ಈ ಹಿಂದಿನ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಅಧಿಕಾರಕ್ಕೆ ಬಂದರೆ ಸದ್ಯ ನಿತೀಶ್ ಕುಮಾರ್ ಸರ್ಕಾರ ಬಿಹಾರದಲ್ಲಿ ವಿಧಿಸಿರುವ ಮದ್ಯ ಮಾರಾಟ ಮತ್ತು ಸೇವನೆ ಮೇಲೆ ನಿಷೇಧವನ್ನು ರದ್ದುಗೊಳಿಸಲಾಗುವುದು ಎಂದು ಜನ ಸುರಾಜ್ ಪಕ್ಷ ಭಾನುವಾರ ಪುನರುಚ್ಚರಿಸಿದೆ.
ಎಲ್‌ಜೆವಿ (ಆರ್‌ವಿ) ನಾಯಕ ಕುಮಾರ್ ಸೌರವ್ ಅವರನ್ನು ಜನ ಸುರಾಜ್ ಪಕ್ಷಕ್ಕೆ ಸ್ವಾಗತಿಸುತ್ತಾ ಮಾಧ್ಯಮದೊಂದಿಗೆ ಮಾತನಾಡಿದ ಜನ ಸುರಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್, “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜನ ಸುರಾಜ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯ ನಿಷೇಧವನ್ನು ಕೂಡಲೇ ತೆಗೆದುಹಾಕಲಾಗುವುದು ಎಂದು ನಾವು ಹೇಳುತ್ತಲೇ ಇದ್ದೇವೆ. ಇದರಿಂದಾಗಿ ರಾಜ್ಯವು ಸುಮಾರು 28,000 ಕೋಟಿ ರೂ.ಗಳ ಆದಾಯ ನಷ್ಟವನ್ನು ಉಳಿಸಲು ಸಾಧ್ಯವಾಗುತ್ತದೆ. ಈ ಹಣವನ್ನು ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ(ಐಎಂಎಫ್) 5ರಿಂದ 6 ಲಕ್ಷ ಕೋಟಿ ರೂ.ಗಳ ಸಾಲವನ್ನು ಸಂಗ್ರಹಿಸಲು ಬಳಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಮದ್ಯ ನಿಷೇಧ ಮಾಡಿ; ಇಲ್ಲವೇ ನೀರಾ, ಸಾರಾಯಿ ಜಾರಿಗೆ ತನ್ನಿ: ಕಸವನಹಳ್ಳಿ ರಮೇಶ್
“ಸೌರವ್ ಹಣಕಾಸು ಮತ್ತು ಕಾನೂನಿನಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಭಾರತದ ಖಾಸಗಿ ಬ್ಯಾಂಕಿನಲ್ಲಿ ಸೆಕ್ಯುರಿಟೈಸೇಶನ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧವನ್ನು ತೆಗೆದುಹಾಕಿದ ನಂತರ ಉಳಿತಾಯವಾಗುವ ಹಣದ ಮೂಲಕ ಸಾಲ ಸಂಗ್ರಹಿಸಲು ನಾವು ಉದಯ್ ಅವರ ಪರಿಣತಿಯನ್ನು ಬಳಸುತ್ತೇವೆ” ಎಂದು ಸಿಂಗ್ ಹೇಳಿದರು.
2016ರ ಏಪ್ರಿಲ್‌ನಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ. ಆದರೆ ತಮ್ಮ ಜನ ಸುರಾಜ್ ಪಕ್ಷ ಬಿಹಾರದಲ್ಲಿ ಸರ್ಕಾರವನ್ನು ರಚಿಸಿದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ರದ್ದುಗೊಳಿಸಲಾಗುವುದು ಎಂದು ಈ ಹಿಂದೆಯೇ ಪ್ರಶಾಂತ್ ಕಿಶೋರ್ ಅವರು ಭರವಸೆ ನೀಡಿದ್ದಾರೆ.





