ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುತ್ತಿರುವ ಭಾರತ ಚುನಾವಣಾ ಆಯೋಗ (ಇಸಿಐ) ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಮತಾ ನೇತೃತ್ವದ 15 ಸದಸ್ಯರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಸೋಮವಾರ ದೆಹಲಿಯ ನಿರ್ವಚನ ಸದನದಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡಲಿದೆ. ಇದಕ್ಕೂ ಮುನ್ನವೇ ಬ್ಯಾನರ್ಜಿ ಸುಪ್ರೀಂ ಕದ ತಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಇಡಿ vs ಮಮತಾ | ಟಿಎಂಸಿ ಕಾರ್ಯತಂತ್ರ ಕದಿಯಲು ಬಿಜೆಪಿಯಿಂದ ತನಿಖಾ ಸಂಸ್ಥೆಯ ದುರುಪಯೋಗ?
ಫೆಬ್ರವರಿ ಅಂತ್ಯದ ವೇಳೆಗೆ ಚುನಾವಣಾ ಸಂಸ್ಥೆಯು ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅದರ ನಡುವೆಯೇ ತರಾತುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸುವುದರ ವಿರುದ್ಧ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕಾನೂನು ಹೋರಾಟವು ಶುರುವಾಗಿದೆ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸುವ ವಿಧಾನದ ವಿರುದ್ಧ ಶನಿವಾರ ಮಮತಾ ಚುನಾವಣಾ ಆಯೋಗಕ್ಕೆ ಆರನೇ ಬಾರಿಗೆ ಪತ್ರವನ್ನು ಬರೆದಿದ್ದಾರೆ. “ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕುವ ಸಾಧ್ಯತೆಯ ಬಗ್ಗೆ ಭೀತಿ ಮತ್ತು ಆತಂಕವಿದೆ. ಬಿಎಲ್‌ಒಗಳು ಭಾರೀ ಕೆಲಸದ ಹೊರೆ ಎದುರಿಸುತ್ತಿದ್ದಾರೆ. ಈ ಪ್ರಕ್ರಿಯೆಯು ನಾಗರಿಕರು ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಸೇರಿದಂತೆ 140 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಮಮತಾ ಸಲ್ಲಿಸಿದ ಅರ್ಜಿಯನ್ನು ಈ ವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು ಎಸ್‌ಐಆರ್ ವಿರುದ್ಧ ಈ ಹಿಂದೆ ಟಿಎಂಸಿ ಸಂಸದರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ಈ ಹಿಂದೆ ಜನವರಿ 12ರಂದು ಮಮತಾ ಸಿಇಸಿಗೆ ತಮ್ಮ ಐದನೇ ಪತ್ರವನ್ನು ಬರೆದಿದ್ದು, ಅದಕ್ಕೂ ಮುನ್ನ ಜನವರಿ 3ರಂದು ಸಿಎಂ ಸಿಇಸಿಗೆ ಪತ್ರ ಬರೆದು, “ಎಸ್ಐಆರ್ ತಕ್ಷಣವೇ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದರು.
ಆಯೋಗದ ಉದ್ದೇಶ ತಿದ್ದುಪಡಿ ಅಥವಾ ಮತದಾರರ ಪಟ್ಟಿಗೆ ಸೇರ್ಪಡೆಯಲ್ಲ. ಬದಲಿಗೆ ಮತದಾರರನ್ನು ತಮ್ಮ ಹಕ್ಕಿನಿಂದ ದೂರು ಇಡುವುದು ಎಂದು ಆರೋಪಿಸಿದ್ದರು. ಹಾಗೆಯೇ ವಿಚಾರಣಾ ಕೇಂದ್ರಗಳಿಗೆ ಹಾಜರಾಗಲು ಆಯೋಗದಿಂದ ನೋಟಿಸ್‌ಗಳನ್ನು ಪಡೆಯುತ್ತಿರುವ ಜನರಿಗೆ ಕಿರುಕುಳ ನಿಲ್ಲಿಸುವಂತೆ ಒತ್ತಾಯಿಸಿದ್ದರು.





