- ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ರೈತರಿಗೆ ಅನುಕೂಲ
- ‘ಅಕ್ಟೋಬರ್ 14ನೇ ತಾರೀಖಿನಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ’
ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಡಿ.10ರವರೆಗೂ ಹೆಚ್ಚು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್ ಬಿ ತಿಮ್ಮಾಪೂರ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಜಲಾಶಯಕ್ಕೆ ಒಳ ಹರಿವು ಬಂದಿರುವುದರಿಂದ ಚಾಲು-ಬಂದ್ ಪದ್ದತಿಯನ್ನು ಪರಿಷ್ಕರಿಸಿ 14 ದಿನ ನೀರು ಚಾಲು ಹಾಗೂ 10 ದಿನದ ಬದಲಿಗೆ 8 ದಿನ ಮಾತ್ರ ಬಂದ್ ಪದ್ದತಿಯನ್ನು ಅನುಸರಿಸಿ ಅಕ್ಟೋಬರ್ 17ರ ಬದಲಿಗೆ ಅಕ್ಟೋಬರ್ 14ನೇ ತಾರೀಖಿನಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಸವಣ್ಣರ ಭಾವಚಿತ್ರ ಸುಟ್ಟು ವಿಕೃತಿ ಮೆರೆದ ದುಷ್ಕರ್ಮಿಗಳು
“ಮುಂಗಾರು ಹಂಗಾಮಿಗೆ ನವೆಂಬರ್23 ರವರೆಗೂ ನೀರು ಹರಿಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿಸೆಂಬರ್ 10 ರವರೆಗೂ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ರೈತರ ಹಿತಕಾಪಾಡಲು ಕ್ರಮಕೈಗೊಳ್ಳಲಾಗಿದೆ” ಎಂದಿದ್ದಾರೆ.
“ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸುಮಾರು 6 ಲಕ್ಷ ಬೆಕ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ” ಎಂದು ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದ್ದಾರೆ.





