ಸಚಿವರಾಗಿದ್ದುಕೊಂಡು, ಆಡಳಿತ ಪಕ್ಷದವರ ವಿರುದ್ಧವೇ 'ಹನಿಟ್ರ್ಯಾಪ್' ಮಾಡಿಸಿದ್ದಾರೆ ಎಂದು ಸದನದಲ್ಲೇ ಕೆ ಎನ್ ರಾಜಣ್ಣ ಆರೋಪಿಸಿರುವುದು ಕಲಾಪದ ಕಡತದಲ್ಲೂ ದಾಖಲಾಗಿರುತ್ತದೆ. ಹೀಗಿರುವಾಗ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 'ಹನಿಟ್ರ್ಯಾಪ್' ಪ್ರಕರಣ ಠುಸ್ ಪಟಾಕಿಯಾಗಿದೆ.
ಕಳೆದ ಬಜೆಟ್ ಅಧಿವೇಶನದ ವೇಳೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಹನಿಟ್ರ್ಯಾಪ್’ ಪ್ರಕರಣ ಠುಸ್ ಪಟಾಕಿಯಾಗಿದೆ. ಸಹಕಾರ ಸಚಿವ ಕೆ ಎನ್ ರಾಜಣ್ಣ ತಮ್ಮ ವಿರುದ್ಧ ಹನಿಟ್ರ್ಯಾಪ್ ಆಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಆದರೆ, ತನಿಖೆ ನಡೆಸಿದ ಸಿಐಡಿ ಆರೋಪದಲ್ಲಿ ಹುರುಳಿಲ್ಲ ಎಂದು ಷರಾ ಬರೆದಿದೆ.
ಹನಿಟ್ರ್ಯಾಪ್ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಅಂತಿಮ ವರದಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಕೆ ಎನ್ ರಾಜಣ್ಣ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಆರೋಪ ಮಾಡಿದ ರಾಜಣ್ಣ ಸಹಾ ಯಾವುದೇ ಸಾಕ್ಷ್ಯ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿಗೆ ಪ್ರಕರಣ ಕೈಬಿಡಲಾಗಿದೆ. ರಾಜ್ಯ ಸರ್ಕಾರಕ್ಕೂ ವರದಿ ಸಲ್ಲಿಕೆಯಾಗಿದೆ.
ಮಾರ್ಚ್ 3, 2025ರಂದು ಬಜೆಟ್ ಅಧಿವೇಶನ ಆರಂಭಗೊಂಡಿತ್ತು. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ 16ನೇ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಬಳಿಕ ನಡೆದ ಕಲಾಪದಲ್ಲಿ ಸಚಿವ ಕೆ ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಆಗಿದೆ ಎಂದು ಸದನದಲ್ಲೇ ಬಹಿರಂಗವಾಗಿ ಆರೋಪಿಸಿದ್ದರು. ಜೊತೆಗೆ 48ಕ್ಕೂ ಹೆಚ್ಚು ರಾಜಕಾರಣಿಗಳ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಆರೋಪಿಸಿದ್ದರು. ರಾಜಣ್ಣ ಸಿಡಿಸಿದ ಈ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿತ್ತು.
“ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದ ಯುವತಿ ಹಾಗೂ ಆಕೆಯ ಸಹಚರರು ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸಿದ್ದರು. ಅನುಮಾನ ಬಂದು ಅವರನ್ನು ಹಿಡಿದು ವಿಚಾರಿಸಿದಾಗ ನಮ್ಮ ಪಕ್ಷದ ನಾಯಕರೇ ಇದನ್ನು ಮಾಡಿಸಿದ್ದ ಸಂಗತಿ ತಿಳಿಯಿತು. ಹೈಕಮಾಂಡ್ ನಾಯಕರನ್ನೂ ಹನಿಟ್ರ್ಯಾಪ್ ಬಲೆಗೆ ಕೆಡವಲಾಗಿದೆ ಎಂಬ ಮಾಹಿತಿ ದೊರೆಯಿತು” ಎಂದು ರಾಜಣ್ಣ ಸ್ವಪಕ್ಷದ ನಾಯಕರ ವಿರುದ್ಧವೇ ಆರೋಪಿಸಿದ್ದರು. ರಾಜಣ್ಣ ಖಚಿತವಾಗಿ ಇಂತಹ ವ್ಯಕ್ತಿಗಳೇ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಹೇಳಿರದಿದ್ದರೂ ಅವರ ಆರೋಪ ಪರೋಕ್ಷವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರತ್ತ ಬೊಟ್ಟು ಮಾಡಿದ್ದು ಮಾಧ್ಯಮಗಳಲ್ಲಿ ವಿಶ್ಲೇಷಣಗೆ ಒಳಗಾಯಿತು.
ವಿಧಾನಸೌಧದ ಮೊಗಸಾಲೆಯಲ್ಲಿ ಹನಿಟ್ರ್ಯಾಪ್ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ, ಸಚಿವರಾದ ಬೈರತಿ ಸುರೇಶ್, ಆರ್.ಬಿ ತಿಮ್ಮಾಪೂರ ಹಾಗೂ ವಿಧಾಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕೂಡಾ ಇದಕ್ಕೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿ ತೀವ್ರವಾಗಿ ಖಂಡಿಸಿದರು. ಪ್ರತಿಪಕ್ಷದ ನಾಯಕರು ‘ಇದೊಂದು ನೀಚ ರಾಜಕಾರಣ’ ಎಂದು ಕಿಡಿಕಾರಿದರು. ಇದಕ್ಕೆ ಜೋತು ಬಿದ್ದ ಬಿಜೆಪಿ ನಾಯಕರು ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಗದ್ದಲ ಮಾಡಿದರು. ಇದರಿಂದ ಹನಿಟ್ರ್ಯಾಪ್ ಪ್ರಕರಣ ಸದನದಲ್ಲಿ ಭಾರೀ ಕೋಲಾಹಲಕ್ಕೂ ಕಾರಣವಾಯ್ತು.
ಉನ್ನತ ಮಟ್ಟದ ತನಿಖೆಗೆ ನೀಡುತ್ತೇವೆ ಎಂಬ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ನೀಡಿದರು. ಹೀಗಿದ್ದರೂ ಗದ್ದಲ ಕೈಬಿಡದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸ್ಪೀಕರ್ ಪೀಠಕ್ಕೆ ಕೆಲವು ಸದಸ್ಯರು ಏರಿ ಹೋಗಿ ಘೋಷಣೆ ಕೂಗಿದರು. ಅಲ್ಲದೆ ಕಾಗದ ಪತ್ರಗಳನ್ನು ಹರಿದು ಹಾಕಿ ಪೀಠಕ್ಕೆ ಅವಮಾನ ಮಾಡಿದ ಘಟನೆಯೂ ಅದೇ ವೇಳೆ ನಡೆಯಿತು.
ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಆರೋಪದ ಅಡಿಯಲ್ಲಿ 18 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯು ಟಿ ಖಾದರ್ ಅಮಾನತು ಮಾಡಿದರು. ದೊಡ್ಡಣ್ಣ ಗೌಡ ಪಾಟೀಲ್, ಸಿ ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜ, ಎಂ ಆರ್ ಪಾಟೀಲ, ಚನ್ನಬಸಪ್ಪ, ಬಿ ಸುರೇಶ್ ಗೌಡ, ಉಮನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳ್, ಯಶಪಾಲ್ ಸುವರ್ಣ, ಹರೀಶ್ ಬಿಪಿ, ಭರತ್ ಶೆಟ್ಟಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ ಚಂದ್ರು ಲಮಾಣಿ 6 ತಿಂಗಳುಗಳ ಕಾಲ ಅಮಾನತಿಗೆ ಒಳಗಾದರು.
ಹನಿಟ್ರ್ಯಾಪ್ ವಿಚಾರವಾಗಿ ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದರು. ಸಭಾಧ್ಯಕ್ಷರ ಕ್ರಮವನ್ನು ಖಂಡಿಸಿ ಈ ಸಂಬಂಧಪಟ್ಟಂತೆ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿದರು. ಈ ಎಲ್ಲ ಪ್ರಹಸನ ನಡೆಯುತ್ತಿರುವಾಗಲೇ ಕೆ ಎನ್ ರಾಜಣ್ಣ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮೂರು ಪುಟಗಳ ದೂರು ನೀಡಿದರು. ಆ ದೂರು ಆಧರಿಸಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಸಿಐಡಿ ತನಿಖೆಗೆ ಆದೇಶಿಸಿದ್ದರು. ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಈಗ ಕೆ ಎನ್ ರಾಜಣ್ಣ ಆರೋಪಕ್ಕೆ ಸಾಕ್ಷಿಗಳೇ ಇಲ್ಲ ಎಂದು ವರದಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ಹತ್ಯೆಗಳಲ್ಲವೇ?
ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರ ಭದ್ರತಾ ಸಿಬ್ಬಂದಿ ಹಾಗೂ ಆಪ್ತ ಸಹಾಯಕರನ್ನು ವಿಚಾರಣೆ ನಡೆಸಲಾಗಿದೆ. ಅಲ್ಲಿಯೂ ಘಟನೆಯ ಬಗ್ಗೆ ಮಾಹಿತಿ ಹಾಗೂ ಸಾಕ್ಷ್ಯಗಳು ಲಭ್ಯವಾಗದ ಕಾರಣ ಪ್ರಕರಣದ ಮುಕ್ತಾಯ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಕೆ ಎನ್ ರಾಜಣ್ಣ ಎಳಸು ರಾಜಕಾರಣಿಯಲ್ಲಿ. ಸಹಕಾರಿ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿ, ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1972ರಿಂದ ರಾಜಕೀಯದಲ್ಲಿರುವ ರಾಜಣ್ಣರಿಗೆ ಅಪಾರ ಅನುಭವವೂ ಇದೆ. ಕಾಂಗ್ರೆಸ್‌ನಲ್ಲಿ ಒಂದು ಸುತ್ತು ಮುಗಿಸಿ, ಬಳಿಕ ಜೆಡಿಎಸ್ ಸೇರಿದ ರಾಜಣ್ಣ ಅಲ್ಲಿಯೂ ಒಂದು ಸುತ್ತು ಹಾಕಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ.
ಸುದೀರ್ಘ 50 ವರ್ಷಗಳ ರಾಜಕೀಯ ಅನುಭವ ಇರುವ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಆಗಿದೆ ಅಂತ ಆರೋಪಿಸಿದಾಗ ಬಹುತೇಕರು ನಂಬಿದ್ದಿದೆ. ಪ್ರಕರಣದ ಗಂಭೀರತೆ ಅರಿತೇ ಸಿಎಂ ಸಿದ್ದರಾಮಯ್ಯ ಸಹ ತನಿಖೆಗೆ ಆದೇಶಿಸಿದರು. ಆದರೆ, ಈಗ ರಾಜಣ್ಣ ಆರೋಪಕ್ಕೆ ಯಾವುದೇ ಸಾಕ್ಷಿಗಳೇ ಇಲ್ಲದಿರುವುದು ಅವರ ಮಾತಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಯಾರದೋ ಮೇಲಿನ ವೈಯಕ್ತಿಕ ದ್ವೇಷಕ್ಕೆ ಉದ್ದೇಶಪೂರ್ವಕವಾಗಿ ಗಾಳಿಯಲ್ಲಿ ಗುಂಡು ಹೊಡೆದರೇ ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದೆ.
ಸಚಿವರಾಗಿದ್ದುಕೊಂಡು, ಆಡಳಿತ ಪಕ್ಷದವರ ವಿರುದ್ಧವೇ ‘ಹನಿಟ್ರ್ಯಾಪ್’ ಮಾಡಿಸಿದ್ದಾರೆ ಎಂದು ಸದನದಲ್ಲೇ ಕೆ ಎನ್ ರಾಜಣ್ಣ ಆರೋಪಿಸಿರುವುದು ಕಲಾಪದ ಕಡತದಲ್ಲೂ ದಾಖಲಾಗಿರುತ್ತದೆ. ಹೀಗಿರುವಾಗ ಅಧಿವೇಶನದ ಘನತೆಯನ್ನೇ ರಾಜಣ್ಣ ಹಾಳು ಮಾಡಲಿಲ್ಲವೇ? ರಾಜಕಾರಣದಲ್ಲಿ ಏನು ಸಂದೇಶ ಕೊಡಲು ಹೊರಟಿದ್ದಾರೆ? ಹಾಗಿದ್ದರೆ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಆರೋಪ ಮಾಡಬಹುದೇ? ರಾಜಣ್ಣ ಆರೋಪ ಮಾಡುವ ಮುನ್ನು ಸಾಕಷ್ಟು ಸಲ ಯೋಚಿಸಬೇಕಿತ್ತು. ಅನುಭವದ ಪ್ರಬುದ್ಧತೆ ಮೆರೆಯದೇ ತಾವು ಒಬ್ಬ ಚಿಲ್ಲರೆ ರಾಜಕಾರಣಿ ಎನ್ನುವುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ತಮ್ಮ ಘನತೆಗೆ ತಾವೇ ಮಸಿ ಬಳಿದುಕೊಂಡಿದ್ದಾರೆ.





