಂದಾಗಿದೆ. ವಿಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ನಂದಿಗ್ರಾಮ ಕ್ಷೇತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮತದಾರರ ಹೆಸರನ್ನು ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಡಿಲೀಟ್ ಮಾಡಲಾಗಿದೆ.
ಇವೆಲ್ಲವುದರ ಬಗ್ಗೆ ವಿಪಕ್ಷಗಳು ಪ್ರಶ್ನಿಸುತ್ತಲೇ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಯಾವುದೇ ಉತ್ತರ ನೀಡುತ್ತಿಲ್ಲ. ಬದಲಾಗಿ ವಿದೇಶಿಗರನ್ನು ಹೊರಹಾಕುವುದೇ ಈ ಪ್ರಕ್ರಿಯೆಯ ಉದ್ದೇಶ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪೌರತ್ವ ಪರಿಶೀಲಿಸುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಒಪ್ಪಿಕೊಂಡಿದೆ. ಅಷ್ಟಕ್ಕೂ ಈವರೆಗೆ ಮತದಾನದ ಹಕ್ಕು ಕಳೆದುಕೊಂಡ ಆರು ಕೋಟಿಗೂ ಅಧಿಕ ಮಂದಿ ವಿದೇಶಿಗರು ಎಂದು ಆಯೋಗ ಹೇಳುವುದೇ?





