ಕರೂರು ಕಾಲ್ತಿಳಿತ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾದ ಬಳಿಕ ಮತ್ತು ತಮ್ಮ ಕಡೆಯ ಚಿತ್ರ ‘ಜನ ನಾಯಗನ್’ಗೆ ಕೇಂದ್ರ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದೇ ಇರುವ ವಿವಾದದ ನಡುವೆ ನಟ, ರಾಜಕಾರಣಿ ವಿಜಯ್ ಭಾನುವಾರ ರ್‍ಯಾಲಿ ನಡೆಸಿದ್ದಾರೆ. “ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಬಗ್ಗುವುದಿಲ್ಲ. ಇದು ಚುನಾವಣೆಗಾಗಿಯಲ್ಲ, ಪ್ರಜಾಪ್ರಭುತ್ವಕ್ಕಾಗಿನ ಯುದ್ಧ” ಎಂದು ಹೇಳಿದ್ದಾರೆ.
ಮಹಾಬಲಿಪುರಂನಲ್ಲಿ ಸುಮಾರು 3,000 ಕಾರ್ಯಕರ್ತರನ್ನೊಳಗೊಂಡ ಬೃಹತ್ ರ್‍ಯಾಲಿಯನ್ನು ವಿಜಯ್ ನಡೆಸಿದ್ದಾರೆ. “ರಾಜಕೀಯದಲ್ಲಿರುವವರು ಅಣ್ಣಾ ಅವರನ್ನು ಮರೆತಿದ್ದಾರೆ. ಅವರ ಪಕ್ಷದ ಹೆಸರಿನಲ್ಲಿ ಮಾತ್ರವೇ ಅಣ್ಣಾ ಇದ್ದಾರೆ. ನಮ್ಮದು ಚುನಾವಣೆಗಾಗಿಯಲ್ಲ. ಪ್ರಜಾಪ್ರಭುತ್ವಕ್ಕಾಗಿನ ಯುದ್ಧ. ಈ ಯುದ್ಧದಲ್ಲಿ ನೀವು ನಮ್ಮ ಕಮಾಂಡೋಗಳು” ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.
“ಅಧಿಕಾರದಲ್ಲಿರುವ ಪಕ್ಷಗಳಿಗೆ ಮತಗಟ್ಟೆಗಳು ನಕಲಿ ಮತ ಕೇಂದ್ರಗಳಾಗಿವೆ. ಪ್ರತಿಯೊಂದು ಮತವನ್ನು ರಕ್ಷಿಸಿ, ಎಲ್ಲರನ್ನೂ ಭೇಟಿ ಮಾಡಿ. ‘ದುಷ್ಟ ಶಕ್ತಿ’ (ಡಿಎಂಕೆ) ಮತ್ತು ‘ಭ್ರಷ್ಟ ಶಕ್ತಿ’ (ಎಐಎಡಿಎಂಕೆ)ಯನ್ನು ಎದುರಿಸಲು ಟಿವಿಕೆಗೆ ಮಾತ್ರ ಧೈರ್ಯವಿದೆ” ಎಂದು ವಿಜಯ್ ಹೇಳಿದ್ದಾರೆ.
“ರಾಜ್ಯ ಚುನಾವಣೆಗೆ ಮುಂಚಿತವಾಗಿ ಪಕ್ಷದ ಬಲವನ್ನು ಒಟ್ಟುಗೂಡಿಸಲು ಸೋಮವಾರದಿಂದ ರಾಜ್ಯದ ಎಲ್ಲ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಪ್ರವಾಸ ನಡೆಯಲಿದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ 51 ವರ್ಷದ ಸೂಪರ್‌ಸ್ಟಾರ್ ವಿಜಯ್, ಕಳೆದ ಕೆಲವು ತಿಂಗಳುಗಳಿಂದ ಸುದ್ದಿಗಳಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ತಮಿಳುನಾಡಿನ ಕರೂರಿನಲ್ಲಿ ವಿಜಯ್ ಭಾಗವಹಿಸಿದ್ದ ರ್‍ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 41 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅವರನ್ನು ಈಗ ಸಿಬಿಐ ತನಿಖೆ ನಡೆಸುತ್ತಿದೆ. ಇನ್ನು, ತಮ್ಮ ಕಡೆಯ ಚಿತ್ರವೆಂದು ಘೋಷಿಸಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಸೆನ್ಸಾರ್ ಮಂಡಳಿ ನಿರ್ಬಂಧಿಸಿದ್ದು, ಚಿತ್ರತಂಡವು ನ್ಯಾಯಾಲಯದ ಮೊರೆಹೋಗಿದೆ.




