ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಈ ಬಜೆಟ್ ಅನ್ನು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಟೀಕಿಸಿದ್ದಾರೆ. “ಬಜೆಟ್‌ನಲ್ಲಿ ಸರ್ಕಾರ ಪಶ್ಚಿಮ ಬಂಗಾಳದ ಪ್ರಸ್ತಾಪವನ್ನೇ ಮಾಡಿಲ್ಲ. ಸರ್ಕಾರ ಬಂಗಾಳದ ಜನರನ್ನು ‘ಬಾಂಗ್ಲಾದೇಶಿಗಳು’ ಎಂಬಂತೆ ನೋಡುತ್ತದೆ” ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳು ಬಜೆಟ್ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಬ್ಯಾನರ್ಜಿ, “ಬಜೆಟ್‌ನಲ್ಲಿ ಯಾವುದೇ ಸಮುದಾಯಕ್ಕೆ ಬೇಕಾದ ಯೋಜನೆಗಳಿಲ್ಲ. ಆಧಾರರಹಿತ ಮತ್ತು ದೃಷ್ಟಿಹೀನ ಬಜೆಟ್ ಇದು” ಎಂದು ಕರೆದಿದ್ದಾರೆ. ಹಾಗೆಯೇ, “ಬಜೆಟ್ ಭಾಷಣ 85 ನಿಮಿಷಗಳಷ್ಟು ಉದ್ಧವಿದೆ. ಅಂದರೆ 5,100 ಸೆಕೆಂಡುಗಳು. ಆದರೆ ಬಂಗಾಳವನ್ನು ಮಾತ್ರ ಉಲ್ಲೇಖಿಸಿಲ್ಲ. ಕೇಂದ್ರ ಸರ್ಕಾರ ಮತ್ತು ಅದರ ಸಚಿವರು, ಬಜೆಟ್ ಮಂಡಿಸಿದವರು ನಮ್ಮನ್ನು ಬಾಂಗ್ಲಾದೇಶಿಗಳು ಎಂದು ಕರೆಯುತ್ತಾರೆ. ಬಂಗಾಳವನ್ನು ಬಿಡಿ, ರೈತರು, ಯುವಕರಿಗೂ ಈ ಬಜೆಟ್‌ನಲ್ಲಿ ಏನೂ ಇಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2026 | ಯಾವುದು ಅಗ್ಗ, ಯಾವುದು ದುಬಾರಿ?
“ಅವರು (ನಿರ್ಮಲಾ ಸೀತಾರಾಮನ್) ಎಐ, ಕೌಶಲ್ಯ ಭಾರತ, ತಾಂತ್ರಿಕ ಪ್ರಗತಿಯ ಬಗ್ಗೆ ಮಾತನಾಡಿದ್ದಾರೆ. ಆದರೆ ಯುವಕರಿಗೆ ಉದ್ಯೋಗ ಹೇಗೆ ಸಿಗುತ್ತದೆ, ಉದ್ಯೋಗ ಹೇಗೆ ಉತ್ಪತ್ತಿಯಾಗುತ್ತದೆ ಎಂಬ ಬಗ್ಗೆ ಮಾತನಾಡಿಲ್ಲ. ರೈತರ ಆದಾಯವನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಏನೂ ಇಲ್ಲ” ಎಂದೂ ಹೇಳಿದ್ದಾರೆ.
“ಈಗಾಗಲೇ ಜಲ ಜೀವನ್ ಮಿಷನ್ ಹಣವನ್ನು ನಿಲ್ಲಿಸಲಾಗಿದೆ. ಈ ಹಿಂದಿನ ಭರವಸೆಗಳನ್ನು ಸಹ ಈಡೇರಿಸಿಲ್ಲ. 2021ರ ನಂತರ, ಬಿಜೆಪಿ ಬಂಗಾಳದ ಜನರನ್ನು ಹಿಂಸಿಸಿದ ರೀತಿ ನೋಡಿದಾಗ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ಈಗಾಗಲೇ ಬಂಗಾಳದಲ್ಲಿ ತಮಗೆ ರಾಜಕೀಯ ಲಾಭವಿಲ್ಲ ಎಂದು ತಿಳಿದಿದ್ದಾರೆ. ಆದ್ದರಿಂದ ಉದ್ದೇಶಪೂರ್ವಕವಾಗಿ ರಾಜ್ಯಕ್ಕೆ ಹಣವನ್ನು ಹಂಚಿಕೆ ಮಾಡಿಲ್ಲ” ಎಂದು ದೂರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದಾಗಿ ಬಂಗಾಳಕ್ಕೆ ಅಧಿಕ ಕೊಡುಗೆ ನೀಡುವ ನಿರೀಕ್ಷೆಯಿತ್ತು. ಆದರೆ ಕೇಂದ್ರ ಮಾತ್ರ ತಮಗೆ ಚುನಾವಣಾ ಲಾಭವಿಲ್ಲ ಎಂದು ಖಚಿತವಾದ ರಾಜ್ಯವನ್ನು ಕಡೆಗಣಿಸಿದಂತಿದೆ.





