ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಘಟನಾ ಶಕ್ತಿಯನ್ನು ಹೊಗಳಿರುವುದು ಸದ್ಯ ರಾಜಕೀಯವಾಗಿ ತೀವ್ರ ಚರ್ಚೆ ಹುಟ್ಟುಹಾಕಿದೆ. ತಮ್ಮದೇ ಪಕ್ಷದ ದಿಗ್ವಿಜಯ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, “ಗಾಂಧಿ ಸ್ಥಾಪಿಸಿದ ಪಕ್ಷಕ್ಕೆ ಗೋಡ್ಸೆಗೆ ಹೆಸರಾದ ಸಂಘಟನೆ ಕಲಿಸುವುದೇನಿದೆ” ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೊಂದಿಗೆ ಇರುವ ಹಳೆಯ ಛಾಯಾಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಗಳನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ಅದು ಆರ್‌ಎಸ್‌ಎಸ್/ಬಿಜೆಪಿ ಕಾರ್ಯಕ್ರಮ: ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧಾರ
“ನಾನು ಈ ಚಿತ್ರವನ್ನು Quoraದಲ್ಲಿ ನೋಡಿದೆ. ಇದು ತುಂಬಾ ಪ್ರಭಾವಶಾಲಿಯಾಗಿದ್ದು, ಒಬ್ಬ ತಳಮಟ್ಟದ RSS ಸ್ವಯಂಸೇವಕ ಮತ್ತು ಜನಸಂಘ ಕಾರ್ಯಕರ್ತ, ನಾಯಕರ ಪಾದಗಳ ಕೆಳಗೆ ನೆಲದ ಮೇಲೆ ಕುಳಿತವರು ಈಗ ಹೇಗೆ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾದರು ಎಂಬುದು ತಿಳಿಯುತ್ತದೆ. ಇದು ಸಂಘಟನೆಯ ಶಕ್ತಿ” ಎಂದು ಪೋಸ್ಟ್ ಮಾಡಿದ್ದರು. ಜತೆಗೆ “ಜೈ ಸೀತಾರಾಮ್” ಎಂದು ಬರೆದುಕೊಂಡಿದ್ದರು.
ಸದ್ಯ ಆರ್‌ಎಸ್‌ಎಸ್ ಸಂಘಟನೆಯನ್ನು ಹಾಡಿಹೊಗಳಿದ ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನಾಯಕರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ. ಗೋಡ್ಸೆಗೆ ಹೆಸರಾದ ಸಂಘಟನೆ ಗಾಂಧಿ ಸ್ಥಾಪಿಸಿದ ಸಂಸ್ಥೆಗೆ ಏನು ಕಲಿಸಬಹುದು” ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.
ತಮ್ಮ ಪೋಸ್ಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಸ್ಪಷ್ಟೀಕರಣವನ್ನು ನೀಡಲು ಮುಂದಾಗಿದ್ದಾರೆ. “ನಾನು ಮೊದಲಿನಿಂದಲೂ ಇದನ್ನು ಹೇಳುತ್ತಿದ್ದೇನೆ. ನಾನು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿರೋಧಿಸುತ್ತೇನೆ. ಅವರು ಸಂವಿಧಾನ ಅಥವಾ ದೇಶದ ಕಾನೂನುಗಳನ್ನು ಗೌರವಿಸುವುದಿಲ್ಲ. ಹಾಗೆಯೇ ಅದು ಅದು ನೋಂದಾಯಿಸದ ಸಂಸ್ಥೆ. ಆದರೆ ನಾನು ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ. ಅದು ನೋಂದಾಯಿಸದ ಸಂಸ್ಥೆಯಾದರೂ ತುಂಬಾ ಶಕ್ತಿಶಾಲಿಯಾಗಿದೆ. ಪ್ರಧಾನಿ ಕೆಂಪು ಕೋಟೆಯಲ್ಲಿ ನಿಂತು ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಹೇಳುವಷ್ಟು ಶಕ್ತಿಶಾಲಿಯಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಜತೆಗೆ ಆರ್‌ಎಸ್‌ಎಸ್ ಎನ್‌ಜಿಒ ಎಂಬ ಪ್ರಧಾನಿ ಹೇಳಿಕೆಯನ್ನೂ ಈ ವೇಳೆಯೇ ಟೀಕಿಸಿದ್ದಾರೆ. “ಆರ್‌ಎಸ್‌ಎಸ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದರೆ, ಅದರ ನಿಯಮಗಳು ಎಲ್ಲಿವೆ? ಆದರೆ ನಾನು ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ” ಎಂದು ಹೇಳಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್‌ನ ಸಂಘಟನಾ ಸಾಮರ್ಥ್ಯದ ಬಗ್ಗೆ ಮಾತನಾಡಿ, “ಸುಧಾರಣೆಗೆ ಅವಕಾಶವಿದೆ ಮತ್ತು ಪ್ರತಿಯೊಂದು ಸಂಸ್ಥೆಗೂ ಯಾವಾಗಲೂ ಸುಧಾರಣೆಗೆ ಅವಕಾಶವಿರಬೇಕು” ಎಂದಿದ್ದಾರೆ.
“ಕಾಂಗ್ರೆಸ್ ಮೂಲಭೂತವಾಗಿ ಒಂದು ಚಳುವಳಿಯ ಪಕ್ಷವಾಗಿದೆ. ಅದು ಉಳಿಯಬೇಕು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ ಆ ಚಳುವಳಿಯನ್ನು ಮತಗಳಾಗಿ ಪರಿವರ್ತಿಸುವುದರಿಂದ ನಾವು ವಿಫಲರಾಗುತ್ತೇವೆ” ಎಂದು ತಿಳಿಸಿದ್ದಾರೆ.





