ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಆಗಸ್ಟ್ 21 ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಓಲೈಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀರಿನ ಸಾಧಕ-ಬಾಧಕಗಳನ್ನು ಚರ್ಚಿಸದೆ ನೀರು ಹರಿಸಿದ್ದಾರೆ. ಮಂಡ್ಯದವರೇ ಆದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ರೈತರಿಗೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸೋಮವಾರ, ಮಂಡ್ಯ ಬಳಿಯ ಇಂಡುವಾಳುವಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಭಾಗಿಯಾಗಬೇಕೆಂದು ಮನವಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದೆ ಸಮಲತಾ, “ಇದು ರಾಜಕೀಯ ಹೋರಾಟ ಅಲ್ಲ. ರೈತರ ಪರ ಹೋರಾಟ. ರಾಜ್ಯ ಸರ್ಕಾರದ ತಮಿಳುನಾಡಿಗೆ ನೀರು ಹರಿಸಿ, ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ. ಕಾವೇರಿ ನೀರಿನ ಅವಶ್ಯಕತೆ ಇರುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು” ಎಂದು ಕರೆಕೊಟ್ಟಿದ್ದಾರೆ.




