ಸರ್ಕಾರ ಆರ್‌ಎಸ್‌ಎಸ್ ನಿಷೇಧ ಮಾಡಿಲ್ಲ. ಶಾಲಾ, ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಆದೇಶ ಹೊರಡಿಸಲಾಗಿದೆಯೇ ಹೊರತು ಆರ್‌ಎಸ್‌ಎಸ್ ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಅಷ್ಟಕ್ಕೂ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ಅವಧಿಯ ಆದೇಶವನ್ನೇ ನಾವೂ ಹೊರಡಿಸಿರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ, “ಆದೇಶದಲ್ಲಿ ಯಾವುದೇ ಸಂಘ ಅಥವಾ ಸಂಸ್ಥೆ ಎಂದಿದೆ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ. ಅವರು ಆದೇಶ ಹೊರಡಿಸಬಹುದು, ನಾವು ಆದೇಶ ಹೊರಡಿಸುವಂತಿಲ್ಲವೇ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? RSS ನಿಷೇಧ; ಪ್ರಿಯಾಂಕ್ ಖರ್ಗೆ ಹೇಳುವುದರಲ್ಲಿ ತಪ್ಪೇನಿದೆ: ಸಿಎಂ ಸಿದ್ದರಾಮಯ್ಯ
“2013ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಶಾಲಾ ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಈ ನಿಷೇಧವನ್ನು ಶಿಕ್ಷಣ ಇಲಾಖೆ ಮಾಡಿರುವುದು ನಾನಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗಲೇ ಈ ಆದೇಶ ಹೊರಡಿಸಲಾಗಿದೆ” ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನು, “ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲೇಬೇಕೆಂದಿಲ್ಲ. ಅನುಮತಿ ನೀಡುವುದು, ಬಿಡುವುದು ಶಾಂತಿ ಸುವ್ಯವಸ್ಥೆಯ ಮೇಲೆ ಅವಲಂಬಿಸಿದೆ” ಎಂದು ಸ್ಪಷ್ಟಪಡಿಸಿದರು.





