ಕೇರಳದ ಕೊಚ್ಚಿಯಲ್ಲಿರುವ ಚರ್ಚ್ ನಿರ್ವಹಣೆ ಮಾಡುವ ಶಾಲೆಯಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದ ಕೆಲವೇ ದಿನಗಳ ನಂತರ ಅದೇ ಸಂಸ್ಥೆಯ ಮತ್ತಿಬ್ಬರು ವಿದ್ಯಾರ್ಥಿನಿಯರು ಶಾಲೆಯನ್ನು ತೊರೆದಿದ್ದಾರೆ. ಆಡಳಿತ ಮಂಡಳಿಯು ಇತರ ಧರ್ಮಗಳ ವಿದ್ಯಾರ್ಥಿನಿಯರ ಮೇಲೆ ಭೇದಭಾವ ಮಾಡುತ್ತಿದ್ದಾರೆ ಎಂದ ಈ ವಿದ್ಯಾರ್ಥಿನಿಯರ ತಾಯಂದಿರು ಆರೋಪಿಸಿದ್ದಾರೆ.
ಕೊಚ್ಚಿಯ ಸೇಂಟ್ ರೀಟಾ ಶಾಲಾ ಆಡಳಿತ ಮಂಡಳಿ ಮತ್ತು ಮತ್ತು ಪೋಷಕ-ಶಿಕ್ಷಕರ ಸಂಘ (ಪಿಟಿಎ) ಅಧ್ಯಕ್ಷರು ಶಾಲೆಯ ಆವರಣದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದ್ದು, ಸದ್ಯ ಇದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಮೂರು ವಿದ್ಯಾರ್ಥಿನಿಯರು ಈ ಶಾಲೆಯನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಅಂದು ನಮ್ಮನ್ನು ಹೊರದಬ್ಬಿದ್ರಿ, ಇಂದು ಬಿಜೆಪಿ ನಿಮ್ಮನ್ನು ಹೊರದಬ್ಬಿದೆ; ರಘುಪತಿ ಭಟ್‌ಗೆ ಹಿಜಾಬ್ ಸಂತ್ರಸ್ತ ವಿದ್ಯಾರ್ಥಿನಿ ಟಾಂಗ್
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಇಬ್ಬರು ವಿದ್ಯಾರ್ಥಿನಿಯರ ತಾಯಿ ಜೆಸ್ನಾ, “ನಾನು ಹಿಜಾಬ್ ಧರಿಸುತ್ತೇನೆ. ಹಿಜಾಬ್ ಧರಿಸುವ ಪುಟ್ಟ ಹುಡುಗಿಯ ಬಗ್ಗೆ ಹೇಳಿಕೆ ನೀಡುವುದು ಇತರರಲ್ಲಿ ಭಯ ಹುಟ್ಟಿಸುತ್ತದೆ. ಹಾಗೆಯೇ ನಮ್ಮ ನಂಬಿಕೆ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದಂತೆ. ಇತರ ಧಾರ್ಮಿಕ ನಂಬಿಕೆಗಳ ಬಗ್ಗೆ ಆಳವಾದ ದ್ವೇಷ ಎದ್ದು ಕಾಣುತ್ತದೆ. ಅಂತಹ ಮನಸ್ಥಿತಿ ಇರುವ ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳ ನಡುವೆ ಬೆಳೆಯುವುದು ನನ್ನ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
“ಆ ಶಾಲೆಯ ಶಿಕ್ಷಕಿಯಾಗಿರುವ ಓರ್ವ ಕ್ರೈಸ್ತ ಸನ್ಯಾಸಿನಿ(nun) ನನಗೆ ಕರೆ ಮಾಡಿದ್ದರು. ಶಾಲೆಯು ಎಲ್ಲಾ ಧರ್ಮಗಳನ್ನು ಒಳಗೊಳ್ಳುವ ದೃಷ್ಟಿಕೋನವನ್ನು ಹೊಂದಿದೆ. ನಿಮ್ಮ ಮಕ್ಕಳಿಗೆ ಇಲ್ಲಿ ಯಾವುದೇ ತೊಂದರೆ ಉಂಟಾಗದು. ನೀವು ಧೈರ್ಯದಿಂದ ನಿಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಬಹುದು. ನನ್ನ ಮಕ್ಕಳು ಅಂತಹ ಒಳ್ಳೆಯ ಸ್ವಭಾವದ ಶಿಕ್ಷಕರೊಂದಿಗೆ ಬೆಳೆಯಬೇಕೆಂದು ನಾನು ಬಯಸುತ್ತೇನೆ” ಎಂದೂ ಬರೆದಿದ್ದಾರೆ.
ಏನಿದು ಕೇರಳ ಹಿಜಾಬ್ ವಿವಾದ?
ಕಳೆದ ವಾರ, ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಹಿಜಾಬ್ ಧರಿಸಲು ಅವಕಾಶ ನೀಡದ್ದು ಉದ್ವಿಗ್ನತೆಗೆ ಕಾರಣವಾಗಿದೆ. ಶಾಲೆಯನ್ನು ಎರಡು ದಿನಗಳ ಕಾಲ ಮುಚ್ಚಲಾಗಿತ್ತು. ವಿವಾದ ಭುಗಿಲೆದ್ದಂತೆ, ಎರ್ನಾಕುಲಂನ ಕಾಂಗ್ರೆಸ್ ಸಂಸದೆ ಹಿಬಿ ಈಡನ್ ಅವರು ಬಾಲಕಿಯ ಪೋಷಕರನ್ನು ಭೇಟಿಯಾಗಿದ್ದು, ಸಂಸ್ಥೆಯ ವಸ್ತ್ರ ಸಂಹಿತೆಯನ್ನು ಪಾಲಿಸಲು ಪೋಷಕರು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಹಿಜಾಬ್ ವಿವಾದ | ಕೇರಳದ ಶಾಲೆಗೆ ಎರಡು ದಿನ ರಜೆ ಘೋಷಣೆ
ಆದರೆ ಶಾಲಾ ಅಧಿಕಾರಿಗಳ ಕಡೆಯಿಂದ ತಪ್ಪಾಗಿದೆ ಎಂಬುದು ಎರ್ನಾಕುಲಂ ಶಿಕ್ಷಣ ಉಪ ನಿರ್ದೇಶಕರ ಗಮನಕ್ಕೆ ಬಂದಿದೆ ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಹೇಳಿದ್ದಾರೆ. ಹಾಗೆಯೇ ಶಿಕ್ಷಣ ಉಪ ನಿರ್ದೇಶಕರ ತನಿಖಾ ವರದಿಯನ್ನು ಉಲ್ಲೇಖಿಸಿದ ಸಚಿವರು ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಹಾಕಿರುವುದು ಗಂಭೀರ ದುಷ್ಕೃತ್ಯ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಶಾಲಾ ಆಡಳಿತವು ವಿದ್ಯಾರ್ಥಿಗೆ ಹಿಜಾಬ್ ಧರಿಸಿ ಅಧ್ಯಯನ ಮುಂದುವರಿಸಲು ಅನುಮತಿ ನೀಡಬೇಕಾಗಿತ್ತು ಎಂದಿದ್ದಾರೆ.
ಕರ್ನಾಟಕ ಹಿಜಾಬ್ ವಿವಾದ
ಕರ್ನಾಟಕದಲ್ಲಿಯೂ 2022ರಲ್ಲಿ ಹಿಜಾಬ್ ವಿವಾದ ಉಂಟಾಗಿತ್ತು. ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಗೆ ಸಮವಸ್ತ್ರ ನೀತಿ ಪಾಲಿಸುವಂತೆ, ಹಿಜಾಬ್ ಧರಿಸದಂತೆ ಆಡಳಿತವು ಸೂಚಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯಾದ್ಯಂತ ಪರ ವಿರೋಧ ಪ್ರತಿಭಟನೆಗಳು ನಡೆದಿದ್ದವು. ಅಂದಿನ ಬಿಜೆಪಿ ಸರ್ಕಾರವು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಹೈಕೋರ್ಟ್ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಎತ್ತಿಹಿಡಿದು, ಹಿಜಾಬ್ ನಿಷೇಧವು ಸರಿಯಲ್ಲ ಎಂದು ತೀರ್ಪು ನೀಡಿತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆದು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿತು.





