ಬಿಹಾರದಲ್ಲಿ ನವೆಂಬರ್ 22ಕ್ಕೂ ಮುನ್ನ ಹೊಸ ಸರ್ಕಾರವನ್ನು ರಚನೆ ಮಾಡಲಾಗುವುದು. ಈ ಸಂಬಂಧ ಮಿತ್ರಪಕ್ಷಗಳ ನಡುವೆ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ಆರ್‌ವಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಬಿಹಾರ ವಿಧಾನಸಭೆಯ ಅವಧಿಯೂ ನ.22ರಂದು ಕೊನೆಯಾಗಲಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆದ್ದು 243 ಸದಸ್ಯ ಬಲದ ಸದನದಲ್ಲಿ ನಾಲ್ಕನೇ ಮೂರು ಭಾಗದಷ್ಟು ಬಹುಮತ ಹೊಂದಿದೆ. ಸರ್ಕಾರ ರಚನೆ ಬಗ್ಗೆ ಸದ್ಯ ಎನ್‌ಡಿಎ ಮಿತ್ರಕೂಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಮಾತನಾಡಿರುವ ಚಿರಾಗ್ ಪಾಸ್ವಾನ್, “ಸರ್ಕಾರ ರಚನೆಯ ಬಗ್ಗೆ ಸ್ಪಷ್ಟನೆ ನೀಡಲಾಗುತ್ತದೆ. ಇಂದು ರಾತ್ರಿಯ ವೇಳೆಗೆ, ನಾನು ಹಿರಿಯ ಕೇಂದ್ರ ಸಚಿವರೊಂದಿಗೆ ಮಾತನಾಡುವ ಸಾಧ್ಯತೆಯಿದೆ. ಇಂದು ಅಥವಾ ನಾಳೆಯೊಳಗೆ ಸರ್ಕಾರ ರಚನೆಯ ನೀಲನಕ್ಷೆ ಸಿದ್ಧವಾಗಲಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಜೆಪಿ-ಆರ್‌ಎಸ್‌ಎಸ್‌ನ ‘ಲೆಕ್ಕಾಚಾರದ ರಾಜಕೀಯ ಯೋಜನೆ’ಯೇ ಎಸ್‌ಐಆರ್: ಸಿಪಿಎಂ ಆರೋಪ
ಇನ್ನು ಈ ಸಂದರ್ಭದಲ್ಲೇ ವಿಶ್ವಬ್ಯಾಂಕ್ ಇತರೆ ಯೋಜನೆಗಳಿಗೆ ನೀಡಿದ ಹಣವನ್ನು ಬಿಹಾರ ಚುನಾವಣೆಗೆ ಬಳಸಲಾಗಿದೆ ಎಂಬ ಜನ ಸುರಾಜ್ ಪಕ್ಷದ ಆರೋಪವನ್ನು ಪಾಸ್ವಾನ್ ತಳ್ಳಿಹಾಕಿದ್ದಾರೆ. ಜನ ಸುರಾಜ್ ನಾಯಕರು ಟೊಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿರುವ ಅವರು, ಈ ಆರೋಪಕ್ಕೆ ಪುರಾವೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
“ಅವರಿಗೆ ಈ ಮಾಹಿತಿ ಲಭಿಸಿದ್ದು ಎಲ್ಲಿಂದ? ನಿಮ್ಮ ಬಳಿ ಯಾವುದೇ ದಾಖಲೆಗಳಿದ್ದರೆ ಅದನ್ನು ನೀಡಿ. ಅದಾದ ಬಳಿಕ ಸರ್ಕಾರ ಪ್ರತಿಕ್ರಿಯೆ ನೀಡುತ್ತದೆ” ಎಂದು ಪಾಸ್ವಾನ್ ತಿಳಿಸಿದ್ದಾರೆ.
“ರಾಜ್ಯದ ಮಹಿಳೆಯರಿಗೆ ನೀಡಲಾದ 10,000 ರೂ.ಗಳನ್ನು ವಿಶ್ವಬ್ಯಾಂಕ್‌ನಿಂದ ಬೇರೆ ಯಾವುದೋ ಯೋಜನೆಗಾಗಿ ಬಂದ 21,000 ಕೋಟಿ ರೂ.ಗಳಿಂದ ನೀಡಲಾಗಿದೆ ಎಂಬ ಮಾಹಿತಿ ನಮಗಿದೆ. ಆದರೆ ಮಾಹಿತಿ ತಪ್ಪಾಗಿರಬಹುದು. ಚುನಾವಣೆಯ ನೀತಿ ಸಂಹಿತೆಗೆ ಒಂದು ಗಂಟೆ ಮೊದಲು, 14,000 ಕೋಟಿ ರೂ.ಗಳನ್ನು ರಾಜ್ಯದ 1.25 ಕೋಟಿ ಮಹಿಳೆಯರಿಗೆ ವಿತರಿಸಲಾಗಿದೆ. ನಾನು ಹೇಳಿದಂತೆ, ಇದು ನಮಗೆ ಲಭಿಸಿದ ಮಾಹಿತಿ. ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆದರೆ ಅದು ನಿಜವಾಗಿದ್ದರೆ, ಇದು ಎಷ್ಟರ ಮಟ್ಟಿಗೆ ಸರಿ ಎಂಬ ನೈತಿಕ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾನೂನುಬದ್ಧವಾಗಿ ಏನೂ ನಡೆಯುವುದಿಲ್ಲ ಎಂದಾಗುತ್ತದೆ” ಎಂದು ಈ ಹಿಂದೆ ಜನ ಸುರಾಜ್ ನಾಯಕರು ಹೇಳಿದ್ದಾರೆ.





