ಟ್ರಂಪ್ ಮತ್ತು ಮೋದಿ ಫೋನ್ ಮಾತುಕತೆ ನಡೆಸಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದಾರೆ. ಬಳಿಕ, ಮೋದಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಸಂಸದರೊಂದಿಗೆ ಮುಚ್ಚಿದ ಬಾಗಿಲಿನ ಸಭೆ ನಡೆಸಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮಗಳ ಬಗ್ಗೆ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ನಡೆಯುತ್ತಿರುವ ಸಂಸತ್ ಅಧಿವೇಶನದ ನಡುವೆ ಈ ಸಭೆ ನಡೆದಿದೆ. “ಅಮೆರಿಕ ಜೊತೆಗಿನ ಒಪ್ಪಂದವು ದ್ವಿಪಕ್ಷೀಯ ಸಂಬಂಧಗಳಿಗೆ ‘ಉತ್ತಮ ವಾತಾವರಣ’ವನ್ನು ಸೃಷ್ಟಿಸಿದ ಮೈಲಿಗಲ್ಲು. ಮಾತುಕತೆಯ ಸಮಯದಲ್ಲಿ ಹಲವು ಸವಾಲುಗಳಿದ್ದವು. ಒಪ್ಪಂದದ ಕುರಿತು ವಿಮರ್ಶಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಆದರೂ, ಸರ್ಕಾರ ದೃಢನಿಶ್ಚಯದಿಂದ ಮುಂದುವರಿದಿದೆ. ನಮ್ಮ ತಾಳ್ಮೆ ಫಲ ನೀಡಿದೆ” ಎಂದು ಮೋದಿ ಹೇಳಿರುವುದಾಗಿ ತಿಳಿದುಬಂದಿದೆ.
ಅಲ್ಲದೆ, ಸಭೆಯಲ್ಲಿ ಮೋದಿ ಅವರು ತಮ್ಮ ಎನ್‌ಡಿಎ ಸಂಸದರಿಗೆ ಕಲಾಪದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮತ್ತು ಸರ್ಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ನೇರವಾಗಿ ತಿಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ, ಮೋದಿ ಮತ್ತು ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ವ್ಯಾಪಾರ ಒಪ್ಪಂದದ ಚರ್ಚೆಗಳು ನಡೆದಿವೆ. ಒಪ್ಪಂದದ ಅಡಿಯಲ್ಲಿ, ಭಾರತೀಯ ಸರಕುಗಳ ಮೇಲಿನ ಅಮೆರಿಕ ಸುಂಕವು 50%ನಿಂದ 18%ಗೆ ಇಳಿಸಲಾಗುತ್ತದೆ. ಅಂತೆಯೇ, ಅಮೆರಿಕದ ಮೇಲಿನ ಭಾರತದ ಸುಂಕವು 16%ನಿಂದ ಶೂನ್ಯಕ್ಕೆ (0%) ಕಡಿತಗೊಳ್ಳಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಅದನ್ನು, ಮೋದಿ ಕೂಡ ಸಮ್ಮತಿಸಿದ್ದಾರೆ.





