ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರಣೆಯ ಸಮಯದಲ್ಲಿ ಕಿರುಕುಳ ನೀಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಹೊಂದಿರುವ ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವೆ ಶಶಿ ಪಂಜಾ ಭಾನುವಾರ ಆರೋಪಿಸಿದ್ದಾರೆ.
ಗಣತಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡದ ಮತ್ತು ಆಯೋಗದ ಮಾರ್ಗಸೂಚಿಗಳ ಪ್ರಕಾರ ಸರಿಯಾದ ವಿವರಗಳನ್ನು ಒದಗಿಸದ ಕಾರಣಕ್ಕೆ ಉತ್ತರ ಕೋಲ್ಕತ್ತಾದ ಕೇಶಬ್ ಅಕಾಡೆಮಿಯಲ್ಲಿರುವ ಎಸ್‌ಐಆರ್ ವಿಚಾರಣಾ ಕೇಂದ್ರಕ್ಕೆ ಹಾಜರಾಗುವಂತೆ ಶಶಿ ಅವರಿಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ನೋಟಿಸ್ ನೀಡಿತ್ತು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಎಸ್‌ಐಆರ್ ಒತ್ತಡ: ಮತ್ತೋರ್ವ ಬಿಎಲ್‌ಒ ಆತ್ಮಹತ್ಯೆ
ವಿಚಾರಣೆ ಬಳಿಕ ಕೇಂದ್ರದಿಂದ ಹೊರಬಂದ ಶಶಿ ಅವರು, “ನಾವು ನಾಲ್ಕು ಸದಸ್ಯರ ಕುಟುಂಬ, ನನ್ನ ಪತಿ, ಇಬ್ಬರು ಹೆಣ್ಣುಮಕ್ಕಳು ಮತ್ತು ನಾನು. ಆದರೆ ಆಯೋಗವು ವಿಚಾರಣೆಗೆ ನನ್ನನ್ನು ಮಾತ್ರ ಕರೆದಿದೆ. ಆಯೋಗವು ನೀಡಿದ ನೋಟಿಸ್‌ನಲ್ಲಿ ನಾನು ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿಲ್ಲ, ನನ್ನ ಸಂಬಂಧಿಕರ ವಿವರಗಳನ್ನು ನೀಡಿದ್ದೇನೆ ಎಂದು ಹೇಳಲಾಗಿದೆ. ನಾನು ಕಾನೂನುಬದ್ಧವಾಗಿ ಮತದಾನ ಮಾಡುವ ಹಕ್ಕು ಹೊಂದಿದ್ದೇನೆಯೇ ಎಂದು ಅನುಮಾನವನ್ನೂ ವ್ಯಕ್ತಪಡಿಸಿದೆ” ಎಂದು ಹೇಳಿದ್ದಾರೆ.
“2002ರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೂ ನನಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಯಲ್ಲಿ ನಾನು ನನ್ನ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ತೋರಿಸಿದ್ದೇನೆ. ಆದರೆ ಎಸ್ಐಆರ್ ಪ್ರಕ್ರಿಯೆಗೆ ಅಗತ್ಯವಿರುವ 11 ದಾಖಲೆಗಳಲ್ಲಿ ನನ್ನ ಬಳಿ ಬೇರೆ ಯಾವುದೇ ದಾಖಲೆಗಳಿವೆಯೇ ಎಂದು ಅವರು ಕೇಳಿದ್ದಾರೆ. ಈ ಮೂಲಕ ತೀವ್ರ ಕಿರುಕುಳ ನೀಡಲಾಗಿದೆ” ಎಂದು ಸಚಿವೆ ದೂರಿದ್ದಾರೆ.
“ನೋಟಿಸ್‌ನಲ್ಲಿ, ಆಯೋಗವು ವಿಚಾರಣೆಗೆ ಮೊದಲು ದಾಖಲೆಗಳ ದೃಢೀಕೃತ ಪ್ರತಿಗಳನ್ನು ಹಾಜರುಪಡಿಸಲು ನನಗೆ ತಿಳಿಸಿದೆ. ನಾನು ಅವರಿಗೆ ದೃಢೀಕೃತ ಪ್ರತಿಗಳನ್ನು ತೋರಿಸಿದ್ದೇನೆ. ಆದರೆ ಹೆಸರುಗಳು ಮತ್ತು ವಿಳಾಸಗಳ ಸರಿಯಾದ ಕಾಗುಣಿತದೊಂದಿಗೆ ಈಗಾಗಲೇ ನಿಜವಾದ 11 ದಾಖಲೆಗಳನ್ನು ತೋರಿಸಿ ಎಂದು ಕೇಳಿದ್ದು ಏಕೆ? ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಈ ವಿಷಯವನ್ನು ಪರಿಶೀಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
“ತರಾತುರಿಯಲ್ಲಿ ಮತ್ತು ಸಾಕಷ್ಟು ಸಿದ್ಧತೆ ಇಲ್ಲದೆ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ನಾನು SIR ಪ್ರಕ್ರಿಯೆಯ ಸಮಯದಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೆ ನನ್ನ ಹೆಸರನ್ನು ಚುನಾವಣಾ ಆಯೋಗ ಪರಿಶೀಲಿಸಿಲ್ಲ. ಇದು ಖಂಡಿತವಾಗಿಯೂ ನನ್ನ ತಪ್ಪಲ್ಲ. ನಾನು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮೂರು ಬಾರಿ ಶಾಸಕಿಯಾಗಿದ್ದೇನೆ. ಆದರೆ ಈಗ ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕೇ, ಬೇಡವೇ ಎಂದು ನಿರ್ಧರಿಸಲಾಗುತ್ತಿದೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಇನ್ನು ಚುನಾವಣಾ ಆಯೋಗದ ಈ ಕ್ರಮವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಚುನಾವಣಾ ಆಯೋಗವು ಈ ರೀತಿ ನಡೆದುಕೊಳ್ಳುತ್ತಿದೆ” ಎಂದು ದೂರಿದ್ದಾರೆ. “ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿರೋಧ ಪಕ್ಷಗಳನ್ನು ತುಳಿಯಲು ಯತ್ನಿಸುತ್ತಿದೆ. ಸಚಿವರಾದ ಶಶಿ ಪಂಜಾ ಅವರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೇ ನೋಟಿಸ್ ನೀಡಿ ವಿಚಾರಣೆಗೆ ಕರೆಯುವುದಾದರೆ, ಇನ್ನು ಸಾಮಾನ್ಯ ನಾಗರಿಕರ ಸ್ಥಿತಿ ಏನಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದೆ.





