ಆಸ್ತಿಕ ಭಾವನೆಗಳನ್ನು ಅನ್ಯಾಯದ ರಕ್ಷಣೆಗೆ ದುರ್ಬಳಕೆ ಮಾಡಿಕೊಳ್ಳುವುದು ಹೇಯ ಕೃತ್ಯ. ದೂರುದಾರರು ಹಾಗೂ ಹೋರಾಟಗಾರರೇ ಆರೋಪಕ್ಕೆ ಈಡಾಗುವ ವಿದ್ಯಮಾನವು ಸಾಮಾಜಿಕ, ನ್ಯಾಯಿಕ, ನಾಗರಿಕ ವ್ಯವಸ್ಥೆಯ ಆರೋಗ್ಯಕಾರಿ ಲಕ್ಷಣವಂತೂ ಅಲ್ಲವೇ ಅಲ್ಲ.
ಧರ್ಮಸ್ಥಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ನವೆಂಬರ್ 20ನೇ ತಾರೀಖು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಟ್ಠಲ ಗೌಡ, ಟಿ.ಜಯಂತ್ ಮತ್ತು ಸುಜಾತಾ ಭಟ್ ಮೇಲೆ ಸಂಚು ಹೂಡಿದ ಆರೋಪ ಹೊರಿಸಲಾಗಿದೆ. ಬಿ.ಎನ್.ಎಸ್.ಎಸ್. ಸೆಕ್ಷನ್ 215 ಅನ್ವಯ ಸುಳ್ಳುಸಾಕ್ಷಿ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಲಾಗಿದೆ. ಇದು ಆರೋಪ ಪಟ್ಟಿಯಲ್ಲ, ಮಧ್ಯಂತರ ವರದಿ; ನ್ಯಾಯಾಲಯದ ಆದೇಶದಂತೆ ತನಿಖೆ ಮುಂದುವರಿಯಲಿದೆ ಎಂಬುದು ಸ್ಪಷ್ಟವಾಗಿದ್ದರೂ ತನಿಖೆಯ ರೀತಿ-ನೀತಿ-ವರದಿ ಕುರಿತು ಹಲವು ಬಗೆಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.
‘ಕೊಂದವರು ಯಾರು’ ಅಭಿಯಾನದ ಅಂಗವಾಗಿ ‘ನ್ಯಾಯಕ್ಕಾಗಿ ಮಹಿಳೆಯರ ಆಗ್ರಹ’ ಸಹಿ ಸಂಗ್ರಹದ ಮನವಿ ಸ್ವೀಕರಿಸಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ’20 ವರ್ಷಗಳಲ್ಲಿ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಅತ್ಯಾಚಾರ, ನಾಪತ್ತೆ, ಸಾವುಗಳ ಬಗ್ಗೆ ತನಿಖೆ ನಡೆಸಿ ಎಂದು ಎಸ್‌ಐಟಿಗೆ ಪತ್ರ ಬರೆದಿದ್ದೇನೆಯೇ ಹೊರತು ಬುರುಡೆ ಚಿನ್ನಯ್ಯನಿಗಾಗಿ ಅಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ‘ಚಿನ್ನಯ್ಯ ಒಬ್ಬ ಸಾಕ್ಷಿ ಅಷ್ಟೇ. ಅವನು ಹೇಳಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ನೀವು ಕಂಡುಕೊಳ್ಳಿ. ಆದರೆ, ಎಸ್‌ಐಟಿ ತನಿಖೆ ಅಷ್ಟಕ್ಕೇ ಸೀಮಿತವಾಗಬಾರದು’ ಎಂಬುದು ಅವರ ನಿಲುವು. ಎಸ್ಐಟಿ ರಚನೆಗೆ ಕಾರಣವಾದ ಸಂಗತಿಗಳಲ್ಲಿ ನಾಗಲಕ್ಷ್ಮೀ ಚೌಧರಿ ಅವರು ಸರ್ಕಾರಕ್ಕೆ ಬರೆದ ಪತ್ರ ಪ್ರಮುಖವಾದುದು. ಹಾಗಾಗಿ ಅವರ ಹೇಳಿಕೆಗೆ ಸಹಜವಾಗಿ ಅತಿ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ.
ಇದನ್ನು ಓದಿದ್ದೀರಾ?: ವಂದೇ ಮಾತರಂ | ತಿರುಗುಬಾಣವಾದ ರಾಮಬಾಣ
2025ರ ಜೂನ್ 22ರಂದು ಬೆಂಗಳೂರಿನ ಇಬ್ಬರು ನ್ಯಾಯವಾದಿಗಳು ನೀಡಿದ ಲಿಖಿತ ಹೇಳಿಕೆಯಲ್ಲಿ, ‘1995ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಮೃತ ದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೇ ಮುಂದೆ ಬಂದಿದ್ದಾನೆ’ ಎಂದು ತಿಳಿಸುವುದರೊಂದಿಗೆ ಧರ್ಮಸ್ಥಳ ಪ್ರಕರಣ ಮುನ್ನೆಲೆಗೆ ಬಂದಿತ್ತು. ಆ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರಾಗಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 183ರ ಅಡಿ ಸುದೀರ್ಘ ಹೇಳಿಕೆ ದಾಖಲಿಸಿದ. ಅದೇ ವೇಳೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರಿಂದ ಸರ್ಕಾರ ಈ ಕುರಿತು ತನಿಖೆ ಮಾಡುವ ಅನಿವಾರ್ಯತೆ ಏರ್ಪಟ್ಟಿದ್ದನ್ನು ನೆನೆಯಬಹುದು.
ರಾಜ್ಯ ಸರಕಾರ ಜುಲೈ 19ರಂದು ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತು. ಮಹಿಳಾ ಆಯೋಗದ ಪತ್ರ ಮತ್ತು ಅನಾಮಿಕನ ಪ್ರಮಾಣವಚನದ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸುವ ಆದೇಶ ಹೊರಬಿದ್ದಿರುವುದನ್ನು ವಿಶೇಷವಾಗಿ ಗಮನಿಸಬೇಕಿದೆ. ಸರ್ಕಾರಿ ಆದೇಶದ ಪ್ರಕಾರ ಎಸ್.ಐ.ಟಿ.ಗೆ ನಿರ್ದಿಷ್ಟ ಕಾರ್ಯಸೂಚಿ ನೀಡಲಾಗಿತ್ತು ಹಾಗೂ ತಂಡಕ್ಕೆ ವಹಿಸಿದ ‘ಟರ್ಮ್ಸ್ ಆಫ್ ರೆಫೆರೆನ್ಸ್’ ಮಹಿಳಾ ಆಯೋಗದ ಅಧ್ಯಕ್ಷರ ಪತ್ರದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಆಧರಿಸಿತ್ತು ಎಂಬುದು ಬಹಳ ಮುಖ್ಯ ಸಂಗತಿ.
ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದಂತೆ, ”ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ. ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ”. ಆ ಪ್ರಕಾರ ರಚನೆಯಾದ ವಿಶೇಷ ತನಿಖಾ ತಂಡಕ್ಕೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ, ಅತ್ಯಾಚಾರ ಮತ್ತು ಅಸಹಜ ಸಾವುಗಳ ತನಿಖೆ ಕೈಗೊಳ್ಳುವ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಆಗಿದ್ದೇನು?

ಬಹುದೊಡ್ಡ ಸಂಖ್ಯೆಯ ಜನಸಾಮಾನ್ಯರು ಪವಿತ್ರ ಕ್ಷೇತ್ರ ಎಂದು ನಂಬಿರುವ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅನಾಚಾರಗಳ ವಿರುದ್ಧ ಎತ್ತಿದ ದನಿಯಲ್ಲಿ ರಾಜಕೀಯ ನಾಯಕರಿಗೆ ಹಿಂದೂ ವಿರೋಧಿ ಷಡ್ಯಂತ್ರ ಕೇಳಿಸಿದ್ದು ವಿಚಿತ್ರವಾಗಿದೆ. ಈ ವಿಷಯದಲ್ಲಿ ರಾಜಕಾರಣಿಗಳೆಲ್ಲಾ ಪಕ್ಷಭೇದವಿಲ್ಲದೆ ಸಹಮತ ಹೊಂದಿರುವುದು ಇನ್ನೂ ಸೋಜಿಗದ ಸಂಗತಿ. ಅಲ್ಲಿ ನಡೆಯಬೇಕಾಗಿದ್ದು ಕೆಲವು ವ್ಯಕ್ತಿಗಳು ಎಸಗಿದ್ದಾರೆ ಎನ್ನಲಾದ ಅಪರಾಧ ಕೃತ್ಯಗಳು ಮತ್ತು ಅವುಗಳನ್ನು ಮುಚ್ಚಿಹಾಕುವ ಯತ್ನಗಳ ತನಿಖೆ ಎಂಬ ಸರಳ ಸತ್ಯವನ್ನು ಮರೆಮಾಚಿ ಧಾರ್ಮಿಕ ಕ್ಷೇತ್ರದ ವಿರುದ್ಧದ ದಾಳಿ, ಸಂಚು ಎಂಬಂತೆ ಬಿಂಬಿಸುವಲ್ಲಿ ಸಾರ್ವತ್ರಿಕ ಸ್ವಾರ್ಥ ಯಶಸ್ವಿಯಾಗಿರುವುದು ದುರಂತವೇ ಸರಿ.
ಈ ಪ್ರಕರಣದ ಹಿಂದೆ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರುವ ಉದ್ದೇಶವುಳ್ಳ ಎಡಪಂಥೀಯ ಶಕ್ತಿಗಳ ಷಡ್ಯಂತ್ರ ಇದೆ ಎಂಬುದು ಬಿಜೆಪಿ ನಾಯಕರ ಆರೋಪ. ಆದರೆ ಧರ್ಮಸ್ಥಳ ಗ್ರಾಮದಲ್ಲಿ ಸಂಭವಿಸಿವೆ ಎನ್ನಲಾದ ಅಸಹಜ ಸಾವು-ಕೊಲೆಗಳ ಬಗ್ಗೆ ನ್ಯಾಯಯುತ ತನಿಖೆಯಾಗಬೇಕೆಂದು ಹೋರಾಟ ನಿರತರಾದವರಲ್ಲಿ ವಿಚಾರವಾದಿಗಳಷ್ಟೇ ಇಲ್ಲ; ಇವರಲ್ಲಿ ಗಾಢ ಧಾರ್ಮಿಕ ನಂಬಿಕೆ-ಶ್ರದ್ಧೆ ಹೊಂದಿರುವ ನಾನಾ ಹಿನ್ನೆಲೆಯವರು ಇದ್ದಾರೆ. ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರು! ದೇವರು, ಧರ್ಮ, ಆಚರಣೆಗಳನ್ನು ಜನರ ನಂಬಿಕೆಯ ಭಾಗವಾಗಿ ಗೌರವಿಸುವುದು ಸಾಂವಿಧಾನಿಕ ಕರ್ತವ್ಯ. ಹಾಗೆಯೇ ಆಸ್ತಿಕ ಭಾವನೆಗಳನ್ನು ಅನ್ಯಾಯದ ರಕ್ಷಣೆಗೆ ದುರ್ಬಳಕೆ ಮಾಡಿಕೊಳ್ಳುವುದು ಹೇಯ ಕೃತ್ಯ ಎಂಬ ಅರಿವು ಕೂಡ ಅತ್ಯಗತ್ಯ.
‘ಧರ್ಮಸ್ಥಳ ಪ್ರಕರಣದ ಹಿಂದೆ ಷಡ್ಯಂತ್ರ ಇದೆ, ಆ ರಹಸ್ಯ ಶೀಘ್ರದಲ್ಲೇ ಹೊರಬರಲಿದೆ’ ಎಂದು ಈ ಹಿಂದೆ ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೀಗ, ‘ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ನಾನು ಆರಂಭದಲ್ಲೇ ಧೈರ್ಯದಿಂದ ಹೇಳಿದ್ದೆ. ಅಲ್ಲದೆ, ಡಾ.ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾವು ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದೆವು’ ಎಂದು ವಿವರಿಸುವ ಮೂಲಕ ಅನುಮಾನಗಳ ಕಣಜವನ್ನೇ ತೆರೆದಿದ್ದಾರೆ. ಧರ್ಮಸ್ಥಳ ಪ್ರಕರಣ ಕುರಿತು ತಮ್ಮದೇ ಸರ್ಕಾರ ರಚಿಸಿದ ಎಸ್.ಐ.ಟಿ. ತನಿಖೆ ನಡೆಸುತ್ತಿರುವ ಸೂಕ್ಷ್ಮ ಸಂದರ್ಭದಲ್ಲಿ ಡಿಸಿಎಂ ಮಾತುಗಳು ಅಧಿಕಾರಿಗಳ ದಕ್ಷತೆ, ಹೋರಾಟಗಾರರ ಭರವಸೆ ಹಾಗೂ ನಾಗರಿಕರ ನಂಬಿಕೆಯ ಮೇಲೆ ಬೀರಿದ, ಬೀರುವ ಪರಿಣಾಮ ಸಣ್ಣದಲ್ಲ.
ಒಟ್ಟಾರೆ, ದೂರುದಾರರು ಹಾಗೂ ಹೋರಾಟಗಾರರೇ ಆರೋಪಕ್ಕೆ ಈಡಾಗುವ ವಿದ್ಯಮಾನವು ಸಾಮಾಜಿಕ, ನ್ಯಾಯಿಕ, ನಾಗರಿಕ ವ್ಯವಸ್ಥೆಯ ಆರೋಗ್ಯಕಾರಿ ಲಕ್ಷಣವಂತೂ ಅಲ್ಲವೇ ಅಲ್ಲ!

ಚಂದ್ರಕಾಂತ ವಡ್ಡು
ಹಿರಿಯ ಪತ್ರಕರ್ತರು. ಸಮಾಜಮುಖಿ ಪತ್ರಿಕೆಯ ಸಂಪಾದಕರು. ಮೂಲತಃ ತೋರಣಗಲ್ಲು ಬಳಿಯ ವಡ್ಡು ಗ್ರಾಮದವರು. ಕೃತಿಗಳು:ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ, ನಾರಿಹಳ್ಳದ ದಂಡೆಯಲ್ಲಿ, ಸೌಹಾರ್ದ ಕರ್ನಾಟಕ, ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು, ಸಮಕಾಲೀನ.




