ಭಾರತ ಚುನಾವಣಾ ಆಯೋಗ (ಇಸಿಐ) ನಡೆಸುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಪಶ್ಚಿಮ ಬಂಗಾಳ ಘಟಕವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬಿಹಾರ ಎಸ್‌ಐಆರ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿದೆ.
ಮಂಗಳವಾರ ನಡೆಯಲಿರುವ ಬಿಹಾರ ಎಸ್‌ಐಆರ್ ಪ್ರಕರಣದ ವಿಚಾರಣೆಯ ಜತೆಗೆ ಈ ಅರ್ಜಿಯ ವಿಚಾರಣೆಯನ್ನೂ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ. ಹಾಗೆಯೇ “ಈ ಪ್ರಕ್ರಿಯೆಯಲ್ಲಿರುವ ಲೋಪಗಳ ಬಗ್ಗೆ ಜನರು ಕಾಂಗ್ರೆಸ್ ಅನ್ನು ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಪಕ್ಷ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? 12 ರಾಜ್ಯಗಳಲ್ಲಿ ನಾಳೆಯಿಂದ ಎಸ್‌ಐಆರ್ ಎರಡನೇ ಹಂತ ಆರಂಭ
“ಪಶ್ಚಿಮ ಬಂಗಾಳದ ಅರ್ಜಿಯೂ ನಮ್ಮ ಪೀಠದ ಮುಂದೆಯೇ ಬರುತ್ತದೆಯೇ ಎಂಬುದು ನಿರ್ಧರಿಸುವುದು ಮುಖ್ಯ ನ್ಯಾಯಮೂರ್ತಿಗಳಿಗೆ ಬಿಟ್ಟದ್ದು” ಎಂದು ಹೇಳಿದೆ. ಈ ವೇಳೆ, “ಎಸ್‌ಐಆರ್‌ಗೆ ಸಂಬಂಧಿಸಿದ ಇತರ ಅರ್ಜಿಗಳೂ ಬಿಹಾರ ಎಸ್‌ಐಆರ್ ಅರ್ಜಿಯೊಂದಿಗೆ ವಿಚಾರಣೆಗೆ ಒಳಪಡಲಿದೆ” ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಅದಾದ ಬಳಿಕ ಪೀಠವು ಬಿಹಾರ ಎಸ್‌ಐಆರ್ ಅರ್ಜಿ ವಿಚಾರಣೆಯೊಂದಿಗೆ ಈ ಅರ್ಜಿಯ ವಿಚಾರಣೆಯನ್ನೂ ಮಂಗಳವಾರ ನಡೆಸಲು ಒಪ್ಪಿಕೊಂಡಿದೆ.
ಈ ಹಿಂದೆ 2025ರ ಜೂನ್‌ನಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ನಿರ್ದೇಶಿಸಿದೆ. ಆ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ (ಎನ್‌ಎಫ್‌ಐಡಬ್ಲ್ಯೂ) ಸಲ್ಲಿಸಿದ ಅರ್ಜಿಗಳು ಸೇರಿದಂತೆ ಹಲವು ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಗೆ ಯಾವುದೇ ತಡೆಯಾಜ್ಞೆ ವಿಧಿಸದ ಕಾರಣ ಬಿಹಾರದಲ್ಲಿ ಎಸ್‌ಐಆರ್ ನಡೆದಿದ್ದು, ವಿಪಕ್ಷಗಳು ಹಲವು ದೋಷಗಳತ್ತ ಬೊಟ್ಟು ಮಾಡಿದೆ. ಬಡವರ್ಗದ ಮತದಾನದ ಹಕ್ಕು ಕಸಿಯಲಾಗಿದೆ ಎಂದು ದೂರಿದೆ.
ಅದಾದ ಬಳಿಕವೂ 2025ರ ಅಕ್ಟೋಬರ್‌ನಲ್ಲಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್ ಅನ್ನು ಚುನಾವಣಾ ಆಯೋಗ ವಿಸ್ತರಿಸಿದೆ. ಈ ಬೆನ್ನಲ್ಲೇ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತಮಿಳುನಾಡಿನಲ್ಲಿ ಎಸ್‌ಐಆರ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇದೀಗ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವೂ ಅರ್ಜಿ ಸಲ್ಲಿಸಿದೆ.





