ಜಿಲ್ಲಾಡಳಿತವು ಮಣಿಕರ್ಣಿಕಾ ಘಾಟ್ ಅಭಿವೃದ್ಧಿ ಕಾರ್ಯದ ವೇಳೆ ಕೆಲವು ವಿಗ್ರಹಗಳು ಬಿದ್ದಿವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಮಾತ್ರ ಯಾವುದೇ ವಿಗ್ರಹ ಬಿದ್ದಿಲ್ಲ, ತೆಗೆದುಹಾಕಲಾಗಿಲ್ಲ. ವಿಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಅಹಲ್ಯಾಬಾಯಿ ಹೋಳ್ಕರ್ ವಿಗ್ರಹ ಧ್ವಂಸ, ಪಾಲ್ ಸಮುದಾಯವನ್ನೂ ಯೋಗಿ ಸರ್ಕಾರದ ವಿರುದ್ಧ ಕೆರಳುವಂತೆ ಮಾಡಿದೆ.
ಕಾಶಿಯ ಪುರಾತನ ಹಿಂದೂ ರುದ್ರಭೂಮಿ ಮಣಿಕರ್ಣಿಕಾ ಘಾಟ್ ಸದ್ಯ ಸುದ್ದಿಯಲ್ಲಿದೆ. ರುದ್ರಭೂಮಿಯ ಅಭಿವೃದ್ಧಿ ಯೋಜನೆ ನಡೆಯುತ್ತಿರುವ ನಡುವೆಯೇ ಪಾಲ್ ಜನಾಂಗವು ಪ್ರತಿಭಟನೆ ನಡೆಸುತ್ತಿದೆ. ಕಾಶಿ ವಿಶ್ವನಾಥ ಕಾರಿಡಾರ್ ಕಾಮಗಾರಿಯ ಸಮಯದಲ್ಲಿ ದೇವಾಲಯ ಮತ್ತು ವಿಗ್ರಹ ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಮಣಿಕರ್ಣಿಕಾ ತೀರ್ಥ ಕಾರಿಡಾರ್ ಅಭಿವೃದ್ಧಿ ಯೋಜನೆ ಸಂದರ್ಭದಲ್ಲಿಯೂ ಅದೇ ಆರೋಪ ಕೇಳಿಬಂದಿದೆ. ಜತೆಗೆ ರಾಜಕೀಯವೂ ನಡೆಯುತ್ತಿದೆ. ಒಂದೆಡೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎಎಪಿ, ಕಾಂಗ್ರೆಸ್ ಸೇರಿ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ವಿಪಕ್ಷ ನಾಯಕರುಗಳು ಎಐ ಚಿತ್ರ, ವಿಡಿಯೋ ಬಳಸಿ ಸುಳ್ಳು ಮಾಹಿತಿ ಹಂಚುತ್ತಿದ್ದಾರೆ ಎಂಬುದು ಬಿಜೆಪಿ ಸರ್ಕಾರದ ಆರೋಪ!
ಸದ್ಯ ಮಣಿಕರ್ಣಿಕಾ ಘಾಟ್‌ನಲ್ಲಿ ಬುಲ್ಡೋಜರ್ ಕಾರ್ಯನಿರ್ವಹಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿವಾದ ತೀವ್ರಗೊಂಡಿದೆ. ಎಎಪಿ ನಾಯಕ ಸಂಜಯ್ ಸಿಂಗ್ ಸೇರಿದಂತೆ ಹಲವು ಮಂದಿ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಯೋಗಿ ಸರ್ಕಾರದ ವಿರುದ್ಧ ಸ್ಥಳೀಯವಾಗಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈಯಕ್ತಿಕವಾಗಿ ಯೋಜನಾ ಸ್ಥಳದ ಕಚೇರಿಗೆ ಭೇಟಿ ನೀಡಿ ಮತ ಬ್ಯಾಂಕ್ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಣಿಕರ್ಣಿಕಾ ಘಾಟ್‌ನ ‘ನಕಲಿ’ ಚಿತ್ರಗಳನ್ನು ಹರಡಿದ ಆರೋಪ: ಎಎಪಿಯ ಸಂಜಯ್ ಸಿಂಗ್ ಸೇರಿ ಹಲವು ಮಂದಿ ವಿರುದ್ಧ ಎಫ್‌ಐಆರ್
ಕಾಂಗ್ರೆಸ್ ಅಥವಾ ವಿಪಕ್ಷಗಳ ಆಡಳಿತವಿರುವ ರಾಜ್ಯದಲ್ಲಿ ಏನೇ ಘಟನೆ ನಡೆದರೂ ಅದಕ್ಕೆ ಕೋಮುಬಣ್ಣ ಬಳಿಯುವ ಬಿಜೆಪಿ ತಂತ್ರವನ್ನೇ ಈಗ ವಿಪಕ್ಷಗಳು ಯೋಗಿ ಸರ್ಕಾರದ ವಿರುದ್ಧ ಮರುಪ್ರಯೋಗ ಮಾಡುತ್ತಿರುವಂತಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಸೇರಿದಂತೆ ವಿರೋಧ ಪಕ್ಷದ ನಾಯಕರು ವಿಗ್ರಹಗಳನ್ನು ಧ್ವಂಸ ಮಾಡಿರುವುದು, “ಸನಾತನ ಸಂಪ್ರದಾಯಗಳು ಮತ್ತು ಕಾಶಿಯ ಪರಂಪರೆಯ ಮೇಲಿನ ದಾಳಿ” ಎಂದು ಹೇಳಿದ್ದಾರೆ. ಹಾಗೆಯೇ “ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ನಗರದ ಮೂಲ ಆಧ್ಯಾತ್ಮಿಕ ರಚನೆಗಳನ್ನು ನಾಶಪಡಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ ಜಿಲ್ಲಾಡಳಿತವು ಅಭಿವೃದ್ಧಿ ಕಾರ್ಯದ ವೇಳೆ ಕೇವಲ ಒಂದು ಮಧಿ (ವೇದಿಕೆ) ಅನ್ನು ತೆಗೆದುಹಾಕಲಾಗಿದೆ. ಈ ವೇಳೆ ಕೆಲವು ವಿಗ್ರಹಗಳು ಬಿದ್ದಿವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ, ವಿಗ್ರಹ ಪುನರ್ ಸ್ಥಾಪಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ. ಅಂದರೆ ವಿಗ್ರಹವನ್ನು ಸ್ಥಳದಿಂದ ತೆರವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಎಂದಿನಂತೆ ಸಿಎಂ ಯೋಗಿ ಈ ಆರೋಪಗಳನ್ನು ತಿರಸ್ಕರಿಸಿ “ಇದು ಸಂಪೂರ್ಣವಾಗಿ ಸುಳ್ಳು. ಯಾವುದೇ ದೇವಾಲಯ ಅಥವಾ ವಿಗ್ರಹಗಳನ್ನು ಕೆಡವಿಲ್ಲ” ಎಂದಿದ್ದಾರೆ. ಜತೆಗೆ ಎಐ ಚಿತ್ರ ಹಂಚಿದ ಆರೋಪದಲ್ಲಿ ಸಂಜಯ್ ಸಿಂಗ್ ಸೇರಿದಂತೆ ಹಲವು ಮಂದಿ ವಿರುದ್ಧ ಈಗಾಗಲೇ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ಮಾಧ್ಯಮಗಳು ಹೇಳುವುದೇನು?
ಸ್ಥಳೀಯ ಮಾಧ್ಯಮಗಳು ಹೇಳುವಂತೆ ಮಣಿಕರ್ಣಿಕಾದಲ್ಲಿನ ಪ್ರಮುಖ ದೇವಾಲಯಗಳಾದ ಮಸನ್ ದೇವಾಲಯ, ತಾರಕೇಶ್ವರ ದೇವಾಲಯ ಮತ್ತು ರತ್ನೇಶ್ವರ ದೇವಾಲಯಗಳು ಹಾಗೆಯೇ ಉಳಿದಿದೆ. ಆದರೆ ಪುನರಾಭಿವೃದ್ಧಿಯ ಭಾಗವಾಗಿ ಘಾಟ್‌ನ ಉದ್ದಕ್ಕೂ ಒಂದು ಮಧಿ (ವೇದಿಕೆ) ಮತ್ತು ಹಲವು ಹಳೆಯ ರಚನೆಗಳನ್ನು ತೆಗೆದುಹಾಕಲಾಗಿದೆ.

ಘಾಟ್‌ನಲ್ಲಿರುವ ಅರ್ಚಕರು ಮಧಿ ದೇವಾಲಯವಲ್ಲ ಎಂದು ಹೇಳಿದ್ದಾರೆ. ಆದರೆ ಹಳೆಯ ರಚನೆಗಳನ್ನು ನಾಶ ಮಾಡುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ವಿಗ್ರಹಗಳು ಅದರ ಮೇಲಿರುವ ಕಾರಣ, ಅದು ಧಾರ್ಮಿಕ ನಂಬಿಕೆಯನ್ನು ಹೊಂದಿರುವ ಸ್ಥಳ ಎಂದೂ ಹೇಳಿದ್ದಾರೆ. ಕೆಲವರು ಭಾರೀ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. “ಮಣಿಕರ್ಣಿಕಾ ಘಾಟ್‌ನ ಪುನರಾಭಿವೃದ್ಧಿಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಪರಂಪಾರಿಕ ರಚನೆಯ ಧ್ವಂಸದ ವೇಳೆ ಹೆಚ್ಚು ಸೂಕ್ಷ್ಮವಾಗಿರಬೇಕಾಗಿತ್ತು. ಬುಲ್ಡೋಜರ್ ಮೂಲಕ ಅನಗತ್ಯವಾಗಿ ಹಾನಿಯನ್ನುಂಟು ಮಾಡಲಾಗಿದೆ” ಎನ್ನುತ್ತಾರೆ ಅರ್ಚಕರಾದ ನಿಮಿಷ್ ದ್ವಿವೇದಿ ಮತ್ತು ದೀಪಕ್ ಆಚಾರ್ಯ.
ಅಭಿವೃದ್ಧಿ ಯಾಕಾಗಿ, ಅನಿವಾರ್ಯವೇ?
ಈ ನಡುವೆ ಹೊಸ ನಿರ್ಮಾಣ, ಅಭಿವೃದ್ಧಿ ಯಾಕಾಗಿ ಎಂಬ ಪ್ರಶ್ನೆಯೂ ಹುಟ್ಟಿದೆ. ವಾರಣಾಸಿಯ ಮಣಿಕರ್ಣಿಕಾ ಘಾಟ್ ಬಗ್ಗೆ ಹಿಂದೂ ಧರ್ಮದಲ್ಲಿ ಗಾಢವಾದ ನಂಬಿಕೆಗಳಿವೆ. ಇಲ್ಲಿ ಅಂತ್ಯಕ್ರಿಯೆ ನಡೆದರೆ ಆತ್ಮಕ್ಕೆ ಮುಕ್ತಿ ಸಿಗುತ್ತದೆ, ಮೋಕ್ಷ ಸಿಗುತ್ತೆ ಎಂಬ ನಂಬಿಕೆಯೂ ಇದೆ! ಈ ನಂಬಿಕೆಗಳಿಂದಾಗಿ ಇಲ್ಲಿಗೆ ಶವಸಂಸ್ಕಾರಕ್ಕೆ ಬರುವ ಜನರ ಸಂಖ್ಯೆಯೂ ಅಧಿಕ. ಇಲ್ಲಿ ನಿರಂತರವಾಗಿ 24 ಗಂಟೆಯೂ ಶವಸಂಸ್ಕಾರಗಳು ನಡೆಯುತ್ತವೆ. ಜತೆಗೆ ಜನದಟ್ಟಣೆ ಮತ್ತು ಅವ್ಯವಸ್ಥೆ ಸಾಮಾನ್ಯ. ಆದರೆ ಮಣಿಕರ್ಣಿಕಾ ಘಾಟ್ ಕಿರಿದಾಗಿದೆ. ಸರಿಯಾದ ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಅಥವಾ ಶೌಚಾಲಯಗಳೂ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ನೀರಿನೊಂದಿಗೆ ದಹನದ ಬೂದಿ ನೆರೆಮನೆಗಳಿಗೆ ತಲುಪುತ್ತದೆ!
ಇದನ್ನು ಓದಿದ್ದೀರಾ? ಹಾಸನ | ಸಕಲೇಶಪುರ ಬಳಿ ಮತ್ತೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ
ಈ ಕಾರಣದಿಂದಾಗಿಯೇ ಇದೀಗ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಪುನರಾಭಿವೃದ್ಧಿ ಯೋಜನೆಯು ಆರಂಭದಲ್ಲಿ ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ್ದಾಗಿತ್ತು. ಅಂತಿಮವಾಗಿ 39,350 ಚದರ ಮೀಟರ್‌ಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಮಣಿಕರ್ಣಿಕಾ ಅತಿದೊಡ್ಡ ರುದ್ರಭೂಮಿಯಾಗಲಿದೆ, ದಹನ ಸೌಲಭ್ಯ ಇರಲಿದೆ. ಅಭಿವೃದ್ಧಿ ಬಳಿಕ ಏಕಕಾಲದಲ್ಲಿ 19 ಮೃತದೇಹಗಳನ್ನು ದಹಿಸಲು ಸಾಧ್ಯವಾಗುತ್ತದೆ. ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್‌ನ ನಿಧಿಯ ಮೂಲಕ ಈ ಯೋಜನೆ ನಡೆಸಲಾಗುತ್ತಿದೆ. ಆದರೆ ಇಲ್ಲಿ ವಿಗ್ರಹ ಧ್ವಂಸ ವಿಚಾರದಲ್ಲಿ ಎದ್ದಿರುವುದು ಜಾತಿ ಅಸ್ಮಿತೆ.
ಪಾಲ್ ಸಮುದಾಯದ ವಾದವೇನು?
ಅಹಲ್ಯಾಬಾಯಿ ಹೋಳ್ಕರ್ 18ನೇ ಶತಮಾನದ ಮರಾಠಾ ಮಾಳ್ವಾ ಸಾಮ್ರಾಜ್ಯದ ಪ್ರಸಿದ್ಧ ರಾಣಿ. ‘ಲೋಕಮಾತಾ’ ಅಥವಾ ‘ತತ್ವಜ್ಞಾನಿ ರಾಣಿ’ ಎಂದು ಹೆಸರುವಾಸಿ. ತಮ್ಮ ಆಡಳಿತದಲ್ಲಿ ಅಹಲ್ಯಾಬಾಯಿ ದೇಶದಾದ್ಯಂತ ನೂರಾರು ಹಿಂದೂ ದೇವಾಲಯಗಳು, ಘಾಟ್‌ಗಳು, ಬಾವಿ, ಕೆರೆ ಮೊದಲಾದವುಗಳ ನಿರ್ಮಾಣ, ನವೀಕರಣ ಮಾಡಿದ್ದಾರೆ. 1780ರಲ್ಲಿ ವಾರಣಾಸಿಯಲ್ಲಿರುವ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ನವೀಕರಣ ಮತ್ತು ದುರಸ್ತಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಅಹಲ್ಯಾಬಾಯಿ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಚೌಂಡಿ ಗ್ರಾಮದ ಪಾಟೀಲ್ (ಗ್ರಾಮ ಮುಖ್ಯಸ್ಥ) ಕುಟುಂಬದಲ್ಲಿ ಜನಿಸಿದ್ದು ಈ ಕುಟುಂಬ ಧನಗರ್ ಸಮುದಾಯಕ್ಕೆ ಸೇರಿದ್ದು. ಈ ಸಮುದಾಯವನ್ನು ದೇಶದ ವಿವಿಧ ಭಾಗಗಳಲ್ಲಿ ಪಾಲ್, ಗಡರಿಯಾ, ಬಘೇಲ್ ಅಥವಾ ಕುರುಬ ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ. ಪಾಲ್ ಸಮುದಾಯವು ಅಹಲ್ಯಾಬಾಯಿ ಹೋಳ್ಕರ್ ಅವರನ್ನು ತಮ್ಮ ‘ಪೂಜನೀಯ ಪೂರ್ವಜರು’ ಎಂದೇ ಪರಿಗಣಿಸಿ ಪೂಜಿಸುತ್ತಾರೆ. ಹಾಗಿರುವಾಗ ಮಣಿಕರ್ಣಿಕಾ ಘಾಟ್‌ನಲ್ಲಿ ಅಹಲ್ಯಾಬಾಯಿ ವಿಗ್ರಹ ತೆರವು ಮಾಡಿರುವುದು ಪಾಲ್ ಸಮುದಾಯವನ್ನು ಕೆರಳಿಸಿದೆ.
ಇತ್ತೀಚಿನ ದಿನಗಳಲ್ಲಿ, ಅಹಲ್ಯಾಬಾಯಿ ಹೋಳ್ಕರ್ ಅವರ ಪರಂಪರೆಯನ್ನು ಪಾಲ್ (ಗಡರಿಯಾ) ಸಮುದಾಯದ ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಒಂದು ಪ್ರಮುಖ ಐಕಾನ್ ಆಗಿಯೂ ಬಳಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಈ ಸಮುದಾಯದ ಮತದಾರರನ್ನು ಸೆಳೆಯಲು ಅಹಲ್ಯಾಬಾಯಿ ಕೊಡುಗೆಗಳನ್ನು ಸ್ಮರಿಸುವ ಕಾರ್ಯವನ್ನೂ ಮಾಡಿದೆ. ಅದರಂತೆ ಇದೀಗ ಈವರೆಗೆ ಹಿಂದೂ ಪರ ಎಂದು ಹೇಳಿಕೊಂಡು ಬಂದಿರುವ ಯೋಗಿ ಸರ್ಕಾರದ ವಿರುದ್ಧವಾಗಿ, ಪಾಲ್ ಸಮುದಾಯದ ಸದಸ್ಯರ ಪರವಾಗಿ ವಿಪಕ್ಷಗಳೂ ಸೇರಿವೆ. ಒಟ್ಟಾರೆಯಾಗಿ ಪಾಲ್ ಸಮುದಾಯವು ಇದೀಗ ಮಣಿಕರ್ಣಿಕಾ ಘಾಟ್‌ನ ರಾಜಕೀಯ ವಿಷಯವಾಗಿರುವುದು ನಿಜ.
ಜತೆಗೆ ಇಂತಹ ಕಾರ್ಯ ಕಾಂಗ್ರೆಸ್ ಸೇರಿದಂತೆ ಬೇರೆ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯದಲ್ಲಿ ನಡೆದಿದ್ದರೆ ಅದು ಎಷ್ಟು ವೇಗವಾಗಿ ‘ಹಿಂದೂ ವಿರೋಧಿ’ ಚಟುವಟಿಕೆ ಎನಿಸಿಕೊಳ್ಳುತ್ತಿತ್ತು ಎಂಬ ಚಿಂತನೆಯೂ ನಡೆಯಬೇಕಿದೆ. ಇದೀಗ ಯೋಗಿ ಸರ್ಕಾರ ಹಿಂದೂ ವಿರೋಧಿ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನೂ ನಾವು ಹಾಕಬೇಕಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




